ಚನ್ನಪಟ್ಟಣದ ಚಂದದ ಬೊಂಬೆಗೆ ಚಾಟಿಯೇಟು

Upayuktha
0


ಸಾಂಪ್ರದಾಯಿಕ ಮರದ ಆಟಿಕೆಗಳಾದ ಚನ್ನಪಟ್ಟಣದ ಬೊಂಬೆಗಳು ವಿಶ್ವದಲ್ಲೇ ಪ್ರಸಿದ್ಧವಾದ ಬೊಂಬೆಗಳು. ಇವು ಪರಿಸರ ಸ್ನೇಹಿ, ವಿಷಕಾರಿಯಲ್ಲದ ಮತ್ತು ಸುಸ್ಥಿರ ಕರಕುಶಲ ಕಲೆಗೆ ಹೆಸರಾಗಿವೆ. ಈ ಉದ್ಯಮವು ಪ್ರಸ್ತುತ ಯುದ್ಧದ ಪರಿಣಾಮದಿಂದ ತೀವ್ರ ಸಂಕಷ್ಟದಲ್ಲಿದೆ.


ಇಸ್ರೇಲ್-ಇರಾನ್ ಯುದ್ಧದ ಭೀತಿಯಿಂದಾಗಿ ವಿದೇಶಿ ಆರ್ಡರ್‌ಗಳು ನಿಂತುಹೋಗಿದ್ದು, ರಫ್ತು ಸಾಧ್ಯವಾಗದೆ ತಯಾರಾದ ಬೊಂಬೆಗಳು ಕಾರ್ಖಾನೆಯಲ್ಲೇ ಉಳಿದು ನಷ್ಟ ಉಂಟಾಗಿದೆ. ಅಮೆರಿಕಾ ಮತ್ತು ಗಲ್ಫ್ ದೇಶಗಳಿಗೆ ಹಡಗುಗಳ ಮೂಲಕ ನಡೆಯುತ್ತಿದ್ದ ರಫ್ತು ಸ್ಥಗಿತಗೊಂಡಿದೆ. ಇದು ಶೇ.30ರಷ್ಟು ಬೊಂಬೆಗಳ ಮಾರಾಟವನ್ನು ತಡೆ ಹಿಡಿದಿದೆ. ಬೊಂಬೆಗಳಿಗೆ ವಿದೇಶಿ ಆರ್ಡರ್ ಕಡಿಮೆಯಾಗಿದೆ. ವಿದೇಶಿ ಗ್ರಾಹಕರು ಇಲ್ಲಿನ ಬೊಂಬೆಗಳನ್ನು ಆರ್ಡರ್ ಮಾಡಲು ಹಿಂಜರಿಯುತ್ತಿದ್ದಾರೆ. ಅಮೆರಿಕ ಸೇರಿದಂತೆ ಹಲವು ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಬೊಂಬೆಗಳು, ಮಕ್ಕಳ ಆಟಿಕೆಗಳು ಕಾರ್ಖಾನೆಗಳಲ್ಲಿಯೇ ಉಳಿಯುವಂತಾಗಿದೆ. ಇದರೊಂದಿಗೆ ಬೊಂಬೆ ತಯಾರಿಕೆಗೆ ಬಳಸುವ ಆಲೆಮರಗಳ ಲಭ್ಯತೆ ಕಡಿಮೆಯಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಇದರ ಕೊರತೆಯುಂಟಾಗಿ ಉತ್ಪನ್ನ ತಯಾರಿಕೆಯೂ ಕ್ಷೀಣಿಸುತ್ತಿದೆ. 


ಜೊತೆಗೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣದಿಂದಾಗಿ ಹೆದ್ದಾರಿ ಬದಿಯ ಮಾರಾಟ ಶೇ.80-90ರಷ್ಟು ಕುಸಿದಿದ್ದು, ಹೊಸ ಹೆದ್ದಾರಿಯು ಚನ್ನಪಟ್ಟಣವನ್ನು ಬೈಪಾಸ್ ಮಾಡುವುದರಿಂದ,  ಪ್ರವಾಸಿಗರು ಮತ್ತು ಗ್ರಾಹಕರು ಅಂಗಡಿಗಳಿಗೆ ಬರುವುದೇ ನಿಂತುಹೋಗಿದೆ. ಇದರಿಂದ ನೂರಾರು ಅಂಗಡಿಗಳು ಮುಚ್ಚಿವೆ. ಹೀಗಾಗಿ ರಫ್ತು ನಿಂತಿದ್ದರಿಂದ ತಯಾರಕರು ಲಕ್ಷಾಂತರ ರೂಪಾಯಿ ನಷ್ಟದ ಜೊತೆಗೆ ಸಾಲದ ಸುಳಿಗೆ ಸಿಲುಕಿರುವುದು ದುರಂತ.


