ಯಕ್ಷಗಾನದ ಮೇರು ಕಲಾವಿದ ಸೂರಿಕುಮೇರು ಗೋವಿಂದ ಭಟ್ ನಿಧನ

Upayuktha
0


ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದರಾಗಿದ್ದ ಹಾಗೂ “ದಶಾವತಾರಿ”, “ನಡೆದಾಡುವ ವಿಶ್ವಕೋಶ” ಎಂದು ಖ್ಯಾತಿ ಪಡೆದ ಸೂರಿಕುಮೇರು ಗೋವಿಂದ ಭಟ್ ಅವರು ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ತೀರ್ಥಹಳ್ಳಿಯಲ್ಲಿರುವ ತಮ್ಮ ಹಿರಿಯ ಪುತ್ರನ ಮನೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರನ್ನು ಅವರು ಅಗಲಿದ್ದಾರೆ.


1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಗೊಂಡ ಅವರು ಸುಮಾರು ಏಳು ದಶಕಗಳ ಕಾಲ ಧರ್ಮಸ್ಥಳ, ಮೂಲ್ಕಿ, ಕೂಡ್ಲು ಮತ್ತು ಸುರತ್ಕಲ್‌ನ ಇರಾ ಸೋಮನಾಥೇಶ್ವರ ಮೇಳಗಳಲ್ಲಿ ತಿರುಗಾಟ ನಡೆಸಿ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದರು. ಕೌರವ, ರಕ್ತಬೀಜ, ಇಂದ್ರಜಿತು, ಮಾಗಧ, ಕರ್ಣ, ಅತಿಕಾಯ ನರಕಾಸುರ, ತಾಮಾಕ್ಷ, ಹಿರಣ್ಯಕಶಿಪು, ದೇವೇಂದ್ರ, ಅರ್ಜುನ, ಹನುಮಂತ, ಭೀಷ್ಮ, ಬಾಹುಬಲಿ ಮತ್ತು ವಿಶ್ವಾಮಿತ್ರ ಮುಂತಾದ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿ ಅಪಾರ ಖ್ಯಾತಿ ಗಳಿಸಿದರು. ಛಂದೋಬದ್ಧ ಮಾತಿನ ಶೈಲಿಯ ಜೊತೆಗೆ ನೃತ್ಯದಲ್ಲೂ ಅವರು ವಿಶಿಷ್ಟ ಪ್ರಾವೀಣ್ಯತೆಯನ್ನು ಹೊಂದಿದ್ದರು.


ಅವರ ಸಾಧನೆಯನ್ನು ಗುರುತಿಸಿ 2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2016ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಸಾಧನಾ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಲಭಿಸಿದ್ದವು. ವೇಷಧಾರಿಯಷ್ಟೇ ಅಲ್ಲದೆ, ಅವರು ಪ್ರಸಂಗಕರ್ತರಾಗಿಯೂ ಪ್ರಸಿದ್ಧರಾಗಿದ್ದು ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ ಮತ್ತು ನಹುಷೇಂದ್ರ ಎಂಬ ಯಕ್ಷಪ್ರಸಂಗಗಳನ್ನು ರಚಿಸಿದ್ದಾರೆ.


ದೇಶದ ಹೊರಗೂ ಯಕ್ಷಗಾನವನ್ನು ಪರಿಚಯಿಸಿದ ಅವರು ಜಪಾನ್, ಅಬುದಾಬಿ ಮತ್ತು ದುಬೈಗಳಲ್ಲಿ ಪ್ರದರ್ಶನ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದ್ದರು. ದಿಲ್ಲಿಯಲ್ಲಿ ರಾಷ್ಟ್ರಪತಿಯವರ ಸಮ್ಮುಖದಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುವುದು ಅವರ ಕಲಾಜೀವನದ ಮತ್ತೊಂದು ಮಹತ್ವದ ಸಾಧನೆಯಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top