ಫೆ. 20ರಿಂದ ಮೂರು ದಿನ ರಂಜಿಸಲಿದೆ ಉಡುಪ ಸಂಗೀತೋತ್ಸವ

Upayuktha
0

  • ಬೆಂಗಳೂರಿನ ಕಲಾಭಿಮಾನಿಗಳಿಗೊಂದು ಸಂಭ್ರಮ
  • ಕಲಾ ದಿಗ್ಗಜಗಳ ಕಲಾ ಪ್ರದರ್ಶನ




ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ ‘ಉಡುಪ ಸಂಗೀತೋತ್ಸವ’ (ಮ್ಯೂಸಿಕಲ್ ಫೆಸ್ಟಿವಲ್) ಆರನೇ ಆವೃತ್ತಿಯು 3 ದಿನಗಳ ಕಾಲ ದಿಗ್ಗಜರ ಕಛೇರಿಗಳನ್ನು ಹಮ್ಮಿಕೊಂಡಿದೆ. ಮಹಾನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಫೆ. 20, 21 ಮತ್ತು 22 ರಂದು ಸಂಜೆ 7ಕ್ಕೆ ಸಂಗೀತ ಸಮಾರಾಧನೆ ಆಯೋಜನೆಗೊಂಡಿದೆ. ಈ ಬಾರಿಯೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಖ್ಯಾತಿಗೊಂಡಿರುವ ಕಲಾ ಸಾಧಕರು ಸಂಗೀತ ರಸಧಾರೆ ಹರಿಸಲಿದ್ದಾರೆ.


ಬೇಗಂ ಪರ್ವೀನ್ ಸುಲ್ತಾನಾ ಗಾನಸುಧೆ:  

ಫೆ. 20ರಂದು ಸಂಜೆ 7ಕ್ಕೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಬೇಗಂ ಪರ್ವೀನ್ ಸುಲ್ತಾನಾ ಗಾನಸುಧೆ ರಂಜಿಸಲಿದೆ. ಪಂಡಿತ್ ಡಾ. ರವೀಂದ್ರ ಕಾಟೋಟಿ (ಹಾರ್ಮೋನಿಯಂ) ಮತ್ತು ಓಜಸ್ ಆದ್ಯ (ತಬಲಾ) ಪಕ್ಕವಾದ್ಯ ಸಾಥ್ ನೀಡಲಿದ್ದಾರೆ. ನಂತರ ಪುರ್ಬಯನ್ ಚಟರ್ಜಿ ಅವರ ಸಿತಾರ್ ವಾದನವಿದೆ. ಓಜಸ್ ಆದ್ಯ ತಬಲಾ ಸಹಕಾರವಿದೆ.


ತಾಳವಾದ್ಯ ಕಛೇರಿ:

ಫೆ. 21ರ ಸಂಜೆ 6ಕ್ಕೆ ತಾಳವಾದ್ಯ ಕಛೇರಿ ಕಳೆಗಟ್ಟಲಿದೆ. ಪದ್ಮಶ್ರೀ ಪುರಸ್ಕೃತ ವಿದ್ವಾನ್ ತಿರುವಾಯೂರು ಭಕ್ತವತ್ಸಲಂ (ಮೃದಂಗ) ನವೀನ್ ಶರ್ಮಾ (ಢೋಲಕ್) ಮತ್ತು ವಿಜಯ ಶ್ಯಾಮರಾವ್ ಚವ್ಹಾಣ್ (ಡೋಲ್ಕಿ) ವಾದನದಲ್ಲಿ ಶ್ರೋತೃಗಳ ಮನಸೂರೆಗೊಳ್ಳಲಿದ್ದಾರೆ. ನಂತರ ಪದ್ಮಶ್ರೀ ಗೌರವಕ್ಕೆ ಭಾಜನರಾದ ವಿದುಷಿಯರಾದ ರಂಜನಿ ಮತ್ತು ಗಾಯತ್ರಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ವಿಜೃಂಭಿಸಲಿದೆ. ಪಕ್ಕವಾದ್ಯದಲ್ಲಿ ವಿದುಷಿ ಚಾರುಮತಿ ರಘುರಾಮನ್ ಪಿಟೀಲು, ವಿದ್ವಾನ್ ಸಾಯಿ ಗಿರಿಧರ ಮೃದಂಗ ಮತ್ತು ವಿದ್ವಾನ್ ವಾಝಪಲ್ಲಿ ಆರ್. ಕೃಷ್ಣಕುಮಾರ್ ಘಟಂ ಸಹಕಾರ ನೀಡಲಿರುವುದು ವಿಶೇಷವಾಗಿದೆ.


