ಹಾಡೊಮ್ಮೆ ಹಾಡಬೇಕು : ಸಾಹಿತ್ಯದ ಮಾನವೀಯ ಧರ್ಮ

Upayuktha
0

ಹೃದಯಗಳಿಂದ ಹೃದಯಗಳಿಗೆ ಹರಿಯುವ ಕಾವ್ಯ




ಸಾಹಿತ್ಯ ಹೃದಯಾಳದ ಭಾವನೆಗಳನ್ನು ಭಾಷಾತ್ಮಕವಾಗಿ ಅರಳಿಸುವ ಕಲೆ. ಅಂತರಂಗದ ನಿರಂತರ ಚಿಂತನೆ ಮೌನ ಧ್ಯಾನಗಳ ಫಲ. ವರ್ತಮಾನದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಇದಾಗಿದೆ. ತನ್ನತನದ ಅರಿವಿನೊಂದಿಗೆ ಪರರನ್ನು ಅರಿತು ಪೂರ್ಣತೆಯತ್ತ ಪ್ರಯಾಣಿಸುವ ತುಡಿತ ಸಾಹಿತಿಗಳಲ್ಲಿ ಇರಬೇಕು. ಸಾಂಘಿಕ ಯತ್ನದೊಂದಿಗೆ ನಿರ್ದಿಷ್ಟ ಗುರಿಯತ್ತ ಹೆಜ್ಜೆಗಳನ್ನು ಇಡುವ ಪ್ರಯತ್ನ ಇದು.


ಸಾಹಿತ್ಯವು ಸಮಾಜದ ಉನ್ನತಿಗೆ ಸ್ಪಂದಿಸಿ ಸ್ಫೂರ್ತಿಯನ್ನು ಮಾರ್ಗದರ್ಶನವನ್ನು ನೀಡುತ್ತಿರುತ್ತದೆ. ಒಬ್ಬ ಸಾಹಿತಿ ಮತ್ತೊಬ್ಬ ಸಾಹಿತಿಯನ್ನು ಗುರುತಿಸುವಾಗ, ಗೌರವಿಸುವಾಗ ನಿರ್ಮತ್ಸರನಾಗಿ, ನಿಷ್ಪಾಕ್ಷಿಕವಾಗಿ ಪೂರ್ವಗ್ರಹಗ್ರಸ್ತನಾಗದೆ, ಸಹಜ ಸುಂದರ ಸಜ್ಜನಿಕೆಯನ್ನು ಮೆರೆದು ಗುರುತಿಸಬೇಕು, ಗೌರವಿಸಬೇಕು. ಇದು ನನ್ನ ನಿಲುವು. ಲೋಕಕಲ್ಯಾಣ ಸಾಧಕರಾದ ಬಸವಣ್ಣನವರು ಶಿವಶರಣರನ್ನೂ, ಜಂಗಮರನ್ನೂ ಗುರುತಿಸುವಲ್ಲಿ ಅನುಸರಿಸಿದ ರೀತಿ, ನೀತಿಗಳೇ ಈ ಸಂದರ್ಭಕ್ಕೂ ಅನುಸರಣ ಯೋಗ್ಯವಾಗಿವೆ ಎಂದು ನಾನು ಭಾವಿಸಿದ್ದೇನೆ. ಬಡವ, ಬಲ್ಲಿದ, ಹಿರಿಯ. ಕಿರಿಯ, ಸುಖಿ, ದುಃಖಿ, ಸರ್ವಮಾನ್ಯ, ಸಾಮಾನ್ಯ, ಸುರೂಪಿ, ಕುರೂಪಿ; ಸ್ವಕೀಯ, ಪರಕೀಯ; ಮೇಲಿನವನು, ಕೀಳಿನವನು ಇತ್ಯಾದಿ ಭೇದ ಭಾವಗಳನ್ನು ತೊರೆದು ಹೃದಯದ ಔದಾರ್ಯವನ್ನು ಮೆರೆದು ಸಾನುಕ್ರೋಶಪರನಾಗಿ ತಾನು ಎಲ್ಲರಂತೆ, ಎಲ್ಲರೂ ತನ್ನಂತೆ ಎಂಬ  ಬುದ್ಧಿಯಿಂದ ಒಬ್ಬರು ಒಬ್ಬರನ್ನು ಗುರುತಿಸಿ, ಗೌರವಿಸುವುದೇ ಇಬ್ಬರೂ ಉಳಿದು, ಬೆಳೆದು ನಲಿಯುವುದಕ್ಕೆ ಇರುವ ಏಕೈಕ ಮಾರ್ಗ. ಈ ಮಾರ್ಗ ಧರ್ಮ ಅನುಯಾಯಿಗೆ ಹೇಗೆ ತೆರದದ್ದು ಹಾಗೆಯೇ ಕಾವ್ಯ ಧರ್ಮ ಅನುಯಾಯಿಗೂ ಹಾಗೆಯೇ ತೆರದದ್ದು. ಇದು ಬಸವಣ್ಣನವರು ನನಗೆ ತೋರಿದ ದಾರಿ, ತೆರೆದ ದಾರಿ. ನಾನು ನಡೆದು ಬಂದ ದಾರಿ.


