ಇಂಧನ ಸ್ವಾತಂತ್ರ್ಯ; ಸೌರ ಸತ್ಯಾಗ್ರಹ'ವೇ ನಮ್ಮ ಮುಂದಿನ ಅಸಲಿ ಹೋರಾಟ

Upayuktha
0


ಮಗೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು ನಿಜ, ಆದರೆ ಇಂದಿಗೂ ನಮ್ಮ ಮನೆಯ ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಮತ್ತು ಗಾಡಿಯ ಪೆಟ್ರೋಲ್ ಟ್ಯಾಂಕಿನ 'ಚಾಬಿ' ಇರುವುದು ಮಾತ್ರ ಯಾವುದೋ ಅರಬ್ ರಾಷ್ಟ್ರದ ಶೇಖ್ ಕೈಯಲ್ಲಿ ಅಥವಾ ಯುದ್ಧ ಹೂಡಿರುವ ದೇಶಗಳ ನಾಯಕರ ಜೇಬಿನಲ್ಲಿ! ಅಂದು ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು, ಇಂದು ಅಂತರಾಷ್ಟ್ರೀಯ ಮಾರುಕಟ್ಟೆಯ ಕಚ್ಚಾ ತೈಲದ ಬೆಲೆಗಳು ನಮ್ಮ ಬಿಪಿ ಆಳುತ್ತಿವೆ. ರಷ್ಯಾದಲ್ಲೋ, ಉಕ್ರೇನ್‌ನಲ್ಲೋ ಒಂದು ಪಟಾಕಿ ಸಿಡಿದರೂ ಸಾಕು, ಇಲ್ಲಿ ನಮ್ಮೂರಿನ ಪೆಟ್ರೋಲ್ ಬಂಕ್ ಮಾಲೀಕರು ಮೀಟರ್‌ಗೆ ಹೊಸ ನಂಬರ್ ಹಾಕಲು ರೆಡಿಯಾಗಿರುತ್ತಾರೆ. ಅಲ್ಲಿ ಕ್ಷಿಪಣಿ ಹಾರಿದರೆ ಇಲ್ಲಿ ನಮ್ಮ ಜೇಬಿಗೆ ಕತ್ತರಿ ಬೀಳುತ್ತದೆ. ಅಸಲಿಗೆ ನಮಗೆ ಬೇಕಿರುವುದು ಪೆಟ್ರೋಲ್ ಅಥವಾ ಗ್ಯಾಸ್ ಅಲ್ಲ, ಮೊದಲು ಈ 'ಪರಾವಲಂಬನೆ' ಎನ್ನುವ ರೋಗದಿಂದ ಮುಕ್ತಿ!


ನಮ್ಮ ದೇಶದಲ್ಲಿ ಒಂದು ದೊಡ್ಡ ಸಮಸ್ಯೆಯಿದೆ; ನಾವು ರಸ್ತೆಯಲ್ಲಿ ಹೊಂಡ ಬಿದ್ದರೆ ರಸ್ತೆಯನ್ನೇ ಬೈಯುತ್ತೇವೆ ಅಥವಾ ಅದನ್ನು ಸರಿಪಡಿಸದವರನ್ನು ಟೀಕಿಸುತ್ತಾ ಕುಳಿತುಕೊಳ್ಳುತ್ತೇವೆ. ಆದರೆ ಆ ಹೊಂಡಕ್ಕೆ ನಾಲ್ಕು ಬುಟ್ಟಿ ಮಣ್ಣು ಹಾಕಿ ಮುಚ್ಚುವ ಯೋಚನೆ ಮಾತ್ರ ಮಾಡುವುದಿಲ್ಲ. ಇಂಧನ ವಿಚಾರದಲ್ಲೂ ಅಷ್ಟೇ, ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಚಿತ್ರ ಹಂಚಿ ಮಜಾ ನೋಡುತ್ತೇವೆ. ಆದರೆ ಆ ಪೆಟ್ರೋಲ್ ಕಂಪನಿಯವರ ಸೊಕ್ಕು ಮುರಿಯಬೇಕೆಂದರೆ ನಾವೇ ಇಂಧನ ಉತ್ಪಾದಕರಾಗಬೇಕು ಎಂಬ ಕನಿಷ್ಠ ಪರಿಜ್ಞಾನ ನಮಗೆ ಮರೆತುಹೋಗಿದೆ. ಒಬ್ಬರನ್ನೊಬ್ಬರು ಟೀಕಿಸುವುದರಿಂದ ಚರ್ಚೆಗಳು ದೀರ್ಘವಾಗಬಹುದೇ ಹೊರತು ಸಮಸ್ಯೆಯಂತೂ ಬಗೆಹರಿಯುವುದಿಲ್ಲ.


