ಪಣಜಿ (ಬಿಚೋಲಿ): ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಗೋವಾವನ್ನು ತಮ್ಮ ಕರ್ಮಭೂಮಿಯೆಂದು ಗೌರವಿಸುತ್ತಾರೆ. ಭಾಷೆ ಅಥವಾ ರಾಜ್ಯದ ತಾರತಮ್ಯವಿಲ್ಲದೆ ಎಲ್ಲರೂ ಸೇರಿ ಸನಾತನ ಹಿಂದೂ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಗೋವಾದ ತಪೋಭೂಮಿಯ ಶ್ರೀ ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಗೋವಾದ ಬಿಚೋಲಿಯ ಹೀರಾಬಾಯಿ ಝಾಂಟಯೆ ಸಭಾಗೃಹದಲ್ಲಿ ಭಾನುವಾರ ಕರ್ಮಭೂಮಿ ಕನ್ನಡ ಸಂಘ ಬಿಚೋಲಿ (ಗೋವಾ), ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಹೊರನಾಡ ಕನ್ನಡಿಗರ 12ನೇ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ತ್ರಿಮೂರ್ತಿ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಸನಾತನ ಹಿಂದೂ ಸಂಸ್ಕೃತಿ ವಿಶ್ವಕ್ಕೆ ಶಾಂತಿಯ ಸಂದೇಶ ನೀಡುವ ಸಂಸ್ಕೃತಿಯಾಗಿದೆ. ನಾವು ವಿಶ್ವವನ್ನೇ ಒಂದು ಕುಟುಂಬವೆಂದು ಪರಿಗಣಿಸುತ್ತೇವೆ. ವಿದೇಶಗಳಲ್ಲಿಯೂ ನಮ್ಮ ಸಂಸ್ಕೃತಿಯನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಪಡುವ ವಿಷಯ ಎಂದು ಸ್ವಾಮೀಜಿ ಹೇಳಿದರು.
ಖಾವಿ ವಸ್ತ್ರಧಾರಿ ಸ್ವಾಮೀಜಿಗಳು ಯಾವುದೇ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದರೆ ಅಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆ ನಡೆಯುತ್ತಿದೆ ಎಂದರ್ಥ. ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಮನೆಯಲ್ಲಿ ಕಡ್ಡಾಯವಾಗಿ ಮಾತೃಭಾಷೆ ಕನ್ನಡದಲ್ಲೇ ಮಾತನಾಡಬೇಕು. ಜೊತೆಗೆ ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಿ ಬೆರೆತು ಬದುಕಬೇಕು. ಇದರಿಂದ ಗೋವಾದ ಸ್ಥಳೀಯರೂ ಕನ್ನಡ ಭಾಷೆ ಕಲಿಯಲು ಮುಂದಾಗುತ್ತಾರೆ ಎಂದು ಅವರು ಹೇಳಿದರು.
ನಾವು ಯಾವ ಭಾಷೆ ಮಾತನಾಡಿದರೂ, ಯಾವ ರಾಜ್ಯದಲ್ಲಿ ನೆಲೆಸಿದ್ದರೂ ನಾವು ಎಲ್ಲರೂ ಭಾರತೀಯರು ಎಂಬ ಭಾವನೆ ಎಲ್ಲರಲ್ಲೂ ಬಲವಾಗಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ತೆರೆಯ ಹಿಂದೆ ದುಡಿಯುವ ಅನೇಕರ ಶ್ರಮ ಕಾರಣವಾಗಿರುತ್ತದೆ. ಸ್ವಾಮೀಜಿಗಳ ಕರ್ತವ್ಯ ಸಮಾಜದ ಎಲ್ಲರನ್ನು ಒಂದಾಗಿಸುವುದು. ಎಲ್ಲ ಭಾಷಿಕರೂ ಒಂದಾದಾಗ ಮಾತ್ರ ದೇಶದ ರಕ್ಷಣೆ ಸಾಧ್ಯ ಎಂದು ಹೇಳಿದರು. ರಾಮದುರ್ಗದ ಶ್ರೀ ಕರಿಸಿದ್ದೇಶ್ವರ ಪಟ್ಟದ ಪೂಜ್ಯರೂ ದಿವ್ಯ ಸಾನಿಧ್ಯ ವಹಿಸಿದ್ದರು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಮಾತನಾಡಿ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ 12 ಸಾವಿರ ಚದರ ಮೀಟರ್ ಜಾಗ ಖರೀದಿಸಲಾಗಿದೆ. ಮುಂಬರುವ ದಿನಗಳಲ್ಲಿ ಗೋವಾದಲ್ಲಿ ಭವ್ಯ ಕನ್ನಡ ಭವನ ನಿರ್ಮಾಣ ಮಾಡಲಾಗುತ್ತದೆ. ಇಂದಿನ ಸಮ್ಮೇಳನ ಇತಿಹಾಸದ ಪುಟಗಳಲ್ಲಿ ದಾಖಲೆಯಾಗುವಂತಹ ಮಹತ್ವದ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ 751 ಪೂರ್ಣಕುಂಭಗಳ ಭವ್ಯ ಮೆರವಣಿಗೆಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಚಾಲನೆ ನೀಡಿದರು.
ಸಮ್ಮೇಳನದ ವೇದಿಕೆಯಲ್ಲಿ ಗೋವಾದ ಮಯೆಮ್ ಶಾಸಕ ಪ್ರೇಮೇಂದ್ರ ಶೇಟ್, ಶಾಸಕ ಚಂದ್ರಕಾಂತ ಶೇಟಯೆ, ಕರ್ನಾಟಕದ ಮಾಜಿ ಸಂಸದ ಅಣ್ಣಾಸಾಹೆಬ್ ಜೊಲ್ಲೆ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಬಿಚೋಲಿ ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್ ರೆಡ್ಡಿ, ಗೋವಾ ಸಮ್ಮೇಳನದ ಸಂಚಾಲಕ ಮಹೇಶ ಬಾಬು ಸುರ್ವೆ, ಗೋವಾ ಬಿಜೆಪಿ ಕರ್ನಾಟಕ ಸೆಲ್ ಕನ್ವೀನರ್ ಮುರಳಿ ಮೋಹನ್ ಶೆಟ್ಟಿ, ಅಖಿಲ ಗೋವಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷೆ ಜಯಶ್ರೀ ಹೊಸ್ಮನಿ, ಸಮ್ಮೇಳನಾಧ್ಯಕ್ಷ ಸಂಗನಬಸಪ್ಪ ಬಿರಾದಾರ್ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕರ್ಮಭೂಮಿ ಕನ್ನಡ ಸಂಘದ ಭರತೇಶ ಗುಳಣ್ಣವರ್ ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದರು. ಶೀಲಾ ಮೇಸ್ತ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಕಲಾತಂಡಗಳಿಂದ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗೋವಾ ಹಾಗೂ ಕರ್ನಾಟಕದಿಂದ ಸಾವಿರಾರು ಕನ್ನಡಿಗರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಆಗಮಿಸಿದವರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ಸಂಜೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮ್ಮೇಳನದ ಹಿನ್ನೆಲೆಯಲ್ಲಿ ಬಿಚೋಲಿ ನಗರದಾದ್ಯಂತ ಕನ್ನಡ ಧ್ವಜಗಳು ಹಾರಾಡುತ್ತಿದ್ದವು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

