ಬೆಂಗಳೂರು: ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ.
ಇಂದಿನ ಶಿಷ್ಟ ಕನ್ನಡದ ಭಿನ್ನವಾಗಿ ಹಳಗನ್ನಡದ ಭಾಷಾ ರೂಪಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದೆ. ಇದು ಕನ್ನಡದ ಇತರ ಉಪಭಾಷೆಗಳ ಕಳೆದುಹೋಗಿರುವ ಹಳೆ ಕನ್ನಡದ ಅನೇಕ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡಿದೆ.
ಹವ್ಯಕ ಕನ್ನಡವು ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ ಹವ್ಯಕರ ಮನೆ ಮಾತಾಗಿದೆ. ಇಂದು ಕನ್ನಡದಲ್ಲಿ ಆರು ಲಕ್ಷಕ್ಕೂ ಅಧಿಕ ಜನ ಹವ್ಯಕ ಕನ್ನಡವನ್ನು ಮಾತಾಡುತ್ತಾರೆ.
ಕನ್ನಡ ಭಾಷೆ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯವಾಗಿದ್ದು, ಇದುವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿಯೂ ಕಂಡುಬರುವ ಕೆಲವು ಆದಿ-ದ್ರಾವಿಡ ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ. ಆದ್ದರಿಂದ ಹವಿಗನ್ನಡದ ಅಮೂಲಾಗ್ರ ಅಧ್ಯಯನ ಹಾಗ ಸಂರಕ್ಷಣೆಗಾಗಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆ ಅತ್ಯಗತ್ಯವಾಗಿದೆ.
ಇದನ್ನು ಮನಗಂಡು, ಈ ವಿಶಿಷ್ಟ ಮತ್ತು ಅಪರೂಪದ ಭಾಷೆಯ ಅಧ್ಯಯನ, ಅಭಿವೃದ್ಧಿ ಮತ್ತು ಸಂರಕ್ಷಣೆ ದೃಷ್ಟಿಯಿಂದ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಘೋಷಿದ್ದಾರೆ.
ಹೆಸರಾಂತ ಪತ್ರಕರ್ತ, ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಈ ಘೋಷಣೆಯನ್ನು ಸ್ವಾಗತಿಸಿದ್ದು, ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮಸ್ತ ಹವ್ಯಕರ ಪರವಾಗಿ ಹಾರ್ದಿಕವಾಗಿ ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

