- ಪ್ರಸನ್ನಾ ವಿ. ಚೆಕ್ಕೆಮನೆ
ಬೆಳಗಿನ ಜಾವದ ಐದು ಗಂಟೆಯ ಹೊತ್ತಿನಲ್ಲಿ ಇಡೀ ಊರು ಇನ್ನೂ ನಿದ್ರೆಯ ಮಂಪರಿನಲ್ಲಿರುವಾಗಲೇ ಅಡುಗೆಮನೆಯಲ್ಲಿ ಪಾತ್ರೆಗಳ ಸದ್ದಿನೊಂದಿಗೆ ನನ್ನ ದಿನಚರಿ ಆರಂಭವಾಗುತ್ತದೆ.
ಕಿಟಕಿಯ ಹೊರಗೆ ನಾನು ಪ್ರೀತಿಯಿಂದ ಬೆಳೆಸಿದ ಕೈತೋಟದ ಮಲ್ಲಿಗೆಯ ಸುಗಂಧ ಗಾಳಿಯಲ್ಲಿ ತೇಲಿ ಬರುತ್ತಿರುವುದನ್ನು ಆಸ್ವಾದಿಸುತ್ತಾ ನಾನು ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದೆ.
ಯಾಕೆಂದರೆ, ಆ ತೋಟದ ಪ್ರತಿಯೊಂದು ಗಿಡವೂ ನನ್ನ ಮಗುವಿನಂತೆ. ಬೆಂಡೆ, ಬದನೆ, ಅಲಸಂಡೆ ಗಿಡಗಳಿಗೆ ನೀರುಣಿಸಿ, ಅವುಗಳ ಮೈದಡವಿ, ಮನೆಯೊಳಗೆ ಹಚ್ಚಹಸಿರನ್ನು ತಂದವಳು ನಾನೇ. ಮನೆಯ ಪ್ರತಿ ಮೂಲೆಯೂ ಕನ್ನಡಿಯಂತೆ ಹೊಳೆಯಬೇಕು, ಅತ್ತೆ-ಮಾವಂದಿರ ಕೋಣೆಯಲ್ಲಿ ಧೂಳಿನ ಕಣವೂ ಇರಬಾರದು ಎಂಬುದು ನನ್ನ ಬದ್ಧತೆ.
ಆದರೆ, ನನ್ನ ಈ ಅಚ್ಚುಕಟ್ಟುತನದ ಹಿಂದಿನ ಶ್ರಮ ಯಾರಿಗೂ ಕಾಣುತ್ತಿರಲಿಲ್ಲ. ಪ್ರವೀಣ ಎದ್ದ ಕೂಡಲೇ ಅವನ ಕೈಗೆ ಬಿಸಿ ಕಾಫಿ ಕೊಡಬೇಕು. ಅವನ ಇಸ್ತ್ರಿ ಮಾಡಿದ ಬಟ್ಟೆಗಳು ಬೆಡ್ ಮೇಲಿರಬೇಕು, ವಾಚ್, ಪರ್ಸ್, ಗಾಡಿ ಕೀ ಎಲ್ಲವೂ ಅವನು ಹುಡುಕದಂತೆ ಕಣ್ಣೆದುರೇ ಇರಬೇಕು. ಒಂದು ದಿನ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಾಕು, ಮನೆಯಲ್ಲಿ ಯುದ್ಧವೇ ಶುರುವಾದಂತೆ.
ಅಂದು ಬೆಳಗ್ಗೆಯೂ ಹಾಗೆಯೇ ಆಗಿದ್ದು. ನಾನು ಅತ್ತೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಿ ನಡೆಸುತ್ತಿದ್ದೆ. ಅವರಿಗೆ ಬಿಪಿ ಮತ್ತು ಶುಗರ್ ಪರೀಕ್ಷೆ ಮಾಡಿಸುವುದು ನನ್ನ ಪ್ರತೀ ತಿಂಗಳ ಕರ್ತವ್ಯ. ಮಕ್ಕಳಿಗೆ ಇಷ್ಟವಾದ ತಿಂಡಿ ತಯಾರಿಸಿಕೊಟ್ಟಿದ್ದೆ. ಟಿಫನ್ ಬಾಕ್ಸ್ ಗು ಅವರ ಇಷ್ಟದ ತಿಂಡಿ ಹಾಕಿ ಶಾಲೆಗೆ ಕಳುಹಿಸಿಯಾಗಿತ್ತು.
ನಾನು ಎಂ.ಎಸ್ಸಿ ಓದಿದವಳಾದ್ದರಿಂದ ಮಕ್ಕಳನ್ನು ಯಾವ ಟ್ಯೂಷನ್‌ಗೂ ಕಳುಹಿಸದೆ ನಾನೇ ಪಾಠ ಹೇಳಿಕೊಡುತ್ತಿದ್ದೆ. ಆದರೆ ಪ್ರವೀಣನಿಗೆ ಇವೆಲ್ಲವೂ ಕಣ್ಣಿಗೆ ಬೀಳುತ್ತಿರಲಿಲ್ಲ. ಅವನು ತಿಂಡಿ ತಿನ್ನುತ್ತಾ ಮುಖ ಕಿವುಚಿದ.
