ಪ್ರವಾಸ: ಮೊಧೇರಾ ಸೂರ್ಯ ದೇವಾಲಯ ಮತ್ತು ರಾಣಿ ಕಿ ವಾವ್

Upayuktha
0

ಗುಜರಾತಿನ ವಾಸ್ತುಶಿಲ್ಪದ ವೈಭವವನ್ನು ಸಾರುವ ಅಮೂಲ್ಯ ಪರಂಪರೆ




ಗುಜರಾತಿನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮದಲ್ಲಿ ಪುಷ್ಪಾವತಿ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಸೂರ್ಯ ದೇವಾಲಯವು ಭಾರತೀಯ ವಾಸ್ತುಶಿಲ್ಪದ ಅದ್ಭುತ ಉದಾಹರಣೆಯಾಗಿದೆ. ಅಹಮದಾಬಾದ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಈ ದೇವಾಲಯವನ್ನು ಕ್ರಿ.ಶ. 1026ರಲ್ಲಿ ಸೋಲಂಕಿ ವಂಶದ ರಾಜ ಭೀಮದೇವ ಪ್ರಥಮನು ನಿರ್ಮಿಸಿದ್ದಾನೆಂದು ಇತಿಹಾಸ ತಿಳಿಸುತ್ತದೆ.


ಸೌರ ದೇವತೆಗೆ ಸಮರ್ಪಿತವಾಗಿರುವ ಈ ದೇವಾಲಯವು ವಿಶಿಷ್ಟ ಸೂರ್ಯಕುಂಡ ಮತ್ತು ಸೂಕ್ಷ್ಮ ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ದೇವಾಲಯ ಸಂಕೀರ್ಣದಲ್ಲಿ ವಿಶಾಲ ಗರ್ಭಗುಡಿ ಹಾಗೂ ಸಭಾಮಂಟಪವಿದ್ದು, 52 ಸುಂದರ ಕಂಬಗಳು ಇದರ ಮುಖ್ಯ ಆಕರ್ಷಣೆ. ಅಷ್ಟಭುಜಾಕೃತಿಯ ಕಂಬಗಳ ಮೇಲೆ ಕೆತ್ತಲ್ಪಟ್ಟಿರುವ ದೇವತೆಗಳು ಹಾಗೂ ರಾಮಾಯಣ–ಮಹಾಭಾರತದ ಕಥಾನಕಗಳು ಶಿಲ್ಪಿಗಳ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸುತ್ತವೆ. ಸಭಾಮಂಟಪದ ಎದುರು ಇರುವ ಸೂರ್ಯಕುಂಡ ಅಥವಾ ರವಿಕುಂಡವು ಧಾರ್ಮಿಕ ಹಾಗೂ ವಾಸ್ತು ಮಹತ್ವವನ್ನು ಹೊಂದಿದೆ. ಪೌರಾಣಿಕ ಕಥೆಗಳ ಪ್ರಕಾರ, ಶ್ರೀರಾಮನು ರಾವಣ ವಧೆಯ ನಂತರ ಪಾಪಪರಿಹಾರಕ್ಕಾಗಿ ಇಲ್ಲಿ ಯಜ್ಞ ಮಾಡಿದನೆಂಬ ನಂಬಿಕೆಯೂ ಇದೆ.


ಮೊಧೇರಾದಿಂದ ಮುಂದುವರಿದು ಪಟಾನ್ ಪಟ್ಟಣದಲ್ಲಿ ಇರುವ ರಾಣಿ ಕಿ ವಾವ್ ಗುರ್ಜರಾತಿನ ಮತ್ತೊಂದು ವಾಸ್ತು ಅದ್ಭುತ. ಅಹಮದಾಬಾದ್‌ನಿಂದ ಸುಮಾರು 125 ಕಿ.ಮೀ. ದೂರದಲ್ಲಿರುವ ಈ ಮೆಟ್ಟಿಲು ಬಾವಿಯನ್ನು ಕ್ರಿ.ಶ. 1063ರಲ್ಲಿ ಸೋಲಂಕಿ ವಂಶದ ರಾಣಿ ಉದಯಮತಿದೇವಿ ತನ್ನ ಪತಿ ರಾಜ ಭೀಮದೇವ ಪ್ರಥಮನ ಸ್ಮರಣಾರ್ಥವಾಗಿ ನಿರ್ಮಿಸಿದಳೆಂದು ಉಲ್ಲೇಖಿಸಲಾಗಿದೆ. ಸುಮಾರು 20 ವರ್ಷಗಳ ಕಾಲ ನಡೆದ ಈ ನಿರ್ಮಾಣ ಕಾರ್ಯವು ಗುರ್ಜರ ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ.


