ಕಥೆ: ​ಮಂಜಿನ ಬೆಳಕಿನೊಳಗಿನ ಮೌನ

Upayuktha
0


​ಬೆಳಗಿನ ಜಾವದ ಮಂಜು ಇನ್ನೂ ಮರೆಯಾಗಿರಲಿಲ್ಲ. ಕಿಟಕಿಯ ಗಾಜಿನ ಮೇಲೆ ಮುತ್ತಿನ ಹನಿಗಳಂತೆ ಇಬ್ಬನಿ ಕುಳಿತಿದ್ದವು. ಮಾಧವಿ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ತೊಳೆದು ಒಂದೊಂದಾಗಿ ಜೋಡಿಸುತ್ತಿದ್ದಳು. ಸ್ಟೀಲ್ ಪಾತ್ರೆಗಳು ಪರಸ್ಪರ ತಗುಲಿದಾಗ ಬರುವ ಶಬ್ದ ಅವಳ ಯೋಚನೆಗಳಿಗೆ ತಾಳ ಹಾಕುವಂತಿತ್ತು. ಅವಳ ಕೈಗಳು ಕೆಲಸ ಮಾಡುತ್ತಿದ್ದರೂ, ಮನಸ್ಸು ಮಾತ್ರ ಯಾವುದೋ ಸುಳಿಯಲ್ಲಿ ಸಿಲುಕಿದಂತೆ ಒದ್ದಾಡುತ್ತಿತ್ತು.


​"ಮಾಧವಿ, ಪಾತ್ರೆ ತೊಳೆದ ಮೇಲೆ ಹಾಲ್ ಮತ್ತು ಬೆಡ್‌ರೂಮ್ ಒಂದ್ಸಲ ನೀಟಾಗಿ ಒರೆಸಿಬಿಡು. ತರಕಾರಿ ಸಾರು ನಾನೇ ಮಾಡುವೆ. ನೀನು ಬೇಗ ಕೆಲಸ ಮುಗಿಸಿ ಮನೆಗೆ ಹೊರಡು," ಎಂದು ಮನೆಯ ಯಜಮಾನತಿ ಸಾವಿತ್ರಮ್ಮ ಅಕ್ಕರೆಯಿಂದಲೇ ಹೇಳಿದರು.


​ಮಾಧವಿ ಮೆಲ್ಲಗೆ ತಲೆಯಾಡಿಸಿದಳು. ಆದರೆ ಅವಳ ಗಮನವೆಲ್ಲ ಮೇಲ್ಮಹಡಿಯ ಕಡೆಗಿತ್ತು. ಮೇಲಿನಿಂದ ಮತ್ತೆ ಅದೇ ಆರ್ಭಟ ಕೇಳಿಬರುತ್ತಿತ್ತು. ಗಟ್ಟಿಯಾಗಿ ಕಿರುಚಾಡುವ ಶಬ್ದ, ಏನೋ ವಸ್ತುಗಳನ್ನು ನೆಲಕ್ಕೆ ಅಪ್ಪಳಿಸಿದ ಸದ್ದು, ಯಾವುದೋ ಬಾಗಿಲನ್ನು ಜೋರಾಗಿ ಬಡಿದ ಅಬ್ಬರ... !

ಪ್ರತಿದಿನವೂ ಆ ಮನೆಯಲ್ಲಿ ಇದೇ ಕಥೆ. ಮೇಲ್ನೋಟಕ್ಕೆ ಸ್ವರ್ಗದಂತೆ ಕಾಣುವ ಆ ಬಂಗಲೆಯಲ್ಲಿ ನರಕದ ಕಿಚ್ಚು ಉರಿಯುತ್ತಿತ್ತು.

​ಮಾಧವಿಗೆ ಅತೀವ ಅಚ್ಚರಿಯಾಗುತ್ತಿತ್ತು.


