- ಟಿ. ದೇವಿದಾಸ್
ಒಂದು ನಾಡಿನ ಭಾಷೆ, ಸಂಸ್ಕೃತಿ, ಪರಂಪರೆಯ ಪ್ರತಿನಿಧಿಯಾಗಿ ಗುರುತಿಸಿಕೊಂಡು ಯಾರೇ ಮೋಸ ಮಾಡಿದರೂ ಅದರಲ್ಲೂ ಒಬ್ಬ ಇಂಜನಿಯರ್, ವಕೀಲ, ರಾಜಕಾರಣಿ, ವೈದ್ಯ, ಅಧಿಕಾರಿ ಮಾಡುವ ಮೋಸಕ್ಕಿಂತ ಹೀನವಾಗಿ ಕಾಣುತ್ತದೆ. ಅಸಹ್ಯವೆನಿಸುತ್ತದೆ. ಯಾವ ಮಹತ್ಕಾರ್ಯವನ್ನೂ ಮಾಡದ, ಯಾವ ಜನೋಪಯೋಗಿ ಕೆಲಸವನ್ನೂ ಮಾಡದ, ಯಾವ ಉತ್ತಮ ಸಾಹಿತ್ಯವನ್ನೂ ರಚಿಸದೆ, ಭಾಷೆ, ಸಂಸ್ಕೃತಿ ಅಂತ ಸಿಕ್ಕಸಿಕ್ಕ ವೇದಿಕೆಗಳಲ್ಲಿ ಬಡಕಾಯಿಸುತ್ತ, ಹುಸಿ ಸೈದ್ಧಾಂತಿಕತೆಯ ಗುರಾಣಿಯ ಅಡಿಯಲ್ಲಿ, ವೈಯಕ್ತಿಕ ನೆಲೆಯಲ್ಲಿ ಯಾವ ಸಿದ್ಧಾಂತವೂ ಇಲ್ಲದೆ, ಜಾತಿ ಮತ್ತು ಪಕ್ಷ ರಾಜಕೀಯದ ಹೆಸರಲ್ಲಿ ಕೇವಲ ಲಾಭಿ ಮಾಡಿಕೊಂಡು ಮಂತ್ರಿಗಳ ಹಿಂದೆ, ಜನಪ್ರತಿನಿಧಿಗಳ ಬಾಲಬಡುಕರಾಗಿ, ಅಧಿಕಾರಿಗಳ ಹಿಂಬಾಲ ಬಡುಕರಾಗಿ ಸರ್ಕಾರಿ ಉನ್ನತ ಹುದ್ದೆ, ಸ್ಥಾನಮಾನ, ಪದವಿಗಾಗಿ ತಾನೊಬ್ಬ ದೊಡ್ಡ ಸಾಹಿತಿಯೆಂಬಂತೆ ಚಲಾವಣೆಯಾಗುವುದು ಸಾಂಸ್ಕೃತಿಕ ವಂಚನೆಯಷ್ಟೆ ಅಲ್ಲದೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ದೌರ್ಭಾಗ್ಯ ಕೂಡ!
