ಕಣ್ಮನ ಸೆಳೆಯುವ ಭಟ್ಕಳ ಗೊಂಡ ಸಮುದಾಯದ ಸಾಂಪ್ರದಾಯಿಕ ಡೆಕ್ಕೆ ಕುಣಿತ

Upayuktha
0

 



ಶಿವ ಮತ್ತು ತಮ್ಮ ಪೂರ್ವಜರ ಆರಾಧನೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಒಂದು ಸಾಂಪ್ರದಾಯಿಕ ನೃತ್ಯ ಪ್ರಕಾರವೇ ಗೊಂಡರ ಡೆಕ್ಕೆ ಕುಣಿತ ಎಂದು ಹೇಳಲಾಗುತ್ತದೆ.


ಗೊಂಡ ಸಮುದಾಯ ಇರುವ ಕರ್ನಾಟಕದ ಬಾಗಲಕೋಟ,ಬೆಳಗಾವಿ, ಬೀದರ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ನೃತ್ಯ ಪ್ರಕಾರವನ್ನು ಕಾಣಬಹುದಾಗಿದೆ.ಅದರಲ್ಲೂ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ವಿಶೇಷ ವಾಗಿ ಡೆಕ್ಕೆ ಕುಣಿತ ಪ್ರಾಮುಖ್ಯ ಪಡೆದಿದ್ದು ತನ್ನದೇ ಛಾಪನ್ನು ಮೂಡಿಸಿದೆ.


 ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಎರಡು ದಿನಗಳ ಕಾಲ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಈ ಬುಡಕಟ್ಟು ಗೊಂಡ ಸಮುದಾಯದವರು ತಮ್ಮ ಪೂರ್ವಜರು ಆಚರಿಸಿಕೊಂಡು ಬಂದ ಸಂಪ್ರದಾಯದಂತೆ  ಮನೆಮನೆಗೆ ತೆರಳಿ  ಇಂದಿಗೂ ಡೆಕ್ಕೆ ಕುಣಿತ ಮಾಡುತ್ತಾ ಬರುತ್ತಿದ್ದಾರೆ.


ಈ ಸಮುದಾಯದವರು ತಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯ, ಪದ್ಧತಿಗಳನ್ನು  ಚಾಚೂ ತಪ್ಪದೇ ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ.


ವರ್ಷಂಪ್ರತಿ ಈ ದಿನದಲ್ಲಿ ಭಟ್ಕಳದ ಹಾಡುವಳ್ಳಿ, ಮಾರೂಕೇರಿ, ಕೋಣಾರ, ಕೊಪ್ಪ, ಮುಟ್ಟಳ್ಳಿ ಬೆಳಕೆ ಗ್ರಾಪಂ ವ್ಯಾಪ್ತಿಯಲ್ಲಿ ಗೊಂಡ ಸಮಾಜದವರು ರಾತ್ರಿ ಸಂದರ್ಭದಲ್ಲಿ ತಮ್ಮ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮದ ಮನೆ ಮನೆಗಳಿಗೆ ತೆರಳಿ ಡೆಕ್ಕೆ ಕುಣಿತ ನಡೆಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. 

ತಲೆಗೆ ಕೆಂಪು ಹೂವು ಹಾಗೂ ಸೀರೆ, ಮಡಿ (ಕೇಸರಿ ವಸ್ತ್ರ) ಧರಿಸಿ ಶೃಂಗಾರ ಮಾಡಿಕೊಂಡು ಡೆಕ್ಕೆ ಬಡಿದು ಸಂಪ್ರದಾಯದಂತೆ ವಿಶಿಷ್ಟ ರೀತಿಯಲ್ಲಿ ಕುಣಿಯುತ್ತಾರೆ. ಆಧುನಿಕ ಕಾಲಘಟ್ಟದಲ್ಲಿಯೂ ಪ್ರತಿ ಮನೆಯ ಸದಸ್ಯರೂ ಸಹ ಡೆಕ್ಕೆ ಕುಣಿತದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವುದು ಅವರ ನಂಬಿಕೆ ಶ್ರದ್ಧೆಯ ದ್ಯೋತಕವಾಗಿದೆ.

