‘ಜನವಾಣಿ ಬೇರು, ಕವಿವಾಣಿ ಹೂವು’ ಎಂಬ ನಾಣ್ಣುಡಿ ಜನಜನಿತವಾಗಿದೆ. ಜಾನಪದ ಸಾಹಿತ್ಯವು ಸರ್ವ ವಿಧದ ಸಾಹಿತ್ಯಗಳ ಮೂಲಬೇರು ಎನ್ನುವುದು ಸರ್ವಸ್ವೀಕೃತ. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ಕವಿರಾಜಮಾರ್ಗಕಾರರ ಹೇಳಿಕೆಯಂತೆ, ಶಾಲೆ–ಕಾಲೇಜು ಶಿಕ್ಷಣ ಪಡೆಯದ ವಚನಕಾರ್ತಿಯರು, ಕೀರ್ತನಕಾರ್ತಿಯರು ಮತ್ತು ತತ್ವಪದಕಾರ್ತಿಯರು ಅಪೂರ್ವ ಸುಪ್ತ ಪ್ರತಿಭೆಯುಳ್ಳವರಾಗಿದ್ದಾರೆ.
ವಚನ ಸಾಹಿತ್ಯ, ಕೀರ್ತನ ಸಾಹಿತ್ಯ ಮತ್ತು ತತ್ವಪದ ಸಾಹಿತ್ಯಗಳ ಸೃಜನಶೀಲತೆಯಲ್ಲಿ ಪುರುಷರಷ್ಟೇ ಮಹಿಳೆಯರೂ ಮಹತ್ತರ ಪಾತ್ರವಹಿಸಿದ್ದಾರೆ. ತಮ್ಮ ಬದುಕಿನಲ್ಲಿ ಕಂಡುಂಡ ಅನುಭವಗಳು, ಸಾಮಾಜಿಕ ವಾಸ್ತವಗಳು ಹಾಗೂ ಆಧ್ಯಾತ್ಮಿಕ ಅನ್ವೇಷಣೆಯನ್ನು ಆಧರಿಸಿ ಅವರು ದೇಶಿ ಸೊಗಡಿನ ಭಾಷೆಯಲ್ಲಿ ರಚಿಸಿರುವ ಸಾಹಿತ್ಯವು ಸಾರ್ವಕಾಲಿಕ ಸತ್ಯಸಂಗತಿಯನ್ನು ಒಳಗೊಂಡಿದೆ. ಆಶುಕವಿಗಳಂತಿದ್ದ ಈ ಸೃಜಕರು ತಮ್ಮ ಅನುಭವಗಳನ್ನು ಸಹಜವಾಗಿ ಸಾಹಿತ್ಯ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.
ಮಹಿಳಾ ಬರಹಗಾರ್ತಿಯರ ಸಾಹಿತ್ಯವು ವಚನ, ಕೀರ್ತನ ಮತ್ತು ತತ್ವಪದಗಳ ರೂಪದಲ್ಲಿ ವೈವಿಧ್ಯಮಯವಾಗಿ ವ್ಯಕ್ತವಾಗಿದೆ. ಈ ಸಾಹಿತ್ಯಗಳಲ್ಲಿ ಅಡಕವಾಗಿರುವ ಸದಾಶಯ, ಸಂದೇಶಪ್ರಧಾನ ತತ್ವಗಳು ಹಾಗೂ ಆದರ್ಶಗಳು ಸಮಾಜಕ್ಕೆ ಅನುಕರಣೀಯವಾಗಿವೆ. ‘ಲೋಕ ಕಲ್ಯಾಣ’ವೇ ಈ ಸಾಹಿತ್ಯಗಳ ಪ್ರಧಾನ ಆಶಯ. ಸಾಮಾಜಿಕ, ಆಧ್ಯಾತ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಒಳಗೊಂಡಿರುವ ಈ ಸಾಹಿತ್ಯಸಂಪತ್ತು ಅಮೂಲ್ಯವಾಗಿದೆ.
