ಮಂಗಳೂರು: ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಯುನಿಸೆಫ್ ಹೈದರಾಬಾದ್ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿವಿಯ ಮಾಧ್ಯಮ ಅಧ್ಯಯನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯದ ಪತ್ರಕರ್ತರಿಗೆ 2026-27ರ ಮಕ್ಕಳ ಸಮಸ್ಯೆಗಳ ಕುರಿತು ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ವಿವಿಯ ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರವು “ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆ: ಸಾಂಕ್ರಮಿಕ ರೋಗಗಳು, ಆರೋಗ್ಯಕರ ಆಹಾರ ಪದ್ಧತಿ ಮತ್ತು ರಸ್ತೆ ಸುರಕ್ಷತೆ” ಎಂಬ ವಿಷಯದ ಮೇಲೆ ಕೇಂದ್ರೀಕರಿಸಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯುನಿಸೆಫ್ ಕಛೇರಿಯ ತೆಲಂಗಾಣ, ಆಂದ್ರ ಪ್ರದೇಶ ಮತ್ತು ಕರ್ನಾಟಕದ ಸಂಪರ್ಕ ವಿಭಾಗದ ಅಡ್ವಕೇಸಿ ಮತ್ತು ಪಾರ್ಟ್ನರ್‌ಶಿಪ್ ಮುಖ್ಯಸ್ಥ ಪ್ರಸುನ್ ಸೇನ್ ಮಾತನಾಡಿ, ಮಕ್ಕಳ ವಯಸ್ಸಿನ ಆರೋಗ್ಯದ ಮಹತ್ವವನ್ನು ಒತ್ತಿಹೇಳಿದರು. ಅನೇಕ ಸಾಂಕ್ರಮಿಕ ರೋಗಗಳನ್ನು ಕಿಶೋರಾವಸ್ಥೆಯಲ್ಲೇ ಜಾಗೃತಿ ಮತ್ತು ಸೂಕ್ತ ಹಸ್ತಕ್ಷೇಪಗಳ ಮೂಲಕ ತಡೆಯಬಹುದು. ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಪ್ರಮುಖ. ಪೋಷಣೆಯ ಕೊರತೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಹಾಗೂ ಜೀವನ ಶೈಲಿಗೆ ಸಂಬಂಧಿಸಿದ ಅಸ್ವಸ್ಥತೆಗಳ ಬಗ್ಗೆ ಕೂಡ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು. ಶಾಲಾ ಮಟ್ಟದಲ್ಲಿಯೇ ಆರೋಗ್ಯ ಶಿಕ್ಷಣವನ್ನು ಬಲಪಡಿಸುವುದು ಅತ್ಯವಶ್ಯಕವೆಂದು ಅಭಿಪ್ರಾಯಪಟ್ಟರು. ಶುದ್ಧತೆ, ವೈಯಕ್ತಿಕ ಸ್ವಚ್ಛತೆ ಮತ್ತು ಸಮತೋಲನ ಆಹಾರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಅಗತ್ಯ. ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಲಸಿಕೆಕರಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಮಕ್ಕಳ ಆರೋಗ್ಯವನ್ನು ಸುಧಾರಿಸಬಹುದು. ಪೋಷಕರು, ಶಿಕ್ಷಕರು ಮತ್ತು ಸಮಾಜದ ಎಲ್ಲಾ ವಲಯಗಳು ಕೈಜೋಡಿಸಿದಾಗ ಮಾತ್ರ ಮಕ್ಕಳ ಸಮಗ್ರ ಆರೋಗ್ಯವನ್ನು ಕಾಪಾಡಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಡಾ. ವಾಸುದೇವ ಶರ್ಮಾ ಎನ್.ವಿ. ಮಾತನಾಡಿ ಯುನಿಸೆಫ್ ಸಹಯೋಗದಲ್ಲಿ ಹಲವು ಕಾರ್ಯಾಗಾರಗಳನ್ನು ನಡೆಸುತ್ತಿದ್ದು, ಮಕ್ಕಳ ಸಮಸ್ಯೆಗಳ ಕುರಿತು ಪತ್ರಕರ್ತರಲ್ಲಿ ಸಾಮರ್ಥ್ಯ ವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರು ಮಕ್ಕಳ ಹಕ್ಕುಗಳ ಕುರಿತು ವಿವರವಾಗಿ ಮಾತನಾಡಿ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ವಾತಾವರಣದ ಹಕ್ಕು ಇದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯಲು ಪಾಕ್ಸೋ (POCSO) ಕಾಯ್ದೆ ಅದರ ಬಗ್ಗೆ ಸಮಗ್ರ ಅರಿವು ಮೂಡಿಸುವುದು ಅತ್ಯಗತ್ಯವೆಂದು ಹೇಳಿದರು. ಇದರ ಜೊತೆಗೆ, ಮಕ್ಕಳನ್ನು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಸಮಾಜದ ಎಲ್ಲ ವರ್ಗಗಳು ಇದರ ವಿರುದ್ಧ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಮಕ್ಕಳ ಕಾರ್ಮಿಕತೆ ಮತ್ತು ಬಾಲ್ಯ ವಿವಾಹ ಇನ್ನೂ ಕೆಲವೆಡೆ ನಡೆಯುತ್ತಿರುವುದು ದುಃಖಕರವೆಂದು ಹೇಳಿ, ಇವುಗಳನ್ನು ನಿರ್ಮೂಲಗೊಳಿಸಲು ಕಾನೂನು ಜಾರಿಗೆ ಜೊತೆಗೆ ಸಾಮಾಜಿಕ ಬದಲಾವಣೆ ಅಗತ್ಯವೆಂದು ಅಭಿಪ್ರಾಯಪಟ್ಟರು. ಪತ್ರಕರ್ತರು ಈ ವಿಷಯಗಳನ್ನು ಸಂವೇದನಾಶೀಲವಾಗಿ ಮತ್ತು ಜವಾಬ್ದಾರಿಯುತವಾಗಿ ವರದಿ ಮಾಡುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು.
