ಮುಂಬೈ: ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್, ಹೂಡಿಕೆದಾರರಿಗೆ ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿಸಲು ನೆರವಾಗುವ ಉದ್ದೇಶದಿಂದ ನೂತನ 'ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಸ್ಮಾಲ್ ಕ್ಯಾಪ್ 250 ಇಂಡೆಕ್ಸ್ ಫಂಡ್' ಅನ್ನು ಬಿಡುಗಡೆ ಮಾಡಿದೆ. ಈ ಫಂಡ್ ಸಂಸ್ಥೆಯ ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ (ಯುಎಲ್ಐಪಿ) ಅಡಿಯಲ್ಲಿ ಲಭ್ಯವಿರಲಿದೆ.
ಭಾರತದ ಉದಯೋನ್ಮುಖ ಕಂಪನಿಗಳ ಬೆಳವಣಿಗೆಯ ಲಾಭವನ್ನು ಹೂಡಿಕೆದಾರರಿಗೆ ತಲುಪಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಶಿಸ್ತುಬದ್ಧ ಮತ್ತು ಸೂಚ್ಯಂಕ (ಇಂಡೆಕ್ಸ್) ಆಧಾರಿತ ಹೂಡಿಕೆ ವಿಧಾನದ ಮೂಲಕ ಗ್ರಾಹಕರು ತಮ್ಮ ಹೂಡಿಕೆಯನ್ನು ವೈವಿಧ್ಯಗೊಳಿಸಲು ಇದು ಸಹಕಾರಿಯಾಗಿದೆ. ಈ ಫಂಡ್ ಮುಖ್ಯವಾಗಿ 'ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್' ಅನ್ನು ಅನುಸರಿಸುತ್ತದೆ. ಇದು ಷೇರು ಮಾರುಕಟ್ಟೆಯಲ್ಲಿ 251 ರಿಂದ 500 ರವರೆಗೆ ಶ್ರೇಯಾಂಕ ಹೊಂದಿರುವ 250 ಕಂಪನಿಗಳ ಪೋರ್ಟ್ ಫೋಲಿಯೋವನ್ನು ಒಳಗೊಂಡಿರುತ್ತದೆ. ಈ ಕಂಪನಿಗಳು ತಮ್ಮ ಬೆಳವಣಿಗೆಯ ಆರಂಭಿಕ ಹಂತದಲ್ಲಿದ್ದು, ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭ ನೀಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಶ್ಲೇಷಿಸಲಾಗಿದೆ.
ಆದಾಗ್ಯೂ, ನಿಯಮಾವಳಿಗಳ ಕಾರಣದಿಂದಾಗಿ ಸೂಚ್ಯಂಕದಲ್ಲಿರುವ ಎಲ್ಲಾ ಷೇರುಗಳಲ್ಲಿ ನಿಖರವಾದ ಅನುಪಾತದಲ್ಲಿ ಹೂಡಿಕೆ ಮಾಡಲು ಕೆಲವು ಮಿತಿಗಳಿರಬಹುದು. ಇದರಿಂದಾಗಿ ಅಲ್ಪ ಪ್ರಮಾಣದ 'ಟ್ರ್ಯಾಕಿಂಗ್ ದೋಷ' ಸಂಭವಿಸುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಒಂದು ಆಕರ್ಷಕ ಆಯ್ಕೆಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
ಈ ನೂತನ ಫಂಡ್ ಬಿಡುಗಡೆಯ ಕುರಿತು ಮಾತನಾಡಿದ ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನ ಚೀಫ್ ಇನ್ ವೆಸ್ಟ್ ಮೆಂಟ್ ಆಫೀಸರ್ ಮನೀಶ್ ಕುಮಾರ್ ಅವರು, "ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್ ಫಂಡ್ ಗ್ರಾಹಕರಿಗೆ ಉದಯೋನ್ಮುಖ ಕಂಪನಿಗಳ ಬೆಳವಣಿಗೆಯ ಪಯಣದಲ್ಲಿ ಭಾಗವಹಿಸಲು ಮತ್ತು ದೀರ್ಘಾವಧಿಯಲ್ಲಿ ಸಂಪತ್ತು ವೃದ್ಧಿಸಿಕೊಳ್ಳಲು ಸರಳ ಹಾಗೂ ಪಾರದರ್ಶಕ ಮಾರ್ಗವನ್ನು ಒದಗಿಸುತ್ತದೆ. ಮಾರುಕಟ್ಟೆಯ ವಿವಿಧ ವಲಯಗಳಲ್ಲಿನ ಉದಯೋನ್ಮುಖ ಕಂಪನಿಗಳಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಮಾಡಲು ಬಯಸುವ ದೀರ್ಘಾವಧಿಯ ಹೂಡಿಕೆದಾರರಿಗೆ ಇದು ಅತ್ಯಂತ ಸೂಕ್ತವಾಗಿದೆ" ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, "ಈ ನಿಯಮ ಆಧಾರಿತ ವಿಧಾನವು ಶಿಸ್ತುಬದ್ಧವಾಗಿರುವುದಲ್ಲದೆ, ಮಾನದಂಡಕ್ಕೆ ಅನುಗುಣವಾಗಿ ವ್ಯಾಪಕ ಶ್ರೇಣಿಯ ವ್ಯವಹಾರಗಳಲ್ಲಿ ವೈವಿಧ್ಯಮಯ ರೀತಿಯಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ಮುಖ್ಯವಾಗಿ, ಈ ಫಂಡ್ ಹಣಕಾಸು ಸೇವೆಗಳು, ಆರೋಗ್ಯ ರಕ್ಷಣೆ ಮತ್ತು ಕ್ಯಾಪಿಟಲ್ ಗೂಡ್ಸ್ ಸೇರಿದಂತೆ ವಿವಿಧ ವಲಯಗಳ 250 ಉದಯೋನ್ಮುಖ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ. ಇದು ಹೂಡಿಕೆದಾರರಿಗೆ ಒಂದೇ ಫಂಡ್ ಮೂಲಕ ದೇಶದ ಆರ್ಥಿಕತೆಯ ಹಲವಾರು ಉದಯೋನ್ಮುಖ ಕಂಪನಿಗಳ ಬೆಳವಣಿಗೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ" ಎಂದು ಹೇಳಿದರು.
