ಶ್ರೀಕೃಷ್ಣನ ಒಂದು ಮಾತಿದೆ ಈ ಸಮಯ ಹೀಗೇ ಇರುವುದಿಲ್ಲ ಬದಲಾಗುತ್ತದೆ ಎಂದು. ಅದೇ ರೀತಿ, ಜೀವನ ಎನ್ನುವುದು ನಿಂತ ನೀರಲ್ಲ, ಬದಲಿಗೆ ಹರಿಯುತ್ತಿರುವ ಜಲಪಾತ. ಬದುಕು ಹೇಗಿರುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಪ್ರತೀ ದಿನವೂ ಒಂದೇ ರೀತಿಯಾಗಿ ಇರುತ್ತದೆ ಎಂದು ಯೋಚಿಸುವುದು ಮೂರ್ಖತನ. ಅದೆಷ್ಟೋ ಜನರ ಭ್ರಮೆ, ನಾವು ಜೀವನ ಪೂರ್ತಿ ಶ್ರೀಮಂತರು ಅಥವಾ ಬಡವರಾಗಿಯೇ ಇರುತ್ತೇವೆ ಎನ್ನುವಂತದ್ದು. ಅಂತಹ ಭ್ರಮೆಯಿಂದ ಹೊರ ಬಂದು, ಎಷ್ಟೇ ಕಷ್ಟಗಳು ಎದುರಾದರೂ ಅದನ್ನು ಮೆಟ್ಟಿ ಸಿಲ್ಲುವ ಛಲ ನಮ್ಮದಾಗಬೇಕು. ಅದರ ಹೊರತಾಗಿ ಸಾಯುವುದು ನಮ್ಮ ಕಷ್ಟಗಳಿಗೆ ಪರಿಹಾರವಾಗಿರಬಾರದು.
ಇತ್ತೀಚಿನ ದಿನಗಳಲ್ಲಂತೂ ಸಾವಿನ ಪ್ರಕರಣಗಳು ಮುಗಿಲು ಮುಟ್ಟುತ್ತಿವೆ. 2023 ರ ಎನ್.ಸಿ.ಆರ್.ಬಿ ವರದಿ ಪ್ರಕಾರ, ಭಾರತದಲ್ಲಿ ಒಟ್ಟು ಒಂದು ಲಕ್ಷದ ಎಪ್ಪತ್ತೊಂದು ಸಾವಿರದ ನಾಲ್ಕುನೂರ ಹದಿನೆಂಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ 72.8 ಶೇಕಡಾ ಪುರುಷರಾದರೆ, 27.2 ಶೇಕಡಾ ಮಹಿಳೆಯರು ಎಂದು ಅಧಿಕೃತವಾಗಿ ವರದಿ ಮಾಡಲಾಗಿದೆ. ಅದರಲ್ಲೂ ಮಕ್ಕಳ ಸಾವೇ ಹೆಚ್ಚಾಗಿದೆ. ಹೆತ್ತವರು ಅಥವಾ ಶಾಲೆಗಳಲ್ಲಿ ಶಿಕ್ಷಕರು ಏನಾದರು ರೇಗಿದರೆ ಸಾಕು ಅದನ್ನು ಸಹಿಸಿಕೊಳ್ಳಲಾಗದವರಂತೆ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಷ್ಟ ಬಂದರು ಅದನ್ನು ಯಾವ ರೀತಿ ಎದುರಿಸಬೇಕು ಎಂಬ ಜಾಣ್ಮೆ ಈಗಿನ ಮಕ್ಕಳಲ್ಲಂತೂ ಕಾಣದು. ಏಕೆಂದರೆ, ಈಗಿನ ಮಕ್ಕಳು ಜಾಲತಾಣಗಳಲ್ಲಿ ತಮ್ಮನ್ನು ಅಳವಡಿಸಿಕೊಂಡು ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಅದರಲ್ಲಿ ಏನಾದರೂ ತೊಂದರೆ ಮಾಡಿಕೊಂಡು ಅದರಿಂದ ಹೊರಬರಲಾಗದೆ ಜೀವ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪುತ್ತಾರೆ.