'ಈ ಮನೆಯವರಿಗೆ ಏನಿಲ್ಲ? ಕೈತುಂಬಾ ಹಣವಿದೆ, ಐಷಾರಾಮಿ ಕಾರಿದೆ, ಸಮಾಜದಲ್ಲಿ ದೊಡ್ಡ ಗೌರವವಿದೆ. ಮ್ಯಾಡಂ ನೋಡಿದರೆ ಸಾಕ್ಷಾತ್ ದೇವತೆಯಂತೆ ಸುಂದರವಾಗಿದ್ದಾರೆ, ಸಾಲದಕ್ಕೆ ಇಬ್ಬರು ಮುದ್ದಾದ ಬುದ್ಧಿವಂತ ಮಕ್ಕಳಿದ್ದಾರೆ.


ಆದರೂ ಈ ಮನೆಯ ಗೋಡೆಗಳ ಒಳಗೆ ಶಾಂತಿ ಏಕಿಲ್ಲ? ನೆಮ್ಮದಿಯ ಇಂಚರಕ್ಕಿಂತ ಜಗಳದ ಅಬ್ಬರವೇ ಏಕೆ ಹೆಚ್ಚಾಗಿದೆ?' ಎಂದು ಅವಳು ತನ್ನಷ್ಟಕ್ಕೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಳು.


​ಅವಳ ಯೋಚನೆಯನ್ನು ಓದಿದವರಂತೆ ಸಾವಿತ್ರಮ್ಮ ಹತ್ತಿರ ಬಂದು ಮೆಲುಧ್ವನಿಯಲ್ಲಿ ಹೇಳಿದರು, "ಅದನ್ನೆಲ್ಲ ತಲೆಗೆ ಹಾಕಿಕೊಳ್ಳಬೇಡ ಮಾಧವೀ, ನೀನು ನಿನ್ನ ಕೆಲಸ ಮುಗಿಸು."


​"ಅಲ್ಲ, ಇಷ್ಟೆಲ್ಲಾ ಇದ್ದೂ ಯಾಕೆ ಹೀಗೆ ದಿನಾ ಕಿತ್ತಾಡ್ತಾರೆ? ಆ ಮ್ಯಾಡಂ ಕಣ್ಣೀರು ಹಾಕೋದು ನೋಡಿದ್ರೆ ಪಾಪ ಅನಿಸುತ್ತೆ. ಇಬ್ಬರೂ ತುಂಬಾ ಓದಿದವರು ಕೈ ತುಂಬಾ ಸಂಪಾದನೆ ಇದೆ" ಮಾಧವಿ ಕುತೂಹಲ ಮತ್ತು ಕನಿಕರದಿಂದ ಕೇಳಿದಳು. ​ಸಾವಿತ್ರಮ್ಮ ನಿಟ್ಟುಸಿರು ಬಿಟ್ಟರು.


"ಅನುಮಾನ ಮಾಧವೀ, ಅನುಮಾನ. ಸಾರ್ ಅವರಿಗೆ ಹೊರಗಡೆ ಬೇರೆ ಯಾವುದೋ ಸಂಬಂಧ ಇದೆ ಅಂತ ಮೇಡಂ ಸಂಶಯ ಪಡ್ತಾರೆ. ಅದು ಬರಿ ಸಂಶಯವೋ ಅಥವಾ ನಿಜವೋ ಆ ದೇವರಿಗೇ ಗೊತ್ತು. ಗಂಡಸರು ಅಂದಮೇಲೆ ಸ್ವಲ್ಪ ಜಾಗ್ರತೆ ಇರಬೇಕು ಅಷ್ಟೇ. ನಂಬಿಕೆ ಅನ್ನೋದು ಒಮ್ಮೆ ಒಡೆದರೆ ಅದನ್ನು ಅಂಟಿಸೋದು ತುಂಬಾ ಕಷ್ಟ."


​ಆ ಮಾತು ಮಾಧವಿಯ ಎದೆಯಲ್ಲಿ ಸಣ್ಣ ನಡುಕ ಹುಟ್ಟಿಸಿತು. 'ಗಂಡಸರು ಅಂದರೆ ಯಾರು? ಪ್ರೀತಿ ಮಾಡುವವರೆಲ್ಲಾ ಕೊನೆಗೆ ಹೀಗೇ ಮೋಸ ಮಾಡ್ತಾರಾ?' ಅವಳ ಧ್ವನಿಯಲ್ಲಿ ಒಂದು ಬಗೆಯ ನಿಗೂಢ ಆತಂಕವಿತ್ತು.