ಸಾಮಾಜಿಕ ಸೌಹಾರ್ದತೆ, ಸಹನೆ, ತಾಳ್ಮೆ ಮತ್ತು ಸಮಾನತೆಯ ಸಾಮರಸ್ಯ ಬದುಕಿನ ಜೀವಜೀವಾಳವಾಗಿದ್ದು, ‘ಮಾನವ ಕುಲಂ ತಾನೊಂದೇ ವಲಂ’ ಎಂಬ ಹಿತೋಕ್ತಿಯಂತೆ ಕೋಮುಸಾಮರಸ್ಯದ ಸಂದೇಶವನ್ನು ಈ ಸಾಹಿತ್ಯಗಳು ಸಾರುತ್ತವೆ.
ಕನ್ನಡ ಸಾಹಿತ್ಯ ವಲಯದಲ್ಲಿ ವಚನಕಾರ್ತಿಯರು, ಕೀರ್ತನಕಾರ್ತಿಯರು ಮತ್ತು ತತ್ವಪದಕಾರ್ತಿಯರ ಸಾಹಿತ್ಯವು ಜನಮನ ಮುಟ್ಟುವಂತಾಗಿದೆ. ಆಡುಭಾಷೆಯ ಸರಳ ಬಳಕೆಯೇ ಇದರ ಪ್ರಮುಖ ಕಾರಣವಾಗಿದೆ.
ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಗೆ ದ್ವಿತೀಯ ಸ್ಥಾನ ನೀಡಲಾಗಿದ್ದರೂ ‘ಆಡು ಮುಟ್ಟದ ಸೊಪ್ಪಿಲ್ಲ, ಮಹಿಳೆ ಸಾಧನೆಗೈಯದ ಕ್ಷೇತ್ರವಿಲ್ಲ’ ಎಂಬ ಮಾತಿನಂತೆ ಅವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಚನಕಾರ್ತಿಯರು, ಕೀರ್ತನಕಾರ್ತಿಯರು ಮತ್ತು ತತ್ವಪದಕಾರ್ತಿಯರು ರಚಿಸಿರುವ ಈ ಸಾಹಿತ್ಯಸಂಪತ್ತು ನಾಡುನುಡಿಯ ಅಮೂಲ್ಯ ತವನಿಧಿಯಾಗಿದೆ.
ಈ ಅಮೂಲ್ಯ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಹಾಗೂ ಮುಂದಿನ ಪೀಳಿಗೆಗೆ ದಾಖಲಿಸುವ ಅಗತ್ಯವನ್ನು ಮನಗಂಡು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರ ಅಧ್ಯಯನ ಕೇಂದ್ರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠ ಹಾಗೂ ಬೆಂಗಳೂರು ಕರ್ನಾಟಕ ಲೇಖಕಿಯರ ಸಂಘಗಳ ಸಂಯುಕ್ತಾಶ್ರಯದಲ್ಲಿ 2026ರ ಮಾರ್ಚ್ 13 ಮತ್ತು 14 ರಂದು ಧಾರವಾಡದ ಕನಕ ಅಧ್ಯಯನ ಪೀಠದಲ್ಲಿ ಎರಡು ದಿನಗಳ ರಾಜ್ಯಮಟ್ಟದ “ಸಾಧಕಿ ಮಹಿಳಾ ಚಿಂತನ ಸಮಾವೇಶ” ಆಯೋಜಿಸಲಾಗಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಈ ಸಮಾವೇಶವು ಸ್ತುತ್ಯಾರ್ಹ ಪ್ರಯತ್ನವಾಗಿದೆ.
