ಉಡುಪಿ: ಪರ್ಯಾಯ ಶ್ರೀ ಶೀರೂರು ಮಠದ ವತಿಯಿಂದ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರ ಆಧ್ಯಾತ್ಮಿಕ ಮುನ್ನಡೆಯ ದೃಷ್ಟಿಯಿಂದ ಹಲವು ಹೊಸ ಕಾರ್ಯಕ್ರಮಗಳು ಹಾಗೂ ದರ್ಶನ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಕೈಗೊಳ್ಳಲಾಗಿದೆ ಎಂದು ಮಠದ ದಿವಾನರಾದ ಡಾ. ಉದಯಕುಮಾರ ಸರಳತ್ತಾಯ ಅವರು ಸೋಮವಾರ (ಮಾ.23) ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಗವದ್ಗೀತೆಯ ತಾತ್ಪರ್ಯವನ್ನು ಭಕ್ತಜನರಿಗೆ ತಲುಪಿಸುವ ಉದ್ದೇಶದಿಂದ 18 ದಿನಗಳ ಭಗವದ್ಗೀತೆ ಅಧ್ಯಯನ ಕೋರ್ಸ್ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 23ರಿಂದ ಆರಂಭವಾಗಿರುವ ಈ ತರಗತಿಗಳು ಪ್ರತಿದಿನ ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ಮಠದ ರಾಜಾಂಗಣದಲ್ಲಿ ನಡೆಯಲಿದ್ದು, ಮುಖತಃ ಹಾಗೂ ಆನ್‌ಲೈನ್ ಮೂಲಕ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಒಂದು ಅಧ್ಯಾಯದ ಅರ್ಥಚಿಂತನೆ ನಡೆಯಲಿದೆ.
ಇದರ ಜೊತೆಗೆ, ಭಾಗವತ, ಭಗವದ್ಗೀತೆ, ಶ್ರೀಕೃಷ್ಣನ ಚರಿತ್ರೆ ಹಾಗೂ ಉಡುಪಿ ಕ್ಷೇತ್ರದ ಇತಿಹಾಸವನ್ನು ದೇಶದ ವಿವಿಧ ಭಾಗಗಳ ಭಕ್ತರಿಗೆ ಪರಿಚಯಿಸುವ ಉದ್ದೇಶದಿಂದ ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ, ಗುಜರಾತಿ ಸೇರಿದಂತೆ ಹಲವು ಭಾಷೆಗಳಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಪ್ರವಚನಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ದರ್ಶನ ವ್ಯವಸ್ಥೆಯಲ್ಲಿ ಪರಂಪರೆಯ ಕ್ರಮವನ್ನು ಪುನಃ ಜಾರಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಭಕ್ತರು ಮೊದಲು ಕನಕನ ಕಿಂಡಿಯಿಂದ ದರ್ಶನ ಪಡೆದು, ಬಳಿಕ ಶ್ರೀಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ, ನಂತರ ಶ್ರೀಕೃಷ್ಣ ಮಠ ಪ್ರವೇಶಿಸಿ ದರ್ಶನ ಮಾಡುವ ವ್ಯವಸ್ಥೆಯನ್ನು ಪುನಃ ಬಲಪಡಿಸಲು ಉದ್ದೇಶಿಸಲಾಗಿದೆ.
ಭಕ್ತರ ಸಂಖ್ಯೆಯಲ್ಲಿ ಇತ್ತೀಚೆಗೆ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಸರತಿ ಸಾಲಿನ ವ್ಯವಸ್ಥೆಯನ್ನು ಸುಧಾರಿಸುವ ಕಾರ್ಯ ಪ್ರಗತಿಯಲ್ಲಿದ್ದು, ತಾತ್ಕಾಲಿಕವಾಗಿ ಕೆಲವು ವ್ಯತ್ಯಾಸಗಳು ಉಂಟಾಗಬಹುದು ಎಂದು ತಿಳಿಸಲಾಗಿದೆ. ಬೇಸಿಗೆಯ ತಾಪಮಾನವನ್ನು ಮನಗಂಡು, ಬೆಳಿಗ್ಗೆ 10ರಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ನಿಂಬೆ ಶರಬತ್, ಕಬ್ಬು ರಸ ಸೇರಿದಂತೆ ವಿವಿಧ ಪಾನೀಯಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಅನ್ನಪ್ರಸಾದ ವ್ಯವಸ್ಥೆಯಲ್ಲಿಯೂ ಸುಧಾರಣೆ ಮಾಡಲಾಗಿದ್ದು, ಎಲ್ಲಾ ಭಕ್ತರಿಗೆ ಸಮಾನವಾಗಿ 10ರಿಂದ 12 ವಿಧದ ಪದಾರ್ಥಗಳನ್ನು ವಿತರಿಸಲಾಗುತ್ತಿದೆ.
ಇದೇ ಮಾರ್ಚ್ 25ರಿಂದ 28ರವರೆಗೆ ಶಿರೂರಿನಲ್ಲಿ ನಡೆಯಲಿರುವ ಶ್ರೀ ರಾಮನವಮಿ ಉತ್ಸವದಲ್ಲಿ ಪೇಜಾವರ, ಕಾಣಿಯೂರು ಹಾಗೂ ಕೃಷ್ಣಾಪುರ ಮಠಗಳ ಶ್ರೀಗಳು ಭಾಗವಹಿಸಲಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿಯೂ ರಾಮನವಮಿಯ ಅಂಗವಾಗಿ ಒಂಬತ್ತು ದಿನಗಳ ವಿಶೇಷ ಪ್ರವಚನ, ರಾಮಾಯಣ ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಋಗ್ವೇದ ಸಂಹಿತಾ ಯಾಗ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಠದ ದಿವಾನರು ಮನವಿ ಮಾಡಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