ಗೋಪಾಲಕೃಷ್ಣ ಅಡಿಗರಂಥ ಮೇರು ಪರ್ವತವನ್ನು ಎದುರಿಗಿಟ್ಟುಕೊಂಡು ವಿ.ಕೃ. ಗೋಕಾಕರಂಥ ಮಾಮೂಲಿ ಕವಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಕೊಡಿಸಿದ, ಅದಕ್ಕಾಗಿ ಲಾಭಿ ಮಾಡಿದ ಹಾ.ಮಾ. ನಾಯಕರು ಕರೆಪ್ಟ್ ಇಂಜನಿಯರಿಗಿಂತ ದೊಡ್ದ ವಂಚಕರಾಗಿ ಕಾಣಿಸುವುದಿಲ್ಲವೆ? ಅನಂತಮೂರ್ತಿಯವರಿಗೇ ಭಾರತೀಯ ಜ್ಞಾನಪೀಠ ಕೊಂಚ ದುಬಾರಿಯೆಂದು ಮನವರಿಕೆಯಾದ ನಂತರವೂ ಅವರನ್ನು ಕರೆಕರೆದು ಮಣೆ ಹಾಕುವುದು ಬೌದ್ಧಿಕ ಲಂಚಗುಳಿತನವಲ್ಲವೆ? ಎಂದು ರವಿ ಬೆಳಗೆರೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದೆನಿಸುತ್ತದೆ. ಆಫ್ ಕೋರ್ಸ್ ಕಾರ್ನಾಡ್, (ಇವರ ಅಭಾರತೀಯ ಚಿಂತನೆಗಳನ್ನು ರಾಜಾರೋಷವಾಗಿ ಆರ್. ಗಣೇಶರು ಖಂಡಿಸಿದ್ದಾರೆ. ಆದರೆ ಅದು ವ್ಯಕ್ತಿದ್ವೇಷವಾಗಿ ಅಲ್ಲ, ಕೇವಲ ವೈಚಾರಿಕವಾಗಿ! ವ್ಯಕ್ತಿಯಾಗಿ ಗಣೇಶರು, ಕಾರ್ನಾಡರ ಆತ್ಮಕತೆ ’ಆಡಾಡ್ತಾ ಆಯುಷ್ಯ’ ವನ್ನು ಮೆಚ್ಚಿದ್ದಾರೆಂಬುದು ಅತ್ಯಂತ ಗಮನಾರ್ಹ), ಚಂದ್ರಶೇಖರ ಕಂಬಾರರಿಗೆ ಭಾರತೀಯ ಜ್ಞಾನಪೀಠ ಲಭಿಸಿದ್ದು ತೀರಾ ದುಬಾರಿಯಾಗಿ ಕಾಣದಿದ್ದರೆ ನಮ್ಮ ವೈಚಾರಿಕತೆಗೆ ಕಿಲುಬು ಹಿಡಿದಿದೆಯೆಂದೇ ಅರ್ಥ. ಹೀಗೆ, ಯಾರ್ಯಾರಿಗೋ ಇನ್ಯಾರ್ಯಾರೋ ಲಾಭಿ ಮಾಡಿ ಅನರ್ಹರಿಗೆ ಪ್ರಶಸ್ತಿ ಕೊಡಿಸಿದ್ದೂಇದೆ. ಮತ್ಯಾರಿಗೋ ಅರ್ಹರಿಗೆ ಪ್ರಶಸ್ತಿ ಬರುವುದನ್ನು ತಡೆದದ್ದೂ ಇದೆ. ತಡೆಯಲು ಸಾಹಸ ಪಟ್ಟದ್ದೂ ಇದೆ. ಇಂಥವರಿಗೆ ಪ್ರಶಸ್ತಿ ಬರಲೇಬಾರದೆಂದು ಸಾಯುವವರೆಗೂ ಸಂಚು ಮಾಡಿದ್ದೂ ಇದೆ. ಆದರೆ, ಆರ್.ಗಣೇಶ ಅಥವಾ ಅವರಂಥವರ ಜ್ಞಾನಕ್ಕೆ, ಪ್ರತಿಭೆಗೆ, ಸಾಹಿತ್ಯ ಕೃಷಿಗೆ ಪ್ರಶಸ್ತಿ ಸಿಗಲೆಂದು ಲಾಭಿ ಮಾಡಿದ್ದನ್ನು ಯಾರೂ ಕೇಳಿರಲಿಕ್ಕಿಲ್ಲ! ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮಟ್ಟಿಗೆ ದೊಡ್ದ ವಂಚನೆಯೇ ಸರಿ. ದುರಂತವೂ ಅಹುದು.
