ವಿಟ್ಲ: ಸನಾತನ ಧರ್ಮದ ಮೌಲ್ಯಗಳನ್ನು ಪಾಲಿಸುತ್ತಾ, ಪುರಾಣ-ಪುಣ್ಯಕಥೆಗಳ ಸೌಂದರ್ಯವನ್ನು ಸಮಾಜಕ್ಕೆ ತಲುಪಿಸಿದ ಹಿಂದಿನ ಅನೇಕ ಕಲಾವಿದರು ಚರಿತ್ರಾರ್ಹರಾಗಿದ್ದಾರೆ. ಅಂತಹ ಮಹನೀಯರ ನೆನಪನ್ನು ಸದಾ ಹಸಿರಾಗಿರಿಸುವುದು ನಮ್ಮ ಕರ್ತವ್ಯ ಎಂದು ಒಡಿಯೂರು ಸಂಸ್ಥಾನದ ಶ್ರೀಶ್ರೀ ಗುರುದೇವಾನಂದ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.
ಸುಳ್ಯ ತಾಲೂಕಿನ ಸೇನ್ಯ ಗ್ರಾಮದಲ್ಲಿ ನಡೆದ ‘ಪೆರುವಾಯಿ ಪ್ರತಿಷ್ಠಾನ’ ಉದ್ಘಾಟನೆ ಹಾಗೂ ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶವಾದ ಪೆರುವಾಯಿಯಿಂದ ಹೊರಹೊಮ್ಮಿ ತನ್ನದೇ ಆದ ಶೈಲಿಯಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ದಿವಂಗತ ಪೆರುವಾಯಿ ನಾರಾಯಣ ಶೆಟ್ಟರು ಯಕ್ಷರಂಗದ ದಂತಕಥೆಯಾಗಿದ್ದಾರೆ. ತಮ್ಮ ಸ್ವರಭಾರ ಮತ್ತು ಪಾತ್ರಾಭಿನಯದ ಮೂಲಕ ವೇಷಧಾರಿಗಳ ವೈಶಿಷ್ಟ್ಯವನ್ನು ಜೀವಂತಗೊಳಿಸಿದ ಅವರು “ಪೆರುವಾಯಿ ಶೈಲಿ” ಎಂಬ ವಿಶಿಷ್ಟ ಗುರುತನ್ನು ನಿರ್ಮಿಸಿದ್ದಾರೆ ಎಂದು ಸ್ವಾಮೀಜಿಯವರು ಹೇಳಿದರು.
ಪೆರುವಾಯಿ ನಾರಾಯಣ ಶೆಟ್ಟರ ಸ್ಮರಣಾರ್ಥವಾಗಿ ಅವರ ಕುಟುಂಬದವರು, ವಿಶೇಷವಾಗಿ ರವಿ ಶೆಟ್ಟಿ ಪೆರುವಾಯಿ ಅವರ ಮುಂದಾಳತ್ವದಲ್ಲಿ ‘ಪೆರುವಾಯಿ ಪ್ರತಿಷ್ಠಾನ’ವನ್ನು ಸ್ಥಾಪಿಸಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀ ಬೆಂಕಿನಾಥೇಶ್ವರ ಮೇಳದ ಪದ್ಮನಾಭ ರೈ (ಮಂಜು ಭಂಡಾರಿ), ಯಕ್ಷಗಾನ ಅಕಾಡೆಮಿಯ ಸದಸ್ಯ ಕೈರಂಗಳ ಗುರುರಾಜ್ ಭಟ್, ವರ್ಕಾಡಿಯ ವಾಸುದೇವ ಮಯ್ಯ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸಿದರು. ಯಕ್ಷಗಾನ ಕಲಾವಿದ ಜಯಂತ ಕಾರಂತರು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಹಾಗೂ ಅಕಾಡೆಮಿಯ ‘ಯಕ್ಷಸಿರಿ’ ಪ್ರಶಸ್ತಿ ಪುರಸ್ಕೃತ, ಬೆಂಕಿನಾಥೇಶ್ವರ ಮೇಳದ ಸಂಚಾಲಕ ಗುರುಪುರ ದೋಣಿಂಜೆ ಗುತ್ತು ಸುರೇಂದ್ರ ಮಲ್ಲಿಯವರಿಗೆ ಪ್ರಥಮ “ಪೆರುವಾಯಿ ಪ್ರಶಸ್ತಿ” ಪ್ರದಾನ ಮಾಡಲಾಯಿತು.
ಕಾರ್ಯಕ್ರಮವನ್ನು ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರು. ರವಿ ಶೆಟ್ಟಿ ಪೆರುವಾಯಿ ಧನ್ಯವಾದ ಅರ್ಪಿಸಿದರು.
ಬಳಿಕ ಬೆಂಕಿನಾಥೇಶ್ವರ ಮೇಳದವರಿಂದ ವಿಜಿತ್ ಶೆಟ್ಟಿ ರಚನೆಯ “ಸ್ವರ್ಣ ತುಲಾಭಾರ” ಪ್ರಸಂಗ ಪ್ರದರ್ಶನಗೊಂಡಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