"ಈ ದೋಸೆ ಯಾಕೋ ಇವತ್ತು ಸರಿ ಇಲ್ಲ. ನೀರುದೋಸೆ ವಾರದಲ್ಲಿ ಎಷ್ಟು ದಿನ ಮಾಡುತ್ತೀಯಾ? ಅಂದಹಾಗೆ, ಪಕ್ಕದ ಮನೆ ವೀಣಾಳನ್ನು ನೋಡಿದ್ದೀಯಾ? ಅವಳು ಬೆಳಗ್ಗೆ ಎದ್ದು ಸ್ಕೂಟರ್ ಏರಿ ಆಫೀಸಿಗೆ ಹೋಗ್ತಾಳೆ. ಸಂಜೆ ಬಂದು ಟ್ಯೂಷನ್ ಮಾಡ್ತಾಳೆ. ಮನೆ ಮಂದಿಯನ್ನೆಲ್ಲಾ ಅವಳೇ ಸಾಕ್ತಿದ್ದಾಳೆ. ಅವಳ ಗಂಡ ವಿದೇಶದಲ್ಲಿ ನೆಮ್ಮದಿಯಾಗಿದ್ದಾನೆ ಅಂದ್ರೆ ಅದಕ್ಕೆ ಇಂಥ ಹೆಂಡತಿ ಕಾರಣ. ನನಗೂ ಒಬ್ಬಳಿದ್ದಾಳೆ... ಮನೆಯಲ್ಲೇ ಇರ್ತಾಳೆ, ಆದರೂ ಏನು ಪ್ರಯೋಜನ? ಈ ಡಿಗ್ರಿ ಸರ್ಟಿಫಿಕೇಟ್‌ಗಳನ್ನು ಮೂಟೆ ಕಟ್ಟಿ ಅಟ್ಟದ ಮೇಲೆ ಹಾಕು. ಒಂದು ಸರ್ಕಾರಿ ಕೆಲಸ ಹಿಡಿಯೋ ಯೋಗ್ಯತೆ ಇಲ್ಲ ನಿನಗೆ!" ಕೈ ಹಿಡಿದ ಗಂಡ ಹಾಗೆ ಹೇಳಿದರೆ ಯಾವ ಹೆಂಡತಿಗೆ ತಾನೇ ಮೌನವಾಗಿ ಕೇಳಿಕೊಂಡಿರಲು ಸಾಧ್ಯವಾದೀತು.
ಆ ಮಾತು ಕೇಳಿದಾಗ ನನಗೂ ಗಂಟಲಲ್ಲಿ ತುತ್ತು ಸಿಕ್ಕಿಕೊಂಡಂತಾಯಿತು. ಕಣ್ಣಲ್ಲಿ ನೀರು ಜಿನುಗಿತು. ಮನೆಯವರಿಗಾಗಿ ನಾನು ಮಾಡುವ ತ್ಯಾಗ' ಶ್ರಮ ಎಲ್ಲವೂ ನದಿ ನೀರಿನಲ್ಲಿ ಹುಣಸೆಹಣ್ಣು ಕಿವುಚಿದಂತೆ ಎಂದು ನನಗೆ ಮೊದಲ ಬಾರಿಗೆ ಅನಿಸಿತು.
"ಪ್ರವೀಣ್, ನಾನು ದಿನವಿಡೀ ಮನೆಯಲ್ಲಿ ಸುಮ್ಮನೆ ಕೂತಿರಲ್ಲ. ನಿಮ್ಮ ತಂದೆ-ತಾಯಿಯ ಆರೋಗ್ಯ, ಮಕ್ಕಳ ಓದು, ಅಡುಗೆ, ಸ್ವಚ್ಛತೆ ಎಲ್ಲವನ್ನೂ ನಾನೇ ನೋಡಿಕೊಳ್ತಿದ್ದೀನಿ ಅಲ್ವಾ? ಪಕ್ಕದ ಮನೆಯವರು ಟ್ಯೂಷನ್‌ಗೆ ಕಳುಹಿಸ್ತಾರೆ, ನಾನು ನನ್ನ ಮಕ್ಕಳಿಗೆ ನಾನೇ ಗುರುವಾಗಿಲ್ವಾ? ನಮ್ಮ ಮನೆಗೆ ಕೆಲಸದವಳು ಬರ್ತಿಲ್ಲ, ಯಾಕೆಂದರೆ ಕ್ಲೀನಿಂಗ್ ನಾನು ಮಾಡುತ್ತೇನೆ. ನಾವು ಹೊರಗಿನಿಂದ ತಿಂಡಿ ತರಿಸುತ್ತಿಲ್ಲ. ಯಾಕೆಂದರೆ ನಿಮಗೆಲ್ಲರಿಗೂ ಇಷ್ಟವಾದ ಅಡುಗೆಯನ್ನು ನಾನೇ ತಯಾರಿಸುತ್ತೇನೆ. ಅದು ಯಾವುದು ನಿಮ್ಮ ಗಮನಕ್ಕೆ ಬರಲಿಲ್ಲವೇ ಹಾಗಿದ್ದರೆ?" ಅಷ್ಟು ಹೇಳುವಷ್ಟರಲ್ಲಿ ನನ್ನ ಧ್ವನಿ ನಡುಗುತ್ತಿತ್ತು.
" ಅದಕ್ಕೇನು ಮಹಾ ? ಅದನ್ನ ಯಾರಾದರೂ ಮಾಡ್ತಾರೆ. ಸಂಬಳ ತರುವುದು ಮುಖ್ಯ. ನೀನು ಇಷ್ಟು ಓದಿದ್ರೂ ವೇಸ್ಟ್. ನಿನಗೆ ವಾಹನ ಓಡಿಸಲು ಭಯ, ರಾತ್ರಿ ಒಬ್ಬಳೇ ಹೊರಗೆ ಬರಲು ಭಯ. ಬರೀ ಅಡುಗೆ ಮನೆಯಲ್ಲೇ ನಿನ್ನ ಬದುಕು ಕಳೆದುಹೋಯಿತು. ಒಂದು ಒಳ್ಳೆಯ ಪತ್ರೊಡೆ ಮಾಡೋಕೂ ನಿನಗೆ ಬರಲ್ಲ!" ಎಂದವನೇ ಎದ್ದು ಹೊರಟು ಹೋದ.
