ಸಾಂದರ್ಭಿಕ ಎಐ ಚಿತ್ರ
ನಾನು ಒಂದು ಸಿಸೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ನಿರತರಾಗಿದ್ದಾಗ ನನ್ನ ಕಿರಿಯ ವೈದ್ಯೆಯಿಂದ ಕರೆ ಬಂತು.
“ಮೇಡಂ, ಒಬ್ಬರು ಸ್ಕ್ಯಾನಿಂಗ್ ವರದಿ ತೋರಿಸಲು ಬಂದಿದ್ದಾರೆ. ಅದರಲ್ಲಿ ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದು ಇದೆ,” ಎಂದಳು.
“ಎಕ್ಟೋಪಿಕ್” ಎಂದರೆ ಗರ್ಭವು ಗರ್ಭಕೋಶದೊಳಗೆ ನೆಲೆಯಾಗದೆ ಬೇರೆಡೆ ನೆಲಸಿರುವುದು. ಇದು ಯಾವುದೇ ಹೆರಿಗೆ ತಜ್ಞರಿಗೂ ನಿದ್ದೆ ಕೆಡಿಸುವ ವಿಷಯ. ಏಕೆಂದರೆ ಅದು ಒಡೆದರೆ ಕ್ಷಣಾರ್ಧದಲ್ಲಿ ತಾಯಿಗೆ ಭಾರೀ ರಕ್ತಸ್ರಾವವಾಗಿ ಜೀವಾಪಾಯ ಉಂಟಾಗಬಹುದು.
ಆ ಪದ ಕೇಳುತ್ತಿದ್ದಂತೆಯೇ ನನಗೆ ಎದೆ ಝಲ್ ಎನ್ನಿಸಿತು. ತಕ್ಷಣ ರೋಗಿಯ ಸ್ಥಿತಿ ವಿಚಾರಿಸಿ ಸ್ಕ್ಯಾನ್ ವರದಿಯನ್ನು ವಾಟ್ಸಪ್‌ನಲ್ಲಿ ಕಳುಹಿಸಿಕೊಳ್ಳಲು ಹೇಳಿದೆ. ನನ್ನ ಸಹೋದ್ಯೋಗಿಗಳ ಜೊತೆ ನೋಡಿದಾಗ ತಕ್ಷಣವೇ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿಲ್ಲವೆಂದು ಕಂಡಿತು. ಆದ್ದರಿಂದ ಹೆರಿಗೆ ಕೊಠಡಿ ಸಿಬ್ಬಂದಿಗೆ ದೂರವಾಣಿ ಮೂಲಕ ಅಗತ್ಯ ಸೂಚನೆ ನೀಡಿ ನನ್ನ ಶಸ್ತ್ರಚಿಕಿತ್ಸೆ ಮುಂದುವರೆಸಿದೆ.
ಆ ರೋಗಿ ಯಾರು ಎಂಬುದು ನನಗೆ ಮೊದಲು ನೆನಪಾಗಲಿಲ್ಲ. ಅಷ್ಟರಲ್ಲಿ ನನ್ನ ಪಿಜಿ ವಿದ್ಯಾರ್ಥಿನಿ ಅವಳನ್ನು ನನಗೆ ನೆನಪಿಸಿತು.
ಸುಮಾರು ಆರು ತಿಂಗಳ ಹಿಂದೆ ಆ ಮಹಿಳೆ ಗರ್ಭಿಣಿ ತಪಾಸಣೆಗೆ ಬರುತ್ತಿದ್ದಳು. ಅವಳಿಗೆ ಈಗಾಗಲೇ ಒಂದು ಮಗುವಿತ್ತು. ಒಂದು ಗರ್ಭಪಾತವಾಗಿತ್ತು. ಈ ಗರ್ಭಧಾರಣೆಯ ಸಮಯದಲ್ಲಿ ಅವಳಿಗೆ ರಕ್ತದೊತ್ತಡ ಸಮಸ್ಯೆಯೂ ಇತ್ತು.
