ಮತ್ತೊಮ್ಮೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಅತ್ಯಂತ ಶ್ರಮದಾಯಕವಾದ ಈ ಮಹತ್ತರ ಜವಾಬ್ದಾರಿಯನ್ನು ನಾಜೂಕು ಮತ್ತು ದೃಢತೆಯಿಂದ ನಿರ್ವಹಿಸಿ, ಮಹಿಳೆಯಾಗಿ 9ನೇ ಬಾರಿಗೆ ದೇಶದ ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು.
ಬಜೆಟ್ ನಂತರ ವಾಡಿಕೆಯಂತೆ ಆಡಳಿತ ಹಾಗೂ ಪ್ರತಿಪಕ್ಷಗಳ ನಾಯಕರು, ಆರ್ಥಿಕ ತಜ್ಞರು ನೀಡುವ ಪ್ರತಿಕ್ರಿಯೆಗಳನ್ನು ಮಾಧ್ಯಮಗಳು ಮತ್ತು ಪತ್ರಿಕೆಗಳು ಪ್ರಕಟಿಸುವುದು ಸಹಜ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರಿಂದ ಬರುವ ಬಹುತೇಕ ಪ್ರತಿಕ್ರಿಯೆಗಳು ಅಧ್ಯಯನಾತ್ಮಕ ನೆಲೆಯಿಲ್ಲದೆ, ಕೇವಲ ರಾಜಕೀಯ ದೃಷ್ಟಿಕೋನಕ್ಕೆ ಸೀಮಿತವಾಗುತ್ತಿರುವುದು ವಿಷಾದಕರ.
ಅಂದರೆ ಸಂಪೂರ್ಣವಾಗಿ ಅಧ್ಯಯನಾಧಾರಿತ ಪ್ರತಿಕ್ರಿಯೆಗಳೇ ಇಲ್ಲವೆಂದಲ್ಲ. ಎಲ್ಲ ಪಕ್ಷಗಳಲ್ಲೂ ಕೆಲ ಮುತ್ಸದ್ದಿಗಳು ಇದ್ದಾರೆ, ಬಜೆಟ್‌ನ ಅಂಶಗಳನ್ನು ಆಳವಾಗಿ ವಿಮರ್ಶಿಸಿ, ಅಂಕಿಅಂಶಗಳೊಂದಿಗೆ ಅರ್ಥಪೂರ್ಣವಾಗಿ ಮಾತನಾಡುವವರು. ಆದರೆ ಒಟ್ಟಾರೆ ದೃಷ್ಟಿಯಲ್ಲಿ ನಮ್ಮ ಜನಪ್ರತಿನಿಧಿಗಳಲ್ಲಿ (ಎಲ್ಲ ಪಕ್ಷಗಳಲ್ಲೂ) ಅಧ್ಯಯನಶೀಲತೆ ಕುಂಠಿತವಾಗುತ್ತಿರುವುದೇನೋ ಎಂಬ ಬೇಸರ ಕಾಡುತ್ತದೆ.
ಇಲ್ಲಿ ಒಂದು ಹಂತದವರೆಗೆ ಪರಿಸ್ಥಿತಿ ಹೀಗಾಗಿದೆ: ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ತಮ್ಮ-ತಮ್ಮ ಅವಧಿಯಲ್ಲಿ ನೀಡಿದ ಹೇಳಿಕೆಗಳಲ್ಲಿ ಕೇವಲ ಫೋಟೋ ಮತ್ತು ಹೆಸರನ್ನು ಬದಲಿಸಿದರೆ ಸಾಕು; ಹೇಳಿಕೆಯ ಅಂತರಂಗವನ್ನು ಬದಲಿಸುವ ಅಗತ್ಯವೇ ಇಲ್ಲ ಎನ್ನುವಂತಾಗಿದೆ. ಇದು ಸರಿಯಾದ ಬೆಳವಣಿಗೆಯಲ್ಲ.
ಬಜೆಟ್ ಎಂದರೆ ದೇಶದ ಪ್ರಗತಿಯನ್ನು ಪ್ರತಿಬಿಂಬಿಸುವ ಕೈಗನ್ನಡಿಯಂತದ್ದು. ಅದರ ಬಗ್ಗೆ ಸೂಕ್ಷ್ಮ ನೋಟ, ವಿಮರ್ಶಾತ್ಮಕ ಚಿಂತನೆ ಮತ್ತು ವಿವೇಕಪೂರ್ಣ ಪ್ರತಿಕ್ರಿಯೆಗಳನ್ನು ನೀಡುವ ಮನೋಭಾವವನ್ನು ಎಲ್ಲ ಪಕ್ಷಗಳ ನಾಯಕರು ಬೆಳೆಸಿಕೊಳ್ಳಬೇಕು. ಇದು ಎಲ್ಲ ಜನಪ್ರತಿನಿಧಿಗಳಿಗೆ ಅತ್ಯಾವಶ್ಯಕ.