ಅವನು ಹೋದ ಮೇಲೆ ನಾನು ತೋಟದ ಕಡೆ ಮುಖ ಮಾಡಿ ಅತ್ತೆ. ಗಿಡಗಳಿಗೆ ನೀರುಣಿಸುವಾಗ ನನ್ನ ಕಣ್ಣೀರೂ ಮಣ್ಣು ಸೇರುತ್ತಿತ್ತು.
"ನಾನು ಓದಿದ್ದು ತಪ್ಪೇ ? ಕೆಲಸ ಸಿಗದಿದ್ದಕ್ಕೆ ನಾನು ಜವಾಬ್ದಾರಿಯೇ ? ಈ ಮನೆಯನ್ನು ನಂದನವನದಂತೆ ಇಟ್ಟಿದ್ದೇನೆಯೇ ಹೊರತು ನಾನೇನು ಸೋಮಾರಿಯಲ್ಲವಲ್ಲ?" ಎಂಬ ಪ್ರಶ್ನೆಗಳು ನನ್ನನ್ನು ಕಾಡಿದವು. ಪ್ರವೀಣನಿಗೆ ನಾನು ಮಾಡುವ ಕೆಲಸಗಳೆಲ್ಲಾ 'ಮೂಲಸೌಕರ್ಯ'ಗಳಂತೆ ಅನಿವಾರ್ಯವಾಗಿ ಬೇಕಿತ್ತು, ಆದರೆ ಅವುಗಳಿಗೆ ಬೆಲೆ ಮಾತ್ರ ಇರಲಿಲ್ಲ. ವಾಷಿಂಗ್ ಮೆಷಿನ್ ಬಟ್ಟೆ ತೊಳೆಯುತ್ತದೆ, ಗ್ಯಾಸ್ ಅಡುಗೆ ಮಾಡುತ್ತದೆ, ನೀನೇನು ಮಾಡುತ್ತಿರುವೆ ಎಂಬುದು ಅವನ ವಾದವಾಗಿತ್ತು.
ಒಂದು ವಾರ ಕಳೆಯಿತು. ನನ್ನ ಅಂತರಾಳದಲ್ಲಿ ಬದಲಾವಣೆಯ ಪರ್ವ ಆರಂಭವಾಯಿತು. ನನ್ನ ಸರ್ಟಿಫಿಕೇಟ್‌ಗಳನ್ನೆಲ್ಲ ಧೂಳು ಕೊಡವಿ ಹೊರತೆಗೆದೆ. ಕಂಪ್ಯೂಟರ್ ತರಬೇತಿ ಪಡೆದ ನನ್ನ ಸರ್ಟಿಫಿಕೇಟ್ ನೋಡಿದಾಗ ಯಾಕೋ ಖುಷಿ ಅನಿಸಿತು.
ನನ್ನ ಹಳೆಯ ಗೆಳತಿ ನಡೆಸುತ್ತಿದ್ದ ಸಂಸ್ಥೆಯಲ್ಲಿ ಕೆಲಸವೊಂದಕ್ಕೆ ಸಂದರ್ಶನ ನೀಡಿದೆ. ಆಯ್ಕೆಯೂ ಆಯಿತು. ಅವಳೇ ನನಗೆ ಈ ಈ ವಿಚಾರ ತಿಳಿಸಿ ಅಪ್ಲೈ ಮಾಡಿಸಿದ್ದು. ಬೆಳಗ್ಗೆ ಎಂಟರಿಂದ ಸಂಜೆ ನಾಲ್ಕರವರೆಗೆ ಶಿಫ್ಟ್ ಕೆಲಸ. ಬೆಳಗ್ಗೆ ಬೇಗ ಹೊರಡಬೇಕು ಎಂಬುದು ಬಿಟ್ಟರೆ ನನಗೆ ಬೇರೆ ಯಾವುದೇ ಸಮಸ್ಯೆಯೂ ಇರಲಿಲ್ಲ. ಯಾಕೆಂದರೆ ಎಲ್ಲರಿಗಾಗಿ ನಾನು ಬೇಗನೆ ಮನೆ ಕೆಲಸಗಳನ್ನು ಪೂರೈಸಬೇಕಿತ್ತು.
ಅಂದು ಮನೆಯಲ್ಲಿ ನಾನು ಕೆಲಸಕ್ಕೆ ಸೇರುತ್ತಿರುವ ವಿಷಯ ತಿಳಿಸಿದಾಗ ಪ್ರವೀಣನ ಮುಖದಲ್ಲಿ ಅಚ್ಚರಿಗಿಂತ ಹೆಚ್ಚಾಗಿ ವ್ಯಂಗ್ಯವಿತ್ತು. ಅವರಿಗೆ ನನ್ನ ಬಗ್ಗೆ ಸ್ವಲ್ಪವೂ ಅಭಿಮಾನವಿಲ್ಲ ಎಂದು ತಿಳಿದಿದ್ದರೂ ಅವರು ನನ್ನನ್ನು ಅಪಹಾಸ್ಯ ಮಾಡಬಹುದು ಎಂದು ನಾನು ಭಾವಿಸಿರಲಿಲ್ಲ
"ಓಹೋ, ಕೆಲಸಕ್ಕೆ ಹೋಗ್ತಿಯಾ? ಕಲೆಕ್ಟರ್ ಹುದ್ದೆ ಏನೂ ಅಲ್ಲವಲ್ಲ? ನಾಲ್ಕು ದಿನ ಹೋಗು, ಸಾಕು ಅನ್ನಿಸುತ್ತೆ ನಿನಗೆ." ಎಂದಾಗ ನಾನು ಹೆದರಲಿಲ್ಲ. ಅವನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದೆ, "ನೀವು ಕೂಡ ಕಲೆಕ್ಟರ್ ಅಲ್ಲವಲ್ಲ ಪ್ರವೀಣ್? ಆದರೂ ನೀವು ಕೆಲಸಕ್ಕೆ ಹೋಗ್ತೀರಲ್ಲ ಹಾಗೆಯೇ ನಾನು. ಕೂಡ ಹೋಗುತ್ತೇನೆ" ಎಂದಾಗ ಅವನು ಹೌಹಾರಿದ.