-ಎಸ್.ವಿ. ಪರಮೇಶ್ವರ ಭಟ್ಟ (ಡಾ. ಸೀ. ಹೊಸಬೆಟ್ಟು ಅವರ ಮನನ ಕವನ ಸಂಕಲನದ ಮುನ್ನುಡಿಯಲ್ಲಿ. 1970)


ಸಂಘಟನೆಯ ನಾಯಕತ್ವವನ್ನು ನಿರ್ವಹಿಸುತ್ತಿರುವವರಿಗೂ ಅನ್ವಯವಾಗ ಬಹುದಾದ ನುಡಿಗಳು ಇವು. ಅವರ ಮುಕ್ತಕಗಳು ನಾವು ಸಾಗಬೇಕಾದ ಹಾದಿಯನ್ನು ತೋರಿಸುತ್ತದೆ.


ಹತ್ತೆಡೆಯೊಳು ತೋಡಿ ಒಂದಡಿಯಷ್ಟನು 

ಬರಲಿಲ್ಲ ನೀರೆನ್ನಬೇಡ 

ಒಂದೆಡೆಯೊಳು ತೋಡು ಹತ್ತಡಿಯಷ್ಟನು 

ಚಿಮ್ಮುವುದುದಕವು ನೋಡ


ನಮ್ಮ ಬಳಿ ಇರುವ ಕಡಲು ನಮಗೆ ಬದುಕಿನ ಪಾಠವನ್ನು ಹೇಳಿ ಕೊಡುತ್ತದೆ. ಅವರ 'ಉಪ್ಪು ಕಡಲು' ವಚನ ಸಂಕಲನದ ಒಂದು ವಚನವನ್ನು ಗಮನಿಸಬಹುದು.


ಪಡುಗಡಲ ತೆರೆಗಳ ಲೀಲೆ 

ಚೋದ್ಯಕೆ ಚೋದ್ಯ!

ತೆರೆಗಳು ಒಂದನು ಒಂದು ಬೆನ್ನಟ್ಟಿ ಬರುತಿವೆ 

ತೆರೆಗಳು ಒಂದನು ಒಂದು ಬೆರೆತು ಬೆರೆತು ಬರುತಿವೆ

ತೆರೆಗಳು ಒಂದನು ಒಂದು ದಾಟಿ ದಾಟಿ ಬರುತ್ತಿವೆ

ತೆರೆಗಳು ಒಂದನು ಒಂದು ನುಂಗಿ ನೊಣೆದು ಬರುತಿವೆ

ಇವುಗಳ ಲೀಲೆಯ ನೋಡುವ ನನಗೆ

ಭಾವಗಳಂತೆಯೆ ಮನಸ್ಸಿನ ಒಳಗೆ 

ಮೂಡುತ ಮುಳುಗುತಲೇಳುತ ಬೀಳುತ ಲೀಲೆ ತೋರುತ್ತಿವೆ... ಸದಾಶಿವ ಗುರು


ನಿನ್ನೆ ನಾಳೆಗಳ ನಡುವಿನ ವರ್ತಮಾನದ ತವಕ ತಲ್ಲಣಗಳಿಗೆ ಸಾಹಿತ್ಯ ಉತ್ತರ ನೀಡಬಲ್ಲದು ಎಂಬ ಭರವಸೆ ನಮ್ಮದು.


ಕವಿ ಕಯ್ಯಾರ ಕಿಞ್ಞಾಣ್ಣ ರೈಯವರ ಕವಿತೆಯ ಸಾಲುಗಳನ್ನು ಗಮನಿಸಬಹುದು.