ಒಂದೆಡೆಯಲ್ಲಿ, ಅಗ್ಗದ ಚೀನೀ ನಕಲಿ ಬೊಂಬೆಗಳ ಪೈಪೋಟಿಯೂ ನಡೆಯುತ್ತಿದೆ. ಗ್ರಾಹಕರಿಗೆ ಯಾವುದು ನೈಜ-ಯಾವುದು ಸುರಕ್ಷಿತ ಎಂಬ ಅರಿವಿಲ್ಲದೆ ಯಾವುದು ಅಗ್ಗವೋ ಅದನ್ನೇ ಕೊಳ್ಳುತ್ತಿದ್ದಾರೆ. ಇದರಿಂದಾಗಿ ಚನ್ನಪಟ್ಟಣದ ಬೊಂಬೆಗಳ ಬೇಡಿಕೆ ಕ್ರಮೇಣ ಕುಸಿಯುತ್ತಿದೆ.


ಇನ್ನೊಂದೆಡೆ, ಅನಿಯಮಿತ ವಿದ್ಯುತ್ ಪೂರೈಕೆಯು ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಹೊಸ ಅನಿಲ ಪೂರೈಕೆ ಆದ್ಯತೆ ನಿಯಮಗಳಿಂದಾಗಿ, ಬೆಂಗಳೂರಿನ ಯಲಹಂಕದ ಏಕೈಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಬಂದ್ ಆಗಿದ್ದು, ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಗೆ ಭಾರಿ ಅಡ್ಡಿಯಾಗಿದೆ.


ಯುದ್ಧದ ಭೀತಿ ಮುಂದುವರಿದರೆ ಬೊಂಬೆ ಉದ್ಯಮದ ಜೊತೆಗೆ ಬೊಂಬೆ ತಯಾರಿಕಾ ಕಾರ್ಮಿಕರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಆದಾಯದ ಕೊರತೆಯಿಂದಾಗಿ ಹೊಸ ಪೀಳಿಗೆಯು ಈ ಕಸುಬಿನಿಂದ ದೂರ ಉಳಿಯುತ್ತಿದ್ದು, ಪರಿಣಿತ ಕಾರ್ಮಿಕರ ಅಭಾವ ಎದುರಾಗಿದೆ.


ಇದಕ್ಕೆ ಪರಿಹಾರೋಪಾಯವಾಗಿ, ವಿದೇಶಿ ರಫ್ತು ಕಡಿಮೆಯಾಗಿರುವುದರಿಂದ, ಭಾರತದ ಒಳಗೆ ಪ್ರವಾಸೋದ್ಯಮ ತಾಣಗಳು ಮತ್ತು ಪ್ರಮುಖ ನಗರಗಳಲ್ಲಿ ಬೊಂಬೆಗಳಿಗೆ ಬೇಡಿಕೆ ಹೆಚ್ಚಿಸಲು ಪ್ರಚಾರ ನಡೆಸಬಹುದು. ಅಮೆಜಾನ್, ಫ್ಲಿಪ್‌ಕಾರ್ಟ್ ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟವನ್ನು ಮಾಡಬಹುದು. ನೈಜ ಬೊಂಬೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿ, ಚೀನಾದಿಂದ ಆಟಿಕೆಗಳ ಆಮದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಹಡಗು ಮಾರ್ಗದ ಬದಲು, ಸುರಕ್ಷಿತವಾದ ವಿಮಾನಯಾನ ಸಾರಿಗೆಯನ್ನು ಬಳಸಲು ಸರ್ಕಾರಿ ಸಬ್ಸಿಡಿ ನೀಡುವುದರ ಮೂಲಕ ಮತ್ತೆ ಬೊಂಬೆ ಉದ್ಯಮವನ್ನು ಉತ್ತೇಜಿಸಬಹುದು. 

 

-ಪ್ರಮೀಳಾ ವಾಟೆಕಜೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top