ಸುಡು ಬೇಸಿಗೆಯ ದಿನಗಳು ಆರಂಭವಾಗುತ್ತಿದೆ. ನಮ್ಮಂತೆಯೇ ಪಶುಪಕ್ಷಿಗಳಿಗೂ ಜೀವ ಸಹಜವೆಂಬಂತೆ ಬಿಸಿಲ ಬೇಗೆ ತಟ್ಟುತ್ತವೆ. ನಮಗಾದರೋ ಬಿಸಿಲಿನ ದಣಿವಿನಿಂದ ಪಾರಾಗಲು ಒಂದಷ್ಟು ಸೌಕರ್ಯಗಳು ಸೌಲಭ್ಯಗಳು ಇವೆ. ಆದರೆ ಕಾಂಕ್ರೀಟ್‌ನಿಂದ ಆವೃತವಾಗುತ್ತಿರುವ ನಗರಗಳಲ್ಲಿ ಮರಗಿಡಗಳ, ನೀರಿನ ಒರತೆಗಳ ಕೊರತೆಗಳು ಹೆಚ್ಚುತ್ತಿವೆ. ಹಾಗಾಗಿ ಒಂದಷ್ಟು ಇನ್ನೂ ಉಳಿದುಕೊಂಡಿರುವ ಬಾನಾಡಿಗಳ ಬಿಸಿಲಬೇಗೆ ತಣಿಸಲೂ ನೆರವಾಗಿ ಪುಣ್ಯಕಟ್ಟಿಕೊಳ್ಳಲು ಯತ್ನಿಸಬಹುದು. ಮನೆಯ ಆವರಣಗೋಡೆಗಳ ಮೇಲೆ ಒಂದು ಅಗಲವಾದ (ಹೆಚ್ಚು ಆಳವಿಲ್ಲದ) ಪ್ಲಾಸ್ಟಿಕ್ ಟ್ರೇಗಳಲ್ಲಿ ನೀರು (ಮುಕ್ಕಾಲು ಭಾಗ ಮಾತ್ರ ಆದ್ರೆ ಒಳ್ಳೆಯದು; ಮುಳುಗಿ ಸ್ನಾನ ಮಾಡಲು ಹೆಚ್ಚು ಸೂಕ್ತ) ತುಂಬಿಸಿ ಇಟ್ಟಲ್ಲಿ ಒಂದಷ್ಟು ಹಕ್ಕಿಗಳು ಬಂದು ಸ್ವಚ್ಛಂದವಾಗಿ ನೀರು ಕುಡಿದು ಸ್ನಾನಮಾಡಿ ಕುಣಿದು ಕುಪ್ಪಳಿಸುವ ದೃಶ್ಯ ನೋಡೋದೇ ಬಹಳ ಚಂದ. ಅವುಗಳ ಸಂತೋಷವನ್ನು ನಾವೂ ಕಂಡು ಆನಂದಿಸಬಹುದು. ಒಂದು ಸಾರ್ಥಕ ಕೆಲಸವಾಗ್ತದೆ. ಅದರ ಜೊತೆಗೆ ಆ ಟ್ರೇಗಳ ಬಳಿಯಲ್ಲೇ ಬಾಳೆಹಣ್ಣು ಬಚ್ಚಂಗಾಯಿ ಸೇಬು ಹೀಗೆ ಯಾವುದಾದರೂ ಹಣ್ಣುಗಳನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಇಡಬಹುದು. ಬಹಳ ಸಂತೋಷದಿಂದ ತಿನ್ನುತ್ತವೆ. ನಿತ್ಯವೂ ಆ ಪಾತ್ರೆಗಳ ನೀರು ಖಾಲಿಯಾದರೆ ಮತ್ತೆ ಸ್ವಲ್ಪ ಸ್ವಚ್ಛಮಾಡಿ ನೀರು ತುಂಬಿಸಲು ಮರೆಯಬೇಡಿ.
