ಹನುಮಂತ ಮ. ದೇಶಕುಲಕರ್ಣಿಯವರ ಅವರ 10ನೇ ಕೃತಿಯು ಶ್ರೀರಾಮನವಮಿಯ ಶುಭ ಸಂದರ್ಭದಲ್ಲಿ ಶ್ರೀರಾಮನ ಪರಮಭಕ್ತರಾದ ಹೆಬ್ಬಳ್ಳಿಯ ಬ್ರಹ್ಮಚೈತನ್ಯಾಶ್ರಮದ ಶ್ರೀ ದತ್ತಾವಧೂತರಿಂದ (ವಿಶೇಷವಾಗಿ ಈ ಕೃತಿಯು ದತ್ತಾವಧೂತರಿಗೆ ಸಮರ್ಪಣೆಯಾಗಿದೆ) ಈ ರಾಮಾಂತರ್ಯಾಮಿ ಕೃತಿಯಲ್ಲಿ ಒಟ್ಟು 37 ವಿವಿಧ ವಿಷಯಗಳು ರಾಮನ ಕುರಿತು ಇವೆ. ಶ್ರೀರಾಮನ ಜೀವನದ ಎಲ್ಲ ಮಗ್ಗುಲಗಳನ್ನು ಸಂಕ್ಷಿಪ್ತವಾಗಿ ತಿಳಿಸಲು ಪ್ರಯತ್ನ ಮಾಡಿದ್ದಾರೆ.
ಶ್ರೀ ವಿಷ್ಣುವಿನ ದಶಾವತಾರಗಳಲ್ಲಿ ಬರುವ ಏಳನೇಯ ಅವತಾರವಾದ ಶ್ರೀರಾಮನು ಬೇರೆ ಅವತಾರಗಳಿಗಿಂತ ವೈಶಿಷ್ಟ್ಯ ಪೂರ್ಣವಾಗಿ ಜಗತ್ತಿಗೆ ಮಾದರಿ ಎನಿಸಿದೆ. ನರಮಾನವನಾಗಿ ಜನಿಸಿ ಜನಸಾಮಾನ್ಯರಿಗೆ ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳನ್ನು ಓರ್ವ ರಾಜಕುಮಾರನಾದರೂ ಸುಪ್ಪತ್ತಿಗೆಯನ್ನು ಬಿಟ್ಟು ಚಿಕ್ಕಮ್ಮನ ಮಾತಿನಂತೆ, ತಂದೆ ಧಶರಥ ಮಹಾರಾಜರ ಅಣತಿಯಂತೆ ನಡೆದುಕೊಳ್ಳುವ ರಾಮ ರಘುಕುಲದ ತಿಲಕನಾಗುತ್ತಾನೆ.
ಅವನು ಬದುಕಿನಲ್ಲಿ ಬರುವ ಎಲ್ಲ ಬಗೆಯ ಪಾತ್ರಗಳನ್ನು ಅಂದರೆ ಮಗನಾಗಿ, ಸಖನಾಗಿ, ಪತಿಯಾಗಿ, ರಾಜನಾಗಿ ಅತ್ಯಂತ ಸಮರ್ಥ ರೀತಿಯಿಂದ ನಿಭಾಯಿಸಿ ಮರ್ಯಾದಾ ಪುರುಷೋತ್ತಮನಾದವನು.
ಹೀಗಾಗಿ ಶ್ರೀರಾಮ ಭಾರತೀಯರ ಮನ- ಮನೆಗಳಲ್ಲಿ ರಾರಾಜಿಸುತ್ತಾನೆ. ಆದರ್ಶಪ್ರಾಯನಾಗಿದ್ದಾನೆ. ವಾಲ್ಮೀಕಿ ಗುರುಗಳ ರಾಮಾಯಣದಲ್ಲಿ ಸಾಕ್ಷಾತ್ ನಿದರ್ಶನವಾಗಿದ್ದಾನೆ ಆ ಸಾಗರವನ್ನು ಬೊಗಸೆಯಲ್ಲಿ ಹಿಡಿದಂತೆ ಇಲ್ಲಿ ವರ್ಣಿಸಲಾಗಿದೆ.