ನಿಜವಾಗಿ ಆಲೋಚಿಸಿದರೆ ಜ್ಞಾನಪೀಠಕ್ಕೆ ಪೀಠದಂತಿರುವ ಡಿವಿಜಿ, ಪುತಿನ, ಗೋವಿಂದ ಪೈ, ಬನ್ನಂಜೆ ಗೋವಿಂದಾಚಾರ್ಯ, ಕೆ.ಎಸ್.ನಾರಾಯಣ ಆಚಾರ್ಯ, ಪಾವಗಡ ಪ್ರಕಾಶರಾವ್, ವಿದ್ವಾನ್ ರಂಗನಾಥ ಶರ್ಮಾ, ಸಾ.ಕೃ.ರಾಮಚಂದ್ರರಾವ್, ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ, ವಿದ್ವಾನ್ ಎಸ್.ಆರ್. ರಾಮಸ್ವಾಮಿ, ಶತಾವಧಾನಿ ಆರ.ಗಣೇಶ್, ಎಸ್.ಎಲ್.ಭೈರಪ್ಪ ಅವರು, ಅವರಂಥವರಿಗೆ ಯಾವತ್ತೋ ಭಾರತೀಯ ಜ್ಞಾನಪೀಠ ಪ್ರಶಸ್ತಿ ಸಲ್ಲಬೇಕಿತ್ತು ಅಂತ ನನ್ನಂಥವನಿಗೆ ಅನಿಸುವುದು ತೀರಾ ಅಸಹಜವೇನಲ್ಲ! ರಾಜಕಾರಣಿಯೂ ಸಾಹಿತಿಯೂ ಆದ ವೀರಪ್ಪ ಮೊಯಿಲಿಯವರಿಗೆ ಸರಸ್ವತೀ ಸಂಮಾನ್ ಲಭಿಸಿರುವಾಗ ಮೇಲೆ ಹೇಳಿದವರಲ್ಲಿ ಭೈರಪ್ಪರನ್ನು ಹೊರತುಪಡಿಸಿ ಉಳಿದವರಿಗೆ ಸರಸ್ವತಿ ಸಂಮಾನವಾದರೂ ಮೊದಲು ಸಲ್ಲಬೇಕಿತ್ತು. ಆದರೇನು ಮಾಡುವುದು? ಅವರ ಹಣೆಬರೆಹದಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಯೂ ಇಲ್ಲ, ಸರಸ್ವತಿ ಸಂಮಾನವೂ ಇಲ್ಲ. ಹಾಗಂತ ಕನ್ನಡದ ಮಟ್ಟಿಗೆ ಇಂಥದ್ದೆಲ್ಲ ದೊಡ್ದ ಅನ್ಯಾಯ ಅಂತ ನಮಗೆ ಅನಿಸುವುದೇ ಇಲ್ಲ. ಇದು ಕನ್ನಡದ ದೌರ್ಭಾಗ್ಯ!
ಕನ್ನಡ ಹೋರಾಟದ ಹೆಸರಲ್ಲಿ ಬೀದಿಗೆ ಬಂದ ಕೆಲವು ಸಾಹಿತಿಗಳ ಪೈಕಿ ಹೆಚ್ಚಿನವರು ಸರ್ಕಾರಿ ಪೋಷಣೆಯಲ್ಲಿ ಬದುಕಿ ಹೋಗಿದ್ದಾರೆ. ಕಂಬಾರರಂಥ ಬುದ್ಧಿಜೀವಿಗಳು ಸರ್ಕಾರದ ದತ್ತುವಾಗಿ ಹೋಗಿದ್ದಾರೆ. ಹಂಪಿಯ ಕನ್ನಡ ವಿವಿ ಸಮಸ್ತ ಸ್ಕ್ಯಾಂಡಲುಗಳ ಜನ್ಮಭೂಮಿಯಾಗಿದೆ. ಪುಸ್ತಕ ಪ್ರಕಟಣೆ, ಸ<ಶೋಧನೆ, ಪ್ರಚಾರ, ಪ್ರಸಾರ, ಪ್ರಶಸ್ತಿಗಳು… ಎಲ್ಲವೂ ಅಕ್ರಮ ಸಂಪಾದನೆಗಳ ಅಸ್ತ್ರವಾಗಿದೆ ಎನ್ನುತ್ತಾರೆ ರವಿ ಬೆಳಗೆರೆ. ಒಬ್ಬ ಇಂಜನಿಯರ್ ಲಕ್ಷಾಂತರ ಹಣವನ್ನು ಗುಳುಂ ಮಾಡಿದರೆ ದೊಡ್ಡ ಸುದ್ದಿಯಾಗುವುದಕ್ಕಿಂತ ಒಬ್ಬ ಸಾಹಿತಿ ಹತ್ತೋ ಇಪ್ಪತ್ತೋ ಐವತ್ತೋ ಸಾವಿರ ರೂಗಳ ಲೆಕ್ಕ ತಪ್ಪಿಸಿದರೆ ದೊಡ್ಡ ಸುದ್ದಿಯಾಗುವುದಕ್ಕೆ ಕಾರಣ, ಭಾಷೆ ಮತ್ತು ಸಂಸ್ಕೃತಿಯ ಹೆಸರಿನಲ್ಲಿ ಆದ ಸಾಂಸ್ಕೃತಿಕ ವಂಚನೆಯನ್ನು ಸಹಿಸಲು ಸಾಧ್ಯವಾಗದೇ ಇರುವ ಮನಃಸ್ಥಿತಿ. ಒಬ್ಬ ರಾಜಕಾರಣಿ, ವೈದ್ಯ, ಇಂಜನಿಯರ್, ವಕೀಲ ಭ್ರಷ್ಟನಾಗುವುದಕ್ಕೂ ಒಬ್ಬ ಶಿಕ್ಷಕ ಭ್ರಷ್ಟನಾಗುವುದಕ್ಕೂ ಜನರ ಕಣ್ಣಲ್ಲಿ ವ್ಯತ್ಯಾಸವಿದೆ. ಶಿಕ್ಷಕ ಭ್ರಷ್ಟನಾದರೆ ಅದನ್ನು ಅಷ್ಟು ಸುಲಭದಲ್ಲಿ ಈ ಸಮಾಜ ಅದನ್ನು ಸಹಿಸುವುದಿಲ್ಲ. ನೈತಿಕತೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ಊಹಿಸಿಕೊಳ್ಳಿ. ಕನ್ನಡದ ಹೆಸರಲ್ಲಿ ಹಿಂಡುಗಟ್ಟಲೆ ಬಂಡುಕೋರರು ಉದ್ಧಾರವಾಗಿ ಹೋದರು. ಆಸ್ತಿ ಕೊಂಡರು. ಪಕ್ಕಾ ರೌಡಿ ಷೀಟರೊಬ್ಬ ಕನ್ನಡದ ಹೋರಾಟದ ನೆಪದಲ್ಲಿ ದೊಡ್ಡ ಮನುಷ್ಯರಾಗಿ. ಚಲಾವಣೆಯಾಗಿ ಹೋದರು. ಅಂತೆಯೇ ಕನ್ನಡದ ಹೋರಾಟದ ಕನಸಿಟ್ಟುಕೊಂಡು ಬೀದಿಗಿಳಿದ ಕೆಲವರು ಪಕ್ಕಾ ರೌಡಿಗಳಂತಾಗಿ ಬಿಟ್ಟರು ಎನ್ನುತ್ತಾರೆ ರವಿ ಬೆಳಗೆರೆ.
ಹೋಗಲಿ ಬಿಡಿ. ಹೇಳುತ್ತ ಹೋದರೆ ಇಂಥವು ಪುಟಗಟ್ಟಲೆ ಸಿಗುತ್ತವೆ. ಆದರೆ ದುರಂತವೇನೆಂದರೆ, ಪ್ರಜ್ಞಾವಂತರಾದ ನಾವು ನೀವು ಗಮನಿಸದೆ ಊರ ಉಸಾಬರಿ ನಮಗೇಕೆ ಅಂತ ಸುಮ್ಮನಾಗಿ ಬಿಡುತ್ತೇವೆ. ಸಾಂಸ್ಕೃತಿಕ ವಂಚನೆಯ ಬಗ್ಗೆ ಮಾತಾಡುವಾಗ ಇದೆಲ್ಲ ನೆನಪಾಯಿತು. ಯಾರಿಗೂ ಯಾವುದಕ್ಕೂ ಯಾವ ರೀತಿಯಲ್ಲೂ ಮೋಸ, ವಂಚನೆ, ದಗಾ ಮಾಡದೆ ಕನ್ನಡ ನಾಡು ನುಡಿ ಆರ್ಷೇಯ ಸಂಸ್ಕೃತಿ ಪರಂಪರೆಯ ಬಗ್ಗೆ ಅಪಾರ ಪ್ರೀತಿ, ಕಾಳಜಿಯನ್ನು ಜತನವಾಗಿಟ್ಟುಕೊಂಡು ಬದುಕುತ್ತಿರುವ, ಅದನ್ನು ಉಳಿಸಿ ಬೆಳೆಸುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ, ಕನ್ನಡವನ್ನು ರಾಷ್ಟ್ರ ಅಂತಾರಾಷ್ಟ್ರ ಮಟ್ಟದಲ್ಲಿ ಬೆಳಗಿಸಿದ, ಯಾವ ಪ್ರಶಸ್ತಿಗೂ ಆಸೆಪಡದ, ಯಾವ ವ್ಯವಸ್ಥೆಯನ್ನೂ ಓಲೈಸದ, ಯಾವ ವ್ಯವಸ್ಥೆಯನ್ನೂ ಬೈಯ್ಯುವ, ಕರಬುವ ಗುಣಸ್ವಭಾವವರಲ್ಲದ, ಪುರಸ್ಕಾರ ಎಂಬುದು ದೈವಾಧೀನ, ಪರಮಾತ್ಮನಿಗೆ ಸಂಬಂಧಿಸಿದ್ದು ಅಂತ ನಂಬಿರುವ ಕನ್ನಡದ ಏಕೈಕ ಸಾಹಿತ್ಯಕ, ವೈಚಾರಿಕ, ಬೌದ್ಧಿಕ, ಸಾಂಸ್ಕೃತಿಕ ವಾರಸುದಾರರಾದ, ಕನ್ನಡದ ಅದ್ಭುತವೆನಿಸಿದ ಶತಾವಧಾನಿ (ಇವರೊಬ್ಬರೇ ಕನ್ನಡದ ನಿಜವಾದ ಶತಾವಧಾನಿ) ಡಾ.ಆರ್.ಗಣೇಶ ಅವರಿಗೆ ಭಾರತ ಸರ್ಕಾರ ಭಾರತದ ಅತ್ಯುನ್ನತ ಮೂರನೆಯ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡುತ್ತಿದೆ.