​ಕಳೆದ ಎಪ್ಪತ್ತು ವರ್ಷಗಳಿಂದ ನಾವು ಏನು ಮಾಡಿದೆವು ಎಂದು ಕೇಳಿದರೆ, ನಮ್ಮ ಇತಿಹಾಸದ ಪುಸ್ತಕಗಳಿಗೂ ನಾಚಿಕೆಯಾಗಬಹುದು. ನಮ್ಮ ದೇಶದಲ್ಲಿ ಸೂರ್ಯ ವರ್ಷದ ಮುನ್ನೂರು ದಿನಗಳ ಕಾಲ ತಲೆಯ ಮೇಲೆ ಬೆಂಕಿ ಉಗುಳುತ್ತಾ "ನನ್ನನ್ನು ಬಳಸಿ, ನನ್ನ ಶಕ್ತಿ ತಗೊಳ್ಳಿ" ಎಂದು ಕಿರುಚುತ್ತಿದ್ದರೂ, ನಾವು ಮಾತ್ರ "ಇಲ್ಲಪ್ಪಾ, ನಮಗೆ ಆ ಕಪ್ಪು ಬಣ್ಣದ ಪೆಟ್ರೋಲ್ ಅಂದ್ರೆನೇ ಪ್ರೀತಿ" ಎಂದು ವಿದೇಶಿ ಬಾವಿಗಳ ಕಡೆಗೆ ಪೈಪ್ ಲೈನ್ ಹಾಕಿಕೊಂಡು ಕುಳಿತೆವು. ನಮ್ಮಲ್ಲಿ ಕಲ್ಲಿದ್ದಲಿದೆ, ಗಾಳಿ ಇದೆ, ಹರಿಯುವ ನೀರಿದೆ, ಎಲ್ಲಕ್ಕಿಂತ ಹೆಚ್ಚಾಗಿ ಸುಡುವ ಬಿಸಿಲಿದೆ. ಆದರೂ ನಾವು ನಮ್ಮ ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಮೇಲೆ 'ಮೇಡ್ ಇನ್ ಇನ್ಯಾವುದೋ ದೇಶ'ದ ಸ್ಟಿಕ್ಕರ್ ನೋಡುತ್ತಾ ಕಾಲ ಕಳೆದಿದ್ದೇವೆ. ಇದು ಹೇಗಿದೆ ಎಂದರೆ, ಮನೆಯ ಪಕ್ಕದಲ್ಲೇ ಗಂಗೆ ಹರಿಯುತ್ತಿದ್ದರೂ ಹನಿ ನೀರಿಗಾಗಿ ಪಕ್ಕದೂರಿನವನ ಕಾಲು ಹಿಡಿದಂತಿದೆ.


