ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಾರಂಭೋತ್ಸವ

Upayuktha
0

ದೇವಾಲಯಗಳಿಂದ ದಿಗ್ವಿಜಯ ಸಾಧ್ಯತೆಗಳ ವಿಸ್ತರಣೆ: ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ




ಉಜಿರೆ, ಮಾರ್ಚ್ 2: ಪಾರಮಾರ್ಥಿಕ ಜಯ ಮತ್ತು ಲೌಕಿಕ ವಿಜಯದ ಸಾಧ್ಯತೆಗಳನ್ನು ವಿಸ್ತರಿಸುವ ಮಹತ್ವದ ಕೇಂದ್ರಗಳಾಗಿ ದೇವಾಲಯಗಳು ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಮೌಲಿಕ ಕೊಡುಗೆಗಳನ್ನು ನೀಡುತ್ತಿವೆ ಎಂದು ಉಡುಪಿಯ ಹಂಗಾರಕಟ್ಟೆಯ ಶ್ರೀ ಬಾಳೆಕುದ್ರುಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟರು.


ಅವರು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ 'ಸುಶಾಸನ' ಆಡಳಿತ ಕಾರ್ಯಾಲಯ ಮತ್ತು 'ಸುವಾಸ' ತಂತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದರು.


ಪ್ರಹ್ಲಾದ ಚರಿತ್ರೆಯಲ್ಲಿ ಪ್ರಸ್ತಾಪಿತವಾಗುವ ಜಯ ಮತ್ತು ವಿಜಯರು ಮಹಾವಿಷ್ಣುವಿನ ದ್ವಾರಪಾಲಕರು. ಇವರಿಬ್ಬರೂ ಪಾರಮಾರ್ಥಿಕ ಮತ್ತು ಲೌಕಿಕ ದಿಗ್ವಿಜಯದ ಸಂಕೇತವಾಗಿ ಪೌರಾಣಿಕ ಕಥನಗಳಲ್ಲಿ ವಿಶೇಷ ಪಾತ್ರ ವಹಿಸಿದ್ದಾರೆ. ಭಾರತದ ದೇವಾಲಯದ ಪರಂಪರೆ ಪಾರಮಾರ್ಥಿಕ ಮತ್ತು ಲೌಕಿಕ ಜಗತ್ತಿನ ಸಾಧನೆಯ ಹೆಜ್ಜೆಗಳನ್ನು ನಿಖರಗೊಳಿಸಿದ ಹಿನ್ನೆಲೆಯನ್ನು ಹೊಂದಿದೆ. ಇದರ ವಿಸ್ತರಣೆಯ ದ್ಯೋತಕವಾಗಿ ಉಜಿರೆಯ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಅಸ್ಮಿತೆಯನ್ನು ಗಮನಿಸಬೇಕು. ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭವು ಈ ವಿಶೇಷತೆಯನ್ನು ಮನಗಾಣಿಸುತ್ತದೆ ಎಂದು ಹೇಳಿದರು.



ದೇವಸ್ಥಾನವು ಮನುಷ್ಯನ ಶರೀರ ಇದ್ದ ಹಾಗೆ. ಭೌತಿಕ ಮತ್ತು ಮಾನಸಿಕ ಆರೋಗ್ಯಕರ ಶಕ್ತಿಯನ್ನು ಆವಾಹಿಸಿಕೊಳ್ಳುವುದಕ್ಕೆ ದೇವಾಲಯಗಳು ನೆರವಾಗುತ್ತವೆ. ಶ್ರೀ ಜನಾರ್ದನಸ್ವಾಮಿ ದೇವಳದ 'ವಿಜಯ ಗೋಪುರ'ವು ಇಲ್ಲಿಯ ದೈವಿಕ ವೈಶಿಷ್ಟ್ಯತೆಯ ಸಂಕೇತ ಮಾತ್ರವಲ್ಲ, ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸುಸ್ಥಿರತೆಗೆ ಪೂರಕವಾಗುವ ದೈವೀಶಕ್ತಿಯ ಸಂಚಲನೆಯ ದ್ಯೋತಕವೂ ಹೌದು ಎಂದು ಅರ್ಥೈಸಿದರು.


ಜನರೆಲ್ಲರೂ ತಮ್ಮ ಸಂಕಟಗಳೆಲ್ಲದರಿAದ ವಿಮುಕ್ತವಾಗುವುದಕ್ಕೆ ನೆರವಾಗಲು ಮಹಾತ್ಮರು ದೇವಸ್ಥಾನದ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಭಾರತೀಯ ಸನಾತನ ಚಿಂತನೆಯ ಜನಪರ ಸ್ವರೂಪವನ್ನು ನಿರೂಪಿಸುವಂತೆಯೇ ನಮ್ಮ ಭಾರತೀಯ ದೇವಾಲಯಗಳು ರೂಪುಗೊಂಡಿವೆ. ಅನ್ನದಾನ, ವೇದ ಮಂತ್ರಗಳ ಪಾರಾಯಣ ಮತ್ತು ಆಚಾರ್ಯರ ತಪಸ್ಸುಗಳ ಮೂಲಕ ದೈವಿಕ ಸನ್ನಿಧಾನದ ಸಾಕ್ಷಾತ್ಕಾರವಾಗಿದೆ. ಈ ದೃಷ್ಟಿಯಿಂದ ದೇವಾಲಯಗಳು ಭಾರತದ ಜನಮಾನಸದ ವಿಶೇಷ ಗೌರವಾದರಗಳಿಗೆ ಪಾತ್ರವಾಗಿವೆ ಎಂದರು.