​"ನಿನಗೆ ಮದುವೆಯಾಗಿ ಎಷ್ಟು ವರ್ಷ ಆಯ್ತು ?" ಸಾವಿತ್ರಮ್ಮ ಕೇಳಿದರು. ​"ಮೂರು ವರ್ಷ ಕಳೆಯುತ್ತಾ ಬಂತು ಅಮ್ಮ."


​"ಹಾಗಾದರೆ ನೀನು ಕೂಡ ಸ್ವಲ್ಪ ಕಣ್ಣು ತೆರೆದೇ ಇರಬೇಕು. ಪ್ರೀತಿ ಅತಿಯಾದಾಗ ಕಣ್ಣು ಕುರುಡಾಗುತ್ತೆ, ಜಾಗ್ರತೆಯಿರಲಿ," ಎಂದು ಸಾವಿತ್ರಮ್ಮ ಎಚ್ಚರಿಸಿದರು.


​ಆ ದಿನ ಕೆಲಸ ಮುಗಿಸಿ ಮನೆಗೆ ಹೊರಟ ಮಾಧವಿಯ ಮನಸ್ಸಿನಲ್ಲಿ ಅಸಂಖ್ಯಾತ ಪ್ರಶ್ನೆಗಳು ಸುಳಿಯುತ್ತಿದ್ದವು. ಸಾವಿತ್ರಮ್ಮ ಹೇಳಿದ ಆ 'ಜಾಗ್ರತೆ' ಎಂಬ ಪದ ಅವಳ ಕಿವಿಯಲ್ಲಿ ಮತ್ತೆ ಮತ್ತೆ ಮೊಳಗಿತು. ಅನುಮಾನದ ಸಣ್ಣ ಹುಳವೊಂದು ಅವಳ ಮನಸ್ಸನ್ನು ಕೊರೆಯತೊಡಗಿತು. 


'ನನ್ನ ಮುರಳಿ ಕೂಡ ಕೆಲಸದ ಜಾಗದಲ್ಲಿ ಅದೆಷ್ಟೋ ಹೆಣ್ಣುಮಕ್ಕಳ ಜೊತೆ ಮಾತಾಡ್ತಾನೆ. ಅವನಿಗೆ ಬೇರೆಯವರು ಇಷ್ಟವಾಗಬಹುದೇ? ನನಗಿಂತ ಚೆನ್ನಾಗಿರುವವರು ಯಾರಾದರೂ ಸಿಕ್ಕರೆ ಅವನು ನನ್ನನ್ನ ಮರೆತುಬಿಡ್ತಾನಾ?' ಈ ಯೋಚನೆ ಬಂದಾಗಲೇ ಅವಳಿಗೆ ಉಸಿರು ಕಟ್ಟಿದಂತಾಯಿತು.

​ಅವಳ ನೆನಪಿನ ತೆರೆಯ ಮೇಲೆ ಮುರಳಿಯ ಮುಖ ಮೂಡಿತು.


 ಮುರಳಿ... ಅವಳ ಪ್ರಾಣ, ಅವಳ ಪ್ರಪಂಚ. ಅವನು ಅತಿಯಾಗಿ ಮಾತುಗಾರನಲ್ಲ, ಪ್ರೀತಿಯನ್ನು ನಾಟಕೀಯವಾಗಿ ಪ್ರದರ್ಶಿಸುವವನೂ ಅಲ್ಲ. ಆದರೆ ಮಾಧವಿಗೆ ಸ್ವಲ್ಪ ಹುಷಾರಿಲ್ಲವೆಂದರೂ ಅವನು ಪಡುವ ಕಳವಳ ಮಾಧವಿಗೆ ಗೊತ್ತು. ಅವಳ ಪ್ರತಿಯೊಂದು ಆಸೆಗೂ ಅವನು ನೀರೆರೆದಿದ್ದ. ಅವಳು ಕೆಲಸಕ್ಕೆ ಹೋಗುತ್ತೇನೆ ಎಂದಾಗಲೂ ಅವನು ಅಡ್ಡಿಪಡಿಸಲಿಲ್ಲ.


​ಮೊದಲ ಸಂಬಳ ತಂದು ಅವನ ಕೈಗಿಟ್ಟಾಗ ಅವನು ಅದನ್ನು ಪ್ರೀತಿಯಿಂದ ಅವಳ ಕೈಗೇ ಮರಳಿಸಿ ಹೇಳಿದ್ದ, "ಮಾಧು, ಕಷ್ಟಪಟ್ಟು ದುಡಿದ ಹಣ ಇದು. ಇದು ನಿನ್ನ ಸ್ವಾಭಿಮಾನದ ಸಂಕೇತ. ನಿನಗೆ ಬೇಕಾದ ಮಲ್ಲಿಗೆ ಹೂವನ್ನೋ ಅಥವಾ ನಿನಗಿಷ್ಟವಾದ ಸೀರೆಯನ್ನೋ ಇದರಿಂದಲೇ ಕೊಂಡುಕೋ. ಮಿಕ್ಕಿದ್ದನ್ನು ಉಳಿತಾಯ ಮಾಡು, ನಿನಗೊಂದು ಸುಂದರವಾದ ಬೆಳ್ಳಿಯ ಗೆಜ್ಜೆ ಕೊಡಿಸಬೇಕೆಂಬ ಆಸೆ ನನಗಿದೆ."


​ಗೆಜ್ಜೆ ಎಂದರೆ ಮಾಧವಿಗೆ ಪ್ರಾಣ. ಪಕ್ಕದ ಮನೆಯವರು ಗೆಜ್ಜೆ ಹಾಕಿಕೊಂಡು ನಡೆದಾಗ ಬರುವ ಆ ಕಿಣಿಕಿಣಿ ಶಬ್ದ ಅವಳನ್ನು ಮಂತ್ರಮುಗ್ಧಗೊಳಿಸುತ್ತಿತ್ತು. ಅದೆಷ್ಟೋ ಬಾರಿ ಅಂಗಡಿಯ ಗಾಜಿನ ಹಿಂದೆ ಇರುವ ಬೆಳ್ಳಿಯ ಗೆಜ್ಜೆಗಳನ್ನು ನೋಡಿ ನಿಟ್ಟುಸಿರು ಬಿಟ್ಟಿದ್ದಳು. ಮುರಳಿ ಅದನ್ನು ಗಮನಿಸಿದ್ದ. ಆದರೆ ಆ ಸಮಯದಲ್ಲಿ ಅವರಿಬ್ಬರಿಗೂ ಆರ್ಥಿಕ ಸಂಕಷ್ಟವಿತ್ತು. ಸಣ್ಣ ಮನೆ ಕಟ್ಟಲು ಇದ್ದ ಅಲ್ಪಸ್ವಲ್ಪ ಒಡವೆಯನ್ನೂ ಮಾರಿಬಿಟ್ಟಿದ್ದರು. ಕಳೆದ ತಿಂಗಳಷ್ಟೇ ಬ್ಯಾಂಕ್ ಸಾಲ ತೀರಿತ್ತು.


​ಕೆಲಸದ ಸ್ಥಳಕ್ಕೆ ಬಂದ ಮಾಧವಿಗೆ ಅಲ್ಲಿ ಮುರಳಿ ಕಾಣಿಸಲಿಲ್ಲ. ದಿನವೂ ಅವರಿಬ್ಬರೂ ಜೊತೆಯಾಗಿ ಮನೆಗೆ ಹೋಗುತ್ತಿದ್ದರು. ಅಲ್ಲಿನ ಮೇಸ್ತ್ರಿ ಗೋಪಾಲಣ್ಣ ಹೇಳಿದರು, " ಮಾಧವಿ, ಮುರಳಿ ಇವತ್ತು ಬೇಗ ಹೋದ. ನೀನು ಬಂದ್ರೆ ಕಾಯಬೇಡ, ಮನೆಗೆ ಹೋಗು ಅಂತ ಹೇಳಿಹೋದ." ಎಂದಾಗ ಮಾಧವಿಯ ಮನದಲ್ಲಿ ಸಾವಿತ್ರಮ್ಮ ಹೇಳಿದ ಮಾತುಗಳು ತೇಲಿ ಬಂದವು.


