ಉಡುಪಿ: ಚಿಂತನ ಚಾವಡಿ ಉಡುಪಿ ಆಯೋಜಿಸಿದ್ದ ವೈಚಾರಿಕ ಚಿಂತನೆ ಕಾರ್ಯಕ್ರಮ ‘ಮಂಥನ–4’ ಫೆಬ್ರವರಿ 28ರಂದು ನಡೆಯಿತು. “ಜಾತಿಕೇಂದ್ರಿತ ಕಾನೂನಿನಿಂದ ಜಾತೀಯ ತಾರತಮ್ಯದ ಉಪಶಮನ ಸಾಧ್ಯವೇ?” ಎಂಬ ವಿಷಯದ ಕುರಿತು ಸಂಶೋಧನಾರ್ಥಿ, ಚಿಂತಕ ಹಾಗೂ ಲೇಖಕರಾದ ಶಶಾಂಕ್ ಕ್ಷೀರಪಥ ಅವರು ಪ್ರಾರಂಭಿಕ ವಿಚಾರ ಮಂಡನೆ ಮಾಡಿದರು.
ಭಾರತೀಯ ಜ್ಞಾನಪರಂಪರೆಯಲ್ಲಿ ಕಂಡುಬರುವ ಪೂರ್ವಪಕ್ಷ–ಉತ್ತರಪಕ್ಷ–ಸಮನ್ವಯ ಎಂಬ ಸಂವಾದಪದ್ದತಿಯನ್ನು ಆಧಾರವಾಗಿ ತೆಗೆದುಕೊಂಡು ವಕ್ತಾರರು ವಿಷಯವನ್ನು ವಿವರಿಸಿದರು. ಪೂರ್ವಪಕ್ಷದ ದೃಷ್ಟಿಯಿಂದ ನೋಡಿದರೆ ಜಾತಿಪ್ರಜ್ಞೆಯಂತಹ ಸಾಮಾಜಿಕ ಮನೋಭಾವಗಳನ್ನು ಕೇವಲ ಕಾನೂನಿನಿಂದ ನಿವಾರಿಸಲು ಸಾಧ್ಯವಿಲ್ಲ; ಸಮಾಜದಲ್ಲಿ ಸ್ವಯಂಪ್ರೇರಿತ ಬದಲಾವಣೆ ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗುತ್ತದೆ ಎಂದರು. ಆದರೆ ಉತ್ತರಪಕ್ಷದಲ್ಲಿ ಕಾನೂನಿನ ಬಲದಿಂದಲೇ ಅಸ್ಪೃಷ್ಯತೆ ಮತ್ತು ತಾರತಮ್ಯದ ಕೆಲವು ರೂಪಗಳು ಕಡಿಮೆಯಾಗಿವೆ ಎಂಬುದನ್ನೂ ಅವರು ಸೂಚಿಸಿದರು. ಸಮನ್ವಯದ ದೃಷ್ಟಿಯಿಂದ ಕಾನೂನು ತನ್ನ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಸಮಾಜದ ಮನೋಭಾವದಲ್ಲೂ ಬದಲಾವಣೆ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಾರತೀಯ ಸಮಾಜದಲ್ಲಿ ಅಸಮಾನತೆ ಇದ್ದರೂ ಇತರ ದೇಶಗಳಂತೆ ಕ್ರಾಂತಿಗಳು ನಡೆದಿಲ್ಲ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು. ಭಾರತದಲ್ಲಿ ತತ್‌ಕ್ಷಣದ ಕ್ರಾಂತಿಯ ಬದಲು ನಿಧಾನವಾಗಿ ಸಮಾಜದಲ್ಲಿ ನಡೆಯುವ ಸಂಕ್ರಾಂತಿಯ ಮೂಲಕ ಬದಲಾವಣೆಗಳು ಸಂಭವಿಸುತ್ತ ಬಂದಿವೆ ಎಂದು ಅವರು ಹೇಳಿದರು. ಕುಟುಂಬ ಹಾಗೂ ಸಮಾಜದ ಬದುಕಿನಲ್ಲೇ ಪೀಳಿಗೆಗಳಿಂದ ಬಂದಿರುವ ಮನೋಭಾವಗಳು ಕ್ರಮೇಣ ಬದಲಾಗುತ್ತಿರುವುದನ್ನು ಉದಾಹರಣೆಗಳ ಮೂಲಕ ವಿವರಿಸಿದರು.
ಜಾತಿ ಅಸ್ಮಿತೆ ಮತ್ತು ಹಿಂದೂ ಅಸ್ಮಿತೆಯ ಕುರಿತ ಚರ್ಚೆಯ ಸಂದರ್ಭದಲ್ಲೂ ಹಲವು ವಾದ–ಪ್ರತಿವಾದಗಳು ನಡೆಯುತ್ತವೆ ಎಂದು ಅವರು ಹೇಳಿ, ಇತಿಹಾಸ ಹಾಗೂ ಸಂಸ್ಕೃತಿಯ ಅಧ್ಯಯನದೊಂದಿಗೆ ವಿಚಾರಗಳನ್ನು ನೋಡಬೇಕೆಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ನಿಜವಾಗಿ ಶೋಷಣೆಗೆ ಒಳಗಾದವರ ನೋವನ್ನು ಗೌರವಿಸುವುದೂ ಅವರ ಪ್ರಗತಿಗೆ ಅವಕಾಶ ಕಲ್ಪಿಸುವುದೂ ಅಗತ್ಯ ಎಂದು ಅವರು ಹೇಳಿದರು.
ಮುಖ್ಯ ವಿಚಾರ ಮಂಡನೆಯ ಬಳಿಕ ಸಭಿಕರಲ್ಲಿ ಎಂಟು ಮಂದಿ ವಿವಿಧ ಆಯಾಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹಿಂದಿನ ಸಮಾಜದಲ್ಲಿ ವೃತ್ತಿ ಹಾಗೂ ಕೌಶಲಾಧಾರಿತ ಶಿಕ್ಷಣ ವ್ಯವಸ್ಥೆ ಇದ್ದುದು, ಬ್ರಿಟಿಷರ ಶಿಕ್ಷಣ ನೀತಿಯಿಂದ ಪರಂಪರೆಯ ವ್ಯವಸ್ಥೆ ಕುಸಿತಗೊಂಡದ್ದು, ಜಾತಿ ಹಾಗೂ ಮೀಸಲಾತಿ ವಿಚಾರಗಳ ಸಾಮಾಜಿಕ–ರಾಜಕೀಯ ಪರಿಣಾಮಗಳು ಮುಂತಾದ ವಿಷಯಗಳು ಚರ್ಚೆಗೆ ಬಂದವು. ಜಾತಿ ಆಧಾರಿತ ಸೌಲಭ್ಯಗಳಿಗಿಂತ ಆರ್ಥಿಕ ಮಾನದಂಡದ ಮಹತ್ವವನ್ನೂ ಕೆಲವು ವಕ್ತಾರರು ಉಲ್ಲೇಖಿಸಿದರು.
ವಿವಿಧ ದೃಷ್ಟಿಕೋನಗಳಿಂದ ನಡೆದ ಚರ್ಚೆಯ ಮೂಲಕ ಸಮಾಜದಲ್ಲಿ ಸಾಮರಸ್ಯ ಹಾಗೂ ಪರಸ್ಪರ ಗೌರವದ ಮನೋಭಾವ ಬೆಳೆಸುವ ಅಗತ್ಯವನ್ನು ಕಾರ್ಯಕ್ರಮ ಒತ್ತಿ ಹೇಳಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