ಯಾಕೆಂದರೆ ಮೊದಲ ಬಾರಿಗೆ ನಾನು ಅವನಿಗೆ ತಿರುಗಿ ಉತ್ತರ ಕೊಟ್ಟಿದ್ದೆ. ಮರುದಿನದಿಂದ ನನ್ನ ಹೋರಾಟ ಶುರುವಾಯಿತು. ಮುಂಜಾನೆ ನಾಲ್ಕಕ್ಕೇ ಎದ್ದು ತಿಂಡಿ ತಯಾರಿಸಿ ಅಡುಗೆ ಮಾಡಿ, ಅತ್ತೆ-ಮಾವಂದಿರು ಊಟ ತಿಂಡಿಯನ್ನು ತಾವೇ ತೆಗೆದುಕೊಳ್ಳುವಷ್ಟು ಆರೋಗ್ಯವಂತರಾಗಿದ್ದರು. ಅವರಿಗೆ ಮಾತ್ರೆಗಳನ್ನು ಜೋಡಿಸಿಟ್ಟು ಹೊರಡುತ್ತಿದ್ದೆ.. ಸಂಜೆ ಮರಳಿ ಬಂದ ಮೇಲೆ ಪಾತ್ರೆ ತೊಳೆದು ರಾತ್ರಿಯ ಅಡುಗೆ ಮಾಡುತ್ತಿದ್ದೆ. ಮಕ್ಕಳಿಗೆ ಪಾಠ ಹೇಳಿಕೊಡಲು ಸಮಯ ದೊರಕುತ್ತಿತ್ತು.
ನನ್ನ ಕೆಲಸದಿಂದ ಕಷ್ಟ ಆಗಿದ್ದು ಪ್ರವೀಣನಿಗೆ ಮಾತ್ರ. ಅವನ ಕೆಲಸಗಳನ್ನು ನಾನೀಗ ಮಾಡುತ್ತಿರಲಿಲ್ಲ. ಹಾಗಾಗಿ ಅವನಿಗೆ ಸಂಕಟ ಶುರುವಾಯಿತು. ಅವನಿಗೆ ಇಸ್ತ್ರಿ ಮಾಡಿದ ಬಟ್ಟೆಗಳನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಎದುರಾಯಿತು.
ಒಂದು ಸಂಜೆ ನಾನು ಸುಸ್ತಾಗಿ ಬಂದಾಗ, "ನನ್ನ ಬಟ್ಟೆಗಳನ್ನೆಲ್ಲಾ ತೊಳೆಯಬೇಕು, ಮರೆತಿದ್ದೀಯಾ?" ಅಂದ ಗತ್ತಿನಿಂದ. ಯಾಕೋ ನಗು ಬಂತು.
"ವಾಷಿಂಗ್ ಮೆಷಿನ್ ಇದೆ ಅಲ್ವಾ ಪ್ರವೀಣ್? ನೀವೇ ಹೇಳ್ತಿದ್ರಲ್ಲ 'ನೀನಲ್ಲ, ಮೆಷಿನ್ ಬಟ್ಟೆ ತೊಳೆಯೋದು ಅಂತ. ಈಗ ಆ ಕೆಲಸವನ್ನ ಮೆಷಿನ್ನೇ ಮಾಡಲಿ ಬಿಡಿ. ನನಗೆ ಆಫೀಸ್ ಕೆಲಸವಿದೆ" ಎಂದು ನನ್ನ ಕೆಲಸದ ಕಡೆಗೆ ಗಮನ ಹರಿಸಿದೆ.
ಮತ್ತೊಂದು ದಿನ ಪತ್ರೊಡೆಯ ಬೇಡಿಕೆ ಇಟ್ಟಾಗಲೂ ನಾನು ಹಿಂದಿನಂತೆ ಬೇಗನೆ ಒಪ್ಪಿಕೊಳ್ಳಲಿಲ್ಲ. "ನಾನು ಸಾಮಾನು ತಂದುಕೊಡ್ತೇನೆ, ಆದರೆ ನಾಳೆ ಬೆಳಿಗ್ಗೆ ನೀವು ಬೇಗ ಎದ್ದು ನನಗೆ ಅಡುಗೆಯಲ್ಲಿ ಸಹಾಯ ಮಾಡಬೇಕು. ನನಗೂ ಕೆಲಸಕ್ಕೆ ಹೋಗುವ ಆತುರವಿರುತ್ತದೆ" ಎಂದಾಗ ಅವನ ಆತ್ಮಗೌರವಕ್ಕೆ ಚ್ಯುತಿ ಬಂತು.
ಅವನು ಸಿಟ್ಟಿನಿಂದಲೇ, "ನನ್ನ ನಾಯಿ ಬರುತ್ತೆ ನಿನಗೆ ಸಹಾಯ ಮಾಡೋಕೆ!" ಎಂದಾಗ ನಾನು ಅಷ್ಟೇ ತಣ್ಣಗೆ, "ಹಾಗಾದರೆ ಆ ನಾಯಿಗೇ ಹೇಳಿ ಪತ್ರೊಡೆ ಮಾಡಿಸಿಕೊಳ್ಳಿ. ನನಗೆ ಇವತ್ತು ಆಫೀಸ್ ಫೈಲ್ ಮುಗಿಸುವುದಿದೆ," ಎಂದು ತಿರುಗೇಟು ನೀಡಿದೆ. ಅವನು ಸಿಟ್ಟಿನಿಂದ ಹೋದಾಗ ನನಗೆ ನಗು ಬಂತು.