ಬೆಂಗಳೂರಿನ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಅವರು 'ಸುರುಚಿ' ಪಾಕಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು. ಅನ್ನದಾನ ಪರಿಕಲ್ಪನೆಯ ಕಾರಣಕ್ಕಾಗಿಯೇ ಭಾರತೀಯ ಧಾರ್ಮಿಕ ಪರಂಪರೆ ಜಾಗತಿಕ ಮಟ್ಟದಲ್ಲಿ ವಿಶೇಷ ಆದ್ಯತೆ ಪಡೆದುಕೊಂಡಿದೆ. ಅನ್ನವನ್ನು ಹಂಚಿ ತಿನ್ನಬೇಕು. ಸಹಭೋಜನ ಆಗಬೇಕು. ಸಾಧು ಸಂತರಿಗೆ ಅರ್ಪಿಸಲ್ಪಡಬೇಕು. ಆಧ್ಯಾತ್ಮವೂ ಸೇರಿದಂತೆ ಸಾಧನೆಯ ಯಾನ ಕೈಗೊಳ್ಳುವವರಿಗೆ ಭಾರತದಲ್ಲಿ ಅನ್ನದಾನದ ಸೇವಾ ಲಭ್ಯತೆಯ ಕಾರಣಕ್ಕಾಗಿ ಭೋಜನ ಸಮಸ್ಯೆ ಎದುರಾಗುವುದಿಲ್ಲ. ಅನ್ನದ ಹಿಂದೆ ಕೃಷಿಕರ ಶ್ರಮ ಈ ರೀತಿಯಲ್ಲಿ ಸಾರ್ಥಕ್ಯ ಪಡೆದುಕೊಳ್ಳುತ್ತದೆ ಎಂದರು.



ಸೂರ್ಯದ ಶ್ರೀ ಸದಾಶಿವರುದ್ರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸೂರ್ಯಗುತ್ತು 'ಸುರಭಿ' ಬ್ರಹ್ಮಕಲಶೋತ್ಸವ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಸೂರ್ಯದೇವಸ್ಥಾನ ಹಾಗೂ ಜನಾರ್ದನ ದೇವಸ್ಥಾನಗಳ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಕೀರ್ತಿಶೇಷ ವಿಜಯ ರಾಘವ ಪಡ್ವೆಟ್ನಾಯರ ಕನಸಾಗಿದ್ದ ವಿರಾಜಗೋಪುರ ಸ್ಥಾಪನೆ ಇಂದು ನೆರವೇರಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ರಾಜಗೋಪುರ ನಿರ್ಮಾಣವು ವಿಜಯ, ಸಾತ್ವಿಕತೆ ಹಾಗೂ ದೃಢಸಂಕಲ್ಪದ ಪ್ರೇರಣೆಯಿಂದ ಸಾಧ್ಯವಾಗಿದ್ದು, ದೇವಸ್ಥಾನದ ಪ್ರತಿಯೊಂದು ಭಾಗವೂ ಸೃಜನಶೀಲತೆಯಿಂದ ನಿರ್ಮಾಣಗೊಂಡಿದೆ. ಈ ಸಾಧನೆ ವಿಶೇಷಅಭಿನಂದನೆಗೆ ಪಾತ್ರವಾಗಿದೆಎಂದುಅವರು ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್ ವಹಿಸಿದ್ದರು. ಭಾರತದ ಆತ್ಮವೇ ಆಧ್ಯಾತ್ಮವಾಗಿದ್ದು, ಭಗವಂತನ ಸ್ಮರಣೆ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಯುವುದಿಲ್ಲ. ಪ್ರತಿಯೊಂದು ಕಾರ್ಯದ ಹಿಂದೆ ದೈವಿಕ ನಿರ್ವಹಣೆ ಮತ್ತು ಪ್ರೇರಣೆ ಅಡಗಿದೆ ಎಂದು ಅವರು ಹೇಳಿದರು. ಪಡ್ವೆಟ್ನಾಯರ ಕುಟುಂಬದ ಮೇಲೆ ದೇವರ ಅನುಗ್ರಹವಿದೆ ಎಂದರು. ಧರ್ಮಸ್ಥಳ ಹಾಗೂ ಉಜಿರೆಯ ನಡುವೆ ಅವಿನಾಭಾವ ಸಂಬಂಧವಿದ್ದು, ಊರಿನವರು ಒಟ್ಟಾಗಿ ಕೆಲಸ ಮಾಡುತ್ತಿರುವುದು ಭಗವಂತನ ಪ್ರೇರಣೆಯ ಫಲವಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ..ಬಿ.ಸಿ. ಟ್ರಸ್ಟ್ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಅನಿಲ್ ಕುಮಾರ್ ಎಸ್., ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ, ಉಜಿರೆ ಇದರ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಶರತ್‌ಕೃಷ್ಣ ಪಡ್ವೆಟ್ನಾಯರು ಉಪಸ್ಥಿತರಿದ್ದರು.


ಶರತ್‌ಕೃಷ್ಣ ಪಡ್ವೆಟ್ನಾಯರು ಸ್ವಾಗತಿಸಿದರು. ರಾಜಗೋಪುರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಸುರಭಿ ವಂದಿಸಿದರು. ಎಸ್. ಡಿ. ಎಂ ಸನಿವಾಸ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರು ಸುನೀಲ್ ಪಂಡಿತ್ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top