ಮಂಗಳೂರಿನಲ್ಲಿ ರಾಷ್ಟ್ರಕವಿ ಎಂ ಗೋವಿಂದ ಪೈ ಸಂಸ್ಮರಣೆ

Upayuktha
0


ಮಂಗಳೂರು: ಸಾಹಿತ್ಯ ಸೃಷ್ಟಿಯ ಮೂಲಕ ನಾಡು ನುಡಿಗಳನ್ನು ಕಟ್ಟಿದ ಹಿರಿಯ ಸಾಹಿತಿಗಳನ್ನು ಅಭ್ಯಾಸ ಮಾಡಬೇಕಾದ ಹಾಗೂ ಮರು ನೆನಪು ಮಾಡಬೇಕಾದ ಸಾಂಸ್ಕೃತಿಕ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಕವಿತೆ, ನಾಟಕ ಮತ್ತು ಸಂಶೋಧನಾ ಬರಹಗಳ ಮೂಲಕ ಸ್ಥಳೀಯತೆಯ ಅನನ್ಯತೆಗಳ ಹುಡುಕಾಟದೊಂದಿಗೆ ವಿಶ್ವಾತ್ಮಕತೆಯ ನೆಲೆಗಳನ್ನು ತೆರೆದಿಟ್ಟರು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ ನುಡಿದರು.


ಮಂಗಳೂರಿನ ಇಂಟ್ಯಾಕ್ ಘಟಕ, ಆರ್ಟ್ ಕೆನರಾ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಗಿಳಿವಿಂಡು ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಕೊಡಿಯಾಲಗುತ್ತು ಕಲಾ ಮತ್ತು ಸಾಂಸ್ಕ್ರತಿಕ ಕೇಂದ್ರದಲ್ಲಿ ನಡೆದ ರಾಷ್ಟ್ರಕವಿ ಎಂ. ಗೋವಿಂದ ಪೈ ಜನ್ಮದಿನದ ನೆನಪು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.


ಯುದ್ಧ ಮತ್ತು ಮತೀಯ ರಾಜಕಾರಣದ ಸಂದರ್ಭದಲ್ಲಿ  ಮಾನವೀಯತೆ, ಸಮದರ್ಶಿತ್ವ, ಸಾಮಾಜಿಕ ಸಾಮರಸ್ಯ ಆಶಯಗಳನ್ನು ಬಿಂಬಿಸುವ ಗೋವಿಂದ ಪೈಯವರ ಕವಿತೆ ಗಳು ಮುಖ್ಯವಾಗುತ್ತವೆ. ಯೇಸು, ಕೃಷ್ಣದಂತಹ ಕವಿತೆಗಳು, ಯೇಸುವಿನ ಕೊನೆಯ ದಿವಸವನ್ನು ಚಿತ್ರಿಸುವ 'ಗೊಲ್ಗೊಥ,' ಬುದ್ಧನ ಕೊನೆಯ ದಿನದ ಚಿತ್ರಣವಿರುವ 'ವೈಶಾಖಿ', ಕೃಷ್ಣನ ಕೊನೆಯ ದಿನವನ್ನು ಚಿತ್ರಿಸುವ 'ಪ್ರಭಾಸ', ಗಾಂಧೀಜಿಯವರ ಅಂತಿಮ ದಿವಸದ ಚಿತ್ರಣದ 'ದೆಹಲಿ' ಕೃತಿಗಳ ಮೂಲಕ ಮಹಾತ್ಮರ ಬಾಳಿನ ಶ್ರೇಷ್ಠತೆಯನ್ನು ನಿರೂಪಿಸುತ್ತಾರೆ ಎಂದರು.


ಕೃಷ್ಣಮೂರ್ತಿ ಚಿತ್ರಾಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಕೃತಿ ಚಿಂತನೆ, ವಿಮರ್ಶೆ, ಕಾವ್ಯ, ನಾಟಕ, ಅನುವಾದ, ಸಂಶೋಧನಾ ಲೇಖನಗಳು ಮತ್ತು ಕಿರಿಯ ಸಾಹಿತಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಗೋವಿಂದ ಪೈಯವರು ವಿಶಿಷ್ಟ ಸ್ಥಾನ ಪಡೆದಿದ್ದಾರೆ ಎಂದರು.


ಹಿರಿಯ ಸಂಶೋಧಕರಾದ ವಿಲ್ಲಿ ಡಿ. ಆರ್. ಸಿಲ್ವ, ಡಾ. ಸತ್ಯ ನಾರಾಯಣ ಮಲ್ಲಿಪಟ್ಣ, ಮಧುಸೂದನ್ ಕುಮಾರ್, ಡಾ. ಆರ್. ನರಸಿಂಹ ಮೂರ್ತಿ, ಡಾ. ಇಂದಿರಾ ಹೆಗ್ಗಡೆ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡರು. ನೇಮಿರಾಜ ಶೆಟ್ಟಿ ಸ್ವಾಗತಿಸಿದರು. ರಾಜೇಂದ್ರ ಕೇದಿಗೆ ವಂದಿಸಿದರು. ಡಾ. ಪ್ರಸನ್ನ ರೈ ಕನ್ನಡ ಗೀತೆಗಳನ್ನು ಹಾಡಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top