​ಇನ್ನು ನಮ್ಮ ಅಡುಗೆ ಮನೆಯ ಕಥೆಯಂತೂ ಹೇಳತೀರದು. ಒಂದು ಸಣ್ಣ ಯುದ್ಧವಾದರೂ ಸಾಕು, ಇಲ್ಲಿ ನಮ್ಮೂರ ಬಡವನ ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ ಉಸಿರು ಗಟ್ಟುತ್ತದೆ. ಗ್ಯಾಸ್ ಸಿಲಿಂಡರ್ ಬೆಲೆ ಏರುತ್ತಿರುವ ವೇಗ ನೋಡಿದರೆ, ಶೀಘ್ರದಲ್ಲೇ ಜನರು ಅದನ್ನು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿದರೂ ಅಚ್ಚರಿಯಿಲ್ಲ. ಸಿಲಿಂಡರ್ ಖಾಲಿಯಾದಾಗ ಬರುವ ಆ ಒಂದು ಸಣ್ಣ ಶಬ್ದ ಇದೆಯಲ್ಲ, ಅದು ಬರಿ ಅನಿಲ ಮುಗಿಯುವ ಸಂಕೇತವಲ್ಲ, ಅದು ಮಧ್ಯಮ ವರ್ಗದ ಮನುಷ್ಯನ ಬ್ಯಾಂಕ್ ಬ್ಯಾಲೆನ್ಸ್ ಮುಗಿಯುವ ಎಚ್ಚರಿಕೆಯ ಗಂಟೆ! ಇಷ್ಟೆಲ್ಲಾ ಕಷ್ಟಪಟ್ಟು ಸಿಲಿಂಡರ್ ತರಿಸುವ ಬದಲು, ಸೂರ್ಯನ ಬಿಸಿಲಿನಲ್ಲಿ ಒಂದು ಸೌರ ಒಲೆ ಇಟ್ಟರೆ ಸೂರ್ಯದೇವ ಯಾವತ್ತೂ 'ಇವತ್ತು ಸ್ಟಾಕ್ ಇಲ್ಲ' ಎನ್ನೋಲ್ಲ, ಯಾವ ಏಜೆಂಟ್ ಕೂಡ ನಿಮಗೆ 'ಬುಕಿಂಗ್' ಮಾಡುವ ಕಿರಿಕಿರಿ ಕೊಡೋಲ್ಲ. ಸೌರಶಕ್ತಿ ಎಂಬುದು ಅಕ್ಷಯ ಪಾತ್ರೆಯಿದ್ದಂತೆ, ಆದರೆ ನಾವು ಮಾತ್ರ ಖಾಲಿ ಸಿಲಿಂಡರ್ ಹೊತ್ತು ಲೈನ್ ನಿಲ್ಲುವುದನ್ನೇ ಸಂಸ್ಕೃತಿ ಅಂದುಕೊಂಡಿದ್ದೇವೆ.



​ನಮ್ಮೂರಿನ ಕೃಷಿ ಭೂಮಿಯ ಕಡೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ನಾವು ಮೂರು-ನಾಲ್ಕು ತಿಂಗಳು ಕಷ್ಟಪಟ್ಟು ಬೇಸಾಯ ಮಾಡುತ್ತೇವೆ, ಉಳಿದ ಎಂಟು ತಿಂಗಳು ಆ ಜಮೀನನ್ನು ಸೂರ್ಯನ ಬಿಸಿಲಿಗೆ ಸುಡಲು ಪಾಳು ಬಿಡುತ್ತೇವೆ. ಆ ಜಾಗದಲ್ಲಿ ಸೂರ್ಯನ ಕಡೆ ಮುಖ ಮಾಡಿ ನಿಲ್ಲುವ 'ಮೊಬೈಲ್ ಸೌರ ಫಲಕ'ಗಳನ್ನು ಅಳವಡಿಸಲು ನಮಗೇನು ರೋಗ? ಈ ಸೌರ ಫಲಕಗಳಿಗೆ ಚಕ್ರಗಳಿದ್ದರೆ ಎಷ್ಟು ಚೆಂದ ಅಲ್ವಾ? ಕೃಷಿ ಇಲ್ಲದ ಕಾಲದಲ್ಲಿ ಅವುಗಳನ್ನು ಗದ್ದೆಯ ತುಂಬೆಲ್ಲಾ ಸಾಲಾಗಿ ನಿಲ್ಲಿಸಿ ಸೂರ್ಯನ ಶಕ್ತಿಯನ್ನು ಹೀರಬಹುದು. ಅದೇ ಜಾಗದಲ್ಲಿ ಉಳುಮೆ ಮಾಡುವ ಸಮಯ ಬಂದಾಗ, ಆ 'ಸೌರ ರಥ'ಗಳನ್ನು ಮೆಲ್ಲನೆ ಪಕ್ಕಕ್ಕೆ ಸರಿಸಿದರೆ ಮುಗಿಯಿತು. ನಮ್ಮ ರೈತರು ಈಗಿನಂತೆ ಕರೆಂಟ್ ಬರುವ ಹೊತ್ತಿಗಾಗಿ ಮಧ್ಯರಾತ್ರಿವರೆಗೆ ಕಾದು, ಪಂಪ್ ಸೆಟ್ ಹಚ್ಚಲು ಹಾವು-ಚೇಳುಗಳ ನಡುವೆ ಓಡಬೇಕಿಲ್ಲ. ಸೂರ್ಯ ಆಕಾಶದಲ್ಲಿ ಇರುವಾಗಲೇ ಬ್ಯಾಟರಿಗಳು ತುಂಬಿಕೊಂಡರೆ, ರಾತ್ರಿಯಿಡೀ ಮನೆ ಬೆಳಗಬಹುದು, ಅಡುಗೆ ಮಾಡಬಹುದು, ಈವನ್ ನಿಮ್ಮ ಆ ಮೊಬೈಲ್ ಫೋನ್‌ಗಳನ್ನೂ ಉಚಿತವಾಗಿ ಚಾರ್ಜ್ ಮಾಡಿಕೊಳ್ಳಬಹುದು!


