ಪಾಪೆಮಜಲು ಶಾಲೆಯಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಪುತ್ತೂರು: "ವಿದ್ಯಾರ್ಥಿ ಜೀವನದಲ್ಲಿ ಸಮಯದ ಪಾಲನೆ ಅತ್ಯಂತ ಮುಖ್ಯ. ಶಿಸ್ತು ಮತ್ತು ಸೇವಾ ಮನೋಭಾವನೆಯಿಂದ ಮಾತ್ರ ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ" ಎಂದು ಪಾಪೆಮಜಲು ಸರ್ಕಾರಿ ಪ್ರೌಢಶಾಲೆಯ ಶಾಲಾ ಅಭಿವೃದ್ಧಿ ಸಮಿತಿಯ ಸ್ಥಾಪಕಾಧ್ಯಕ್ಷರು ಹಾಗೂ ಮಾಜಿ ಸೈನಿಕರಾದ ಶ್ರೀ ಅಮ್ಮಣ್ಣ ರೈ ಅವರು ಕರೆ ನೀಡಿದರು.
ಅರಿಯಡ್ಕದ ಸ.ಪ್ರೌ.ಶಾಲೆ ಪಾಪೆಮಜಲಿನಲ್ಲಿ ಫೆಬ್ರವರಿ 3ರಿಂದ 9ರ ವರೆಗೆ ನಡೆಯಲಿರುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ರಾಷ್ಟ್ರೀಯ ಸೇವಾ ಯೋಜನೆಯ (NSS) 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. "ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ, ನನ್ನ ಭಾರತಕ್ಕಾಗಿ ಯುವಜನತೆ" ಎಂಬ ಆಶಯದೊಂದಿಗೆ ಆಯೋಜಿಸಲಾದ ಈ ಶಿಬಿರದಲ್ಲಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಹಾಗೂ ಶಿಸ್ತಿನ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, "ಅನುಭವವು ಮನುಷ್ಯನ ಬದುಕಿನ ದೃಷ್ಟಿಕೋನವನ್ನೇ ಬದಲಿಸುವ ಶಕ್ತಿ ಹೊಂದಿದೆ. ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳಿಗೆ ಕೇವಲ ಕೆಲಸವನ್ನಷ್ಟೇ ಕಲಿಸುವುದಿಲ್ಲ, ಬದಲಾಗಿ ಜೀವನದ ಪಾಠಗಳನ್ನು ಕಲಿಸುತ್ತವೆ. ಸೇವೆ ಎಂಬುದು ಕೇವಲ ಪ್ರದರ್ಶನವಾಗದೆ, ಅದು ಮನದಾಳದಿಂದ ಬರಬೇಕು. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು"ಎಂದು ಹಿತವಚನ ನೀಡಿದರು.
ವೇದಿಕೆಯಲ್ಲಿ ಗಣ್ಯರಾದ ಜಯಂತ ನಡುಬೈಲ್, ಇಕ್ಬಾಲ್ ಹುಸೈನ್, ಮೋಹನದಾಸ್ ರೈ, ಶಿವಪ್ಪ ಕುಲಾಲ್, ಮೋನಪ್ಪ ಪೂಜಾರಿ, ಪುಷ್ಪಲತಾ ಪಾಪೆಮಜಲು, ತಿಲಕ್ ರೈ ಕುತ್ಯಾಡಿ ಹಾಗೂ ವಾಸು ಪೂಜಾರಿ ಗುಂಡ್ಯಡ್ಕ ಉಪಸ್ಥಿತರಿದ್ದು, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಡಾ. ಕೆ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಗುರಿ ಮತ್ತು ಉದ್ದೇಶಗಳನ್ನು ವಿವರಿಸಿದರು. ಘಟಕ ನಾಯಕ ಮನೀಶ್ ಸ್ವಾಗತಿಸಿದರು. ಯೋಜನಾಧಿಕಾರಿ ಪುಷ್ಪಾ ಎನ್. ವಂದನಾರ್ಪಣೆ ಮಾಡಿದರು. ಘಟಕ ನಾಯಕಿ ಜೆ. ಲವಿಕಾ ಕಾರ್ಯಕ್ರಮ ನಿರೂಪಿಸಿದರು. ಏಳು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


