ಉತ್ತರ ಭಾರತಕ್ಕೆ ಪ್ರವಾಸ ಬಯಸುವವರು ತಪ್ಪದೇ ಭೇಟಿ ನೀಡಬೇಕಾದ ನಗರಗಳಲ್ಲಿ ಪ್ರಮುಖವಾದುದು ಚಂಡೀಗಢ. ಸ್ವಚ್ಛತೆ, ಹಸಿರು ಪರಿಸರ ಮತ್ತು ಯೋಜಿತ ನಗರ ವಿನ್ಯಾಸದ ಕಾರಣದಿಂದ ದೇಶದಲ್ಲಿ “ಪ್ಲ್ಯಾನ್‌ಡ್ ಸಿಟಿ” ಎಂದೇ ಹೆಸರುವಾಸಿಯಾಗಿರುವ ಈ ನಗರವು ಕೇಂದ್ರಾಡಳಿತ ಪ್ರದೇಶವಾಗಿಯೂ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ನಗರದ ಸುಂದರತೆಯನ್ನು ಮತ್ತಷ್ಟು ಮೆರೆದಿಡುವ ಪ್ರಮುಖ ತಾಣಗಳಲ್ಲಿ ಒಂದು ಸುಖ್ನಾ ಸರೋವರ. ಸುಮಾರು ಎರಡುವರೆ ಕಿಲೋಮೀಟರ್ ಉದ್ದಕ್ಕೂ ಹರಡಿಕೊಂಡಿರುವ ಈ ಸರೋವರದ ತಟಭಾಗವು ಬೆಳಗಿನ ವಾಯುವಿಹಾರ ಹಾಗೂ ನಡೆಯಾಟಕ್ಕೆ ಅತ್ಯಂತ ಸೂಕ್ತ ಸ್ಥಳವಾಗಿದೆ. ಹಸಿರು ಮರಗಳ ನೆರಳು, ಸ್ವಚ್ಛವಾದ ವಾತಾವರಣ ಮತ್ತು ಪ್ರಕೃತಿಯ ನಿಶ್ಶಬ್ದ ಸೌಂದರ್ಯ ಇಲ್ಲಿ ಭೇಟಿ ನೀಡುವವರಿಗೆ ಹೊಸ ಚೈತನ್ಯ ನೀಡುತ್ತದೆ.
ಸರೋವರದ ಬಳಿಯೇ ನಿರ್ಮಿಸಲಾದ ನೇಚರ್ ಇಂಟರ್ಪ್ರಿಟೇಷನ್ ಸೆಂಟರ್ ಪ್ರಕೃತಿಯ ಅರಿವು ಮೂಡಿಸುವ ವಿಶೇಷ ಕೇಂದ್ರವಾಗಿ ರೂಪುಗೊಂಡಿದೆ. ಪ್ರಕೃತಿ ಮತ್ತು ಪರಿಸರದ ಮಹತ್ವವನ್ನು ಪರಿಚಯಿಸುವ ಈ ಕೇಂದ್ರವು ಪರಿಸರ ಜಾಗೃತಿಗೆ ಉತ್ತೇಜನ ನೀಡುತ್ತದೆ.
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ನೂರಾರು ಮಂದಿ ಇಲ್ಲಿ ವಾಯುವಿಹಾರ ನಡೆಸುತ್ತಾ ಪ್ರಕೃತಿಯ ಸೊಬಗನ್ನು ಕಣ್ಣಾರೆ ನೋಡುತ್ತಾರೆ. ನಡೆಯಾಟದಿಂದ ಆಯಾಸಗೊಂಡವರಿಗೆ ವಿಶ್ರಾಂತಿ ಪಡೆಯಲು ಕುಳಿತುಕೊಳ್ಳುವ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಜೊತೆಗೆ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿರುವುದರಿಂದ ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆಯೂ ಸಮರ್ಪಕವಾಗಿ ಮಾಡಲಾಗಿದೆ.
ಒಟ್ಟಿನಲ್ಲಿ, ಸ್ವಚ್ಛತೆ, ಹಸಿರು ಪರಿಸರ ಮತ್ತು ಶಿಸ್ತಿನ ನಗರ ವಿನ್ಯಾಸದಿಂದ ಚಂಡೀಗಢ ನಿಜಕ್ಕೂ ಸ್ಮಾರ್ಟ್ ಸಿಟಿಗೆ ಅನ್ವರ್ಥ ಹೆಸರು ಪಡೆದ ನಗರವೆಂಬುದು ಅನುಭವಿಸಿದವರಿಗೆ ಸ್ಪಷ್ಟವಾಗುತ್ತದೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