​ನಿಜವಾದ ಇಂಧನ ಸ್ವಾತಂತ್ರ್ಯ ಎಂದರೆ, ವಿಶ್ವದ ಯಾವ ಮೂಲೆಯಲ್ಲಿ ಯುದ್ಧ ನಡೆದರೂ ನಮ್ಮೂರಿನ ಬಡವನ ಅಡುಗೆ ಮನೆಯಲ್ಲಿ ಒಲೆ ಉರಿಯುತ್ತಿರಬೇಕು.


ವಿದೇಶದವರು ಬೆಲೆ ಏರಿಸಿದರೆ ನಾವು ಭಯಪಡುವ ಬದಲು, ಸೂರ್ಯನ ಕಡೆ ನೋಡಿ ಮುಗುಳ್ನಗುವಂತಾಗಬೇಕು. ಪಾಳು ಬಿದ್ದ ಜಮೀನಿನಲ್ಲಿ ಕಳೆ ಬೆಳೆಯುವ ಬದಲು 'ಕರೆಂಟ್' ಬೆಳೆಯುವಂತಾಗಬೇಕು. ಸೂರ್ಯ ಯಾರಿಗೂ ಟ್ಯಾಕ್ಸ್ ಹಾಕುವುದಿಲ್ಲ, ಬಿಲ್ ಕಳುಹಿಸುವುದಿಲ್ಲ, ಹಾಗಾಗಿ ಈ ಸ್ವಾವಲಂಬನೆಯ ಹಾದಿ ಹಿಡಿಯದಿದ್ದರೆ ನಾವು ಇನ್ನು ಎಪ್ಪತ್ತು ವರ್ಷಗಳ ನಂತರವೂ ಇದೇ ಪೆಟ್ರೋಲ್ ಬಂಕ್ ಮುಂದೆ ಸಾಲಾಗಿ ನಿಂತು 'ಸ್ವಾತಂತ್ರ್ಯೋತ್ಸವ' ಆಚರಿಸಬೇಕಾಗುತ್ತದೆ. ಈಗಲಾದರೂ ಎಚ್ಚೆತ್ತುಕೊಳ್ಳೋಣ, ಸೂರ್ಯನ ಬಿಸಿಲನ್ನು ಸದ್ಬಳಕೆ ಮಾಡಿಕೊಳ್ಳೋಣ, ಪರದೇಶದ ಪೆಟ್ರೋಲ್ ಬಾವಿಗಳ ಗುಲಾಮಗಿರಿಯಿಂದ ಮುಕ್ತಿ ಪಡೆಯೋಣ! 


