ಮಂಗಳೂರು: ನಗರದ ಕಾಸ್ಮೋಪಾಲಿಟನ್ ಕ್ಲಬ್ (ರಿ.) ವತಿಯಿಂದ ಫೆಬ್ರವರಿ 20ರಿಂದ ಮಾರ್ಚ್ 1ರವರೆಗೆ ಆಯೋಜಿಸಲಾದ ‘ಸ್ನೂಕರ್ & ಬಿಲಿಯರ್ಡ್ಸ್ ಇನ್ವಿಟೇಶನಲ್ ಟೂರ್ನಮೆಂಟ್’ನಲ್ಲಿ ಬಿಲಿಯರ್ಡ್ಸ್ ವಿಭಾಗದಲ್ಲಿ ಐ.ಎಚ್. ಮನುದೇವ್ 400-242 ಅಂತರದಿಂದ ಕ್ಷಿತಿಜ್ ಗಾರ್ಗ್ ಅವರನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಫೈನಲ್‌ನಲ್ಲಿ ಮನುದೇವ್ 101 ಅಂಕಗಳ ಅತ್ಯುನ್ನತ ಬ್ರೇಕ್ ದಾಖಲಿಸಿ ತಮ್ಮ ಕೌಶಲ್ಯ ಮತ್ತು ಅನುಭವದ ಮೆರಗು ತೋರಿಸಿದರು. ಕ್ಷಿತಿಜ್ ಗಾರ್ಗ್ ರನ್ನರ್-ಅಪ್ ಪಟ್ಟಿಗೆ ತೃಪ್ತಿಪಟ್ಟರು.
ಅದೇ ಟೂರ್ನಿಯ ‘ಬೆಸ್ಟ್ ಆಫ್ 7’ ಸ್ನೂಕರ್ ಫೈನಲ್‌ನಲ್ಲಿ ಸೀನ್ ಡೇವಿಸ್ 4-3 ಅಂತರದಿಂದ ಎಂ. ಯೋಗೇಶ್ ಕುಮಾರ್ ಅವರನ್ನು ಸೋಲಿಸಿ ಕಿರೀಟ ತಮ್ಮದಾಗಿಸಿಕೊಂಡರು. ಆರಂಭದಿಂದ ಅಂತ್ಯವರೆಗೆ ಕುತೂಹಲ ಮೂಡಿಸಿದ ಈ ಹಣಾಹಣಿಯಲ್ಲಿ ಸೀನ್ 62 ಅಂಕಗಳ ಅತ್ಯುನ್ನತ ಬ್ರೇಕ್ ಸಾಧಿಸಿದ್ದು ವಿಶೇಷ. ಅವರಿಂದ 53 ಅಂಕಗಳ ಮತ್ತೊಂದು ಗಮನಾರ್ಹ ಬ್ರೇಕ್ ಕೂಡ ದಾಖಲಾಗಿದೆ. ಇತ್ತ ಯೋಗೇಶ್ ಕುಮಾರ್ 61 ಅಂಕಗಳ ಉತ್ತಮ ಬ್ರೇಕ್ ಹೊಡೆದು ಪೈಪೋಟಿ ನೀಡಿದರು. ಫ್ರೇಮ್‌ಗಳ ವಿವರ: 28-88(56), 70(62)-24, 16-70, 55-30, 75(62)-23, 39-65, 66-33.
ಮಂಗಳೂರಿನ ಕಾಸ್ಮೋಪಾಲಿಟನ್ ಕ್ಲಬ್‌ನಲ್ಲಿ ನಡೆದ ಈ ರಾಜ್ಯ ಮಟ್ಟದ ಸ್ಪರ್ಧೆ ಕ್ಯೂ ಸ್ಪೋರ್ಟ್ಸ್ ಅಭಿಮಾನಿಗಳಿಗೆ ಕ್ರೀಡಾ ಹಬ್ಬದಂತಾಗಿತ್ತು. ಬಿಲಿಯರ್ಡ್ಸ್ ವಿಭಾಗದಲ್ಲಿ ಮನುದೇವ್ ಅವರ ಸಮತೋಲನದ ಹಾಗೂ ತಂತ್ರಜ್ಞಾನದ ಆಟ ಗಮನಸೆಳೆದರೆ, ಸ್ನೂಕರ್ ವಿಭಾಗದಲ್ಲಿ ಸೀನ್ ಡೇವಿಸ್ ಮತ್ತು ಯೋಗೇಶ್ ಕುಮಾರ್ ನಡುವಿನ ಸಮಬಲದ ಪೈಪೋಟಿ ಪ್ರೇಕ್ಷಕರನ್ನು ಕುತೂಹಲದಲ್ಲಿಟ್ಟಿತು.
ಸ್ನೂಕರ್ ಫೈನಲ್ ಆರಂಭದಲ್ಲೇ ಯೋಗೇಶ್ ಕುಮಾರ್ 56 ಅಂಕಗಳ ಬ್ರೇಕ್ ಹೊಡೆದು ಬಲಿಷ್ಠ ಮುನ್ನಡೆ ಸಾಧಿಸಿದರೂ, ಸೀನ್ ಡೇವಿಸ್ ಮಧ್ಯಂತರದಲ್ಲಿ ಲೆಕ್ಕಾಚಾರದ ಆಟದಿಂದ ಪಂದ್ಯವನ್ನು ತಿರುಗಿಸಿಕೊಂಡರು. ನಿರ್ಣಾಯಕ ಕ್ಷಣಗಳಲ್ಲಿ ಆತ್ಮವಿಶ್ವಾಸ ಕಾಪಾಡಿಕೊಂಡ ಸೀನ್ ಕೊನೆಯ ಫ್ರೇಮ್‌ನಲ್ಲಿ 66-33 ಅಂತರದ ಜಯ ಸಾಧಿಸಿ ಪ್ರಶಸ್ತಿಯನ್ನು ಖಚಿತಪಡಿಸಿಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಅದಾನಿ ಗ್ರೂಪ್ ದಕ್ಷಿಣ ಭಾರತ ಅಧ್ಯಕ್ಷ ಕಿಶೋರ್ ಕುಮಾರ್, ಡಾ. ಎ ಸದಾನಂದ ಶೆಟ್ಟಿ, ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಕ್ಲಬ್‌ನ ಉಪಾಧ್ಯಕ್ಷರಾದ ಸುರೇಶ್ ಚಂದ್ರ ಶೆಟ್ಟಿ, ರಾಜಗೋಪಾಲ್ ರೈ, ಕಾರ್ಯದರ್ಶಿ ಎಂ.ಸಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಶೆಟ್ಟಿ, ಕೋಶಾಧಿಕಾರಿ ದೇವಿಚರಣ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಯೋಗೀಶ್ ಕುಮಾರ್, ಸಂಚಾಲಕ- ಪ್ರಸಾದ್ ರೈ ಕಲ್ಲಿಮಾರ್, ಕಾರ್ಯಕಾರಿ ಸಮಿತಿ ಸದಸ್ಯ ಸಿ ಮನೋಜ್ ಕುಮಾರ್, ಉದಯಶಂಕರ್ ರೈ, ಪ್ರದೀಪ್ ರೈ, ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಟೂರ್ನಮೆಂಟ್ ಅಧ್ಯಕ್ಷರಾದ ರಾಜಗೋಪಾಲ್ ರೈ ಮತ್ತು ಕಾರ್ಯದರ್ಶಿ ಯೋಗೀಶ್ ಕುಮಾರ್ ಅವರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