ಮನೆ ಮನೆಗಳಿಗೆ ತೆರಳುವ ಪೂರ್ವದಲ್ಲಿ ಸಂಪ್ರದಾಯದಂತೆ ಇವರು ಗ್ರಾಮದ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಾರೆ. ಡೆಕ್ಕೆ ಕುಣಿತ ಈ ಸಮುದಾಯದಲ್ಲಿ ತಲೆ ತಲಾಂತರದಿಂದಲೂ ನಡೆದುಕೊಂಡು ಬಂದಿದ್ದು, ಇಂದಿಗೂ ಮುಂದುವರಿಸಿಕೊಂಡು ಬರುವ ಮೂಲಕ ಬುಡಕಟ್ಟು,ಗ್ರಾಮೀಣ ಕಲೆ,ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.


ಡೆಕ್ಕೆ ಕುಣಿತದಲ್ಲಿ ಕಾಮನ ಅಂಗಿ ವೇಷವೂ ಸಹ ಆಕರ್ಷಣೀಯವಾಗಿದೆ. ಕಾಮನಂಗಿಯ ವೇಷ ಕಂಡರೆ ಮಕ್ಕಳು ಹೊರ ಬರಲು ಭಯಗೊಳ್ಳುತ್ತಾರೆ. ಈ ಕುಣಿತ ಮಾಡುವವರು ಬರಿಗಾಲಲ್ಲಿ ನಡೆಯುವುದು ಕೂಡ ವಿಶೇಷ ವಾಗಿದೆ. ಡೆಕ್ಕೆ ಕುಣಿತವನ್ನು ಇವರು ಎರಡು ಮೂರು ರೀತಿಯಲ್ಲಿ ಮಾಡಿ ಗಮನ ಸೆಳೆಯುತ್ತಾರೆ. ಡೆಕ್ಕೆ ಕುಣಿತದವರಿಗೆ  ಪ್ರತಿ ಮನೆಗಳಲ್ಲಿಯೂ ಕಾಯಿ, ಬಾಳೆ ಹಣ್ಣು, ಹಣ ನೀಡಿ ಸ್ಪಂದಿಸುತ್ತಾರೆ ಗೌರವದಿಂದ ಕಾಣುತ್ತಾರೆ. ಗ್ರಾಮದ ಮನೆಗಳಲ್ಲಿ ಮದುವೆ, ದೇವರ ಕಾರ್ಯದಂತಹ  ಶುಭ ಕಾರ್ಯಗಳು ನಡೆದಿದ್ದಲ್ಲಿ ಡೆಕ್ಕೆ ಕುಣಿಯುವವರಿಗೆ ಮನೆಯವರು ಚಹಾ, ಸಿಹಿ ತಿಂಡಿ ನೀಡಿ ಹೊಸ ಮಡಿ ವಿತರಿಸಿ ಕುಣಿಸುವ ಪದ್ಧತಿಯೂ ಕೂಡ ಇರುವುದನ್ನು ಗಮನಿಸಬಹುದಾಗಿದೆ.


ಈ ದಿನಗಳಲ್ಲಿ ಸಂಗ್ರಹಿಸಿದ ಹಣವನ್ನು ಗೊಂಡರು ಅವಲಕ್ಕಿ ಪ್ರಸಾದ ಮಾಡಿ ಗ್ರಾಮದ ಪ್ರಮುಖರು ಮತ್ತು ಸಮುದಾಯದವರಿಗೆ ಹಂಚಿದ ಬಳಿಕ ಉಳಿದ ಹಣವನ್ನು ತಮ್ಮ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ, ಅನಾರೋಗ್ಯ ಪೀಡಿತರ ಚಿಕಿತ್ಸೆ ಹೀಗೆ ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಳ್ಳುತ್ತಾರೆ. ಇದು ಇವರ ಸಮುದಾಯದ ಕಾಳಜಿಯನ್ನು ಎತ್ತಿ ತೋರಿಸುತ್ತದೆ.ಸಂಪ್ರದಾಯ ಮತ್ತು ಮಾನವೀಯತೆಯ ಕೊಂಡಿಯಾಗಿಯು ಡೆಕ್ಕೆ ಕುಣಿತ ಕಾಣಿಸಿಕೊಳ್ಳುತ್ತದೆ.