ತಲೆಕೆಳಗಾದ ದೇವಾಲಯದಂತೆ ಕಾಣುವ ರಾಣಿ ಕಿ ವಾವ್ ಏಳು ಹಂತದ ಮೆಟ್ಟಿಲುಗಳನ್ನು ಹೊಂದಿದ್ದು, ಸಾವಿರಕ್ಕೂ ಹೆಚ್ಚು ಸೂಕ್ಷ್ಮ ಶಿಲ್ಪಗಳಿಂದ ಅಲಂಕರಿಸಲಾಗಿದೆ. ವಿಷ್ಣುವಿನ ವಿವಿಧ ಅವತಾರಗಳಾದ ರಾಮ, ಶ್ರೀಕೃಷ್ಣ, ನರಸಿಂಹ, ವಾಮನ ಮೊದಲಾದ ರೂಪಗಳು ಇಲ್ಲಿ ಜೀವಂತವಾಗಿ ಮೂಡಿಬಂದಿವೆ. ಸರಸ್ವತಿ ನದಿಯ ಪ್ರವಾಹದಿಂದಾಗಿ ಒಂದು ಕಾಲದಲ್ಲಿ ಭೂಗರ್ಭದಲ್ಲಿ ಮುಚ್ಚಿಹೋಗಿದ್ದ ಈ ಸ್ಮಾರಕವನ್ನು 1940ರಲ್ಲಿ ಮರುಶೋಧಿಸಲಾಯಿತು. ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು 1980ರಲ್ಲಿ ಸಮಗ್ರ ಪುನರುತ್ಥಾನ ಕಾರ್ಯವನ್ನು ಕೈಗೊಂಡಿತು.


2014ರಲ್ಲಿ ಯುನೆಸ್ಕೋ ವಿಶ್ವ ಪರಂಪರಾ ತಾಣಗಳ ಪಟ್ಟಿಗೆ ಸೇರ್ಪಡೆಯಾದ ರಾಣಿ ಕಿ ವಾವ್ ಇಂದು ವಿಶ್ವದ ಗಮನ ಸೆಳೆದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಹೊಸ ನೂರು ರೂಪಾಯಿ ನೋಟಿನ ಮೇಲೆ ಈ ಸ್ಮಾರಕದ ಚಿತ್ರವಿರುವುದು ಇದರ ರಾಷ್ಟ್ರೀಯ ಮಹತ್ವವನ್ನು ಸೂಚಿಸುತ್ತದೆ.


ಮೊಧೇರಾ ಸೂರ್ಯ ದೇವಾಲಯ ಮತ್ತು ರಾಣಿ ಕಿ ವಾವ್- ಇವು ಭಾರತೀಯ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ನಂಬಿಕೆಗಳು ಹಾಗೂ ಶಿಲ್ಪಕಲೆಯ ವೈಭವವನ್ನು ಮುಂದಿನ ತಲೆಮಾರಿಗೆ ಸಾರುವ ಅಮೂಲ್ಯ ಐತಿಹಾಸಿಕ ಸ್ಮಾರಕಗಳಾಗಿವೆ. ಇವುಗಳ ಸಂರಕ್ಷಣೆ ಮತ್ತು ಅಧ್ಯಯನವು ಭಾರತೀಯ ಪರಂಪರೆಯ ಗೌರವವನ್ನು ಇನ್ನಷ್ಟು ಉನ್ನತಗೊಳಿಸುತ್ತದೆ.


- ಗೊರೂರು ಅನಂತರಾಜು, ಹಾಸನ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top