ಪತ್ರಕರ್ತರು ಹಾಗೂ ಆಧ್ಯಾತ್ಮಿಕ ಚಿಂತಕರು, ಸಂಸ್ಕೃತಿ ಪ್ರಸಾರಕರಾಗಿರುವ ಹನುಮಂತ ಮ. ದೇಶಕುಲಕರ್ಣಿಯವರ ಈ ಕೃತಿಯೂ ಜನಸಾಮಾನ್ಯರನ್ನೇ ಉದ್ದೇಶಿಸಿ ಬರೆದ, ಬಹಳ ಸ್ಪಷ್ಟ, ಸರಳ, ಸುಂದರವಾಗಿ ಮುದ್ರಣಗೊಂಡಿದೆ. ಓದುತ್ತ ಹೊರಟಂತೆ ಶ್ರೀರಾಮನ ಜೀವನದ ವೈಶಿಷ್ಟ್ಯತೆಗಳು ಒಂದೊಂದಾಗಿ ತೆರೆದುಕೊಂಡು ಓದುಗರ ಹೃನ್ಮನ ಮುದಗೊಳಿಸುವಲ್ಲಿ ಸಫಲವಾಗುತ್ತವೆ.
ಈ ಪುಸ್ತಕದಲ್ಲಿ ನನ್ನ ಗಮನ ಸೆಳೆದ ಅಂಶಗಳಾದ ರಾಮಾಂಜನೇಯ ಯುದ್ಧದಲ್ಲಿ ಭಕ್ತ ಮತ್ತು ದೇವನ ನಡುವಿನ ಯುದ್ಧದಲ್ಲಿ ನಿಷ್ಠಾವಂತ ಭಕ್ತನಿಗೆ ಆತನ ಭಕದತಿಗೆ ಯಾವತ್ತೂ ಜಯವಿದೆ ಎಂದು ಸಾರಲು ಈ ಸನ್ನಿವೇಶವನ್ನು ಸ್ವತಃ ನಾರದರು, ವಿಶ್ವಾಮಿತ್ರರು ಸೃಷ್ಟಿಸಿದ್ದು ರೋಚಕವಾಗಿ ಬರೆದಿದ್ದಾರೆ.
ಶ್ರೀರಾಮ- ಶ್ರೀಕೃಷ್ಣರ ಭಿನ್ನ ನಾಯಕತ್ವ ಗುಣವನ್ನು ಅಳೆದು ತೂಗಿ ದಕ್ಕಿದಷ್ಟು ಬರೆದು ಸಾಮ್ಯತೆ, ಭಿನ್ನತೆ ವಿವರಿಸಿದ್ದಾರೆ. ರಾಮನಾಮದ ಮಹಿಮೆ, ರಾಮಕೋಟಿ ಏಕೆ ಬರೆಯಬೇಕು? ಎಂಬ ವಿವರಣೆ ಓದಿದರೆ ರಾಮನಾಮ ಮಿಠಾಯಿಯ ಭಕ್ತಿ ಸೇವನೆ ಮಾಡದೇ ಇರಲಾರರು. ರಾಮಾಮೃತವನ್ನು ಬೋಧಿಸಿ ಎದೆಯಲ್ಲಿ ಭಕ್ತಿಯ ತುಂಬಿದ ಸಂತರು ಮನಕ್ಕಾವರಿಸಿ ಮನದಲ್ಲೇ ಸಂತ ಮಹಾತ್ಮರಿಗೆ ಶಿ.ಸಾ. ನಮಸ್ಕಾರಗಳನ್ನು ಹಾಕಿಸಿಬಿಟ್ಟವು.