ಫೆ. 22ರ ಸಂಜೆ 7ಕ್ಕೆ ಪಂಡಿತ್ ವಿಶ್ವಮೋಹನ ಭಟ್ ಅವರ ಮೋಹನ ವೀಣಾವಾದನಕ್ಕೆ ವಿವಿಧ ವಾದ್ಯಗಳ ಲಹರಿಗಳು ಮೇಳೈಸಲಿವೆ. ವಿದ್ವಾಂಸರಾದ ಶಶಾಂಕ ಸುಬ್ರಹ್ಮಣ್ಯ (ಕೊಳಲು), ವಿದ್ವಾನ್ ಹರೀಶ ಶಿವರಾಮ ಕೃಷ್ಣನ್ (ಗಾಯನ), ದರ್ಶನ್ ದೋಷಿ (ಡ್ರಮ್ಸ್), ಶೆಲ್ಡನ್ ಡಿಸಿಲ್ವಾ (ಬಾಸ್ ಗಿಟಾರ್), ಮಂಜುನಾಥ ಸತ್ಯಶೀಲ್ (ಡ್ರಮ್ಸ್- ಪರ್ಕೂಶನ್ಸ್), ರಾಹುಲ್ ವಾಡ್ವಾಣಿ (ಕೀ ಬೋರ್ಡ್) ಮತ್ತು ಹಿಮಾಂಶು ಮಹಾಂತ ಅವರ ತಬಲಾ ವಾದನ ಅನುರಣಿಸಲಿದೆ.



ಉಡುಪ ಪ್ರತಿಷ್ಠಾನದಿಂದ ದಶಕದ ಸೇವೆ:

ವಿಶ್ವ ಮನ್ನಣೆ ಪಡೆದಿರುವ ಹಿರಿಯ ಘಟಂ ವಿದ್ವಾಂಸ ಗಿರಿಧರ ಉಡುಪ ರವರಿಂದ 2015ರಲ್ಲಿ ಸ್ಥಾಪನೆಗೊಂಡ ಉಡುಪ ಪ್ರತಿಷ್ಠಾನವು ನೋಂದಾಯಿತ ದತ್ತಿ ಸಂಸ್ಥೆ. ದಶಕದಿಂದ ಕಲಾ ಸೇವಾರಾಧನೆ ಮಾಡುತ್ತಿದೆ. ಶಾಸ್ತ್ರೀಯ ಸಂಗೀತ, ಪ್ರದರ್ಶನ ಕಲೆಗಳ ಮೂಲಕ ಸಾಮಾಜಿಕ ಸೌಹಾರ್ದ ವೃದ್ಧಿಸಲು ಶ್ರಮಿಸುತ್ತಿದೆ. ಪ್ರತಿಷ್ಠಾನವು ಪ್ರತಿ ತಿಂಗಳೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆ, ವೃದ್ಧಾಶ್ರಮ, ಕ್ಯಾನ್ಸರ್ ಪುನರ್ವಸತಿ ಕೇಂದ್ರ ಮತ್ತು ಆಟಿಸಂ ಕೇಂದ್ರಗಳಲ್ಲಿ ಸಂಗೀತ ಕಛೇರಿಗಳನ್ನು ಆಯೋಜಿಸಿ, ಅಲ್ಲಿನವರಿಗೆ ಮನೋಲ್ಲಾಸ ನೀಡುವ ಸೇವೆ ಮಾಡುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಾನವು ಈವರೆಗೆ ದೇಶ- ವಿದೇಶಗಳ 374 ಕ್ಕೂ ಹೆಚ್ಚು ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಿ 171ಕ್ಕೂ ಅಧಿಕ ಸಂಗೀತ ಕಛೇರಿಗಳನ್ನು 101 ಸ್ಥಳಗಳಲ್ಲಿ ಆಯೋಜನೆ ಮಾಡಿದ ಸಾಧನೆಗೆ ಭಾಜನವಾಗಿದೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top