ಅದೇ ರೀತಿ ನಮ್ಮನೆಯ ಬೀದಿಗಳಲ್ಲಿ ಬೀಡಾಡಿ ದನಕರುಗಳು ಸಂಚರಿಸುತ್ತಿದ್ದರೆ ಈ ಬೇಸಗೆಯ ದಿನಗಳಲ್ಲಿ ಒಂದು ಅಗಲವಾದ ಬಾಯಿಯಿರುವ (ಪಾತ್ರೆ ಬಕೆಟ್ ಗಳ ಬಾಯಿ ಅಗಲವಿಲ್ಲದಿದ್ದರೆ ಕೆಲವೊಮ್ಮೆ ಪ್ರಾಣಿಗಳ ಮುಖ ಸಿಕ್ಕಿಬೀಳುವ ಸಾಧ್ಯತೆ ಇರ್ತದೆ.) ಬಕೆಟ್ ಪಾತ್ರೆ, ಸಿಮೆಂಟಿನ ಪಾತಿಗಳಲ್ಲಿ ನೀರು ತುಂಬಿಸಿ ಇಟ್ಟರೆ ಪಶುಪಕ್ಷಿಗಳ ಬಿಸಿಲ ದಾಹ ತಣಿಸಿದ ಪುಣ್ಯಪ್ರಾಪ್ತಿಯಾದೀತು.
"ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ" ಇದು ಆರ್ಷ ವಾಕ್ಯ. ನಮ್ಮ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವುದರ ಜೊತೆಗೆ ನಮ್ಮ ಸುತ್ತಮುತ್ತಲ ಜೀವರಾಶಿಗಳ ದ್ವಿಪದಿ (ಪಕ್ಷಿಗಳ) ಚತುಷ್ಪದಿ (ಪ್ರಾಣಿಗಳ) ಯೋಗ ಕ್ಷೇಮಕ್ಕಾಗಿಯೂ ನಿತ್ಯ ಪ್ರಾರ್ಥಿಸಬೇಕು ಅಂದರು ಋಷಿಮುನಿಗಳು.
ನಮ್ಮಲ್ಲಿ ಕೆಲವೊಂದು ಧಾರ್ಮಿಕ ವಿಧಿಗಳಲ್ಲಿ ಸೂರ್ಯ ಚಂದ್ರ ತಾರಾಗಣಗಳು, ನದಿ ಸಮುದ್ರಗಳು ಗಿರಿ ಶಿಖರ ಪರ್ವತಗಳು, ಮರಗಿಡ ವನಸ್ಪತಿಗಳು ಗೋವುಗಳು ಹೀಗೆ ನಮ್ಮ ಕ್ಷೇಮಜೀವನದಲ್ಲಿ ಬಹುಮೂಲ್ಯ ಪಾತ್ರವಹಿಸುವ ಪ್ರಾಕೃತಿಕ ಸಮತೋಲನ ಉಳಿಸಲು ನೆರವಾಗುತ್ತಿರುವ ಸಕಲ ಜೀವ ಚರಾಚರಗಳಿಗೂ ಕೃತಜ್ಞತೆಯ ರೂಪವಾಗಿ ತರ್ಪಣಗಳನ್ನು ಕೊಡುವ ಪದ್ಧತಿ ಒಂದು ಧೀಮಂತವೂ ಶ್ರೀಮಂತವೂ ಆದ ಸಾಂಪ್ರದಾಯಿಕ ರೀತಿ ರಿವಾಜುಗಳು ಅನಾದಿಕಾಲದಿಂದಲೂ ಇವೆ.
ಆ ರೀತಿ ಆರ್ಷವಚನದಂತೆ ನಾವೂ ಬದುಕೋಣ; ಸುತ್ತಮುತ್ತಲಿನ ಪಶುಪಕ್ಷಿಗಳ ಒಳಿತಿಗಾಗಿಯೂ ಒಂದಷ್ಟು ಕಷ್ಟ ನಷ್ಟಗಳಿಲ್ಲದ ಪ್ರಯತ್ನಗಳನ್ನು ಮಾಡೋಣ.
- ಜಿ ವಾಸುದೇವ ಭಟ್ ಪೆರಂಪಳ್ಳಿ