ಇವುಗಳಲ್ಲೂ ಬಹಳ ವಿಶೇಷವಾದ ಲೇಖನ ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರು ಈ ಪುಸ್ತಕದ ಮುಕುಟಮಣಿಯಂತಿದೆ. ಅವರೇ ಹೇಳಿದಂತೆ ಕೊನೆಯ ಕ್ಷಣದಲ್ಲಿ ಸೇರಿಸಿದ ಈ ಭಾಗವು ಈ ಪುಸ್ತಕದ ಮೆರುಗನ್ನು ಹೆಚ್ಚಿಸಿದೆ. ಹಾಗೂ ದೈವ ಸಂಕಲ್ಪವೆಂಬಂತೆ ಶ್ರೀ ಬ್ರಹ್ಮಾನಂದ ಮಹಾರಾಜರ ಜನ್ಮ ಕ್ಷೇತ್ರ ಸುಕ್ಷೇತ್ರ ಬೆಳಧಡಿ (ಬ್ರಹ್ಮಾನಂದಪುರಿ) ಶ್ರೀರಾಮ ಮಂದಿರದಲ್ಲಿ ಶ್ರೀ ರಾಮನ ಜನನದ ಸುಸಂದರ್ಭದಲ್ಲಿ ಹೆಬ್ಬಳ್ಳಿ ದತ್ತಾವಧೂತರಿಂದ ಲೋಕಾರ್ಪಣೆಗೊಂಡು ಲೇಖಕ, ಪತ್ರಕರ್ತ ಹನುಮಂತ ಅವರು ಶ್ರೀರಾಮನ ವಿಶೇಷ ಅನುಗ್ರಹ ಪಡೆದಿದ್ದಾರೆ. ತಮ್ಮ ಹನುಮಾಭಿವ್ಯಕ್ತಿ ಎಂದು ರಾಮನ ನ್ನು ಆಂತರ್ಯದಲ್ಲಿ ಧರಿಸಿರುವುದೇ ರಾಮಾಂತರ್ಯಾಮಿ ನಮ್ಮೆಲ್ಲರ ಎದೆಭೂಮಿಯಲ್ಲಿ ಭಕ್ತಿಯ ರಾಮಾಶ್ವಮೇಧ ಹರಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದ್ದಾರೆ. ಇನ್ನಷ್ಟು ರಾಮಾಂತರ್ಗತ ವಿಚಾರಧಾರೆಗಳು ಪುಸ್ತಕದಲ್ಲಿವೆ ಓದಿ.
ಸದಾ ಅಧ್ಯಯನ ನಿರತ, ಸ್ನೇಹಜೀವಿ, ಸಹೃದಯಿಗಳ ಸಂಘಟಕ ಹನುಮಂತ ದೇಶಕುಲಕರ್ಣಿಯವರಿಗೆ ಅಪಾರವಾದ ಓದುಗರ ಬಳಗವಿದೆ. ನಾಡಿನ ಹಿರಿಯ ಸಾಧಕರ ಆಶೀರ್ವಾದ ಮತ್ತು ಖ್ಯಾತ ಸಾಹಿತಿಗಳ ಪ್ರೋತ್ಸಾಹವಿದೆ. ಹನುಮಂತ ಅವರ ಸಾಹಿತ್ಯ ಕ್ಷೇತ್ರದ ಸೇವೆ ಹೀಗೆ ನಿರಂತರವಾಗಿ ಸಾಗಲಿ.
ಇದೇ ರೀತಿಯ ಅಮೂಲ್ಯವಾದ ಕೃತಿಗಳು ಆಸ್ತಿಕ ಮನೆಮನಗಳನ್ನು ತಲುಪಿ ಮನೆ ಮನೆ ಮಾತಾಗಲಿ.
- ಶ್ರೀಮತಿ ವೀಣಾ ಬರಗಿ, ಹುಬ್ಬಳ್ಳಿ
ದಾಸ ಸಾಹಿತ್ಯ ಚಿಂತಕರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