ಈ ಎಲ್ಲದರ ನಡುವೆಯೂ ನಾನು ಅತ್ತೆ-ಮಾವಂದಿರನ್ನು ಪ್ರೀತಿಯಿಂದಲೇ ನೋಡಿಕೊಂಡೆ. ಅವರಿಗೆ ಬೇಕಾದ ಹಣ್ಣು-ಹಂಪಲು, ಸಮಯಕ್ಕೆ ಸರಿಯಾದ ಕಾಫಿ-ತಿಂಡಿ ಕೊಡಲು ನಾನು ಹಿಂದೆ ಸರಿಯಲಿಲ್ಲ. ಏಕೆಂದರೆ ಅವರಿಗೆ ಮಗಳಿಲ್ಲದ ಕೊರತೆಯನ್ನು ನಾನು ನೀಗಿಸಬೇಕಿತ್ತು. ಪ್ರವೀಣನ ಅಹಂಕಾರದ ಎದುರು ನಾನು ನನ್ನ ಅಸ್ಮಿತೆಯನ್ನು ಕಂಡುಕೊಳ್ಳಲು ಆರಂಭಿಸಿದೆ. ನನ್ನ ತೋಟದ ಗಿಡಗಳು ಈಗ ನಾನು ಇಲ್ಲದಿದ್ದರೂ ಗಾಳಿಯಲ್ಲಿ ನಗುತ್ತಿದ್ದವು, ಏಕೆಂದರೆ ಅವುಗಳ ಒಡತಿ ಈಗ ಸ್ವಾವಲಂಬನೆಯ ಹಾದಿಯಲ್ಲಿದ್ದಳು. ಆದರೂ ಅವುಗಳಿಗೆ ನೀರು ಹಾಕುವುದನ್ನು ಮರೆಯಲಿಲ್ಲ.
ನಾನು ಕೇವಲ ಅಡುಗೆ ಮಾಡುವವಳಲ್ಲ, ನಾನು ಕೇವಲ ಮನೆ ಕಾಯುವವಳಲ್ಲ. ನಾನು ಓದಿದವಳು, ಶ್ರಮಜೀವಿ ಮತ್ತು ಅಸ್ಮಿತೆ ಇರುವ ಹೆಣ್ಣು ಎಂಬ ಸತ್ಯ ಪ್ರವೀಣನಿಗೆ ಮನವರಿಕೆಯಾಗುವ ಕಾಲ ಹತ್ತಿರವಿತ್ತು.
ಅಂದು ಸಂಜೆ ಪ್ರವೀಣ ಮನೆಗೆ ಬಂದಾಗ ಅವನ ಮುಖದಲ್ಲಿ ಎಂದಿನಂತೆ ಪಕ್ಕದ ಮನೆಯ ವೀಣಾಳ ಬಗೆಗಿನ ಪ್ರಶಂಸೆಯ ಪುರಾಣವಿತ್ತು.
"ನೋಡು, ವೀಣಾ ಇವತ್ತು ಹೊಸ ಕಾರು ತಂದಿದ್ದಾಳೆ. ಹೀಗಿರಬೇಕು ಜಾಣೆಯರು ಅಂದ್ರೆ! ಬದುಕನ್ನ ಹೇಗೆ ರೂಪಿಸಿಕೊಳ್ಳಬೇಕು ಅನ್ನೋದನ್ನ ಅವಳನ್ನ ನೋಡಿ ಕಲಿ," ಅಂದ ಕೆಂಪು ಕಣ್ಣುಗಳಿಂದ ನನ್ನನ್ನು ದಿಟ್ಟಿಸುತ್ತಾ.
ನಾನು ಅಡುಗೆ ಮನೆಯಿಂದ ಹೊರಬಂದು, ಕೈಯಲ್ಲಿದ್ದ ಚಹಾ ಲೋಟವನ್ನು ಮೇಜಿನ ಮೇಲಿಟ್ಟು ಶಾಂತವಾಗಿ ಉತ್ತರಿಸಿದೆ, "ಖಂಡಿತ ಪ್ರವೀಣ್, ವೀಣಾ ಅದೃಷ್ಟವಂತೆ ನಿಜ. ಯಾಕಂದ್ರೆ ಅವಳ ಗಂಡ ಸಮರ್ಥ. ವಿದೇಶದಲ್ಲಿ ಚೆನ್ನಾಗಿ ಹಣ ಸಂಪಾದಿಸ್ತಾನೆ. ಅವಳಿಗೆ ಒಂದು ಅಲ್ಲ, ಎರಡು ಕಾರುಗಳನ್ನೂ ಕೊಡಿಸಬಲ್ಲ ಶಕ್ತಿ ಅವನಿಗಿದೆ. ಅವಳ ಯಶಸ್ಸಿನ ಹಿಂದೆ ಆಕೆಯ ಪರಿಶ್ರಮದ ಜೊತೆಗೆ ಗಂಡನ ಬೆಂಬಲವೂ ಇದೆ ಅಲ್ವಾ?" ಶಾಂತವಾಗಿ ನುಡಿದರೂ ನನ್ನ ಆ ಮಾತು ಅವನ ಮನದ ಮರ್ಮಕ್ಕೆ ಏಟು ಕೊಟ್ಟಂತೆ ಆಯಿತು. ಅವನ ಅಹಂಕಾರಕ್ಕೆ ನನ್ನ ನೇರವಾದ ಮಾತು ತಣ್ಣೀರೆರಚಿದಂತಿತ್ತು. ಅವನು ಮೌನಕ್ಕೆ ಶರಣಾದ. ಮೊದಲ ಬಾರಿಗೆ ಅವನ ಬಳಿ ನನ್ನ ಪ್ರಶ್ನೆಗೆ ಉತ್ತರವಿರಲಿಲ್ಲ.