ಕನ್ನಡ ವಚನ ಸಾಹಿತ್ಯದಲ್ಲಿ ಬಸವಣ್ಣ, ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯವರಂತೆ ಕೀರ್ತನ ಸಾಹಿತ್ಯದಲ್ಲಿ ಕನಕದಾಸರು ಮತ್ತು ಪುರಂದರದಾಸರು, ತತ್ವಪದ ಸಾಹಿತ್ಯದಲ್ಲಿ ಸಂತ ಶಿಶುನಾಳ ಶರೀಫರು ಮತ್ತು ಕೊಡೆಕಲ್ ಬಸವಣ್ಣನವರು ಪ್ರಸಿದ್ಧರಾಗಿದ್ದಾರೆ. ಇವರೊಂದಿಗೆ ಅನೇಕ ಮಹಿಳಾ ಸಾಧಕಿಯರೂ ತಮ್ಮದೇ ಆದ ಕೊಡುಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
ಮಹಿಳಾ ವಚನಕಾರ್ತಿಯರಲ್ಲಿ ರಾಯಮ್ಮ, ರೇಕಮ್ಮ, ರೇಚಮ್ಮ, ಕದಿರ ರೆಮ್ಮವ್ವೆ; ಕೀರ್ತನಕಾರ್ತಿಯರಲ್ಲಿ ಹೆಳವನಕಟ್ಟೆ ಗಿರಿಯಮ್ಮ, ಗಲಗಲಿಯ ಅವ್ವ, ಹರಪನಹಳ್ಳಿ ಭೀಮಮ್ಮ, ಚ.ರಾ. ಚೆಲ್ಲವ್ವ, ಸಣ್ಣಭಡತಿ, ಗಣಪಕ್ಕ; ತತ್ವಪದಕಾರ್ತಿಯರಲ್ಲಿ ಬಿದನೂರಿನ ಗಂಗಮ್ಮ, ರಾಯಚೂರಿನ ಹನುಮಂತವ್ವ, ತಾವರಕೆರೆಯ ವೀರದಾಸಮ್ಮ, ಫೈಮುದಾ ಫಾತಿಮಾ, ಜತ್ತ ಶಿವಲಿಂಗವ್ವ, ನೀಲಮ್ಮ, ದೊಡ್ಡಮ್ಮ ತಾಯಿ ಮತ್ತು ಚನ್ನಮ್ಮಾಜಿ ಮೊದಲಾದ ಸಾಧಕಿಯರು ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಈ ಸಾಧಕಿಯರ ಸಾಹಿತ್ಯದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಹಾಗೂ ಜಗತ್ತಿನ ವಿವಿಧ ಭಾಷೆಗಳಲ್ಲಿ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಯುವುದು ಅಗತ್ಯವಾಗಿದೆ. ಅವರ ಬರಹಗಳು ಬದುಕಿಗೆ ಕನ್ನಡಿ ಹಿಡಿದಂತಿದ್ದು ಮಾನವನಲ್ಲಿ ಅರಿವು ಮತ್ತು ಜಾಗೃತಿಯನ್ನುಂಟುಮಾಡುತ್ತವೆ. ಸರಳವಾದರೂ ಗಹನ ಅರ್ಥವಿರುವ ಭಾಷಾಶೈಲಿ ಇವರ ಸಾಹಿತ್ಯದ ವೈಶಿಷ್ಟ್ಯವಾಗಿದೆ.
ಈ ಸಾಹಿತ್ಯಗಳು ಸಮಾಜದ ಅಂತರಂಗ–ಬಹಿರಂಗದ ಅಂಕುಡೊಂಕುಗಳನ್ನು ತಿದ್ದಿ ಸಮಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ. ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶಗಳು ಸಹೃದಯರ ಮನಸ್ಸಿನಲ್ಲಿ ಅಚ್ಚೊತ್ತುವಂತಿವೆ. ಸಮಸಮಾಜ ನಿರ್ಮಾಣ ಹಾಗೂ ಮಾನಸಿಕ ಸ್ಥೈರ್ಯ ವೃದ್ಧಿಗೆ ಮಹಿಳೆಯರ ಈ ಸಾಹಿತ್ಯ ಪರಂಪರೆ ಮಹತ್ವದ ಕೊಡುಗೆ ನೀಡುತ್ತದೆ.
-ಪ್ರೊ. ಶಕುಂತಲಾ ಚನ್ನಪ್ಪ. ಸಿಂಧೂರ.
ಸಂಶೋಧಕರು, ಸಾಹಿತ್ಯ ಚಿಂತಕರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ



