ಡಿಪ್ರೆಷನ್... ಇತ್ತೀಚೆಗೆ ಅತಿಯಾಗಿ ಕೇಳಿ ಬರುತ್ತಿರುವ ಪದ. ಕನ್ನಡದಲ್ಲಿ ಖಿನ್ನತೆ ಎಂದು ಕರೆಯಲ್ಪಡುವ ಈ ಪದವನ್ನು ಯಕಶ್ಚಿತ, ಅದೇನು ಮಹಾ ಎಂಬಂತೆ ಭಾವಿಸುವ ಹಿರಿಯರು ಇರುವಂತೆಯೇ ತನಗಿರುವ ಸಣ್ಣ ಪುಟ್ಟ ಮಾನಸಿಕ ನೋವುಗಳನ್ನು ನಿರ್ವಹಿಸಲಾಗದೆ ಅದನ್ನು ಡಿಪ್ರೆಶನ್ ಎಂದು ಹೇಳುವ ಯುವ ಪೀಳಿಗೆಯನ್ನು ಕೂಡ ನಾವು ನೋಡಬಹುದು.
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗಿನ ಯಾರಿಗೆ ಬೇಕಾದರೂ ಯಾವಾಗ ಬೇಕಾದರೂ ಆವರಿಸಿಕೊಳ್ಳಬಹುದಾದ ಮಾನಸಿಕ ತೊಂದರೆ. ಅರೆ! ಚಿಕ್ಕ ಮಕ್ಕಳಿಗೆ ಕೂಡ ಬರುತ್ತದೆಯೇ ಎಂದು ಭಾವಿಸದಿರಿ. ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಖಿನ್ನತೆಯ ತೊಂದರೆಯಿಂದ ಹೆಚ್ಚಾಗಿ ಬಳಲುತ್ತಿರುವವರು ಮಕ್ಕಳೇ ಎಂದರೆ ಅಚ್ಚರಿ ಪಡಬೇಕಾಗಿಲ್ಲ.
ಹೌದು ! ಶಾಲೆಗಳಲ್ಲಿ, ಮನೆಯಲ್ಲಿ ಅತಿಯಾದ ನಿರೀಕ್ಷೆಗಳು ಮಕ್ಕಳ ಮೇಲಿನ ಭಾರವನ್ನು ಹೆಚ್ಚಿಸುತ್ತದೆ.
ಆದರೆ, ನಿಜವಾದ ಖಿನ್ನತೆಯು ಒಂಟಿಯಾಗಿರುವುದು ಇಲ್ಲವೇ ಕಣ್ಣೀರು ಸುರಿಸುವ ಪ್ರಕ್ರಿಯೆಯಲ್ಲ... ಎಷ್ಟೋ ಬಾರಿ ನಾನು ಚೆನ್ನಾಗಿದ್ದೇನೆ ಎಂದು ನಕ್ಕು ಹೇಳುವವರ, ತಮಾಷೆ ಮಾಡುತ್ತಿರುವವರ ಧ್ವನಿಯನ್ನು ನೋಡಿಯೂ ಗುರುತಿಸಬಹುದು ಆದರೆ ಹೇಳಲು ಆಗುವುದಿಲ್ಲ..... ಕಾರಣ ಅವರು ತಮ್ಮ ಮನದ ಆಳವನ್ನು ಯಾರಿಗೂ ಬಿಚ್ಚಿ ತೋರಿಸುವುದಿಲ್ಲ.
ಕೋಣೆಯ ತುಂಬಾ ಬೆಳಕನ್ನು ಅವರು ಹೊಂದಿದ್ದರೂ ಅವರ ಮನದ ಮೂಲೆ ಅಂಧಕಾರದಿಂದ ತುಂಬಿರುತ್ತದೆ. ಉಳಿದೆಲ್ಲರೊಂದಿಗೆ ತೋರಿಕೆಯ ಮಾತನಾಡುತ್ತಿದ್ದರೂ ಮನದ ಆಳದಲ್ಲಿ ಅವರು ಒಬ್ಬಂಟಿಯಾಗಿರುತ್ತಾರೆ.
ಅವರಿಗೆ ನಿಜವಾಗಿಯೂ ನಿಮ್ಮ ಅವಶ್ಯಕತೆ ಇಲ್ಲ ಎಂಬಂತೆ ಅತ್ಯಂತ ಕ್ರೂರವಾಗಿ ಅವರು ವರ್ತಿಸಬಹುದು ಆದರೆ ಅವರಿಗೆ ನಿಮ್ಮ ಅವಶ್ಯಕತೆ ಇದ್ದೇ ಇರುತ್ತದೆ... ಅವರ ಕುರಿತು ಕೊಂಚ ಕಾಳಜಿ ಇರಲಿ.
ನಿಮಗೆ ಅತ್ಯಂತ ಬಲಿಷ್ಠ ಎಂದು ತೋರುವ ಸ್ನೇಹಿತರೇ ಇರಲಿ ಅಥವಾ ಅತ್ಯಂತ ಸೂಕ್ಷ್ಮ ಮನಸ್ಥಿತಿಯ ಸ್ನೇಹಿತರೇ ಇರಲಿ ಅವರನ್ನು ಗಮನಿಸುತ್ತಿರಿ.
ಖಿನ್ನತೆಯ ಲಕ್ಷಣಗಳು ಎಲ್ಲರಿಗೂ ಎಲ್ಲಾ ಸಮಯದಲ್ಲಿಯೂ ಒಂದೇ ರೀತಿ ಇರುವುದಿಲ್ಲ ಆದರೆ ಈ ಲಕ್ಷಣಗಳು ಮಾತ್ರ ಅವರಲ್ಲಿ ಕಂಡುಬರುತ್ತದೆ.
* ಯಾವಾಗಲೂ ಅತ್ಯಂತ ಕಡಿಮೆ ಉತ್ಸಾಹದ ಮನಸ್ಥಿತಿ... ಇಲ್ಲವೇ ಏನನ್ನೋ ಕಳೆದುಕೊಂಡ ಭಾವ. ಯಾವುದರಲ್ಲೂ ಆಸಕ್ತಿ ಇರುವುದಿಲ್ಲ. ಸದಾ ದಣಿವು ಹಾಗೂ ಉತ್ಸಾಹ ಹೀನತೆಯನ್ನು ತೋರುತ್ತಾರೆ.. *ಪ್ರತಿಯೊಂದು ವಿಷಯಕ್ಕೂ ನಕಾರಾತ್ಮಕವಾಗಿ ಅವರ ಧೋರಣೆ ಇರುತ್ತದೆ. ಪ್ರತಿ ಒಳ್ಳೆಯ ವಿಷಯದಲ್ಲಿಯೂ ಕೂಡ ಅವರಿಗೆ ಒಂದು ಕುಹಕ, ಅನುಮಾನ ಇದ್ದೇ ಇರುತ್ತದೆ. ತಮ್ಮ ಕುರಿತು ತಾವು ಅತ್ಯಂತ ಕೀಳರಿಮೆಯಿಂದ ಬಳಲುತ್ತಾರೆ. ನಾವು ಅಯೋಗ್ಯ ಎಂಬ ಭಾವ ಅವರನ್ನು ಕಾಡುತ್ತಿರುತ್ತದೆ.
* ಒಮ್ಮೊಮ್ಮೆ ವಾರಗಟ್ಟಲೆ ಎಲ್ಲರಿಂದಲೂ ಕಣ್ಮರೆಯಾಗುವ ಅವರು ನಿಗೂಢವಾಗಿ ವರ್ತಿಸುತ್ತಾರೆ.
*ಅವರ ನಿದ್ರೆಯ ಸೈಕಲ್ ಬದಲಾಗುತ್ತದೆ. ಹಸಿವು ಕೂಡ ಅವರಿಂದ ದೂರವಾಗುತ್ತದೆ.
ಕೆಲವೊಮ್ಮೆ ಖಿನ್ನತೆಯಿಂದ ಅತಿಯಾಗಿ ತಿನ್ನುವ ಚಟವನ್ನು ಬೆಳೆಸಿಕೊಂಡರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ ಏನೂ ತಿನ್ನದೇ ಉಳಿಯುತ್ತಾರೆ. ಊಟ, ನಿದ್ರೆ, ದಿನಚರಿಗಳು ಏರುಪೇರಾಗಿರುತ್ತವೆ. ವಿಪರೀತ ತೂಕ ಹೆಚ್ಚಾಗುತ್ತದೆ ಇಲ್ಲವೇ ಅತ್ಯಂತ ಕಡಿಮೆಯಾಗುತ್ತದೆ.
ನಿದ್ರೆ ಕೂಡ ಅಷ್ಟೇ ನಿದ್ರಾ ರಾಹಿತ್ಯತೆ (ಇನ ಸೋಮ್ನಿಯಾ) ಉಂಟಾಗಬಹುದು ಇಲ್ಲವೇ ಅತಿಯಾಗಿ ನಿದ್ರಿಸಬಹುದು ( ಹೈಪರ್ ಸೋಮ್ನಿಯಾ)
* ಯಾವುದೇ ವಿಷಯದಲ್ಲಿ ಆಸಕ್ತಿ ಹಾಗೂ ಗಮನ ವಹಿಸಲು ಸಾಧ್ಯವಾಗುವುದಿಲ್ಲ.
* ಸದಾ ಕಿರಿಕಿರಿಯ ಮನಸ್ಥಿತಿ ಹಾಗೂ ಆತ್ಮಹತ್ಯೆಯ ಯೋಚನೆಗಳು ಅವರನ್ನು ಕಾಡುತ್ತಿರುತ್ತವೆ. ಆತಂಕ, ನೋವು, ಸಂಕಟಗಳು ಒಳಗಿಂದೊಳಗೆ ಅವರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಇದು ಈಗಾಗಲೇ ಹದಗೆಟ್ಟು ಹೋಗಿರುವ ಅವರ ಮನಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿ ಅವರ ವೈಯಕ್ತಿಕ ಬದುಕಿನಲ್ಲಿ ಏರುಪೇರನ್ನು ಉಂಟುಮಾಡುತ್ತದೆ.
ಈ ಸಮಯದಲ್ಲಿ ನುರಿತ ತಜ್ಞ ವೈದ್ಯರ ಚಿಕಿತ್ಸೆ ಮತ್ತು ಸೌಲಭ್ಯಗಳು ಅವರಿಗೆ ಅತ್ಯವಶ್ಯಕವಾಗಿರಲೇಬೇಕು.
ವರ್ತನಾ ವಿಧಾನ ಹಾಗೂ ಭಾವನಾತ್ಮಕ ಲಕ್ಷಣಗಳು.
*ಸದಾ ಕಾಡುವ ದುಃಖ, ನೋವು ತುಂಬಿದ ಭಾವ, ಕಣ್ಣೀರು ಹಾಗೂ ಆತಂಕದ ಬದುಕು.
ಎಲ್ಲದರಲ್ಲಿಯೂ ಕಳೆದು ಹೋದ ಆಸಕ್ತಿ. ಈ ಮುಂಚಿನಂತೆ ಯಾವುದೇ ರೀತಿಯ ಹವ್ಯಾಸಗಳಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಂಡ ಭಾವ. ಲೈಂಗಿಕ ಆಸಕ್ತಿ ಕೂಡ ಕುಂಠಿತವಾಗಿದ್ದು ಅಶಾಂತಿಯ ಭಾವ, ದಣಿದ ಮನಸ್ಥಿತಿ ಹಾಗೂ ಹೆಚ್ಚಿದ ಕೋಪ, ಹತಾಶೆ ಹಾಗೂ ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಂಡ ಭಾವ ಸದಾ ಕಾಡುತ್ತಿರುತ್ತದೆ.
ಭವಿಷ್ಯದ ಬಗ್ಗೆ ನಿರಾಶಾದಾಯಕ ದೃಷ್ಟಿಕೋನ.
ವಿಪರೀತ ಅಪರಾಧ ಪ್ರಜ್ಞೆ,
*ತಮ್ಮನ್ನು ತಾವೇ ಕೀಳಾಗಿ ಭಾವಿಸುವುದು ಹಾಗೂ ಈ ಹಿಂದಿನ ತಮ್ಮ ವೈಫಲ್ಯಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಅವು ಹಾಗೆಯೇ ಉಳಿದುಬಿಡುತ್ತದೆ ಎಂದು ಭಾವಿಸುವುದು ಈ ತೊಂದರೆಯ ತೀವ್ರತೆಯ ಲಕ್ಷಣಗಳು.
*ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಹೋಗುವುದು. ದೈಹಿಕ ನೋವುಗಳನ್ನು ಕುರಿತು ಹೇಳುವುದು. ಮತ್ತೆ ಕೆಲವೊಮ್ಮೆ ಎಲ್ಲಿ ನೋವಾಗುತ್ತಿದೆ ಎಂಬುದೇ ಅರಿವಾಗದಂತಹ ಪರಿಸ್ಥಿತಿ, ಕೈ ಕಾಲುಗಳ ಸೆಳೆತ ಮುಂತಾದವುಗಳನ್ನು ಹೇಳುವುದು
ಸದಾ ಜನರಿಂದ ದೂರವಿರಲು ಬಯಸುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ.
ಇದಲ್ಲದೆ ಖಿನ್ನತೆಯ ತೀವ್ರತೆ ಹೆಚ್ಚಾದರೆ ಆತ್ಮಹತ್ಯೆಯ ಯೋಚನೆಗಳು ಸಾವಿನ ಯೋಚನೆ ಇಲ್ಲವೇ ತನಗೆ ತಾನೇ ತೊಂದರೆ ಮಾಡಿಕೊಳ್ಳುವ ಮೂಲಕ ನೋವನ್ನು ಅನುಭವಿಸುವುದು.
ತಾವು ಕೆಲಸ ಮಾಡುವ ಸ್ಥಳದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಹೋಗುವುದು. ಪಾರಿವಾರಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಸಂಬಂಧಗಳನ್ನು ನಿಭಾಯಿಸಲು ಸಾಧ್ಯವಾಗದಿರುವುದು ಖಿನ್ನತೆಯ ವಿಪರೀತ ಲಕ್ಷಣಗಳು.ಸ್ನೇಹಿತರೆ! ಖಿನ್ನತೆ ಎಂಬುದು ಗೆದ್ದಲು ಹಿಡಿದ ಮರದಂತೆ ವ್ಯಕ್ತಿಯನ್ನು ಒಳಗಿಂದೊಳಗೆ ಮೇಯುವ ಒಂದು ಕಾಯಿಲೆ ಅಲ್ಲದ ಕಾಯಿಲೆ... ಮಾನಸಿಕ ಅಸಮತೋಲನ.
ಸೂಕ್ತವಾದ ಸಮಯದಲ್ಲಿ ಅವರನ್ನು ಗಮನಿಸಿ ನುರಿತ ಸಮಾಲೋಚಕರೊಂದಿಗೆ ಮಾತನಾಡುವ ಮೂಲಕ ಆರಂಭದಲ್ಲಿಯೇ ಅದರ ಮೂಲಬೇರನ್ನು ಚಿವುಟಿ ಹಾಕಬಹುದು..ಅರೆ! ನನಗೆ ಏನು ಹುಚ್ಚು ಹಿಡಿದಿದೆಯಾ ? ಮಾನಸಿಕ ತಜ್ಞ ವೈದ್ಯರ ಬಳಿ ಹೋಗಲು ಎಂದು ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿಯಾಗಲಿ ಅವರಿಗೆ ಸಂಬಂಧಪಟ್ಟವರಾಗಲಿ ಯೋಚಿಸಬಾರದು.
ದೇಹಕ್ಕೆ ಖಾಯಿಲೆಯಾದರೆ ವೈದ್ಯರ ಬಳಿ ಓಡುವುದಿಲ್ಲವೇ ಹಾಗೆ ಮನಸ್ಸಿಗೆ ಉಂಟಾಗುವ ಖಾಯಿಲೆಗೆ ಕೂಡ ಸೂಕ್ತ ಚಿಕಿತ್ಸೆ ಅತ್ಯವಶ್ಯಕ.
ಮನಸ್ಸಿಗೆ ಹಿಡಿದ ಗ್ರಹಣ ಮನುಷ್ಯನನ್ನು ಇನ್ನಿಲ್ಲದಂತೆ ಹಿಂಡಿ ಹಿಪ್ಪೆ ಮಾಡುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತು ಏನಂತೀರಾ ಸ್ನೇಹಿತರೆ?
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