ಫೆಬ್ರವರಿ 27, 2026 ರ ಹೊತ್ತಿಗೆ, ನಿಫ್ಟಿ ಸ್ಮಾಲ್‌ಕ್ಯಾಪ್ 250 ಟಿಆರ್‌ಐ ಒಂದು ವರ್ಷದಲ್ಲಿ 15.36% ಆದಾಯವನ್ನು ನೀಡಿದೆ. ಐದು ವರ್ಷಗಳ ಅವಧಿಯಲ್ಲಿ ವಾರ್ಷಿಕ 19.04% ಮತ್ತು ಯೋಜನೆಯ ಆರಂಭದಿಂದಲೂ 15.45% ಆದಾಯವನ್ನು ನೀಡುವ ಮೂಲಕ ತನ್ನ ದೀರ್ಘಕಾಲದ ಬೆಳವಣಿಗೆಯ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇದು ಈಕ್ವಿಟಿ ಆಧಾರಿತ ಯೋಜನೆಯಾಗಿರುವುದರಿಂದ, ಮಾರುಕಟ್ಟೆಯ ಏರಿಳಿತಗಳಿಗೆ ಅನುಗುಣವಾಗಿ ಫಂಡ್ ನ ಮೌಲ್ಯವು ಬದಲಾಗಬಹುದು.
ಈ ಹೂಡಿಕೆ ತಂತ್ರವು 'ಪ್ಯಾಸಿವ್' ಮತ್ತು ಇಂಡೆಕ್ಸ್ ಮಿರರಿಂಗ್ ವಿಧಾನವನ್ನು ಅನುಸರಿಸುತ್ತದೆ. ಅಂದರೆ, ವೈಯಕ್ತಿಕವಾಗಿ ಷೇರುಗಳನ್ನು ಆಯ್ಕೆ ಮಾಡುವ ಬದಲಿಗೆ ಬೆಂಚ್ ಮಾರ್ಕ್ ಸೂಚ್ಯಂಕಕ್ಕೆ ಅನುಗುಣವಾಗಿ ಹೂಡಿಕೆ ಮಾಡುವುದೇ ಇದರ ಗುರಿಯಾಗಿದೆ. ನಿಗದಿತ ನಿಯಮಾವಳಿಗಳಿಗೆ ಅನುಗುಣವಾಗಿ ಈ ಸೂಚ್ಯಂಕವನ್ನು ವರ್ಷಕ್ಕೆ ಎರಡು ಬಾರಿ ಪರಿಶೀಲಿಸಿ ನವೀಕರಿಸಲಾಗುತ್ತದೆ. ಇದು ಹೂಡಿಕೆ ಪ್ರಕ್ರಿಯೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆಯನ್ನು ಕಾಪಾಡುವಂತೆ ನೋಡಿಕೊಳ್ಳುತ್ತದೆ.
ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಸ್ಮಾಲ್‌ಕ್ಯಾಪ್ 250 ಇಂಡೆಕ್ಸ್ ಫಂಡ್, ಕಂಪನಿಯ ಜನಪ್ರಿಯ ಯುಎಲ್ಐಪ್ ಉತ್ಪನ್ನಗಳಾದ 'ಐಸಿಐಸಿಐ ಪ್ರು ಸಿಗ್ನೇಚರ್ ಅಶ್ಯೂರ್', 'ಸ್ಮಾರ್ಟ್‌ಕಿಡ್ ಅಶ್ಯೂರ್ ವಿತ್ ಐಸಿಐಸಿಐ ಪ್ರು ಸಿಗ್ನೇಚರ್ ಅಶ್ಯೂರ್', 'ಐಸಿಐಸಿಐ ಪ್ರು ಸ್ಮಾರ್ಟ್ ಇನ್ಶೂರೆನ್ಸ್ ಪ್ಲಾನ್ ಪ್ಲಸ್ (ಎಸ್ಐಪಿ+)' ಸೇರಿದಂತೆ www.iciciprulife.com ನಲ್ಲಿ ಲಭ್ಯವಿರುವ ಇತರ ಜೀವ ವಿಮಾ ರಕ್ಷಣೆಯುಳ್ಳ ಯುಎಲ್ಐಪಿ ಉತ್ಪನ್ನಗಳೊಂದಿಗೆ ಹೂಡಿಕೆಯ ಆಯ್ಕೆಯಾಗಿ ಲಭ್ಯವಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