ಈ ಮೂಲಕ ಪದ್ಮಪ್ರಶಸ್ತಿಯ ಕಿರೀಟಕ್ಕೊಂದು ಕನ್ನಡದ ಗರಿಮೆ ಸೇರಿಕೊಂಡಿದೆ. ಶತಾವಧಾನಿ ಆರ್.ಗಣೇಶರು ಕನ್ನಡದ ಹುಸಿ ಓರಾಟಗಾರರಲ್ಲ, ಸರ್ಕಾರದ ಯಾವುದೇ ಪ್ರಶಸ್ತಿ, ಪದವಿ, ಸ್ಥಾನಮಾನ, ಸವಲತ್ತು, ಸೌಲಭ್ಯಗಳಿಗೆ ಲಾಭಿ ಮಾಡಿದವರಲ್ಲ. ಮಾಡಿಸಿದವರಲ್ಲ. ವಶೀಲಿ ಬಾಜಿ ಮಾಡಿ ಸರ್ಕಾರದಿಂದ ನಿವೇಶನ ಗಿಟ್ಟಿಸಿಕೊಂಡವರಲ್ಲ. ಯಾವುದೋ ವಿವಿಯ ಕುಲಪತಿಗೋ ಉನ್ನತ ಪದವಿಗೋ ಯಾರದ್ದೋ ಮುಂದೆ ಕೈಚಾಚಿ ನಿಂತವರಲ್ಲ. ಪ್ರಾಧಿಕಾರಗಳ, ಅಕಾಡೆಮಿಗಳ ಅಧ್ಯಕ್ಷಗಿರಿಗೆ ಹಪಹಪಿಸಿದವರಲ್ಲ. ಕೈಚಾಚುವುದನ್ನು ಬಿಟ್ಟಾಗಲೇ ಅಲ್ಲವೆ ಕಾಲುಚಾಚುವ ಧೈರ್ಯ ಹುಟ್ಟೋದು! ಆತ್ಮವಂಚನೆಯಿಲ್ಲದೆ ತನ್ನ ಪಾಡಿಗೆ ತಾನು ಬದುಕುತ್ತಿರುವ ಶತಾವಧಾನಿ ಆರ್.ಗಣೇಶರು ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಇಂಗ್ಲಿಷ್ ಮುಂತಾದ ೧೮ ಭಾಷೆಗಳಲ್ಲಿ ಅಸಾಧಾರಣ ಜ್ಞಾನ ಮತ್ತು ಪ್ರತಿಭೆಯುಳ್ಳ, ವಿದ್ವತ್ ವಲಯದಲ್ಲೂ, ಜ್ಞಾನಿಗಳ ಸಾಂಗತ್ಯದಲ್ಲೂ ಬದುಕುತ್ತಿರುವ, ಜನರನ್ನೂ ಪ್ರೀತಿಸುವ, ಅವರಿಗೆ ಸುಲಭದಲ್ಲಿ ಸಿಗುವ ಶತಾವಧಾನಿ ಆರ್.ಗಣೇಶರು ಎಲ್ಲ ಬಗೆಯಿಂದಲೂ ನಿಜವಾದ ಜ್ಞಾನಪೀಠಿಗಳು. ಇಂಟಲೆಕ್ಚುವಲ್ ಸೆಲೆಬ್ರಿಟಿ. ಅಸಾಮಾನ್ಯವಾದ ಅಪ್ರತಿಮವಾದ ಅನನ್ಯವಾದ ಅನುಪಮವಾದ ಜ್ಞಾನನಿಧಿ ಇವರೆಂದರೆ ಉತ್ಪ್ರೇಕ್ಷೆ ಅಲ್ಲವೇ ಅಲ್ಲ. ಅದೇ ಸತ್ಯ! ಈಗ ಇವರ ಕನ್ನಡ ಅವಧಾನ ಸೇವೆಗೆ ಪದ್ಮಭೂಷಣ ಒಲಿದು ಬಂದದ್ದು ಅವಧಾನಕ್ಕಿರುವ ಅಸಾಮಾನ್ಯ ತಾಕತ್ತು.