ನವ ಭಾವ -ನವ ಜೀವ -ನವ ಶಕ್ತಿ ತುಂಬಿಸುವ 

ಹಾಡೊಮ್ಮೆ ಹಾಡ ಬೇಕು;

ತೀವ್ರ ತರ ಗಂಭೀರ ಭಾವನೆಯ ತೆರೆ ಮಸಗಿ

ವೀರ ಧ್ವನಿಯೇರಬೇಕು

ಜಾತಿ-ಕುಲ-ಮತ-ಧರ್ಮ ಪಾಶಗಳ ಕಡಿದೊಗೆದು

ಎದೆ ಹಿಗ್ಗಿ ಹಾಡಬೇಕು


ಪ್ರೀತಿಯ ನುಡಿಗಳು ಇಂದು ಜಗತ್ತಿಗೆ ಬೇಕಾಗಿವೆ. ಸಣ್ಣ ಗಾತ್ರದ ಬೀಜವೊಂದರಿಂದ ವಿಶಾಲ ವೃಕ್ಷವೊಂದು ಹುಟ್ಟಿ, ಯಾವುದೇ ಫಲಾಪೇಕ್ಷೆ ಇಲ್ಲದೆ  ಹೂವು ಹಣ್ಣನ್ನು ನೀಡುವುದರ ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಆಶ್ರಯ, ನೆರಳನ್ನು ನೀಡುತ್ತವೆ. ಅಂತೆಯೇ ಸಾಮಾಜಿಕ ಸಾಮಾಜಿಕ ಸೇವಾ ಸಂಸ್ಥೆಗಳು ಸೇವೆಯ ಕಾರ್ಯದೊಂದಿಗೆ ವಿಶಾಲವಾಗಿ ಬೆಳೆದಿವೆ.


ಯಾವುದೇ ವ್ಯಕ್ತಿಯ ಪ್ರತಿಭೆ ಮುಚ್ಚಿದ ಕಿಟಕಿ ಬಾಗಿಲುಗಳಲ್ಲಿ ಬಂಧಿತವಾದರೆ ಪ್ರಯೋಜನವಿಲ್ಲ. ಮನಸ್ಸು ಎಂಬ ಕಿಟಕಿ ಬಾಗಿಲುಗಳನ್ನು ತೆರೆದಾಗ ನವ ವಿಚಾರಗಳೆಂಬ ಶುದ್ಧ ಗಾಳಿ ನಮಗೆ ದೊರೆಯುತ್ತವೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ನಮಗೆ ಬಹಳಷ್ಟು ಅವಕಾಶಗಳಿವೆ. ಬದುಕು ಸುಂದರಗೊಳ್ಳಲು ಇರುವ ದುಃಖ ದುಮ್ಮಾನಗಳನ್ನು ಮರೆತು ಇನಿದನಿಗೆ ಕಿವಿಯಾಗಬೇಕಾಗಿದೆ.


ನಿಲ್ಲಿಸಿ ನಿಮ್ಮ ಗದ್ದಲವನು ಖಗಗಳೇ 

ಪಶುಗಳೇ ಬಾಯಿಮುಚ್ಚಿ ನೀವು 

ಮುದದೊಳು ಕಿವಿಗೊಡಿ ರಸಿಕ ಜನಂಗಳೆ 

ಕುಕಿಲುತಲಿದೆ ಪಿಕವಧುವು


(ಕವಿ ಕೌಮುದಿ... 'ಬಿಡಿ '.. 1971 | ಎಸ್. ವಿ. ಪರಮೇಶ್ವರ ಭಟ್ಟ)


ಆಧುನಿಕ ಜಗತ್ತಿನಲ್ಲಿ ಗದ್ದಲಗಳೇ ತುಂಬಿರುವ ಹೊತ್ತಿನಲ್ಲಿ ಸಾಮಾಜಿಕ ಸಮತೋಲನಕ್ಕೆ ಸಾಹಿತ್ಯ ಹಾಗೂ ಸಂಸ್ಕೃತಿಯ ನುಡಿಗಳು ಪ್ರೇರಣೆ ನೀಡುವ ಭರವಸೆಯ ಬೆಳಕಾಗಿವೆ.


- ಕೃಷ್ಣಮೂರ್ತಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top