ಯುನಿಸೆಫ್‌ನ ಆರೋಗ್ಯ ತಜ್ಞ ಡಾ. ಶ್ರೀಧರ್ ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡುತ್ತಾ ಸಮತೋಲನ ಆಹಾರದ ಮಹತ್ವವನ್ನು ವಿವರಿಸಿದರು. ಮಕ್ಕಳ ದೈನಂದಿನ ಆಹಾರದಲ್ಲಿ ಪೋಷಕಾಂಶಗಳ ಸಮತೋಲನ ಇರಬೇಕು ಎಂದು ಅವರು ತಿಳಿಸಿದರು. ಹಣ್ಣುಗಳು, ತರಕಾರಿಗಳು, ಪ್ರೋಟೀನ್‌ಗಳು ಹಾಗೂ ಧಾನ್ಯಗಳನ್ನು ಒಳಗೊಂಡ ಆರೋಗ್ಯಕರ ಆಹಾರ ಪದ್ಧತಿ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯವಶ್ಯಕ. ಮಧುಮೇಹ ಕುರಿತು ಮಾತನಾಡಿ, ಅದರ ವಿವಿಧ ಪ್ರಕಾರಗಳನ್ನು ವಿವರಿಸಿದರು. ಮುಖ್ಯವಾಗಿ ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಬಗ್ಗೆ ವಿವರಿಸಿ, ಟೈಪ್ 1 ಸಾಮಾನ್ಯವಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಇದು ಬಹುಪಾಲು ಜೆನೆಟಿಕ್ ಕಾರಣಗಳಿಂದ ಬರುತ್ತದೆ.
ಪೋಷಕರಿಂದ ಮಕ್ಕಳಿಗೆ ಜೀನ್ಸ್‌ಗಳ ಮೂಲಕ ಈ ರೋಗವು ಸಾಗುವ ಸಾಧ್ಯತೆ ಇದೆ ಎಂಬುದನ್ನೂ ಅವರು ವಿವರಿಸಿದರು. ಡಯಾಬಿಟಿಸ್‌ನ ತಪಾಸಣೆಯ ವಿವಿಧ ವಿಧಾನಗಳ ಬಗ್ಗೆ ತಿಳಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯುವ ಫಾಸ್ಟಿಂಗ್ ಬ್ಲಡ್ ಶುಗರ್ ಟೆಸ್ಟ್, ಪೋಸ್ಟ್ ಪ್ರಾಂಡಿಯಲ್ ಟೆಸ್ಟ್ ಹಾಗೂ ಹೆಚ್.ಬಿ.ಎ.೧ ಟೆಸ್ಟ್‌ಗಳ ಮಹತ್ವವನ್ನು ವಿವರಿಸಿದರು. ಈ ಪರೀಕ್ಷೆಗಳ ಮೂಲಕ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ನಿಯಂತ್ರಿಸಬಹುದು ಎಂದು ಹೇಳಿದರು. ಮಕ್ಕಳಲ್ಲಿ ಆರೋಗ್ಯಕರ ಜೀವನಶೈಲಿಯನ್ನು ರೂಪಿಸುವುದು, ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರ ಪದ್ಧತಿ ಪಾಲಿಸುವುದು ಡಯಾಬಿಟಿಸ್ ಸೇರಿದಂತೆ ಅನೇಕ ರೋಗಗಳನ್ನು ತಡೆಯಲು ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹಾಸನ, ಶಿವಮೊಗ್ಗ, ಮಂಗಳೂರು, ಕೊಡಗು, ಮುಲ್ಕಿ ಮತ್ತು ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಫೈ ಬ್ಲಾಕಿನ ಡೀನ್ ಡಾ. ಲೊವೀನಾ ಲೋಬೋ ಅಧ್ಯಕ್ಷತೆ ವಹಿಸಿದ್ದರು, ಮೈಸೂರು ವಿವಿಯ ಪತ್ರಿಕೋದ್ಯಮ ವಿಭಾಗದ ಪ್ರೊ. ಸಪ್ನ ಎಂ.ಎಸ್. ಸ್ವಾಗತಿಸಿ, ಅಲೋಶಿಯಸ್ ವಿವಿಯ ಮಾಧ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ ವಂದಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


