ನಾಳೆ (ಮಾ.28) ಶ್ರೀನಿವಾಸ ವಿಶ್ವವಿದ್ಯಾಲಯ 8ನೇ ವಾರ್ಷಿಕ ಘಟಿಕೋತ್ಸವ

Upayuktha
0

ಪದವಿ ಪ್ರದಾನ ಸಮಾರಂಭ, ಸಂಸ್ಥಾಪಕರ ದಿನಾಚರಣೆ ಹಾಗೂ ಕಾಲೇಜು ದಿನಾಚರಣೆ




ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ ಮಾರ್ಚ್ 28, 2026 ರಂದು ಬೆಳಿಗ್ಗೆ 10.00ಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ. ಮಂಗಳೂರು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಯುತ ರಾಘವೇಂದ್ರ ಶ್ರೀನಿವಾಸ್ ಭಟ್, ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3:00 ಗಂಟೆಗೆ ನಡೆಯುವ ಘಟಿಕೋತ್ಸವ ಮುಂದುವರಿದ ಕಾರ್ಯಕ್ರಮದಲ್ಲಿ ಮಂಗಳೂರು ಕೆಐಒಸಿಎಲ್‌ ಲಿಮಿಟೆಡ್‌ನ ಉತ್ಪಾದನಾ ಹಾಗೂ ಯೋಜನಾ ವಿಭಾಗದ ಅಧ್ಯಕ್ಷರು, ನಿರ್ದೇಶಕರು ಮತ್ತು ಹಣಕಾಸು ವಿಭಾಗದ ಹೆಚ್ಚುವರಿ ಹೊಣೆಗಾರಿಕೆ ಮತ್ತು ನಿರ್ದೇಶಕರಾದ ಶ್ರೀ ಗಾಂತಿ ವೆಂಕಟ್‌ ಕಿರಣ್‌ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.


ಘಟಿಕೋತ್ಸವದಲ್ಲಿ 2769 ಪದವೀಧರರು (ಸ್ನಾತಕೋತ್ತರ -626, ಪದವಿ- 2023) ಪ್ರಮಾಣಪತ್ರ ಸ್ವೀಕರಿಸಲಿದ್ದು, ವಿಶ್ವವಿದ್ಯಾಲಯವು ವಿವಿಧ ಕಾರ್ಯಕ್ರಮಗಳಿಗೆ 236 ರ‍್ಯಾಂಕ್‌ಗಳನ್ನು ಪ್ರಕಟಿಸಿದೆ ಮತ್ತು 48 ಪದವೀಧರರು ಘಟಿಕೋತ್ಸವದ ಸಮಯದಲ್ಲಿ ಕುಲಾಧಿಪತಿಗಳ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ.  ಘಟಿಕೋತ್ಸವದಲ್ಲಿ 1 ಡಿ.ಎಸ್‌ಸಿ., 1 ಡಿ.ಲಿಟ್. ಮತ್ತು 118 ಪಿ.ಎಚ್‌ಡಿ ಪದವಿಗಳನ್ನು ಪ್ರದಾನಿಸಲಾಗುವುದು.

ಪ್ರತಿಷ್ಠಿತ ಡಾಕ್ಟರ್ ಆಫ್ ಲಿಟರೇಚರ್ (ಡಿ.ಲಿಟ್.) (ಗೌರವ ಪದವಿ)ಯನ್ನು ಶ್ರೀ ಟಿ. ಸತೀಶ್ ಯು. ಪೈ, ನಿರ್ದೇಶಕರು, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ ಅವರಿಗೆ, ಅವರ ವಿಶಿಷ್ಟ ಕೊಡುಗೆಗಳನ್ನು ಗೌರವಿಸಿ ಪ್ರದಾನ ಮಾಡಲಾಗುತ್ತದೆ.

 


ಪದವಿ ಪ್ರದಾನ ಕಾರ್ಯಕ್ರಮ:

ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಪದವಿ ಪ್ರದಾನ ಕಾರ್ಯಕ್ರಮ ಮಾರ್ಚ್ 29, 2026 ರಂದು ಭಾನುವಾರ ಬೆಳಿಗ್ಗೆ 10.00 ಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ ಸೊಲ್ಯೂಷನ್ ಆರ್ಕಿಟೆಕ್ಟ್ ಆಗಿರುವ ಶ್ರೀ ಅರವಿಂದ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಒಟ್ಟು 1058 ಪದವೀಧರರಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನಿಸಲಾಗುವುದು.


ಪ್ರತಿಭಾ ದಿನಾಚರಣೆ  

ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ ಇದರ  ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ  ಮಾರ್ಚ್ 30, 2026 ರಂದು ಸೋಮವಾರ ಬೆಳಿಗ್ಗೆ 9:30ಕ್ಕೆ  ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸ್ ನಲ್ಲಿ ಆಯೋಜಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನವನ್ನು ತೋರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ.


ಸಂಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ದಿನಾಚರಣೆ:

ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಸಂಸ್ಥಾಪಕರ ದಿನಾಚರಣೆ ಮತ್ತು ಕಾಲೇಜು ದಿನಾಚರಣೆ ಮಾರ್ಚ್ 31, 2026ರಂದು ಬೆಳಿಗ್ಗೆ 10.00ಕ್ಕೆ ಶ್ರೀನಿವಾಸ ವಿಶ್ವವಿದ್ಯಾಲಯ ಮುಕ್ಕ ಕ್ಯಾಂಪಸನಲ್ಲಿ ಆಯೋಜಿಸಲಾಗಿದೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿಯ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಎಸ್. ಶಾಂತಿ ಮುಖ್ಯ ಅತಿಥಿ ಯಾಗಿ ಆಗಮಿಸಲಿದ್ದು ಸಂಸ್ಥಾಪಕರ ದಿನದ ಮುಖ್ಯ ಭಾಷಣ ಮಾಡಲಿದ್ದಾರೆ. 


ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿ ಹಾಗೂ ಎ. ಶಾಮ ರಾವ್ ಫೌಂಡೇಶನ್ ಮಂಗಳೂರು ಇದರ ಅಧ್ಯಕ್ಷರಾದ ಡಾ ಎ. ಶ್ರೀನಿವಾಸ್ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ಈ ಶುಭ ಸಂದರ್ಭದಲ್ಲಿ, ವಿಶ್ವವಿದ್ಯಾಲಯವು ತನ್ನ ಮಾಜಿ ಕುಲಾಧಿಪತಿಗಳಾದ ಡಾ. ಸಿ.ಎ. ಎ. ರಾಘವೇಂದ್ರ ರಾವ್ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಆಶೀರ್ವಾದಗಳನ್ನು ಸ್ಮರಿಸುತ್ತದೆ. ಗುಣಮಟ್ಟದ ಶಿಕ್ಷಣದ ಬಗ್ಗೆ ಅವರ ಬದ್ಧತೆಯು ಸಂಸ್ಥೆಯ ಬೆಳವಣಿಗೆ ಮತ್ತು ಶ್ರೇಷ್ಠತೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಿದೆ.


ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್ (ಟ್ರಸ್ಟಿ-ಸದಸ್ಯರು, ಆಡಳಿತ ಮಂಡಳಿ, ಶ್ರೀನಿವಾಸ ವಿಶ್ವವಿದ್ಯಾಲಯ), ಪ್ರೊ. ಎಆರ್. ಶ್ರೀಮತಿ. ಎ. ಮಿತ್ರಾ ಎಸ್. ರಾವ್ ( ಟ್ರಸ್ಟಿ-ಸದಸ್ಯರು, ಆಡಳಿತ ಮಂಡಳಿ, ಶ್ರೀನಿವಾಸ ವಿಶ್ವವಿದ್ಯಾಲಯ), ಶ್ರೀಮತಿ ಪದ್ಮಿನಿ ಕುಮಾರ್ (ಟ್ರಸ್ಟಿ-ಸದಸ್ಯರು, ಆಡಳಿತ ಮಂಡಳಿ, ಶ್ರೀನಿವಾಸ ವಿಶ್ವವಿದ್ಯಾಲಯ), ಡಾ. ಸತ್ಯನಾರಾಯಣ ರೆಡ್ಡಿ (ಉಪ ಕುಲಪತಿ), ಡಾ. ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಶ್ರೀನಿವಾಸ್ ಮಯ್ಯ (ರಿಜಿಸ್ಟ್ರಾರ್ - ಮೌಲ್ಯಮಾಪನ), ಡಾ. ಅಜಯ್ ಕುಮಾರ್ (ರಿಜಿಸ್ಟ್ರಾರ್ - ಅಭಿವೃದ್ಧಿ), ಶ್ರೀ ಆದಿತ್ಯ ಕುಮಾರ್ ಮಯ್ಯ (ರಿಜಿಸ್ಟ್ರಾರ್ - ಶೈಕ್ಷಣಿಕ) ವೇದಿಕೆಯಲ್ಲಿ ಉಪಸ್ಥಿತರಿರುವರು.


