ಸೌರ ಶಕ್ತಿ ವಿದ್ಯುತ್ ಘಟಕಕ್ಕೆ ಚಾಲನೆ

Upayuktha
0


ಮೈಸೂರು: ಸೌರ ಶಕ್ತಿಯ ಸಮರ್ಥ ಬಳಕೆಯಿಂದ ಪರಿಸರ ಸಂರಕ್ಷಣೆ ಸಾಧ್ಯ ಎಂದು ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ. ಟಿ.ಆರ್. ಅರುಣ್ ಹೇಳಿದರು.


ಶ್ರೀಮನ್ ಮಧ್ವಾಚಾರ್ಯ ಮೂಲಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದ ಶ್ರೀರಾಮಪುರ ಶಾಖೆಯಾದ ಶ್ರೀ ವೆಂಕಟೇಶ್ವರ  ಧ್ಯಾನ ಕೇಂದ್ರದಲ್ಲಿ ಸೌರ ಶಕ್ತಿ ವಿದ್ಯುತ್ ಘಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಧಾರ್ಮಿಕ ಕೇಂದ್ರಗಳು ಸಂಪ್ರದಾಯ, ಭಕ್ತಿ ಮತ್ತು ಶ್ರದ್ಧೆಯನ್ನು ಜಾಗೃತಗೊಳಿಸುವುದರೊಂದಿಗೆ ಪರಿಸರಾತ್ಮಕ ಕಾಳಜಿಯನ್ನೂ ಮೂಡಿಸಬೇಕು. ಈ ನಿಟ್ಟಿನಲ್ಲಿ ವೆಂಕಟೇಶ್ವರ  ಧ್ಯಾನ ಕೇಂದ್ರವು 30 ಕೆವಿ ಸಾಮರ್ಥ್ಯದ 46 ಪ್ಯಾನಲ್ ಸಹಿತ ಸೌರ ಶಕ್ತಿ ಘಟಕವನ್ನು ಚಾವಣಿಯಲ್ಲಿ ಅಳವಡಿಸಿಕೊಂಡು ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು. ಸೌರ ವಿದ್ಯುತ್ ಘಟಕವು ನವೀಕರಿಸಬಹುದಾದ ಮತ್ತು ಪರಿಸರ ಸ್ನೇಹಿ ಇಂಧನ ಮೂಲವಾಗಿದೆ. ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಸೌರ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿದ್ದು. ಧ್ಯಾನ ಕೇಂದ್ರವೂ ಈ ನಿಟ್ಟಿನಲ್ಲಿ ಪರಿಸರ ಕಾಳಜಿಯನ್ನು ಕಾರ್ಯರೂಪಕ್ಕೆ ತಂದಿರುವುದು ಶ್ಲಾಘನೀಯ ಎಂದರು.


ಬ್ಯಾಂಕ್ ದೇಣಿಗೆ:

ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯ ಪ್ರಬಂಧಕ ಬದರಿ ಪ್ರಸಾದ್ ಮಾತನಾಡಿ, ದೀರ್ಘಕಾಲ ಬಾಳಿಕೆ ಬರುವ ಮತ್ತು ನಿಸರ್ಗ ಸ್ನೇಹಿ ಸೌರ ವಿದ್ಯುತ್ ಘಟಕ ಸ್ಥಾಪನೆಗೆ  ಬ್ಯಾಂಕ್ ಸಿಎಸ್‌ಆರ್ ನಿಧಿಯಿಂದ 10 ಲಕ್ಷ ರೂ. ದೇಣಿಗೆ ನೀಡಿದೆ. 102 ವರ್ಷಗಳನ್ನು ಪೂರ್ಣಗೊಳಿಸಿದ ಬ್ಯಾಂಕ್ ಆರ್ಥಿಕ ವ್ಯವಹಾರದಲ್ಲಿ ಸಾಧನೆ ಮಾಡುವುದರೊಂದಿಗೆ ಸಾಮಾಜಿಕ ಮತ್ತು ಪರಿಸರಾತ್ಮಕ ಸೇವಾ ಕಾರ್ಯಗಳಿಗೂ ಬೆಂಬಲ ನೀಡುತ್ತಿದೆ ಎಂದರು.


