ಲೇಖಾ ಲೋಕ-67: ಪ್ರಖ್ಯಾತ ಸಂಗೀತ ವಿದುಷಿ ಎಂ.ಎಸ್. ಶೀಲಾ

Upayuktha
0


ಎಂ.ಎಸ್. ಶೀಲಾ ಅವರು ಕರ್ನಾಟಕದ ಪ್ರಸಿದ್ಧ ಕರ್ನಾಟಕ ಸಂಗೀತ ಶಾಸ್ತ್ರೀಯ ಗಾಯಕಿಯರಲ್ಲಿ ಒಬ್ಬರು. ಲಘು ಸಂಗೀತ, ಸುಗಮ ಸಂಗೀತ ಹಾಗೂ ಭಕ್ತಿಗೀತೆಗಳನ್ನು ಸುಮಧುರ ಮತ್ತು ಸುಶ್ರಾವ್ಯವಾಗಿ ಹಾಡುವಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಶಾಸ್ತ್ರೀಯ ಹಾಗೂ ಲಘು ಸಂಗೀತ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಾನುರಾಗವನ್ನು ಗಳಿಸಿದ ವಿದುಷಿ ಅವರು.


ಸಂಗೀತ ಕುಟುಂಬದಲ್ಲಿ ಜನಿಸಿದ ಶೀಲಾ ಅವರಿಗೆ ಸಂಗೀತಾಸಕ್ತಿ ಬಾಲ್ಯದಲ್ಲಿಯೇ ಅನುವಂಶೀಯವಾಗಿ ಬೆಳೆದಿತು. ಅವರ ತಾಯಿ ಎಂ.ಎನ್. ರತ್ನ ಅವರು ಮೊದಲ ಸಂಗೀತ ಗುರುಗಳಾಗಿದ್ದು, ಬಳಿಕ ಶ್ರೀ ಆರ್.ಕೆ. ಶ್ರೀಕಂಠಯ್ಯ ಅವರ ಶಿಷ್ಯೆಯಾಗಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಚಿನ್ನದ ಪದಕವನ್ನು ಗಳಿಸಿರುವುದು ಅವರ ಸಾಧನೆಯ ಪ್ರಮುಖ ಮೈಲುಗಲ್ಲಾಗಿದೆ.


ನಿಯಮಿತವಾಗಿ ಸಂಗೀತ ಕಛೇರಿಗಳನ್ನು ನೀಡುತ್ತಿರುವ ಅವರು ದೇಶ-ವಿದೇಶಗಳಲ್ಲಿ ತಮ್ಮ ಗಾಯನದಿಂದ ಖ್ಯಾತಿ ಗಳಿಸಿದ್ದಾರೆ. ಲಘು ಸಂಗೀತ ಕ್ಷೇತ್ರದಲ್ಲಿ ಲಲಿತಾ ಸಹಸ್ರನಾಮ, ಶಾರದಾ ಸುಪ್ರಭಾತ ಹಾಗೂ ಸೌಂದರ್ಯಲಹರಿ ಗಾಯನಗಳ ಮೂಲಕ ವಿಶೇಷ ಜನಪ್ರಿಯತೆ ಪಡೆದಿದ್ದಾರೆ.


ಅವರ ಸಂಗೀತ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶೃಂಗೇರಿ ಶಾರದಾ ಪೀಠದ ಆಸ್ಥಾನ ವಿದುಷಿಯಾಗಿ ಅವರನ್ನು ಸನ್ಮಾನಿಸಲಾಗಿದೆ. 2019ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಂದ ಸ್ವೀಕರಿಸಿರುವುದು ಅವರ ಸಾಧನೆಯ ಮತ್ತೊಂದು ಮಹತ್ವದ ಗುರುತು.


ಜಯಚಾಮರಾಜೇಂದ್ರ ಒಡೆಯರ್ ಅವರ ಸಂಗೀತ ಸಂಗ್ರಹವನ್ನು ಶ್ರೀವಿದ್ಯಾದರ್ಶನ ಆಲ್ಬಮ್ ಮೂಲಕ ಬಿಡುಗಡೆ ಮಾಡುವ ಮೂಲಕ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ನಿನಾದ (ವೀಣೆ ಶೇಷಣ್ಣ ಅವರ ಸಂಗೀತ ಸಂಗ್ರಹ) ಮತ್ತು ಸದಾಶಿವ ಮಾಧುರ್ಯ (ಮೈಸೂರು ಸದಾಶಿವರಾವ್ ಅವರ ಕೃತಿಗಳು) ಮುಂತಾದ ಅನೇಕ ಸಂಗೀತ ಸಂಗ್ರಹಗಳನ್ನು ಆಕಾಶವಾಣಿಯಲ್ಲಿ ಹಾಡಿ ಪ್ರಸಿದ್ಧರಾಗಿದ್ದಾರೆ.

ವೃತ್ತಿಜೀವನದ ಆರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಸೇವೆ ಸಲ್ಲಿಸಿದ ಅವರು ನಂತರ ಸ್ವಯಂ ನಿವೃತ್ತಿ ಪಡೆದು ಸಂಪೂರ್ಣವಾಗಿ ಸಂಗೀತ ಕ್ಷೇತ್ರಕ್ಕೆ ತೊಡಗಿಕೊಂಡರು. ದೂರದರ್ಶನ ಹಾಗೂ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದಾರೆ.


ತಮ್ಮ ಪತಿಯೊಂದಿಗೆ “ಹಂಸಧ್ವನಿ” ಸಂಸ್ಥೆಯ ಮೂಲಕ ಅನೇಕ ಸಂಗೀತ ಕಮ್ಮಟಗಳನ್ನು ಆಯೋಜಿಸಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಪ್ರತಿವರ್ಷ “ಹಂಸಧ್ವನಿ ಹಬ್ಬ”ವನ್ನು ಆಚರಿಸುವುದರ ಜೊತೆಗೆ, “ಹಂಸಧ್ವನಿ ಪುರಸ್ಕಾರ”ವನ್ನು ಸಂಗೀತ ಸಾಧಕರಿಗೆ ಪ್ರದಾನ ಮಾಡುವ ಪದ್ಧತಿಯನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.


ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ 2019ರಲ್ಲಿ “ಸಂಗೀತ ಕಲಾ ಆಚಾರ್ಯ” ಪ್ರಶಸ್ತಿ, ಗಾನ ಕಲಾ ಪರಿಷತ್ತಿನ ಗೌರವ ಹಾಗೂ ಮ್ಯೂಸಿಕ್ ಅಕಾಡೆಮಿಯ ಚೌಡಯ್ಯ ಪ್ರಶಸ್ತಿಗಳನ್ನು ಪಡೆದು ಅವರು ವಿಶಿಷ್ಟ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.


ಶಾಸ್ತ್ರೀಯ ಸಂಗೀತದಲ್ಲಿ ದಾಸರ ಪದಗಳನ್ನು ಭಕ್ತಿಭಾವದಿಂದ ಹಾಡುವ ಮೂಲಕ ಶ್ರೋತೃಗಳಿಗೆ ಆನಂದದ ರಸದೌತಣ ನೀಡುವುದು ಅವರ ಗಾಯನದ ವಿಶೇಷತೆ. ಅನೇಕ ಆಲ್ಬಮ್‌ಗಳು ಮತ್ತು ಧ್ವನಿಮುದ್ರಿಕೆಗಳನ್ನು ಬಿಡುಗಡೆ ಮಾಡಿ ಅವರು ನಾಡಿನ ಪ್ರಖ್ಯಾತ ಸಂಗೀತ ವಿದುಷಿಯಾಗಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top