ಶತಾವಧಾನಿ ಡಾ.ಆರ್.ಗಣೇಶ ಅವರು ನಿಜವಾಗಿಯೂ ಪದ್ಮಭೂಷಣಕ್ಕೆ ಅರ್ಹರು. Of course ಇವರಿಗೆ ಯಾವುದು ಭೂಷಣವಲ್ಲ ಹೇಳಿ? ಇವರು ಸಂಸ್ಕೃತ, ಕನ್ನಡ, ಇಂಗ್ಲಿಷಲ್ಲಿ ಅಪ್ರತಿಮ ಅಸಾಮಾನ್ಯ ಪರಿಣಿತಿಯುಳ್ಳವರು. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯಾಂತ್ರಿಕ ಅಭಿಯಂತರ (ಮೆಕ್ಯಾನಿಕಲ್ ಇಂಜನಿಯರಿಂಗ್) ವಿಷಯದಲ್ಲಿ ಪದವಿ, ಅನಂತರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದವರು. ಗಣೇಶರ ಪೂರ್ವಜರು 'ದೇವರಾಯ ಸಮುದ್ರಂ' ದಿಂದ ಬಂದು ಕೋಲಾರದಲ್ಲಿ ನೆಲೆಸಿದವರು. ಮನೆಯಲ್ಲಿ ತಮಿಳು ಭಾಷೆಯನ್ನು ಆಡುತ್ತಿದ್ದರು. ಕೋಲಾರದ ಪರಿಸರದಲ್ಲಿ ತೆಲುಗು ಬಹಳವಾಗಿ ಬಳಕೆಯಲ್ಲಿರುವ ಭಾಷೆಯಾದ್ದರಿಂದ ಅದನ್ನೂ ಕಲಿತರು. ಆದರೂ ಕನ್ನಡ ಅವರ ಪ್ರಿಯವಾದ ಭಾಷೆ. ಭಾರತೀಯ ಸಂಸ್ಕೃತಿ, ಸಾಹಿತ್ಯ ಮತ್ತು ತತ್ವಶಾಸ್ತ್ರದ ಮೇಲೆ ವೈಚಾರಿಕವಾಗಿ ಪ್ರಬುದ್ಧವಾದ ಕೃತಿಗಳನ್ನು ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ ಅವರು ರಚಿಸಿದ್ದಾರೆ.