ಎಲ್ಲ ಪರೀಕ್ಷೆಗಳನ್ನು ಮಾಡುತ್ತಾ ಅವಳನ್ನು ನೋಡಿಕೊಳ್ಳುತ್ತಿದ್ದೆ. ಆದರೆ ದುರಾದೃಷ್ಟವಶಾತ್ ಐದು ತಿಂಗಳಿನಿಂದಲೇ ಮಗುವಿನ ಸುತ್ತಲಿನ ನೀರು ಕಡಿಮೆಯಾಗತೊಡಗಿತ್ತು. ನನ್ನ ಪ್ರಯತ್ನಗಳ ನಡುವೆಯೂ ಸುಮಾರು ಆರೂವರೆ ತಿಂಗಳಲ್ಲಿ ಮಗು ಹೊಟ್ಟೆಯಲ್ಲೇ ಮೃತಪಟ್ಟಿರುವುದು ತಿಳಿದುಬಂತು. ಅದರಿಂದ ಅವಳಿಗೆ ಸೋಂಕು ಕೂಡ ಉಂಟಾಗಿತ್ತು.
ಆಗ ಅವಳನ್ನು ಆಸ್ಪತ್ರೆಗೆ ದಾಖಲಿಸಿ ಆ ಸತ್ತ ಮಗುವನ್ನು ಹೊರತೆಗೆಯಲು ನಾವು ಬಹಳ ಕಷ್ಟಪಟ್ಟೆವು. ಎಷ್ಟು ಔಷಧಿ ಕೊಟ್ಟರೂ ಮಗು ಹೊರಬರದೆ ಕೊಳೆಯತೊಡಗಿತ್ತು. ಒಂದು ರಾತ್ರಿಯಿಡೀ ನಿದ್ದೆ ಮಾಡದೆ ಅವಳ ಹೆರಿಗೆ ಮಾಡಿಸಿದ್ದೆ. ಆ ಕೊಳೆತ ಮಗುವಿನ ದೃಶ್ಯ ಇನ್ನೂ ಮನಸ್ಸಿನಲ್ಲಿ ಉಳಿದಿದೆ.
ಆದರೂ ಕೊನೆಯಲ್ಲಿ ಸಹಜ ಹೆರಿಗೆ ಮೂಲಕ ಮಗು ಹೊರಬಂದಿತು. ಸತ್ತ ಮಗುವಿಗಾಗಿ ಸಿಸೇರಿಯನ್ ಮಾಡಬೇಕಾಗಿಲ್ಲವೆಂಬ ಒಂದು ತೃಪ್ತಿ ನನಗೆ ದೊರಕಿತ್ತು.
ಸೋಂಕಿನ ಕಾರಣದಿಂದ ಐದು ದಿನ ಆಸ್ಪತ್ರೆಯಲ್ಲಿ ಇಟ್ಟು ಚಿಕಿತ್ಸೆ ನೀಡಿದೆವು. ಅವಳ ವಯಸ್ಸು ಮೂವತ್ತೈದು ದಾಟಿತ್ತು. ರಕ್ತದೊತ್ತಡ ಸಮಸ್ಯೆಯೂ ಇತ್ತು. ಆದ್ದರಿಂದ ಅವಳನ್ನು ಕಂಡಾಗಲೆಲ್ಲಾ ನಾನು ಒಂದೇ ಮಾತು ಹೇಳುತ್ತಿದ್ದೆ:
“ನಿನಗೆ ಈಗಾಗಲೇ ಒಂದು ಗಂಡು ಮಗು ಇದೆ. ಮತ್ತೆ ಗರ್ಭಧಾರಣೆ ಮಾಡಿಕೊಳ್ಳಬೇಡ. ನಿನ್ನ ದೇಹಕ್ಕೆ ಅದು ಅಪಾಯ.”
ಈ ಮಾತನ್ನು ನಾನು ಎಷ್ಟು ಬಾರಿ ಹೇಳಿದ್ದೇನೆ ಎಂಬುದು ನನಗೆ ಮಾತ್ರ ಗೊತ್ತು.
ಅವಳು ಆರೋಗ್ಯವಾಗಿ ಮನೆಗೆ ಹೋದಳು. ನಂತರ ಒಂದೆರಡು ಬಾರಿ ಮರುಪರಿಶೀಲನೆಗೆ ಬಂದಳು. “ಮಾತ್ರೆ ಮರೆತಬೇಡ, ಮಗು ಆಗದಂತೆ ನೋಡಿಕೋ,” ಎನ್ನುವುದೇ ನಮ್ಮ ಮಾತುಕತೆಯ ಮುಖ್ಯ ವಿಷಯ.
ಒಂದು ದಿನ ಅವಳು ಮತ್ತೆ ನನ್ನ ಬಳಿ ಬಂದಳು. ಹಿಂದಿನ ದಿನ ವೈದ್ಯರ ಬಳಿ ಬಿಪಿ ಪರೀಕ್ಷೆ ಮಾಡಿಸಿಕೊಂಡಾಗ ಅವರಿಗೆ ಬೇರೆ ಮಾತ್ರೆ ಬರೆದಿದ್ದರು. ಗರ್ಭಾವಸ್ಥೆಯಲ್ಲಿ ನಾನು ಕೊಟ್ಟ ಮಾತ್ರೆಗೂ ಇದಕ್ಕೂ ವ್ಯತ್ಯಾಸ ಕಂಡು ಅವಳು ಅನುಮಾನದಿಂದ ನನ್ನ ಬಳಿ ಬಂದಿದ್ದಳು.
ನಾನು ಹೇಳಿದೆ:
“ಗರ್ಭಾವಸ್ಥೆಯ ಸಮಯದಲ್ಲಿ ಕೊಡುವ ಮಾತ್ರೆಗೂ ನಂತರ ಕೊಡುವ ಮಾತ್ರೆಗೂ ವ್ಯತ್ಯಾಸ ಇರುತ್ತದೆ. ವೈದ್ಯರು ಹೇಳಿದಂತೆ ತೆಗೆದುಕೋ.”
ಆದರೆ ಅಷ್ಟರಲ್ಲಿ ನನಗೆ ಏನೋ ಅನುಮಾನ ಬಂತು.
“ಮಗು ಆಗದಂತೆ ಕಾಪರ್-ಟಿ ಹಾಕಿಸಿಕೊಳ್ಳು ಎಂದಿದ್ದೆ. ಹಾಕಿಸಿಕೊಂಡೆಯಾ?” ಎಂದು ಕೇಳಿದೆ.
ಅವಳು “ಇಲ್ಲ” ಎಂದಳು.
ನಾನು ಮತ್ತೆ ಗದರಿಸಿದೆ. ಕೊನೆಗೆ ಅವಳ ಕೊನೆಯ ಮುಟ್ಟಿನ ದಿನ ಕೇಳಿದಾಗ ಅದು ಒಂದೂವರೆ ತಿಂಗಳ ಹಿಂದೆ ಎಂದು ತಿಳಿಯಿತು. ಅನುಮಾನದಿಂದ ಗರ್ಭಪರೀಕ್ಷೆ ಮಾಡಿದಾಗ — ಅವಳು ಮತ್ತೆ ಗರ್ಭಿಣಿಯಾಗಿದ್ದಳು!
ನನಗೆ ಕೋಪವೂ ಬೇಸರವೂ ಬಂತು. ಆದರೆ ಅವಳಿಗೆ ಈಗಾಗಲೇ ಒಂದೇ ಮಗು ಇದ್ದುದರಿಂದ ಅವಳ ಆಯ್ಕೆಯನ್ನು ನಾನು ಬಲವಂತವಾಗಿ ಪ್ರಶ್ನಿಸಲಿಲ್ಲ.
“ಅಳಬೇಡ. ನಾಳೆ ಸ್ಕ್ಯಾನಿಂಗ್ ಮಾಡಿಸು. ನೀನು ಮತ್ತು ನಿನ್ನ ಗಂಡ ಮಗು ಬೇಕೋ ಬೇಡವೋ ನಿರ್ಧರಿಸಿಕೊಳ್ಳಿ. ನಿಮ್ಮ ನಿರ್ಧಾರ ಏನೇ ಇರಲಿ, ವೈದ್ಯೆಯಾಗಿ ನಿನಗೆ ಅಗತ್ಯ ಚಿಕಿತ್ಸೆ ಕೊಡುತ್ತೇನೆ,” ಎಂದು ಹೇಳಿ ಕಳುಹಿಸಿದ್ದೆ.
ಅದೇ ಸ್ಕ್ಯಾನ್ ವರದಿ ಇಂದು ಎಕ್ಟೋಪಿಕ್ ಪ್ರೆಗ್ನೆನ್ಸಿ ಎಂದು ಬಂದಿದೆ.
ಶಸ್ತ್ರಚಿಕಿತ್ಸೆ ಮುಗಿಸಿದ ನಂತರ ನಾನು ನೇರವಾಗಿ ಅವಳ ಬಳಿಗೆ ಹೋದೆ. ಅವಳು ನನ್ನನ್ನು ಕಂಡ ಕೂಡಲೇ ಮತ್ತೆ ಅತ್ತಳು. ನಾನು ಅವಳ ಸ್ಥಿತಿ ವಿವರಿಸಲು ಅವಳ ಗಂಡನನ್ನು ಕರೆಸಿದೆ.
ನನ್ನ ಕೊಠಡಿಯಲ್ಲಿ ಅವನಿಗೆ ಗರ್ಭಕೋಶ, ಟ್ಯೂಬ್ ಮತ್ತು ಅಂಡಾಶಯದ ಚಿತ್ರ ಬರೆದು ವಿವರಿಸಲು ಆರಂಭಿಸಿದೆ. ಆದರೆ ಕೆಲವೇ ಕ್ಷಣದಲ್ಲಿ ಅವನು ಮದ್ಯಪಾನ ಮಾಡಿರುವುದು ಸ್ಪಷ್ಟವಾಯಿತು.
ಅವನ ಅಸಂಬದ್ಧ ಮಾತುಗಳನ್ನು ಕೇಳುವುದಕ್ಕಿಂತ ಬೇಗ ಚಿಕಿತ್ಸೆ ನೀಡುವುದು ಮುಖ್ಯವಾಗಿತ್ತು. ಅವನಿಂದ ಅವಳ ಅಕ್ಕನಿಗೆ ಕರೆ ಮಾಡಿಸಿ ಎಲ್ಲಾ ವಿವರಿಸಿದೆ.
“ಮೇಡಂ, ನೀವು ಚಿಕಿತ್ಸೆ ಆರಂಭಿಸಿ. ನನಗೆ ಬರಲು ಕನಿಷ್ಠ ಒಂದು ಗಂಟೆ ಬೇಕು,” ಎಂದಳು ಅವಳ ಅಕ್ಕ.
ಕುಟುಂಬದವರು ಇಲ್ಲದೇ ಅಪಾಯಕಾರಿ ಶಸ್ತ್ರಚಿಕಿತ್ಸೆ ಆರಂಭಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಅವಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಾದಿದ್ದೆವು.
ಆ ದಿನ ಬೆಳಿಗ್ಗೆಯಿಂದಲೇ ಮೂರು ಸಿಸೇರಿಯನ್, ತುಂಬಿದ ಓಪಿಡಿ, ಮತ್ತೊಂದು ಶಸ್ತ್ರಚಿಕಿತ್ಸೆ — ಕೆಲಸದ ಒತ್ತಡ ಹೆಚ್ಚಿತ್ತು.
ಅಷ್ಟರಲ್ಲಿ ನನ್ನ ಬಾಗಿಲಲ್ಲಿ ಒಂದು ಧ್ವನಿ ಕೇಳಿಸಿತು:
“ಮೇಡಂ, ಅವಳು ಒಳಗಿದ್ದಾಳೆ. ನೀವು ಒಳ್ಳೆಯವರು. ಅವಳಿಗೆ ಏನು ಬೇಕೋ ಮಾಡಿ. ನಾನು ಮನೆಗೆ ಹೋಗುತ್ತಿದ್ದೇನೆ… ಟಾಟಾ ಬೈ ಬೈ.”
ಅವಳ ಗಂಡ ಕೈ ಬೀಸಿ “ಟಾಟಾ ಬೈ ಬೈ” ಹೇಳುತ್ತ ಹೊರಟ. ಆ ಕ್ಷಣ ನನಗೆ ಕೋಪವೂ ಬರಲಿಲ್ಲ. ನಾನು ನಗುತ್ತಾ ಹೇಳಿದೆ:
“ಗಂಡಂದಿರೇ, ನಿಮ್ಮ ಹೆಂಡತಿಯನ್ನು ನನಗೆ ದತ್ತು ಕೊಡಿ. ನೀವು ಶೇಂದಿ ಅಂಗಡಿಯಲ್ಲಿ ಕೆಲಸ ಮಾಡಿ. ನಿಮ್ಮ ಹೆಂಡತಿಯರ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ!”
ಅವನಿಗೆ ಆ ಮಾತಿನ ಅರ್ಥವೂ ತಿಳಿಯಲಿಲ್ಲ. ನಶೆಯಲ್ಲಿದ್ದ ಅವನ ಜೊತೆ ವಾದ ಮಾಡುವ ಅಗತ್ಯವಿರಲಿಲ್ಲ.
ಸ್ವಲ್ಪ ಸಮಯದ ನಂತರ ಅವಳ ತವರಿನವರು ಬಂದರು. ನಾವು ಪೂರ್ವತಯಾರಿ ಮಾಡಿಕೊಂಡು ಶಸ್ತ್ರಚಿಕಿತ್ಸೆ ಆರಂಭಿಸಿದೆವು.
ದೇವರ ಕೃಪೆಯಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಅವಳನ್ನು ಜೀವಾಪಾಯದಿಂದ ಪಾರು ಮಾಡಿದೆವು. ಅವಳ ಮತ್ತು ಕುಟುಂಬದ ಅನುಮತಿಯಿಂದ ಮುಂದೆ ಮಗು ಆಗದಂತೆ ಶಸ್ತ್ರಚಿಕಿತ್ಸೆಯನ್ನೂ ಮಾಡಿದೆವು.
ಒಂದು ದೊಡ್ಡ ಅಪಾಯದ ಅಂಚಿನಿಂದ ಅವಳನ್ನು ಉಳಿಸಿದ ತೃಪ್ತಿಯಲ್ಲಿ ದಿನ ಮುಗಿಯಿತು.
ಆದರೆ ಆ ದಿನದ ನಂತರವೂ ನನ್ನ ಕಿವಿಯಲ್ಲಿ ಒಂದು ಮಾತು ಗುನುಗುತ್ತಲೇ ಇತ್ತು:
“ಟಾಟಾ ಬೈ ಬೈ…”
ಹೆಂಡತಿ ಜೀವಮರಣದ ಹೋರಾಟದಲ್ಲಿದ್ದಾಗಲೂ ನಗುತ್ತ ಕೈ ಬೀಸಿ ಹೊರಟ ಆ ಗಂಡನ ನೆನಪು ನನಗೆ ನಿದ್ದೆ ಕದಿಯಿತು.
ಇಂತಹ ಗಂಡಂದಿರನ್ನು ನಾನು ಇಲ್ಲಿ ಸಾಕಷ್ಟು ನೋಡುತ್ತೇನೆ. ಆ ಕ್ಷಣ ಹೆಂಗಸಿಗೆ ತೊಂದರೆ ಆಗದಂತೆ ನೋಡಿಕೊಳ್ಳುವಷ್ಟರಲ್ಲಿ ವೈದ್ಯೆಯಾಗಿ “ಹರ ಹರ ಶಿವಾ” ಎನ್ನುವ ಪರಿಸ್ಥಿತಿ ಬರುತ್ತದೆ.
ಆದರೆ ಪ್ರತಿದಿನ ಇಂತಹ ಮನಸ್ಥಿತಿಯವರ ಜೊತೆ ಬದುಕು ಸಾಗಿಸುವ ಆ ಹೆಣ್ಣುಮಕ್ಕಳ ಸ್ಥಿತಿ ನೆನೆದರೆ ಒಂದು ಜನಪದ ಸಾಲು ನೆನಪಾಗುತ್ತದೆ:
“ಹೆಣ್ಣಾಗಿ ಹುಟ್ಟೋಕಿಂತ ಮಣ್ಣಾಗಿ ಹುಟ್ಟಿದರೆ ಮರಕ್ಕೆ ಆಶ್ರಯವಾಗುತ್ತಿದ್ದೆ.”
ಆ “ಟಾಟಾ ಬೈ ಬೈ” ನನಗೆ ಒಂದು ಹೊಸ ಅರ್ಥ ನೀಡಿತು.
ಸಮಾಜವನ್ನು ನೆನೆದು ಅಳಬೇಕೋ, ನಗಬೇಕೋ ಎನ್ನುವುದು ನನಗೆ ಅರ್ಥವಾಗದ ಸ್ಥಿತಿ.
ಕಲಿತ ವಿದ್ಯೆ ನೋವಿನಲ್ಲಿರುವವರ ಪಾಲಿಗೆ ಬೆಳಕಾಗಲಿ ಎಂಬ ಆಶಯದಲ್ಲಿ ಬದುಕುತ್ತಿರುವಾಗ- ಅಜ್ಞಾನವೇ ಹಲವಾರು ಬದುಕುಗಳನ್ನು ಕತ್ತಲೆಗೆ ತಳ್ಳುತ್ತದೆ.
- ಡಾ. ಶಾಲಿನಿ ವಿ.ಎಲ್.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ
ಸಾರ್ವಜನಿಕ ಆಸ್ಪತ್ರೆ, ಸುಳ್ಯ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


