ಉಜಿರೆ: ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿ-ಭಾವ ಮತ್ತು ಸಂಗೀತ ರಸದ ಸಂಯೋಜನೆಯಾಗಿ ಭವ್ಯವಾಗಿ ಮೂಡಿಬಂದವು. ಸುದರ್ಶನ ಸಭಾಭವನ ವೇದಿಕೆಯಲ್ಲಿ ನಡೆದ 'ದಾಸಾಮೃತ' ಭಕ್ತಿಗಾಯನ ಕಾರ್ಯಕ್ರಮ ಪ್ರೇಕ್ಷಕರ ಮನ ಸೆಳೆಯಿತು.
ಪುತ್ತೂರು ನರಸಿಂಹ ನಾಯಕ್ ಅವರಿಂದ ಪ್ರಸ್ತುತಪಡಿಸಲಾದ ದಾಸಪದಗಳ ಗಾಯನ ಭಕ್ತಿಭಾವಪೂರ್ಣವಾಗಿ ಮೂಡಿಬಂತು. ಅವರು 'ಗಜವದನ ಪಾಲಿಸೋ ತ್ರಿಜಗದೊಡೆಯ ಶ್ರೀ ಭುಜಗ ಭೂಷಣ' ಗೀತೆಯ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.
ನಂತರ 'ದಾಸರೆಂದರೆ ಪುರಂದರದಾಸರಯ್ಯ' ಎಂಬ ಭಕ್ತಿಗೀತೆಯ ಮೂಲಕ ಪುರಂದರದಾಸರ ಭಕ್ತಿ, ಸಮರ್ಪಣಾ ಮನೋಭಾವ ಮತ್ತು ಕೀರ್ತನೆಗಳ ಮಹತ್ವವನ್ನು ಶ್ರೋತೃಗಳಿಗೆ ಪರಿಚಯಿಸಿದರು.
ಹರಿದಾಸರಾದ ಶ್ರೀ ವಿಜಯದಾಸರ ರಚನೆಯಾದ 'ಪವಮಾನ ಜಗದ ಪ್ರಾಣ' ಗೀತೆಯನ್ನು ಮನಮುಟ್ಟುವಂತೆ ಹಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದರು.
ಪುರಂದರದಾಸರ ಪ್ರಸಿದ್ಧ ಕೃತಿ 'ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ' ಗೀತೆಯ ಮೂಲಕ ಲಕ್ಷ್ಮೀ ದೇವಿಯ ಮಹಿಮೆ, ಹರಿ ಮೇಲಿನ ಆಕೆಯ ಅನನ್ಯ ಭಕ್ತಿ ಮತ್ತು ಸೇವಾಭಾವವನ್ನು ಅರ್ಥಪೂರ್ಣವಾಗಿ ನಿರೂಪಿಸಿದರು.
ಇದೇ ವೇಳೆ 'ಜಗದೋದ್ಧಾರನ ಆಡಿಸಿದಳೆಶೋದಾ' ಗೀತೆಯ ಮೂಲಕ ತಾಯಿ ಮತ್ತು ಮಗುವಿನ ನಡುವಿನ ಅಪಾರ ಪ್ರೀತಿ ಹಾಗೂ ಯಶೋದೆಯು ಕೃಷ್ಣನನ್ನು ಸಲಹಿದ ಭಾವವನ್ನು ಮನೋಜ್ಞವಾಗಿ ವ್ಯಕ್ತಪಡಿಸಿದರು.
'ಏಸು ಕಾಯಂಗಳ ಕಳೆದು ಎಂಭತ್ತು ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ' ಗೀತೆಯ ಮೂಲಕ ಮಾನವ ಜೀವನದ ಜನನ-ಮರಣದ ತಾತ್ವಿಕ ಅರ್ಥವನ್ನು ವಿವರಿಸಿ ಪ್ರೇಕ್ಷಕರ ಮನಗೆದ್ದರು.
ಕೊನೆಯಲ್ಲಿ 'ಕಂಡೆನಾ ಗೋವಿಂದನ ಗೋವಿಂದನ ಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ' ಗೀತೆಯನ್ನು ಹಾಡುವುದರ ಮೂಲಕ ದಾಸವಾಣಿಯ ಭಕ್ತಿಗೀತೆಗಳ ರಸದೌತಣಕ್ಕೆ ಕಾರಣವಾಯಿತು.
ಕಾರ್ಯಕ್ರಮಕ್ಕೆ ಹಿನ್ನೆಲೆ ಸಂಗೀತವಾಗಿ ಕೀಬೋರ್ಡ್‍ನಲ್ಲಿ ಮಧುಸೂಧನ್ ಭಟ್, ತಬಲಾದಲ್ಲಿ ಅಭಿಜಿತ್ ಶಣೈ ಹಾಗೂ ತಾಳದಲ್ಲಿ ಬಿ. ಗಣಪತಿ ನಾಯಕ್ ಸಹಕರಿಸಿದರು.
ವರದಿ: ಪೂಜಾ ಲಟ್ಟಿ
ಪೋಟೋ: ಪವನಕುಮಾರ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