ನನ್ನ ಆಫೀಸ್‌ನ ಗೆಳತಿ ಶೋಭಾ ನನಗೆ ಕೇವಲ ಸಹೋದ್ಯೋಗಿಯಷ್ಟೇ ಅಲ್ಲ, ನನ್ನ ಆತ್ಮವಿಶ್ವಾಸದ ಗುರುವಾಗಿ ಬದಲಾದಳು. ಅವಳ ಬಳಿ ಒಂದು ಹಳೆಯ ಸ್ಕೂಟರ್ ಇತ್ತು. ಪ್ರತಿದಿನ ಸಂಜೆ ಕೆಲಸ ಮುಗಿದ ಮೇಲೆ ಅವಳು ನನ್ನನ್ನು ಖಾಲಿ ಮೈದಾನಕ್ಕೆ ಕರೆದೊಯ್ದು ಸ್ಕೂಟರ್ ಓಡಿಸಲು ಕಲಿಸುತ್ತಿದ್ದಳು.
" ನೋಡು ಸವಿತಾ, ಭಯ ಅನ್ನೋದು ನಮ್ಮ ಮನಸ್ಸಿನಲ್ಲಿದೆ ಅಷ್ಟೇ. ಒಮ್ಮೆ ನೀನು ಈ ಹ್ಯಾಂಡಲ್ ಹಿಡಿದು ಆಕ್ಸಿಲರೇಟರ್ ಕೊಟ್ಟರೆ ಸಾಕು, ನಿನ್ನ ಬದುಕು ವೇಗ ಪಡೆದುಕೊಳ್ಳುತ್ತೆ. ಇದು ಏನೂ ಕಷ್ಟವಲ್ಲ," ಎಂದು ಧೈರ್ಯ ತುಂಬುತ್ತಿದ್ದಳು. ಕೆಲವು ವಾರಗಳ ಕಠಿಣ ಅಭ್ಯಾಸದ ನಂತರ, ನನ್ನ ಕೈಗೆ ಡ್ರೈವಿಂಗ್ ಲೈಸೆನ್ಸ್ ಸಿಕ್ಕಿತು.
ಅಂದು ರಾತ್ರಿ ಊಟದ ಮೇಜಿನ ಮೇಲೆ ಆ ಲೈಸೆನ್ಸ್ ಕಾರ್ಡ್ ಅನ್ನು ಪ್ರವೀಣನ ಮುಂದೆ ಇಟ್ಟೆ. ಅವನ ಕಣ್ಣುಗಳು ಆಶ್ಚರ್ಯದಿಂದ ಅರಳಿದವು.
"ಇದೇನು?" ಎಂದು ಕೇಳಿದ ಅವಾಕ್ಕಾದ ದನಿಯಲ್ಲಿ. "ನನ್ನ ಹೊಸ ಹಾದಿಯ ಮೊದಲ ಹೆಜ್ಜೆ" ನಾನು ದೃಢವಾಗಿ ಹೇಳಿದೆ.
"ನಾನು ಲೋನ್ ತೆಗೆದುಕೊಳ್ಳುತ್ತಿದ್ದೇನೆ. ಒಂದು ಸೆಕೆಂಡ್ ಹ್ಯಾಂಡ್ ಸ್ಕೂಟರ್ ಮಾತುಕತೆ ಮಾಡಿಕೊಂಡಿದ್ದೇನೆ. ಇನ್ಮುಂದೆ ನನ್ನ ಸಂಬಳದ ಅರ್ಧ ಭಾಗವನ್ನ ಮಾತ್ರ ಮನೆಗೆ ಕೊಡಬಲ್ಲೆ. ಉಳಿದ ಹಣ ನನ್ನ ಇನ್ಸ್ಟಾಲ್ಮೆಂಟ್ ಮತ್ತು ಉಳಿತಾಯಕ್ಕೆ ಬೇಕು." ನನ್ನ ಮನೆಯಲ್ಲಿ ಆತ್ಮವಿಶ್ವಾಸವಿತ್ತು
ಅವನು ಮೌನವಾಗಿ ಲೈಸೆನ್ಸ್ ನೋಡ್ತಾ ಕುಳಿತಿದ್ದ. ಅವನಿಗೆ ಸವಾಲು ಹಾಕುವ ಧೈರ್ಯ ಅಂದು ಇರಲಿಲ್ಲ.