​ನಿಜವಾದ ಸ್ವಾತಂತ್ರ್ಯ ಎಂದರೆ ಪರದೇಶದವರು ಬೆಲೆ ಏರಿಸಿದಾಗ ಭಯಪಡುವುದಲ್ಲ, ಬದಲಾಗಿ ನಮ್ಮ ಮನೆಯ ಮಾಡಿನ ಮೇಲೆ ಅಥವಾ ಗದ್ದೆಯ ಮೂಲೆಯಲ್ಲಿ ನಮಗೆ ಬೇಕಾದ ಶಕ್ತಿಯನ್ನು ನಾವೇ ತಯಾರಿಸಿಕೊಳ್ಳುವುದು. ಇಂಧನ ಸ್ವಾತಂತ್ರ್ಯದ ಈ ಹೋರಾಟಕ್ಕೆ ಯಾವುದೇ ರಾಜಕೀಯ ಪಕ್ಷದ ಬಾವುಟ ಬೇಡ, ಬದಲಾಗಿ ಪ್ರತಿಯೊಬ್ಬರ ಮನೆಯ ಮೇಲೆ ಒಂದು ಸೌರ ಫಲಕ ಇದ್ದರೆ ಸಾಕು. ಟೀಕೆಗಳನ್ನು ಬಿಟ್ಟು ಪರಿಹಾರದತ್ತ ಹೆಜ್ಜೆ ಹಾಕೋಣ.


ನಿಮಗಾಗಿ ಒಂದಿಷ್ಟು ವಿವರ ಸಂಗ್ರಹಿಸುವ ಪ್ರಯತ್ನ ಮಾಡಿರುವೆನು. ನಿಮಗೆ ಉಪಯೋವಾಗಬಹುದು.



ಗ್ಯಾಸ್ ಉಳಿತಾಯ: ವರ್ಷಕ್ಕೆ 10 ಸಿಲಿಂಡರ್ ಬಳಸುವ ಕುಟುಂಬ ಸೌರ ಒಲೆ ಬಳಸಿದರೆ ಕನಿಷ್ಠ 5 ಸಿಲಿಂಡರ್ ಉಳಿಸಬಹುದು (ಸುಮಾರು 5,000 ರೂ. ಉಳಿತಾಯ).

​ವಿದ್ಯುತ್ ಬಿಲ್: ತಿಂಗಳಿಗೆ 1,000 ರೂ. ಬಿಲ್ ಬರುವ ಮನೆಯಲ್ಲಿ ವರ್ಷಕ್ಕೆ 12,000 ರೂ. ಉಳಿತಾಯ.

​ಮರುಪಾವತಿ ಅವಧಿ  ನೀವು ಹೂಡಿಕೆ ಮಾಡಿದ ಹಣವು ಕೇವಲ 5 ರಿಂದ 6 ವರ್ಷಗಳಲ್ಲಿ ಉಳಿತಾಯದ ರೂಪದಲ್ಲಿ ವಾಪಸ್ ಬರುತ್ತದೆ. ಆನಂತರದ 20 ವರ್ಷ ವಿದ್ಯುತ್ ಮತ್ತು ಇಂಧನ ಸಂಪೂರ್ಣ ಉಚಿತ!


ವಿಶೇಷ ಸೂಚನೆ: ಸರ್ಕಾರದ 'ಪಿಎಂ ಸೂರ್ಯ ಘರ್' ಯೋಜನೆಯಡಿ ಸೌರ ಫಲಕ ಅಳವಡಿಕೆಗೆ ಭಾರಿ ಸಬ್ಸಿಡಿ ದೊರೆಯುತ್ತಿದೆ. ಇದನ್ನು ಬಳಸಿಕೊಂಡರೆ ನಿಮ್ಮ ಬಂಡವಾಳ ಇನ್ನೂ ಕಡಿಮೆಯಾಗುತ್ತದೆ.


- ಪ್ರಸನ್ನ ಹೊಳ್ಳ, ತೀರ್ಥಹಳ್ಳಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top