ಹಾಸನ: ಸರ್ ಸಿ.ವಿ.ರಾಮನ್ ರವರ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಘಟಕವು ಪ್ರತಿ ವರ್ಷ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಸುತ್ತಿದ್ದು, ಈ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳ ಜ್ಞಾನ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕೆ.ಜೆ.ವಿ.ಎಸ್.ನ ರಾಜ್ಯ ಘಟಕದ ಕಾರ್ಯದರ್ಶಿ ಈ. ಬಸವರಾಜು ಹೇಳಿದರು.
ನಗರದ ಆರ್.ಸಿ. ರಸ್ತೆಯ ಗಂಧದಕೋಠಿ ಆವರಣದಲ್ಲಿರುವ ಜಿ.ಜಿ.ಜೆ.ಸಿ. (ಪ್ರಧಾನ) ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಕೆ.ಜೆ.ವಿ.ಎಸ್. ರಾಜ್ಯ ಘಟಕವು ವರ್ಷದಲ್ಲಿ ಎರಡು ಬಾರಿ ಆನ್ ಲೈನ್ ರಾಜ್ಯಮಟ್ಟದ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸ ಬೇಕು ಎಂದರು. ರಾಜ್ಯ ಹಂತದಲ್ಲಿ ತೃತೀಯ ಸ್ಥಾನ ಪಡೆದ ಹೊಳೆನರಸೀಪುರದ ಪ್ರಿಯದರ್ಶಿನಿ ಶಾಲೆಯ ವಿದ್ಯಾರ್ಥಿ ರೇವಂತ್ ಆರ್. ಅದೇ ಶಾಲೆಯ ವಿದ್ಯಾರ್ಥಿಗಳಾದ ಪೃಥ್ವಿ (ಪ್ರಥಮ) ಮತ್ತು ಕಲ್ಪನಾ (ದ್ವಿತೀಯ) ಋಷಿಶ್ರೀ ವಿದ್ಯಾನಿಕೇತನ ಶಾಲೆ ಹಾಗೂ ಪ್ರಧಾನ ಶಾಲೆಯ ವಿದ್ಯಾರ್ಥಿಗಳಾದ ಸುಹಾಸಿನಿ ಮತ್ತು ಯೋಗೇಶ್ವರಿ ಜಿಲ್ಲಾ ಹಂತದಲ್ಲಿ ವಿಜೇತರಾಗಿದ್ದು ಇವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಜಾನಪದ ಕಲಾವಿದರಾದ ಗ್ಯಾರಂಟಿ ರಾಮಣ್ಣನವರು ವಿದ್ಯಾರ್ಥಿಗಳಿಗೆ ವಿಜ್ಞಾನ ಗೀತೆಗಳನ್ನು ಹೇಳಿಕೊಡುವ ಮೂಲಕ ಈ ರೀತಿಯ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗುವ ಮೂಲಕ ತಂದೆ ತಾಯಿಗಳಿಗೆ, ಶಾಲೆಗೆ ಕೀರ್ತಿ ತರಬೇಕು ಎಂದರು. ಕೆ.ಜೆ.ವಿ.ಎಸ್. ರಾಜ್ಯ ಘಟಕದ ಕಾರ್ಯಾಧ್ಯಕ್ಷರಾದ ಡಾ.ಆರ್.ಎನ್. ರಾಜಾನಾಯಕ್ ರವರು ಮಾತನಾಡಿ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಸಂತಸದಾಯಕ ವಿಚಾರ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ವನ್ನು ಬೆಳೆಸುವ ಮೂಲಕ ಮೌಢ್ಯತೆಯನ್ನು ಹೋಗಲಾಡಿಸಬೇಕು ಎಂದು ಕರೆನೀಡಿದರು.
ಇಸ್ರೋ ವಿಜ್ಞಾನಿಗಳಾದ ಶ್ರೀನಿವಾಸ್ ರವರು ಮಾತನಾಡಿ ಇಂದಿನ ಎಐ ತಂತ್ರಜ್ಞಾನ ಯುಗದಲ್ಲಿ ಅಭಿವೃದ್ಧಿ ಸಾಧಿಸುವ ಹಾಗೂ ಬಾಹ್ಯಾಕಾಶ ಸಂಶೋಧನೆಗಳ ಕುರಿತು ಹೆಚ್ಚಿನ ವಿಚಾರಗಳನ್ನು ತಿಳಿಸಿದರು. ಸಿದ್ಧರಾಮರೆಡ್ಡಿ ಯವರು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸುವಲ್ಲಿ ರಸಪ್ರಶ್ನೆ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಉಪಪ್ರಾಂಶುಪಾಲರಾದ ಮಂಜುನಾಥ್ ರವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಅವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಕರಾದ ಪಿ. ಮಧು ರವರು ಸಿ.ವಿ. ರಾಮನ್ ರವರ ವೈಜ್ಞಾನಿಕ ಸಾಧನೆಗಳನ್ನು ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಶಿಕ್ಷಕರಾದ ಹೆಚ್.ಪಿ. ಮಂಜುಳ, ಎ.ವಿ.ಗೀತರಾಣಿ, ಎಂ.ಆರ್.ರಂಗಾಮಣಿ ಹಾಗೂ ತೈಬಾಕೌಸರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕರಾದ ಚಿದಾನಂದ ಕೆ.ಎನ್. ರವರು ಎಲ್ಲರನ್ನು ಸ್ವಾಗತಿಸಿದರೆ ರುದ್ರೇಶ್ ರವರು ವಂದಿಸಿದರು. ಜಿಲ್ಲಾ ಘಟಕದ ಸಂಚಾಲಕರಾದ ಡಿ. ವಿಶ್ವನಾಥ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಮಂಜೇಗೌಡ, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