ದಿನಗಳು ಕಳೆದಂತೆ ನನ್ನ ದಿನಚರಿ ಬದಲಾಯಿತು. ಸ್ಕೂಟರ್ ಏರಿ ನಾನು ಕೆಲಸಕ್ಕೆ ಹೋಗತೊಡಗಿದೆ. ಸಂಜೆ ಮನೆಗೆ ಬಂದ ಮೇಲೆ ಸುಮ್ಮನೆ ಕೂರಲಿಲ್ಲ. ಮನೆಯ ಸುತ್ತಲಿದ್ದ ಖಾಲಿ ಜಾಗದಲ್ಲಿ ವೈಜ್ಞಾನಿಕವಾಗಿ ಕೃಷಿ ಆರಂಭಿಸಿದೆ. ನಾನು ಬೆಳೆಸಿದ ಸಾವಯವ ತರಕಾರಿಗಳಿಗೆ ಅಕ್ಕಪಕ್ಕದ ಬಡಾವಣೆಗಳಲ್ಲಿ ಭಾರಿ ಬೇಡಿಕೆ ಬಂತು. ಅದರ ಜೊತೆಗೆ ನನ್ನ ಸೃಜನಶೀಲತೆಯನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ 'ಹೋಮ್ ಬ್ಯೂಟಿಕ್' ಆರಂಭಿಸಿದೆ. ನನ್ನೊಳಗೆ ಇಷ್ಟೊಂದು ಸಾಮರ್ಥ್ಯ ಇದೆ, ನಾನೂ ಒಬ್ಬ ಉದ್ಯಮಿಯಾಗಬಲ್ಲೆ ಎಂಬ ಅರಿವು ನನಗೇ ಆದಾಗ ನನ್ನ ಕಣ್ಣುಗಳಲ್ಲಿ ಹೊಸ ಹೊಳಪು ಮೂಡಿತು. ನಿನ್ನ ಸಂಪಾದನೆ ಹೆಚ್ಚಾದಂತೆ ನನ್ನಲ್ಲಿ ಮತ್ತಷ್ಟು ಧೈರ್ಯ ಮೂಡಿತು.
ಒಂದು ಭಾನುವಾರ ಮಧ್ಯಾಹ್ನ, ನಾನು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರವೀಣ ಮೌನವಾಗಿ ಬಂದು ನನ್ನ ಪಕ್ಕ ನಿಂತ. ಅವನ ದನಿಯಲ್ಲಿ ಮೊದಲಿನ ಗತ್ತು ಇರಲಿಲ್ಲ.
"ಸವಿತಾ... ನಿನಗೆ ನನ್ನ ಮೇಲೆ ಕೋಪವಿದೆಯಾ ?" ಎಂದು ಮೆಲ್ಲಗೆ ಕೇಳಿದ. ಅವನ ದನಿ ಸೋತು ಹೋದವರಂತೆ ಇತ್ತು. ಮೊದಲ ಬಾರಿಗೆ ಅವನ ಮೇಲೆ ಕನಿಕರ ಮೂಡಿತು ನನಗೆ. ಇಷ್ಟಾದರೂ ನನ್ನ ಪ್ರೀತಿಯ ಗಂಡನಲ್ಲವೇ ? ನನ್ನ ಮುದ್ದು ಮಕ್ಕಳ ಅಪ್ಪ ಇವರು. ಅವರನ್ನು ಪ್ರೀತಿಸದಿರಲು ನನಗೆ ಸಾಧ್ಯವೇ ಇರಲಿಲ್ಲ.
" ಯಾರು ಹೇಳಿದರು ಪ್ರವೀಣ್ ? ನಿಜ ಹೇಳಬೇಕೆಂದರೆ ನಾನು ನಿಮಗೆ ಕೃತಜ್ಞೆ ಸಲ್ಲಿಸಬೇಕು. ಅಂದು ನೀವು ಪ್ರತಿ ಹೆಜ್ಜೆಯಲ್ಲೂ ನನ್ನ ತಪ್ಪು ಹಿಡಿದು, 'ನಿನ್ನಿಂದ ಏನು ಪ್ರಯೋಜನ' ಎಂದು ಚುಚ್ಚದಿದ್ದರೆ ನಾನು ಇವತ್ತು ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ನಿಮ್ಮ ಆ ಮಾತುಗಳೇ ನನಗೆ ಹಠ ತರಿಸಿದವು. ನಾನು ನನ್ನನ್ನು ಕಂಡುಕೊಳ್ಳಲು ನೀವೇ ಕಾರಣ." ಪ್ರೀತಿಯಿಂದಲೇ ಹೇಳಿದೆ.
" ನೀನು ಮನೆ ಒಳಗೆ ಬಂಧಿಯಾಗಬಾರದು. ನಿನ್ನ ಓದು, ಜಾಣ್ಮೆ ಮೂಲೆಗುಂಪಾಗಬಾರದು ಎಂದೇ ನಾನು ಹಾಗೆ ಹೇಳುತ್ತಿದ್ದುದು " ಎಂದು ಅವನು ಹೇಳುವಾಗಲು ಅವನ ದನಿಯಲ್ಲಿ ಸತ್ವವಿರಲಿಲ್ಲ.
ಅವನ ಮಾತು ಕೇಳಿ ನನಗೆ ನಗು ಬಂತು. ಇದು ಬಹುಶಃ ಗಂಡಸರ ಸಾಮಾನ್ಯ ತಂತ್ರವಿರಬೇಕು! ಸೋತು ಬಿದ್ದ ಮೇಲೆ, ಸ್ವಲ್ಪ ಸೆಂಟಿಮೆಂಟ್ ಸೇರಿಸಿ, 'ನಿನ್ನ ಒಳ್ಳೆಯದಕ್ಕೇ ಮಾಡಿದ್ದು' ಎಂಬ ಸುಳ್ಳಿನ ಲೇಪನ ಹಚ್ಚುವುದು.
" ಪ್ರವೀಣ್, ನಾನು ನಾನೇ. ಇನ್ನೊಬ್ಬಳ ಪ್ರತಿಬಿಂಬವಾಗಲು ನನಗೆ ಇಷ್ಟವಿಲ್ಲ. ವೀಣಾ ಅವಳ ಜೀವನದಲ್ಲಿ ಶ್ರೇಷ್ಠಳಾಗಿರಬಹುದು, ಆದರೆ ನಾನು ನನ್ನ ಈ ಸರಳ ಬದುಕಿನಲ್ಲಿ ಅನನ್ಯಳು. ನಿಮಗೆ ಬೇಕಾದರೆ ಈ 'ನನ್ನನ್ನು' ಮಾತ್ರ ಒಪ್ಪಿಕೊಳ್ಳಿ, ಇಲ್ಲದಿದ್ದರೆ ಹೋಲಿಕೆ ಎಂಬ ಮಂತ್ರವನ್ನು ಸದಾಕಾಲ ಜಪಿಸುತ್ತಾ ಇರಿ." ನಾನು ಧೈರ್ಯದಿಂದ ಹೇಳಿದೆ. ಪ್ರವೀಣ್ ಮಾತನಾಡದೆ ತಲೆತಗ್ಗಿಸಿದ.
