ಬೆಂಗಳೂರು, ಮಾರ್ಚ್ 16: ಭಾರತೀಯ ಅಂಚೆ ಇಲಾಖೆ ತುರ್ತು ಮತ್ತು ಸಮಯಮಿತಿಯ ಅಂಚೆ ಸಾಗಣೆಗೆ ವೇಗ ಹೆಚ್ಚಿಸುವ ಉದ್ದೇಶದಿಂದ ಹೊಸ ‘24 ಸ್ಪೀಡ್ ಪೋಸ್ಟ್’ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಈ ಸೇವೆಯು ಮಾರ್ಚ್ 17ರಿಂದ ಪ್ರಾರಂಭವಾಗಲಿದ್ದು, ದೇಶದ ಆರು ಪ್ರಮುಖ ಮಹಾನಗರಗಳಲ್ಲಿ ಮರುದಿನ ಖಾತರಿಯ ವಿತರಣೆ (Next-Day Assured Delivery) ವ್ಯವಸ್ಥೆಯನ್ನು ಪರಿಚಯಿಸಲಿದೆ.
ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹಾಗೂ ಸಂವಹನ ಖಾತೆ ರಾಜ್ಯ ಸಚಿವರಾದ ಚಂದ್ರಶೇಖರ್ ಪೆಮ್ಮಸಾನಿ ಅವರು ನವದೆಹಲಿಯ ಆಕಾಶವಾಣಿ ಭವನದ ರಂಗಭವನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಧ್ಯಾಹ್ನ 12:30ಕ್ಕೆ ಈ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.
ಆರು ನಗರಗಳಲ್ಲಿ ಮೊದಲ ಹಂತ:
ಪ್ರಾರಂಭಿಕ ಹಂತದಲ್ಲಿ ಈ ಸೇವೆ ದೆಹಲಿ, ಮುಂಬಯಿ, ಚೆನ್ನೈ, ಕೋಲ್ಕತ, ಬೆಂಗಳೂರು ಮತ್ತು ಹೈದರಾಬಾದ್ ನಗರಗಳಲ್ಲಿ ಲಭ್ಯವಾಗಲಿದೆ. ಹೊಸ ಸೇವೆಯ ಮೂಲಕ ತುರ್ತು ದಾಖಲೆಗಳು ಹಾಗೂ ಸರಕುಗಳನ್ನು D+1 (ಮರುದಿನ) ಅವಧಿಯೊಳಗೆ ಖಚಿತವಾಗಿ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ಇದರ ಜೊತೆಗೆ ‘48 ಸ್ಪೀಡ್ ಪೋಸ್ಟ್’ ಸೇವೆಯು D+2 (ಎರಡು ದಿನಗಳಲ್ಲಿ) ವಿತರಣೆಯನ್ನು ಖಚಿತಪಡಿಸಲಿದೆ. ಈ ಸಮಯಪಾಲಿತ ಸೇವೆಗಳನ್ನು ಮೀಸಲಾದ ಕಾರ್ಯವಿಧಾನಗಳು ಮತ್ತು ಆದ್ಯತೆಯ ವಾಯು ಸಾಗಣೆ ವ್ಯವಸ್ಥೆಗಳ ಮೂಲಕ ನಿರ್ವಹಿಸಲಾಗುತ್ತದೆ.
ತಂತ್ರಜ್ಞಾನ ಆಧಾರಿತ ಸೌಲಭ್ಯಗಳು:
ಹೊಸ ಸ್ಪೀಡ್ ಪೋಸ್ಟ್ ಸೇವೆಗಳಲ್ಲಿ ಹಲವು ಡಿಜಿಟಲ್ ಮತ್ತು ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ- OTP ಆಧಾರಿತ ಸುರಕ್ಷಿತ ವಿತರಣೆ, SMS ಸೂಚನೆಗಳೊಂದಿಗೆ ಆರಂಭದಿಂದ ಅಂತ್ಯದವರೆಗೆ ಟ್ರ್ಯಾಕಿಂಗ್, ವ್ಯಾಪಾರ ಗ್ರಾಹಕರಿಗೆ BNPL (Buy Now Pay Later) ಸೌಲಭ್ಯ, ಬೃಹತ್ ಬುಕ್ಕಿಂಗ್‌ಗಳಿಗೆ ಉಚಿತ ಪಿಕಪ್ ವ್ಯವಸ್ಥೆ, API ಏಕೀಕರಣ ಮತ್ತು ಕೇಂದ್ರೀಕೃತ ಬಿಲ್ಲಿಂಗ್, ವಿತರಣೆಯಲ್ಲಿ ವಿಳಂಬವಾದಲ್ಲಿ ಹಣ ಹಿಂತಿರುಗಿಸುವ ಖಾತರಿ- ಸೇರಿವೆ.
ಇವುಗಳ ಮೂಲಕ ಇಂಡಿಯಾ ಪೋಸ್ಟ್‌ನ ಪ್ರೀಮಿಯಂ ಎಕ್ಸ್‌ಪ್ರೆಸ್ ವಿತರಣಾ ಸೇವೆಗಳ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವುದು ಇಲಾಖೆಯ ಉದ್ದೇಶವಾಗಿದೆ.
ಬೆಂಗಳೂರಿನಲ್ಲಿ ವಿಶೇಷ ವ್ಯವಸ್ಥೆ
ಬೆಂಗಳೂರು ನಗರದಲ್ಲಿ ‘24 ಸ್ಪೀಡ್ ಪೋಸ್ಟ್’ ಸೇವೆಗಳನ್ನು ಒದಗಿಸಲು 42 ಅಂಚೆ ಕಚೇರಿಗಳನ್ನು ಗುರುತಿಸಲಾಗಿದೆ. ‘48 ಸ್ಪೀಡ್ ಪೋಸ್ಟ್’ ಸೇವೆಯು ನಗರದ ಎಲ್ಲಾ ಅಂಚೆ ಕಚೇರಿಗಳಲ್ಲಿಯೂ ಲಭ್ಯವಾಗಲಿದೆ.
ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ
ನವದೆಹಲಿಯಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಮಾರ್ಚ್ 17ರಂದು ಮಧ್ಯಾಹ್ನ 12:15ಕ್ಕೆ ಬೆಂಗಳೂರು ಜಿಪಿಒದ 6ನೇ ಮಹಡಿಯ ಮೇಘದೂತ್ ಸಭಾಂಗಣದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಅವರು ಬೆಂಗಳೂರು ಅಂಚೆ ಮಹಾ ಕಾರ್ಯಾಲಯದ ಆವರಣದಿಂದ ಈ ಸೇವೆಯ ಕುರಿತು ಜಾಗೃತಿ ಮೂಡಿಸುವ ಮೊಬೈಲ್ ಥಿಯೇಟರ್ ವ್ಯಾನ್‌ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಭಾರತೀಯ ಅಂಚೆ ಇಲಾಖೆಯ ಈ ಹೊಸ ಕ್ರಮವು ವೇಗವಾದ, ವಿಶ್ವಾಸಾರ್ಹ ಹಾಗೂ ತಂತ್ರಜ್ಞಾನಾಧಾರಿತ ಅಂಚೆ ಸೇವೆಗಳನ್ನು ಒದಗಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