​ಮಾಧವಿಗೆ ಏನೋ ಅತೃಪ್ತಿ. ಎಲ್ಲಿ ಹೋಗಿರಬಹುದು? ಯಾವಾಗಲೂ ತನ್ನನ್ನು ಕರೆದುಕೊಂಡೇ ಹೋಗುತ್ತಿದ್ದವನು ಇಂದು ಹೇಳದೆ ಕೇಳದೆ ಹೋಗಿದ್ದೇಕೆ? 'ಯಾವುದಾದರೂ ಹೆಣ್ಣಿನ ಜೊತೆ ಹೋಗಿರಬಹುದೇ? ಈ ಸಂಶಯ ಅವಳ ಎದೆಯಲ್ಲಿ ಕಿಚ್ಚು ಹಚ್ಚಿತು.


ದಾರಿಯುದ್ದಕ್ಕೂ ಅವಳು ಆ ಬಂಗಲೆಯ ಮೇಡಂ ಮತ್ತು ಸಾರ್ ನಡುವಿನ ಜಗಳವನ್ನೇ ನೆನಪಿಸಿಕೊಳ್ಳುತ್ತಿದ್ದಳು. 'ಅಷ್ಟು ಸುಂದರವಾಗಿದ್ದರೂ ಆಕೆಗೆ ಮೋಸವಾಗಿದೆಯಲ್ಲ, ಇನ್ನು ನನ್ನ ಕಥೆಯೇನು ?' ಎಂಬ ಭಯ ಅವಳನ್ನು ಕಾಡತೊಡಗಿತು.


​ಸಂಜೆ ಮನೆಗೆ ಬಂದ ಮಾಧವಿ ಯಾಂತ್ರಿಕವಾಗಿ ಕೆಲಸ ಮುಗಿಸಿದಳು. ದೀಪ ಹಚ್ಚಿ ಪ್ರಾರ್ಥನೆ ಮಾಡಿ ಮುಗಿಸುವಷ್ಟರಲ್ಲಿ ಮುರಳಿ ಬಂದ. ಅವನ ಮುಖದಲ್ಲಿ ಏನೋ ಒಂದು ನಿಗೂಢ ಮೌನವಿತ್ತು.


​"ಎಲ್ಲಿ ಹೋಗಿದ್ದೆ ಮುರಳಿ? ಇವತ್ತು ಜೊತೆಗೆ ಬರಲಿಲ್ಲವಲ್ಲ?" ಮಾಧವಿ ತನ್ನ ಧ್ವನಿಯಲ್ಲಿನ ಅನುಮಾನವನ್ನು ಅಡಗಿಸಿಕೊಂಡು ಮೃದುವಾಗಿ ಕೇಳಿದಳು.


​"ಒಂದು ಸಣ್ಣ ಕೆಲಸ ಇತ್ತು ಮಾಧು, ಮುಗಿಸಿಕೊಂಡು ಬಂದೆ," ಎಂದು ಅಸ್ಪಷ್ಟವಾಗಿ ಉತ್ತರಿಸಿ ಸ್ನಾನಕ್ಕೆ ಹೋದ.


​ಅವನ ಈ ಮಿತಭಾಷಿತನ ಇಂದು ಮಾಧವಿಗೆ ಅನುಮಾನವಾಗಿ ಕಂಡಿತು. ಅವಳು ಅಡುಗೆಮನೆಯಲ್ಲಿ ಬಿಸಿಯಾದ ಅನ್ನ ಮತ್ತು ಮಿಶ್ರ ತರಕಾರಿಗಳ ಸಾಂಬಾರ್ ಸಿದ್ಧಪಡಿಸಿದಳು.


ಊಟಕ್ಕೆ ಕುಳಿತಾಗ ಮುರಳಿ ತನ್ನ ತಟ್ಟೆಯಿಂದ ಅನ್ನದ ತುತ್ತನ್ನು ಸಾರಿನಲ್ಲಿ ಅದ್ದಿ ಪ್ರೀತಿಯಿಂದ ಅವಳ ಬಾಯಿಗೆ ಇಟ್ಟ. ಅವಳು ಬೇಡವೆಂದರೂ ಕೇಳದೆ ತಿನ್ನಿಸಿದ. 