ಆ ದಿನದ ನಂತರ ಮನೆಯಲ್ಲಿ 'ವೀಣಾ' ಎಂಬ ಹೆಸರು ಕೇಳಿಬರಲಿಲ್ಲ. ಪ್ರವೀಣನ ಬದಲಾವಣೆ ನನಗೆ ಆಶ್ಚರ್ಯ ತಂದಿತ್ತು. ಅವನು ಅಡುಗೆಗೆ ಸಹಾಯ ಮಾಡಲಾರಂಭಿಸಿದ, ಅಪ್ಪ-ಅಮ್ಮನ ಜವಾಬ್ದಾರಿಯನ್ನು ಹಂಚಿಕೊಂಡ. ಅಹಂಕಾರದ ಮುಖವಾಡ ಕಳಚಿ ಒಬ್ಬ ಪ್ರೀತಿಯ ಗಂಡನಾಗಿ ರೂಪಾಂತರ ಹೊಂದುತ್ತಿದ್ದ. ಇದು ನನಗೆ ತುಂಬಾ ಪ್ರಿಯವಾಯಿತು ನಮ್ಮ ನಡುವೆ ಇರುವ ಅದೃಶ್ಯ ಪರದೆಗಳು ಸರಿದು ಹೋದವು.
ವರ್ಷಗಳುರುಳಿದವು. ನಾನು ನನ್ನ ಸ್ವಂತ ದುಡಿಮೆಯಲ್ಲಿ ಒಂದು ಸುಂದರವಾದ ಬಿಳಿ ಬಣ್ಣದ ಕಾರು ಖರೀದಿಸಿದೆ. ಅಂದು ಮೊದಲ ಡ್ರೈವ್‌ಗೆ ಹೋಗುವಾಗ ಪ್ರವೀಣನನ್ನು ಪಕ್ಕದ ಸೀಟಿನಲ್ಲಿ ಕೂರಿಸಿಕೊಂಡೆ. ಸ್ಟೀರಿಂಗ್ ಹಿಡಿದು ನಾನು ಆತ್ಮವಿಶ್ವಾಸದಿಂದ ಕಾರು ಚಲಾಯಿಸುತ್ತಿದ್ದರೆ ಪ್ರವೀಣ ನನ್ನನ್ನೇ ಹೆಮ್ಮೆಯಿಂದ ನೋಡುತ್ತಿದ್ದ.
" ಸವಿತಾ, ನೀನು ನಿಜಕ್ಕೂ ಜಾಣೆ. ನನ್ನನ್ನು ಕ್ಷಮಿಸು... ನಿನ್ನ ಮೌನವನ್ನು ನಾನು ಅಸಮರ್ಥತೆ ಅಂದುಕೊಂಡಿದ್ದೆ. ನಿನ್ನ ಶಕ್ತಿಯನ್ನು ಗುರುತಿಸದೆ ಅಂದು ನೋಯಿಸಿದ್ದಕ್ಕೆ ನನಗೆ ಈಗ ಪಶ್ಚಾತ್ತಾಪವಾಗ್ತಿದೆ" ಎನ್ನುತ್ತಾ ಅವನು ನನ್ನ ಭುಜದ ಮೇಲೆ ಕೈಯಿಟ್ಟ.
ನಾನು ಮೃದುವಾಗಿ ನಗುತ್ತಾ ಕಾರನ್ನು ಪಕ್ಕಕ್ಕೆ ನಿಲ್ಲಿಸಿದೆ. ಅವನು ಹತ್ತಿರ ಬಂದು ನನ್ನನ್ನು ಆಪ್ಯಾಯಮಾನವಾಗಿ ಅಪ್ಪಿಕೊಂಡ. ಅವನ ಆ ಅಪ್ಪುಗೆಯಲ್ಲಿ ಸಾವಿರಾರು ಪದಗಳ ಕ್ಷಮೆಯಾಚನೆಯಿತ್ತು.
"ಸವಿತಾ, ಇವತ್ತು ನೀನು ಕೇವಲ ಜಾಣೆಯಲ್ಲ, ಈ ಮನೆಯ ನಿಜವಾದ ಬೆಳಕು" ಎಂದು ಅವನು ಅಭಿನಂದಿಸಿದಾಗ ನನ್ನ ಕಣ್ಣಲ್ಲಿ ಆನಂದಬಾಷ್ಪವಿತ್ತು.
ಒಮ್ಮೆ "ನಿನ್ನಿಂದ ಏನು ಪ್ರಯೋಜನ?" ಎಂದು ಹೀಯಾಳಿಸಿದ್ದವನೇ ಇವತ್ತು "ನೀನೇ ನನ್ನ ಹೆಮ್ಮೆ" ಎಂದು ಒಪ್ಪಿಕೊಂಡಿದ್ದನಲ್ಲ... ಒಬ್ಬ ಹೆಣ್ಣಿನ ಅಸ್ಮಿತೆಯ ಹೋರಾಟಕ್ಕೆ ಇದಕ್ಕಿಂತ ದೊಡ್ಡ ಗೆಲುವು ಬೇಕೇ !
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