ಬ್ಯಾಂಕಿನ ವಿವೇಕಾನಂದನಗರ ಶಾಖಾ ಅಧಿಕಾರಿ ಗಣೇಶ ಭಟ್ ಮಾತನಾಡಿ, ಗ್ರಾಹಕ ಸ್ನೇಹಿಯಾಗಿ ಹಲವು ಯೋಜನೆಗಳನ್ನು ಕರ್ನಾಟಕ ಬ್ಯಾಂಕ್ ಹೊಂದಿದೆ. ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಕೊಡುಗೆಗಳನ್ನು ನೀಡುವಲ್ಲಿ ಮುಂದಾಗಿದೆ ಎಂದರು.


ಧ್ಯಾನ ಕೇಂದ್ರದ ವ್ಯವಸ್ಥಾಪಕ ಪಂಡಿತ ಹೇಮಂತ ಆಚಾರ್ಯ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಅನುಗ್ರಹ ಮತ್ತು ಆದೇಶದಂತೆ ಧ್ಯಾನ ಕೇಂದ್ರವು ದಶಕಗಳಿಂದ ಧರ್ಮ ಜಾಗೃತಿಗಾಗಿ ಹಲವು ಚಟುವಟಿಕೆಗಳನ್ನು ನಡೆಸುತ್ತಿದೆ. ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಬ್ಯಾಂಕ್ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿ ಬೆಂಬಲಿಸಿರುವುದು ಅಭಿನಂದನೀಯ ಎಂದರು. ಬ್ಯಾಂಕಿನ ನಿವೃತ್ತ ಹಿರಿಯ ವ್ಯವಸ್ಥಾಪಕ ಗೋವರ್ಧನ, ಮಠದ ಹಿರಿಯ ಕಾರ್ಯಕರ್ತ ಎ.ಎನ್. ರಮೇಶ್ ಇತರರು ಹಾಜರಿದ್ದರು.




ಶ್ರೀರಾಮಪುರದಲ್ಲಿರುವ ಉತ್ತರಾದಿ ಮಠದ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರದಲ್ಲಿ ಸೌರ ವಿದ್ಯುತ್ ಘಟಕ ಉದ್ಘಾಟನೆ ಸಂದರ್ಭ ಕರ್ನಾಟಕ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಡಾ. ಟಿ.ಆರ್. ಅರುಣ್ 10 ಲಕ್ಷ ರೂ. ಮೌಲ್ಯದ ದೇಣಿಗೆ ಚೆಕ್ ವಿತರಿಸಿದರು. ಧ್ಯಾನ ಕೇಂದ್ರದ ವ್ಯವಸ್ಥಾಪಕ ಪಂಡಿತ ಹೇಮಂತ ಆಚಾರ್ಯ ಗುಡಿ, ಬ್ಯಾಂಕಿನ ಪ್ರಾದೇಶಿಕ ಕಚೇರಿ ಮುಖ್ಯ ಪ್ರಬಂಧಕ ಬದರಿ ಪ್ರಸಾದ್, ವಿವೇಕಾನಂದನಗರ ಶಾಖಾಧಿಕಾರಿ ಗಣೇಶ ಭಟ್, ನಿವೃತ್ತ ಹಿರಿಯ ವ್ಯವಸ್ಥಾಪಕ ಗೋವರ್ಧನ, ಮಠದ ಹಿರಿಯ ಕಾರ್ಯಕರ್ತ ಎ.ಎನ್. ರಮೇಶ್ ಹಾಜರಿದ್ದರು.


إرسال تعليق

0 تعليقات
إرسال تعليق (0)
To Top