ಅದಕ್ಕಾಗಿ ತಮಗೆ ಸಮೀಪದ, ವಿಶ್ವಾಸಾರ್ಹ ಆರ್ಥಿಕ ಚಿಂತಕರಿಂದಾದರೂ ಬಜೆಟ್‌ನ ಅರ್ಥ, ಪರಿಣಾಮ ಮತ್ತು ದೀರ್ಘಕಾಲೀನ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಯಬೇಕು. ಮನುಷ್ಯ ಕಲಿಯುವುದರಿಂದ ದೊಡ್ಡವನಾಗುತ್ತಾನೆಯೇ ಹೊರತು ಸಣ್ಣವನಾಗುವುದಿಲ್ಲ. ಇಲ್ಲವಾದರೆ ಇಂಥ ಹೇಳಿಕೆಗಳು ಬಾಲಿಶವಾಗಿಯೂ, ಶುಷ್ಕವಾಗಿಯೂ ಕಾಣಿಸಿಕೊಳ್ಳುತ್ತವೆ.
ಬಜೆಟ್ ಕುರಿತ ಪ್ರತಿಕ್ರಿಯೆಗಳಲ್ಲಿ ರಾಜಕೀಯ ದೃಷ್ಟಿಕೋನವಿರಬಾರದೆಂದಿಲ್ಲ. ಆದರೆ ಆ ದೃಷ್ಟಿಕೋನ ಅಧ್ಯಯನ ಮತ್ತು ತಿಳುವಳಿಕೆಯ ಆಧಾರದ ಮೇಲೆ ವ್ಯಕ್ತವಾದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ. ಆಡಳಿತ ಪಕ್ಷದಲ್ಲಿದ್ದೇವೆಂಬ ಕಾರಣಕ್ಕೆ ಅತಿಯಾಗಿ ಹೊಗಳುವುದಾಗಲಿ, ಪ್ರತಿಪಕ್ಷದಲ್ಲಿದ್ದೇವೆಂಬ ಕಾರಣಕ್ಕೆ ತೀವ್ರವಾಗಿ ತೆಗಳುವುದಾಗಲಿ ಸರಿಯಲ್ಲ.
ಈ ಸಂದರ್ಭದಲ್ಲಿ ಬಜೆಟ್ ವಿಚಾರದಲ್ಲಿ ಅಪಾರ ಧೀಮಂತಿಕೆ ತೋರಿದ್ದ ದಿವಂಗತ ಡಾ. ವಿ.ಎಸ್. ಆಚಾರ್ಯರು ನೆನಪಿಗೆ ಬರುತ್ತಾರೆ. ಅನೇಕ ವರ್ಷಗಳ ಕಾಲ ಬಜೆಟ್ ಮಂಡನೆಯಾದ ತಕ್ಷಣ ಉಡುಪಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಚಿಂತನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಅವರು ಸ್ವತಃ ಅಂಕಿಅಂಶಗಳೊಂದಿಗೆ ವಿಷಯ ಮಂಡಿಸುತ್ತಿದ್ದ ದಿನಗಳು ಸದಾ ಸ್ಮರಣೀಯ. ಅದು ಎಲ್ಲ ಜನಪ್ರತಿನಿಧಿಗಳಿಗೆ ಒಂದು ಮಾದರಿ.
ಜಾತಿಬಲದಿಂದಲೋ, ಹಣಬಲದಿಂದಲೋ ಸ್ಥಾನಮಾನಗಳನ್ನು ಗಿಟ್ಟಿಸಿಕೊಳ್ಳುವುದು ತಪ್ಪೆಂದಲ್ಲ—ಅದು ಅವರವರ ತಾಕತ್ತು, ಅದೃಷ್ಟವೆನ್ನಬಹುದು. ಆದರೆ ಅದರ ನಂತರವೂ ಇಚ್ಛಾಶಕ್ತಿ, ಬದ್ಧತೆ ಮತ್ತು ರಾಜ್ಯ–ದೇಶದ ಪ್ರಗತಿಯ ಕುರಿತು ಅಧ್ಯಯನ ಪ್ರವೃತ್ತಿಯನ್ನು ಅಳವಡಿಸಿಕೊಂಡರೆ ಮಾತ್ರ ಒಬ್ಬ ನಾಯಕ ನಿಜವಾದ ಮುತ್ಸದ್ದಿಯಾಗಬಲ್ಲ.
ನಮಗೆ ಇಂದು ಕೊರತೆಯಾಗಿರುವುದು ನೇತಾರರಲ್ಲ- ಮುತ್ಸದ್ದಿ ನೇತಾರರದು.
(ಯಾರನ್ನೂ ವ್ಯಕ್ತಿಗತವಾಗಿ ಉದ್ದೇಶಿಸಿ ಹೇಳಿರುವುದಲ್ಲ.)
- ಜಿ. ವಾಸುದೇವ ಭಟ್, ಪೆರಂಪಳ್ಳಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