'ಈ ಪ್ರೀತಿಯ ಮರೆಯಲ್ಲಿ ಮೋಸವಿದೆಯೇ ಅಥವಾ ಕಳಂಕವಿಲ್ಲದ ಪ್ರೀತಿಯೇ? ಮಾಧವಿಯ ಮನಸ್ಸು ತಕ್ಕಡಿಯಂತೆ ಮೇಲೆ ಕೆಳಗೆ ತೂಗುತ್ತಿತ್ತು.


​ರಾತ್ರಿ ಅಂಗಳದಲ್ಲಿ ಚಂದಿರನ ಬೆಳಕು ಹಾಲಿನಂತೆ ಸುರಿಯುತ್ತಿತ್ತು. ಮೌನವಾಗಿ ಕುಳಿತಿದ್ದ ಮಾಧವಿಯನ್ನು ಮುರಳಿ ಅಂಗಳಕ್ಕೆ ಕರೆದ. 

"ಬಾ ಮಾಧು, ಇವತ್ತು ಆಕಾಶ ನೋಡು, ನಕ್ಷತ್ರಗಳು ಮಲ್ಲಿಗೆ ಹೂಗಳನ್ನು ಚೆಲ್ಲಿದಂತೆ ಕಾಣುತ್ತಿವೆ."


​ಅವಳು ಅಂಗಳಕ್ಕೆ ಬಂದಾಗ, ಮುರಳಿ ಇದ್ದಕ್ಕಿದ್ದಂತೆ ಅವಳ ಮುಂದೆ ಮೊಣಕಾಲು ಊರಿ ಕುಳಿತ. ಮಾಧವಿ ಗಾಬರಿಯಾದಳು. 

"ಏನು ಮಾಡ್ತಿದ್ದೀಯ ಮುರಳಿ? ಯಾರಾದರೂ ನೋಡಿದರೆ ಏನು ಅಂದುಕೊಂಡಾರು?"


​"ಸುಮ್ಮನೆ ಇರು ಮಾಧು," ಎನ್ನುತ್ತಾ ಅವಳ ಪಾದಗಳನ್ನು ತನ್ನ ಕೈಗಳಲ್ಲಿ ಮೃದುವಾಗಿ ಹಿಡಿದುಕೊಂಡ. ಚೀಲದಿಂದ ಬೆಳ್ಳಿಯ ಎರಡು ಸುಂದರ ಗೆಜ್ಜೆಗಳನ್ನು ಹೊರತೆಗೆದ. ಅವುಗಳ ವಿನ್ಯಾಸ ಎಷ್ಟು ಅದ್ಭುತವಾಗಿತ್ತೆಂದರೆ, ಮಾಧವಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ. 

ಚಿಕ್ಕ ಚಿಕ್ಕ ಮಲ್ಲಿಗೆ ಮೊಗ್ಗಿನಂತಹ ಗೆಜ್ಜೆಗಳು ಅವು....!


​"ನನ್ನ ಗೆಳೆಯನೊಬ್ಬ ಒಡವೆ ಕೆಲಸ ಮಾಡ್ತಾನೆ. ಅವನಿಗೆ ಮೊದಲೇ ಹೇಳಿ ನಿನಗಾಗಿ ಮಾಡಿಸಿದ್ದು. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಹಣ ಕಟ್ಟಿ ಇವತ್ತು ಅದನ್ನು ಬಿಡಿಸಿಕೊಂಡು ಬಂದೆ. ಅದಕ್ಕೆ ಇವತ್ತು ಬರಲು ತಡವಾಯಿತು. ನಿನ್ನ ಈ ಪಾದಗಳಿಗೆ ಇದು ತುಂಬಾ ಅಂದವಾಗಿ ಕಾಣುತ್ತೆ," ಎಂದು ಹೇಳುತ್ತಾ ಗೆಜ್ಜೆ ತೊಡಿಸಿದ. 


"ಹೀಗೆ ಒಂದು ಸುತ್ತು ಬಾ. ಇದರ ಸದ್ದು ಹೇಗೆ ಕೇಳಿಸುತ್ತದೆ ಎಂದು ನಾನು ಕೇಳುತ್ತೇನೆ" ಎಂದು ಅವಳನ್ನು ಒತ್ತಾಯಿಸಿ ನಡೆಸಿದ. ಅವಳು ನಾಚುತ್ತಲೆ ನಾಲ್ಕು ಹೆಜ್ಜೆ ನಡೆದು ಮತ್ತೆ ಅವನ ಬಳಿಗೆ ಬಂದು ನಿಂತಳು.


ಗೆಜ್ಜೆಗಳ ಕಿಣಿಕಿಣಿ ಶಬ್ದ ಅಂಗಳದ ಮೌನದಲ್ಲಿ ಸುಂದರವಾಗಿ ಪ್ರತಿಧ್ವನಿಸಿತು. ​ಮಾಧವಿಯ ಕಣ್ಣುಗಳಿಂದ ಆನಂದಭಾಷ್ಪ ಹರಿಯಿತು. ಅವಳು ಪಟ್ಟ ತೊಳಲಾಟ, ಅನುಮಾನದ ಮೋಡಗಳು ಮಂಜಿನಂತೆ ಕರಗಿ ಹೋದವು. ತಾನು ಅವನನ್ನು ಸಂಶಯಿಸಿದ್ದಕ್ಕೆ ಅವಳಿಗೆ ತನ್ನ ಮೇಲೆ ತಾನೇ ಅಸಹ್ಯವೆನಿಸಿತು.


​"ಅಯ್ಯೋ, ನನ್ನ ಮುದ್ದಾದ ಹೆಂಡತಿ ಮತ್ತೆ ಅಳುತ್ತಿದ್ದಾಳೆ! ಈ ಪಾದಗಳು ನನ್ನ ಕೈ ಮೇಲೆ ಇಡು" ಎಂದು ಅವನು ತನ್ನ ಕೈಗಳನ್ನು ನೆಲದ ಮೇಲೆ ಹರಡಿದ. ಮಾಧವಿ ತನ್ನ ಕಾಲನ್ನು ಅವನ ಅಂಗೈ ಮೇಲೆ ಇಟ್ಟಾಗ, ಅವಳಿಗೆ ಆ ಸ್ಪರ್ಶದಲ್ಲಿ ಜಗತ್ತಿನ ಸಮಸ್ತ ಸುಖವೂ ಕಂಡಿತು.

​ರಾತ್ರಿ ಮಲಗುವಾಗ ಮಾಧವಿ ಅವನ ಎದೆಯ ಮೇಲೆ ಮುಖವಿಟ್ಟು ಮೆಲ್ಲಗೆ ಕೇಳಿದಳು, 


"ಮುರಳಿ, ನಾನು ಇವತ್ತು ನಿನ್ನನ್ನ ಸಂಶಯ ಪಟ್ಟೆ. ನೀನು ಬೇಗ ಹೋದಾಗ ನನಗೆ ತುಂಬಾ ಭಯ ಆಗಿತ್ತು. ನಿನ್ನ ಕೆಲಸದ ಜಾಗದಲ್ಲಿ ಅಷ್ಟು ಜನ ಹೆಣ್ಣುಮಕ್ಕಳು ಇರ್ತಾರಲ್ಲ, ನಿನಗೆ ಯಾರೂ ಸುಂದರವಾಗಿ ಕಾಣಿಸುವುದಿಲ್ಲವೇ?" ​ಮುರಳಿ ಮೃದುವಾಗಿ ನಕ್ಕ. ಆ ನಗು ಎಷ್ಟು ಪವಿತ್ರವಾಗಿತ್ತೆಂದರೆ ಮಾಧವಿಯ ಮನಸ್ಸು ಹಗುರವಾಯಿತು.