ಅಡ್ಕ ಶಾಮ ರಾವ್ ಅವರ ಹೆಮ್ಮೆಯ ಪುತ್ರ, ಖ್ಯಾತ ಚಾರ್ಟರ್ಡ್ ಅಕೌಂಟೆಂಟ್, ದಾರ್ಶನಿಕ ಶಿಕ್ಷಣ ತಜ್ಞ, ಡಾ ಸಿಎ ರಾಘವೇಂದ್ರ ರಾವ್ ಅವರು 1988 ರಲ್ಲಿ ಮೊದಲ ಶಿಕ್ಷಣ ಸಂಸ್ಥೆಯನ್ನು (ಶ್ರೀನಿವಾಸ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್) ಪ್ರಾರಂಭಿಸಿದರು. ಗುಂಪು ಕೇವಲ 7 ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. ಇಂದು, ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳಲ್ಲಿ 12,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸುಮಾರು 5,000 ಅಧ್ಯಾಪಕರು ಮತ್ತು ಸಿಬ್ಬಂದಿ ವಿದ್ಯಾರ್ಥಿ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಆರೋಗ್ಯ, ವೈದ್ಯಕೀಯ, ದಂತ, ಪ್ಯಾರಾ-ಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸಸ್, ಹೋಟೆಲ್ ಮ್ಯಾನೇಜ್‌ಮೆಂಟ್, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ, ಫಿಸಿಯೋಥೆರಪಿ, ನರ್ಸಿಂಗ್, ಏವಿಯೇಷನ್ ಸ್ಟಡೀಸ್, ಸಮಾಜ ವಿಜ್ಞಾನ ಮತ್ತು ಮಾನವೀಯ ನಿರ್ವಹಣೆ, ಶಿಕ್ಷಣ, ಪತ್ರಿಕೋದ್ಯಮ, ಸಂಸ್ಕೃತ ಮತ್ತು ಯೋಗ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣದಲ್ಲಿ ಗುಂಪು ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.


ಸಂಸ್ಥಾಪಕರ ದಿನಾಚರಣೆಯ ಸಂದರ್ಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಕಾಲೇಜುಗಳು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಶಾಮ ರಾವ್ ಪ್ರತಿಷ್ಠಾನವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರೌಢಶಾಲೆ ಮತ್ತು ಪಿಯು ಕಾಲೇಜು ಮಟ್ಟದಲ್ಲಿ ಶಿಕ್ಷಕರ ಕೊಡುಗೆಯನ್ನು ಗುರುತಿಸುತ್ತದೆ. ಈ ವರ್ಷ, ಪ್ರತಿಷ್ಠಾನವು ಡಾ. ವೇದಾವತಿ ಬಿ. (ಉಪ ಮುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಢ ಶಾಲೆ, ಕಡಬ) ಮತ್ತು ಶ್ರೀ ರಾಜೇಶ್ ಕದ್ರಿ (ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿ, ಶ್ರೀ ರಾಮಾಶ್ರಮ , ಕೊಂಚಾಡಿ, ಮಂಗಳೂರು) ಅವರನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ- 2026 ಗೆ ಆಯ್ಕೆ ಮಾಡಲಾಗಿದೆ.  ಈ ಸಂದರ್ಭದಲ್ಲಿ ಶ್ರೀನಿವಾಸ ವಿಶ್ವವಿದ್ಯಾಲಯ ಮತ್ತು ಶ್ರೀನಿವಾಸ ಗ್ರೂಪ್ ಆಫ್ ಕಾಲೇಜುಗಳ ಅಧ್ಯಾಪಕರುಗಳು ಪೇಟೆಂಟ್, ಸಂಶೋಧನಾ ನಿಧಿ, ವಿದೇಶಗಳಲ್ಲಿ ನಡೆದ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ಪಿಎಚ್ ಡಿ ಪದವಿ ಹೇಗೆ  ವಿವಿಧ ಕ್ಷೇತ್ರಗಳಲ್ಲಿ ಮಾಡಿದ ವಿಶಿಷ್ಟ ಸಾಧನೆಗಳಿಗೆ ಸುಮಾರು 200  ಮಂದಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು. ಹಾಗೆ ವಿಶ್ವವಿದ್ಯಾಲಯದಲ್ಲಿ ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಿ ಗೌರವಿಸಲಾಗುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.


ಡಾ.ಅನಿಲ್ ಕುಮಾರ್ (ರಿಜಿಸ್ಟ್ರಾರ್), ಡಾ. ಶ್ರೀನಿವಾಸ್ ಮಯ್ಯ (ರಿಜಿಸ್ಟ್ರಾರ್-ಮೌಲ್ಯಮಾಪನ) ಮತ್ತು ಡಾ. ಅಜಯ್ ಕುಮಾರ್ (ರಿಜಿಸ್ಟ್ರಾರ್-ಅಭಿವೃದ್ಧಿ), ಡಾ. ರಾಮಕೃಷ್ಣ ಶಬರಾಯ ಎ. (ಪ್ರಾಂಶುಪಾಲರು, ನಿರ್ದೇಶಕರು ಶ್ರೀನಿವಾಸ ಕಾಲೇಜು ಆಫ್‌ ಫಾರ್ಮಸಿ, ವಳಚ್ಚಿಲ್‌) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Post a Comment

0 Comments
Post a Comment (0)
To Top