ಇದೊಂದು ರೀತಿಯಾದರೆ, ಕೆಲವೊಮ್ಮೆ ನಾವು ಅಂದುಕೊಂಡದ್ದು ಒಂದಾದರೆ, ನಮ್ಮ ಬದುಕಲ್ಲಿ ಆಗುವುದೇ ಇನ್ನೊಂದು. ಇಂತಹ ವಿಚಾರಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆದಿರುತ್ತದೆ. ಒಬ್ಬ ಶ್ರೀಮಂತ ತನ್ನಲ್ಲಿ ದುಡ್ಡಿದೆ ಎಂಬ ಅಹಂನಿಂದ ತಾನು ಯಾವತ್ತಿಗೂ ಶ್ರೀಮಂತನೇ ಎಂದು ಭಾವಿಸುತ್ತಾ ಮತ್ತು ಬಡವರನ್ನು ಕೀಳಾಗಿ ನೋಡುತ್ತನೇ ಇರುತ್ತಾನೆ. ಆದರೆ, ಈ ಶ್ರೀಮಂತಿಕೆ ಎನ್ನುವಂತದ್ದು ಎಲ್ಲಿಯವರೆಗೆ ಇರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ನಮ್ಮ ಬದುಕು ಯಾವಾಗ ಬೇಕಾದರೂ ತಿರುವನ್ನು ಕಾಣಬಹುದು. ಇಂದು ಇದ್ದ ಶ್ರೀಮಂತಿಕೆಯನ್ನು ಕಳೆದುಕೊಂಡು ಮುಂದೊಂದು ದಿನ ಆತ ಬಡವನಾದರೂ ಸಂಶಯವಿಲ್ಲ. ನಮ್ಮ ಜೀವನದಲ್ಲಿ ನಮ್ಮಿಂದ ಇನ್ನೊಬ್ಬರಿಗೆ ಎಷ್ಟು ಸಹಾಯವನ್ನು ಮಾಡಲಾಗುತ್ತದೋ ಅದನ್ನು ಮಾಡುತ್ತಲೇ ಇರಬೇಕು. ಕಾಲಚಕ್ರ ತಿರುಗುತ್ತಿರುತ್ತವೆ. ಹಾಗಾಗಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯದನ್ನೇ ಮಾಡಬೇಕು. ಯಾವುದೇ ಒಬ್ಬ ವ್ಯಕ್ತಿಯ ಅಹಂಕಾರವೂ ಒಂದಲ್ಲಾ ಒಂದು ದಿನ ಶಮನಗೊಳ್ಳಲೇಬೇಕು. ಜೀವನದಲ್ಲಿ ಸೋಲನ್ನೇ ನೋಡಿಕೊಂಡು ಬಂದ ವ್ಯಕ್ತಿಗೆ ಒಂದಲ್ಲಾ ಒಂದು ದಿನ ಜಯ ಸಿಕ್ಕೇ ಸಿಗುತ್ತದೆ. ಗೆಲುವು ಎನ್ನುವಂತದ್ದು ತಡವಾಗಬಹುದು. ಆದರೆ ಸಿಗಬೇಕಾದ ಸಮಯಕ್ಕೆ ಸಿಗುವುದಂತೂ ಸತ್ಯ.
ಹಾಗೆಯೇ ಜೀವನ ಎಂಬುದು ನಾವಂದುಕೊಂಡಂತೆ ಅಲ್ಲ. ಒಂದು ವಸ್ತುವನ್ನು ನಾವು ಇಷ್ಟ ಪಟ್ಟರೆ ಸಾಲದು. ಆ ವಸ್ತು ನಮ್ಮದೇ ಎಂಬುದು ನಮ್ಮ ಹಣೆಯಲ್ಲಿರಬೇಕು. ಏಕೆಂದರೆ, ಆ ವಸ್ತು ನಮ್ಮದಲ್ಲದೇ ಹೋದರೆ, ನಾವು ಎಷ್ಟೇ ಕಾಡಿ ಬೇಡಿದರೂ ಅದು ನಮಗೆ ಸಿಗುವುದಿಲ್ಲ. ಅದು ವಸ್ತುವೇ ಆಗಲಿ ಅಥವಾ ವ್ಯಕ್ತಿಯೇ ಆಗಲಿ. ನಮ್ಮದೆಂದಾದರೆ ಅದು ಯಾವತ್ತಿಗೂ ನಮ್ಮೊಂದಿಗೇ ಇರುತ್ತದೆ. ಅದಲ್ಲದೇ, ನಾವು ಏನನ್ನೇ ಸಾಧಿಸಬೇಕು ಎಂದುಕೊಂಡಿದ್ದರೂ ಅದರ ಹಿಂದೆ ನಮ್ಮ ಪರಿಶ್ರಮ ಮತ್ತು ಛಲ ಇದ್ದರೇ, ಅದನ್ನು ಹೇಗೆ ಬೇಕಾದರೂ ಸಾಧಿಸಲು ಸಾಧ್ಯ.
ಸಾಧನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಒಂದು ಮುಖ್ಯ ಭಾಗ. ನಾವು ಏನಾಗಬೇಕು ಎಂದು ಬಯಸುತ್ತೇವೋ ಅದರ ಕಡಗೆ ನಮ್ಮ ಗಮನವನ್ನು ಹೆಚ್ಚಾಗಿರಿಸಬೇಕು. ಬದುಕು ಬಂದಂತೆ ಸ್ವೀಕರಿಸು ಎಂಬ ಮಾತಿನಂತೆ, ಏನಾಗಬೇಕೋ ಅದು ಆಗೇ ಆಗುತ್ತದೆ. ಅದನ್ನು ಯಾರಿಂದಲೂ ಬದಲಾಯಿಸಲಾಗದು. ಹಾಗಾಗಿ ನಾವು ಯಾವಾಗ ಸ್ವಾರ್ಥ ಬಿಟ್ಟು ಬದುಕಲು ಪ್ರಾರಂಭಿಸುತ್ತೇವೋ, ಆಗ ನಮ್ಮ ಜೀವನ ಸುಂದರವಾದ ಹಾದಿಯಲ್ಲಿ ಸಾಗಲು ಸಾಧ್ಯವಾಗುವುದು.
- ಧನ್ಯಶ್ರೀ ಆಚಾರ್ಯ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


