ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ಬ್ರಹ್ಮಕಲಶೋತ್ಸವ ವೈಭವದಿಂದ ನಡೆಯಲಿದೆ. ಏ. 7ರಂದು ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥಗಳನ್ನು ಸಂಗ್ರಹಿಸಿ ಅಭಿಷೇಕ ನಡೆಯುವುದು ವಿಶೇಷ. ಗಂಗಾ, ಯಮುನಾ, ಸರಸ್ವತಿ, ನರ್ಮದಾ ಸೇರಿದಂತೆ 11 ನದಿಗಳ ತೀರ್ಥಗಳ ಭವ್ಯ ಮೆರವಣಿಗೆ March 30ರಂದು ಉಪ್ಪಿನಂಗಡಿಯ ಸಂಗಮ ಕ್ಷೇತ್ರದಿಂದ ಪ್ರಾರಂಭವಾಗಿ ಪುತ್ತೂರು ಹಾಗೂ ವಿಟ್ಲ ದೇವಾಲಯಗಳ ಮೂಲಕ ಪದ್ಯಾಣ ತಲುಪಲಿದೆ.
ಕ್ಷೇತ್ರದ ವೈಶಿಷ್ಟ್ಯ
ಸಪರಿವಾರ ಶ್ರೀ ಮಹಾಲಿಂಗೇಶ್ವರನನ್ನು ಭಕ್ತಿಯಿಂದ ಆರಾಧಿಸಿದರೆ ವಿದ್ಯೆ, ಆರೋಗ್ಯ, ಉದ್ಯೋಗ, ವಿವಾಹ ಹಾಗೂ ಸಂತಾನ ಭಾಗ್ಯ ಸೇರಿದಂತೆ ವಿವಿಧ ಮನೋವಾಂಛೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಶಿವ-ಶಕ್ತಿ ಸಂಯುಕ್ತ ಆರಾಧನೆಯ ಕೇಂದ್ರವಾಗಿರುವ ಈ ಕ್ಷೇತ್ರದಲ್ಲಿ ಶ್ರೀಚಕ್ರ ಪೂಜೆ ವಿಶೇಷ ಮಹತ್ವ ಪಡೆದಿದೆ.
ಪದ್ಯಾಣ ಪ್ರದೇಶವು ಸಂಸ್ಕೃತಿ, ಸಂಗೀತ, ಯಕ್ಷಗಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಪ್ರಸಿದ್ಧಿ ಪಡೆದಿದ್ದು, ಸ್ಥಳೀಯರ ಆತಿಥ್ಯ ಸಂಪ್ರದಾಯವೂ ಗಮನಾರ್ಹವಾಗಿದೆ.
ಇತಿಹಾಸದ ನೋಟ
ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವು 1975ರಲ್ಲಿ ಪುನರ್‌ನಿರ್ಮಾಣಗೊಂಡು ಬ್ರಹ್ಮಕಲಶಾಭಿಷೇಕ ನಡೆದಿತ್ತು. ನಂತರ 1994, 2006 ಮತ್ತು 2009ರಲ್ಲಿ ವಿವಿಧ ಧಾರ್ಮಿಕ ವಿಧಿಗಳು ಹಾಗೂ ಪುನಃ ಪ್ರತಿಷ್ಠಾ ಕಾರ್ಯಗಳು ನೆರವೇರಿವೆ. ಇದೀಗ ಅಷ್ಟಬಂಧ ಬ್ರಹ್ಮಕಲಶಾಭಿಷೇಕಕ್ಕಾಗಿ ಭವ್ಯ ಸಿದ್ಧತೆಗಳು ನಡೆಯುತ್ತಿವೆ.
ಸಾಂಸ್ಕೃತಿಕ ವೈಭವ
ಉತ್ಸವದ ಅವಧಿಯಲ್ಲಿ ಭಜನೆ, ಭಕ್ತಿ ಸಂಗೀತ, ಯಕ್ಷಗಾನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ಲಾಸ್ಟಿಕ್ ಬಳಕೆಗೆ ನಿರ್ಬಂಧ ಹೇರಲಾಗಿದ್ದು, ಬಿಲ್ವಪತ್ರೆ ಮತ್ತು ರುದ್ರಾಕ್ಷಿಯನ್ನು ಸ್ಮರಣಿಕೆಯಾಗಿ ನೀಡಲಾಗುತ್ತದೆ. “ಗ್ರಾಮಗೌರವ” ಪರಿಕಲ್ಪನೆಯಡಿ ಸ್ವಯಂಸೇವಕರಿಗೆ ಗೌರವ ನೀಡಲಾಗುವುದು.
ಗಣ್ಯರ ಆಗಮನ
ಉತ್ಸವದ ವಿವಿಧ ದಿನಗಳಲ್ಲಿ ಅನೇಕ ಮಠಾಧೀಶರು, ಸಂತರು, ನ್ಯಾಯಮೂರ್ತಿಗಳು, ಕೇಂದ್ರ ಮತ್ತು ರಾಜ್ಯ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