ಕನ್ನಡದಲ್ಲಿ ಅವಧಾನ ಕಲೆಯನ್ನು ಜೀವಂತಗೊಳಿಸಿದ್ದಷ್ಟೇ ಅಲ್ಲದೆ ಅಷ್ಟಾವಧಾನ, ಶತಾವಧಾನ, ಸಹಸ್ರಾವಧಾನವನ್ನು ನಡೆಸಿದ ಅಪ್ರತಿಮ ಅನನ್ಯ ಬೌದ್ಧಿಕ ಹೆಗ್ಗಳಿಗೆ ಅವರದ್ದು. ಅವಧಾನ ಎಂಬುದೇ ಸಾಟಿಯಿಲ್ಲದ ಸಾಹಸ. ಕನ್ನಡ, ಸಂಸ್ಕೃತ, ತೆಲುಗು, ಪ್ರಾಕೃತ ಭಾಷೆಗಳಲ್ಲಿ 1300ಕ್ಕೂ ಹೆಚ್ಚು ಅವಧಾನ ಪ್ರದರ್ಶನ, 24 ಗಂಟೆಗಳ ನಿರಂತರ ಕಾವ್ಯ ರಚನೆಯ ದಾಖಲೆ. ಬಹುಶ್ರುತ ಪಾಂಡಿತ್ಯವುಳ್ಳ ಇವರು ಆಶುಕವಿ. ಕನ್ನಡದಲ್ಲಿ ಮೊದಲ ಬಾರಿಗೆ ಸಂಪೂರ್ಣ ಅವಧಾನ ನಡೆಸಿಕೊಟ್ಟ ಕೀರ್ತಿಗೆ ಪಾತ್ರರಾಗಿದ್ದಾರೆ. ಇವರ ವಿಶೇಷತೆಯೆಂದರೆ, ಏಕವ್ಯಕ್ತಿ ಯಕ್ಷಗಾನ, ಕಾವ್ಯ-ಚಿತ್ರ-ಗೀತ-ನೃತ್ಯದ ಸಮ್ಮಿಲನದಂತಹ ನವೀನ ಕಾರ್ಯಕ್ರಮಗಳ ರೂಪಕ.
ಆರ್.ಗಣೇಶರ ಈವರೆಗಿನ ಬದುಕು, ಬರೆಹ, ಉಪನ್ಯಾಸ, ವಿಮರ್ಶೆ, ಕೃತಿರಚನೆ, ಅವಧಾನಗಳಲ್ಲಿ ಸಾಧನೆಯೆಂಬುದು ಆಕಾಶದೆತ್ತರದ್ದು. ಕಾವ್ಯಮೀಮಾಂಸೆ, ಛಂದಶ್ಶಾಸ್ತ್ರ, ವೇದಾಂತ, ಉಪನಿಷತ್, ಧರ್ಮಶಾಸ್ತ್ರ, ಇತಿಹಾಸ, ಸಂಸ್ಕೃತಿ, ಕಲೆ, ಭಾರತೀಯ ತತ್ತ್ವಶಾಸ್ತ್ರ, ವ್ಯಾಕರಣ, ಅಲಂಕಾರ ಶಾಸ್ತ್ರವಿಷಯಗಳಲ್ಲಿ ಪರಿಣಿತರು. ಸಂಸ್ಕೃತದಲ್ಲಿ ಹನ್ನೆರಡಕ್ಕೂ ಹೆಚ್ಚಿನ ನಾಟಕಗಳನ್ನೂ, ಸುಮಾರು 16 ಕಾವ್ಯಗಳನ್ನೂ, ಕನ್ನಡದಲ್ಲಿ ಎಂಟು ಕಾವ್ಯಗಳನ್ನು, ಮೂರು ಕಾದಂಬರಿಗಳನ್ನು ಹಾಗೂ ಆರು ಅನುವಾದಗಳನ್ನು ಪೂರೈಸಿದ್ದಾರೆ. The man who writes poetry, solve the maths, and answer the 100 scholars at the same time that too without loosing rhythum and clarity – ಇದು ಆರ್. ಗಣೇಶರ ತಾಕತ್ತು.
1992 ಸಾಲಿನ, ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೊತ್ಸವ ಪ್ರಶಸ್ತಿ-29 ವರ್ಷದ ಯುವ ಪ್ರತಿಭೆಯೊಬ್ಬ ಮೊಟ್ಟ ಮೊದಲು ಗಳಿಸಿದ ಹೆಗ್ಗಳಿಕೆ. ರಾಷ್ಟ್ರೀಯ ಯುವ ಪ್ರತಿಭಾ ಪುರಸ್ಕಾರ. ಕಾವ್ಯಕಾಂತ ಪ್ರಶಸ್ತಿ-ಬಾದರಾಯಣ-ವ್ಯಾಸ ಪುರಸ್ಕಾರ (ಭಾರತದ ರಾಷ್ಟ್ರಪತಿಗಳು ಸಂಸ್ಕೃತದಲ್ಲಿ ಮಾಡಿದ ಕಾರ್ಯಸಾಧನೆಗಳಿಗಾಗಿ ವ್ಯಕ್ತಿಯೊಬ್ಬನಿಗೆ ಪ್ರದಾನ ಮಾಡುವ 2003ರ ಸಾಲಿನ ಪ್ರಶಸ್ತಿ) ಲಭಿಸಿವೆ. ಸೇಡಿಯಾಪು ಪ್ರಶಸ್ತಿ, ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಚಿತ್-ಪ್ರಭಾನಂದ ಪ್ರಶಸ್ತಿ ಇವರಿಗೆ ಸಂದಿವೆ.
