ಹೆಣ್ಣಿಲ್ಲದಿದ್ದರೆ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ: ಡಾ. ಎಚ್. ಆರ್. ತಿಮ್ಮಯ್ಯ

Upayuktha
0


ಮಂಗಳೂರು: ಹೆಣ್ಣು ಇಲ್ಲದಿದ್ದರೆ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ಹೆಣ್ಣು ಜಗತ್ತಿನ ಅವಿಭಾಜ್ಯ ಅಂಗ. ಆಕೆ ಗಂಡಿಗೆ ಜನ್ಮ ನೀಡಿ ವ್ಯಕ್ತಿತ್ವ ರೂಪಿಸುತ್ತಾಳೆ. ನಾನಾ ರೀತಿಯ ಪಾತ್ರ ವಹಿಸುವ ಹೆಣ್ಣಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬುದೇ ವಿಪರ್ಯಾಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯ ಹೇಳಿದರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವದಲ್ಲಿ ಕಾಲೇಜಿನ ಮಹಿಳಾ ವಿಭಾಗ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಘೋರ್‌ ಗ್ರೂಪ್‌ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಆಧುನಿಕ ಸಮಾಜದಲ್ಲಿ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಬಹಳ ಚಟುವಟಿಕೆಯಿಂದ ಭಾಗವಹಿಸುತ್ತಿದ್ದಾರೆ. ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಹತ್ತು ಜನಕ್ಕಿಂತ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಅಲ್ಲಿ ಲೈಂಗಿಕ ಕಿರುಕುಳ ತಪ್ಪಿಸಲು ಆಂತರಿಕ ದೂರು ಸಮಿತಿ ರಚಿಸುವ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.


ಲೈಂಗಿಕ ಕಿರುಕುಳ ಕೇವಲ ದೈಹಿಕವಾಗಿ ಮಾತ್ರವೇ ಇರಬೇಕೆಂದೇನೂ ಇಲ್ಲ. ಇದು ಜಾಲತಾಣಗಳ ಮೂಲಕ ಲೈಂಗಿಕ ಪ್ರಚೋದನಾತ್ಮಕ ಫೋಟೋ ಕಳಿಸುವುದು ಅಥವಾ ಸಂದೇಶ ಕಳುಹಿಸುವುದು, ಕೆಟ್ಟ ನೋಟ ಇವೆಲ್ಲವೂ ಲೈಂಗಿಕ ಕಿರುಕುಳದ ಭಾಗವೇ ಆಗಿದೆ. ಇಂತಹ ವಿಷಯಗಳ ಕುರಿತು ದೂರು ಸಲ್ಲಿಸುವ ಮೂಲಕ ದೌರ್ಜನ್ಯಕ್ಕೆ ತಡೆ ಹಿಡಿಯಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.


ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಮಾರಣಾಂತಿಕ ಕ್ಯಾನ್ಸರ್‌ ರೋಗ ತಡೆಗಟ್ಟಲು ಕೇಂದ್ರ ಸರ್ಕಾರ 14 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ ಲಸಿಕೆ ನೀಡುತ್ತಿದ್ದು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.


ಮಹಿಳಾ ವಿಭಾಗದ ಸಹ ನಿರ್ದೇಶಕಿ ಪ್ರೊ. ಸುಭಾಷಿಣಿ ಶ್ರೀವತ್ಸ, ಗಂಡು, ಹೆಣ್ಣು ಇಬ್ಬರೂ ಸಮಾಜದ ಕಣ್ಣುಗಳಿದ್ದ ಹಾಗೆ. ಕುಟುಂಬ ಸೇರಿದಂತೆ ಸಮಾಜದ ಸಮತೋಲನಕ್ಕೆ ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಸಮಾಜದಲ್ಲಿ ಪ್ರಕೃತಿ ಮತ್ತು ಪುರುಷ ಎರಡು ಕೊಂಡಿಗಳು ಒಟ್ಟಿಗೆ ಸಾಗಬೇಕು ಎಂದು ಹೇಳಿದರು.


ನಗರದ ಅಘೋರ ಗ್ರೂಪ್ಸ್‌ ಕಾಲೇಜಿಗೆ ನೈರ್ಮಲ್ಯ ದಹನ ಯಂತ್ರವನ್ನು ಕೊಡುಗೆಯಾಗಿ ನೀಡಿದರು.


ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ಮತ್ತು ಪ್ರಸ್ತುತಿ ತಜ್ಞೆ ಹೇಮಾ ಮಲ್ಯ, ಕಾಲೇಜಿನ ಸೂಕ್ಷ್ಣಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿ ಪ್ರಕಾಶ್, ಮಹಿಳಾ ವೇದಿಕೆ ಸಂಯೋಜಕಿ ಪ್ರೊ. ನಾಗರತ್ನ ರಾವ್, ಲೇಡಿಹಿಲ್‌ನ ಎಸ್‌. ಎಲ್‌. ಶೇಟ್‌ ವಜ್ರಾಭರಣ ಅಂಗಡಿಯ ದೀಪ್ತಿ ಶರತ್ ಶೇಟ್ ಹಾಗೂ ದಿವ್ಯ ಶೇಟ್‌ ಸೇರಿದಂತೆ ಕಾಲೇಜಿನ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top