"ಮಾಧು, ಸೌಂದರ್ಯ ಎನ್ನುವುದು ನೋಡುವವರ ಕಣ್ಣಲ್ಲಿದೆ. ಬಣ್ಣದಲ್ಲೋ, ಒಡವೆಯಲ್ಲೋ ಪ್ರೀತಿ ಇರುವುದಿಲ್ಲ. ಗಂಡ ಮನೆಗೆ ಬರುವಾಗ ಯಾವ ಹೆಣ್ಣು ಪ್ರೀತಿಯಿಂದ ದೀಪ ಹಚ್ಚಿ ಕಾಯುತ್ತಾಳೋ, ಅವನ ಕಷ್ಟದಲ್ಲಿ ಹೆಗಲಾಗುತ್ತಾಳೋ ಅವಳೇ ಜಗತ್ತಿನ ಸುಂದರಿ. ನನಗೆ ನೀನೇ ಆ ಸುಂದರಿ."

​ಅವನು ಅವಳನ್ನು ಬಿಗಿಯಾಗಿ ಅಪ್ಪಿಕೊಂಡು ಮುಂದುವರಿಸಿದ, "ನಾನು ಸೈಟಿನಲ್ಲಿ ಇಟ್ಟಿಗೆ ಹೊತ್ತು ಸುಸ್ತಾದಾಗ, ಕಣ್ಣು ಮುಚ್ಚಿ ನಿನ್ನ ಮುಖ ನೆನಪು ಮಾಡ್ತೇನೆ. ನೀನು 'ಮುರಳಿ' ಅಂತ ಕರೆಯುವ ಆ ಧ್ವನಿ ಕೇಳಿದರೆ ನನ್ನೆಲ್ಲಾ ಸುಸ್ತು ಮಾಯವಾಗಿ ಹೊಸ ಚೈತನ್ಯ ಬರುತ್ತದೆ. ಈ ಬೆಳ್ಳಿಯ ಗೆಜ್ಜೆಗಿಂತ ನಿನ್ನ ನಗು ನನಗೆ ಬೆಲೆಬಾಳುವಂತದ್ದು. ನೀನು ಎಷ್ಟೇ ವಯಸ್ಸಾದರೂ, ನಿನ್ನ ರೂಪ ಬದಲಾದರೂ ನನ್ನ ಪಾಲಿಗೆ ನೀನೇ ನನ್ನ ಉಸಿರು."


​ಮುರಳಿ ಮಾತು ಮುಗಿಸುವಷ್ಟರಲ್ಲಿ ನಿದ್ರೆಗೆ ಜಾರಿದ್ದ. ಮಾಧವಿ ಅವನ ಮುಖವನ್ನು ನೋಡಿದಳು. ಮಗುವಿನಂತಹ ನಿಷ್ಕಲ್ಮಶ ನಗು ಅಲ್ಲಿತ್ತು. ಅವಳು ಮೆಲ್ಲಗೆ ಅವನ ಹಣೆಗೆ ಮುತ್ತಿಟ್ಟು, ಗೆಜ್ಜೆಗಳ ಮೃದುವಾದ ಸದ್ದನ್ನು ಆಲಿಸುತ್ತಾ ಅವನ ಹೃದಯದ ಬಡಿತಕ್ಕೆ ಕಿವಿಯಾದಳು.

​ಜಗತ್ತಿನ ದೊಡ್ಡ ಬಂಗಲೆಗಳಲ್ಲಿ ಸಿಗದ ಶಾಂತಿ, ಅವಳ ಪುಟ್ಟ ಮನೆಯಲ್ಲಿ ಸಮೃದ್ಧವಾಗಿತ್ತು. ಅನುಮಾನವೆಂಬ ಕತ್ತಲೆಗೆ, ಮುರಳಿಯ ಅಪ್ಪಟ ಪ್ರೀತಿಯೇ ದಾರಿದೀಪವಾಗಿತ್ತು. ಅವಳಿಗೆ ಈಗ ತಿಳಿದಿತ್ತು. ನಂಬಿಕೆ ಇರುವಲ್ಲಿ ಮಾತ್ರ ಪ್ರೀತಿ ಶಾಶ್ವತವಾಗಿ ನೆಲೆಸುತ್ತದೆ ಎಂದು.

- ಪ್ರಸನ್ನಾ ವಿ. ಚೆಕ್ಕೆಮನೆ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top