ಪದ್ಮ ಅಂದರೆ ಕಮಲ. ಭೂಷಣ ಅಂದರೆ ಆಭರಣ ಅಥವಾ ಅಲಂಕಾರ. ಕಮಲದ ಆಭರಣ. ಪುರುಷ ಸರಸ್ವತಿ ಎಂದೇ ಮಾನ್ಯರಾದ ಶತಾವಧಾನಿ ಡಾ.ಆರ್.ಗಣೇಶರಿಗೆ ಪದ್ಮಭೂಷಣ ಒಲಿದಿದೆ. ತನಗೆ ಒಲಿದುಬಂದ ಈ ಪದ್ಮಭೂಷಣವನ್ನು ಮುಜುಗರದಿಂದಲೇ ಸ್ವೀಕರಿಸುತ್ತಿದ್ದೇನೆ ಎಂದಿದ್ದಾರೆ ಆರ್.ಗಣೇಶರು. ಕಾರಣ, ಈ ಪ್ರಶಸ್ತಿಗೆ ಉತ್ತಮ ಅರ್ಹತೆಯನ್ನು ಹೊಂದಿರುವ ತನ್ನ ಗುರುಗಳಾದ ವಿದ್ವಾನ್ ಎನ್. ರಂಗನಾಥ ಶರ್ಮ, ಆದರಣೀಯ ಡಾ.ಕೆ.ಕೃಷ್ಣಮೂರ್ತಿಯವರು, ನನ್ನ ಅವಧಾನ ಗುರು ಲಂಕಾ ಕೃಷ್ಣಮೂರ್ತಿಯವರು ಇವರುಗಳಿಗೆ ಇಂಥ ಪ್ರಶಸ್ತಿ ಸಲ್ಲಬೇಕಿತ್ತು. ಕೀರ್ತಿಶೇಷರಾದ ಅವರುಗಳ ಪಾದಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಅವರೆಲ್ಲರ ಅನುಗ್ರಹ ಎಂದು ಭಾವಿಸುತ್ತೇನೆ ಅಂತ ಶತಾವಧಾನಿಗಳು ಹೇಳಿದ್ದಾರೆ. ತಾಯಿ-ತಂದೆ, ಅಣ್ಣ, ನಾಗವಲ್ಲಿ ನಾಗರಾಜ್, ಸುಂದರಿ ಸಂತಾನಂ, ಪದ್ಮಾ ಸುಬ್ರಹ್ಮಣ್ಯ, ಶೇಷಣ್ಣ ಮುಂತಾದವರಿಗೆ, ನನ್ನ ಪ್ರಾಥಮಿಕ ಶಾಲೆಯಿಂದ ಕಾಲೇಜು ವ್ಯಾಸಂಗದವರೆಗಿನ ಎಲ್ಲ ಗುರುಗಳಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದು ವಿನೀತ ಭಾವವನ್ನು ಗಣೇಶರು ಅಭಿವ್ಯಕ್ತಿಸಿದ್ದಾರೆ. ಪ್ರಶಸ್ತಿ ಬಂದಿರುವುದು ಸಂತೋಷವಾದರೂ, ಕನ್ನಡದ ಮೇರು ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರೀ, ವಿದ್ವಾನ್ ಎಸ್.ಆರ್.ರಾಮಸ್ವಾಮಿ ಅವರಂಥವರಿಗೆ ಇಂಥ ಎಷ್ಟೋ ಪ್ರಶಸ್ತಿಗಳು ಸಲ್ಲಬೇಕಿತ್ತು. ಅವರುಗಳ ಮುಂದೆ ಪ್ರಶಸ್ತಿಯನ್ನು ಸ್ವೀಕರಿಸುವುದು ಮುಜುಗರವಾಗುತ್ತದೆ. ಅವರೆಲ್ಲರ ಆಶೀರ್ವಾದ ಅಂತ ತಿಳಿದು ಸ್ವೀಕರಿಸುತ್ತೇನೆ ಅಂತ ಹೇಳಿದ ಇವರು ನಿಜಕ್ಕೂ ಪದ್ಮಭೂಷಣರೇ ಅಹುದು!
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