ಡೆಕ್ಕೆ ಕುಣಿತ ಬುಡಕಟ್ಟು ಗೊಂಡ ಸಮುದಾಯದ ಒಂದು ಸಾಂಪ್ರದಾಯಿಕ ಜಾನಪದ ಕಲೆಯಾಗಿದ್ದು, ಇದು ತಾಲೂಕು,ಜಿಲ್ಲೆಯಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳು,ಜನಪದ ಹಾಗೂ ಸಾಹಿತ್ಯ ಸಮ್ಮೇಳನಗಳು, ರಾಜ್ಯೋತ್ಸವ ಹಾಗೂ ಹಂಪಿ ಉತ್ಸವ ,ಮೈಸೂರು ದಸರಾದಂತಹ ಕಾರ್ಯಕ್ರಮದಲ್ಲೂ ಪ್ರದರ್ಶಿಸುತ್ತಿರುವುದು ಗಮನಾರ್ಹ ಸಂಗತಿ.ಇತ್ತೀಚೆಗೆ ಈ ಸಮುದಾಯದ ಡೆಕ್ಕೆ ಕುಣಿತ ದುಬೈ ನಂತಹ ದೇಶದಲ್ಲಿಯೂ ಪ್ರದರ್ಶನ ಗೊಂಡಿರುವುದು ಜನಪದ ಕಲೆಯ ಮಹತ್ವ ಹೊರದೇಶದಲ್ಲಿಯೂ ಪ್ರಸಾರವಾದಂತಾಗಿದೆ.


ತಮ್ಮ ಪೂರ್ವಜರು ಯಾವ ರೀತಿಯಲ್ಲಿ ಜಾನಪದ ಕಲೆ ಪ್ರದರ್ಶಿಸುತ್ತಿದ್ದರೋ ಅದೇ ಮಾದರಿಯಲ್ಲಿ ಇಂದಿನ ಯುವ ಪೀಳಿಗೆಯವರೂ ಸಹ ಅದನ್ನು ಅಷ್ಟೇ ಆಸಕ್ತಿಯಿಂದ ಸಂಪ್ರದಾಯಬದ್ಧವಾಗಿ ಶೃದ್ಧಾ ಭಕ್ತಿ ಪೂರ್ವಕವಾಗಿ ಮುಂದುವರಿಸಿಕೊಂಡು ಹೋಗುತ್ತಿರುವುದು ಇಂದಿನ ಎಲ್ಲ ಸಮುದಾಯಕ್ಕೆ ಮಾದರಿ ಎಂದರೆ ತಪ್ಪಾಗಲಾರದು. ಎನೇ ಇರಲಿ ಇಂತ ಸಂಪ್ರದಾಯ, ಆಚರಣೆ, ಜನಪದ ನೃತ್ಯ ಪ್ರಕಾರಗಳು ನಮ್ಮ ಸನಾತನ ಧರ್ಮದ ಅಸ್ಮಿತೆಗಳಾಗಿದ್ದು ಇವೆಲ್ಲವನ್ನು ಕಾಪಿಟ್ಟುಕೊಂಡು ಹೋಗುವುದು ಉಳಿಸುವುದು ಯುವ ಸಮುದಾಯದ ಕರ್ತವ್ಯ ವಾಗಿದೆ. ಈ ನೆಲದ ಮೂಲ ಸಂಪ್ರದಾಯ ಉಳಿದಲ್ಲಿ ಸಂಸ್ಕಾರ ಉಳಿದೀತು ದೇಶ ಉಳಿದೀತು ಅಲ್ಲವೆ?


-ಉಮೇಶ ಮುಂಡಳ್ಳಿ ಭಟ್ಕಳ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
To Top