ನಮ್ಮ ನಾಡಿನ ಹಿರಿಯ ವಿದ್ವಾಂಸರು ಹಾಗೂ ಗುರುಗಳಾದ ಡಾ. ಬಿ.ಎ. ವಿವೇಕ ರೈ ಅವರ ನೂತನ ಕೃತಿ 'ಪಡುವಣ ತೀರದ ಕನ್ನಡ ನಾಡಿನ'. ಈ ಕೃತಿ ಪ್ರಕಟವಾಗಲು ಕಾರಣವಾಗಿರುವ ಸನ್ನಿವೇಶವನ್ನು ಲೇಖಕರು ತಿಳಿಸಿದ್ದಾರೆ. ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಬರೆದ ಹಳೆಯ ಲೇಖನವೊಂದು ಕಾಣಿಸಿದಾಗ ಕರಾವಳಿಯ ಗತಿಸಿದ ಹಿರಿಯ ಸಾಹಿತಿಗಳ ಬಗ್ಗೆ ಬರೆದು ಪ್ರಕಟಿಸಿದ ಲೇಖನ ಗಳನ್ನು ಒಂದು ಕಡೆಗೆ ಸೇರಿಸುವ ಆಲೋಚನೆ ಬಂತು ಎಂದಿದ್ದಾರೆ.
ಕಡೆಂಗೋಡ್ಲು ಅವರ ಕವನದ ಮೊದಲ ಚರಣಗಳಿವು
'ಪಡುವಣ ತೀರದ ಕನ್ನಡ ನಾಡಿನ
ಕಾರ್ಗಾಲದ ವೈಭವವೇನು..'
ಬಿ.ಎ. ವಿವೇಕ ರೈ ಅವರು ತನ್ನ ಕೃತಿಯ ಆಶಯವನ್ನು ಹೀಗೆ ತಿಳಿಸಿದ್ದಾರೆ. "ಈ ಕೃತಿಯಲ್ಲಿ ಕೆಲವು ಪರಿಕಲ್ಪನೆಗಳನ್ನು ಜೊತೆಯಾಗಿ ಹೆಣೆದಿದ್ದೇನೆ. ಕರಾವಳಿಯ ಅಗಲಿದ ಹಿರಿಯ ಸಾಹಿತಿಗಳ ಬಗ್ಗೆ ನಾನು ಬರೆದು ಪ್ರಕಟಸಿದ ಬರಹಗಳನ್ನು ಒಟ್ಟಿಗೆ ಸೇರಿಸಿದ್ದು. ಪಡುವಣ ತೀರದ ಕನ್ನಡ ನಾಡಿನ ಕನ್ನಡ ಮತ್ತು ತುಳು ಭಾಷೆ, ಕಾವ್ಯ ಮತ್ತು ಕಥನ, ಬದುಕಿನ ಕೊರಗು ಮತ್ತು ಬೆರಗು ಇಲ್ಲಿ ಜೊತೆಯಾಗಿವೆ. ಕರಾವಳಿಯ ಹಿರಿಯ ಸಾಹಿತಿ ಗಳನ್ನು ಮರು ನೆನೆದುಕೊಳ್ಳಲು ಮತ್ತು ಅವರ ಕವನಗಳನ್ನು ಮತ್ತೆ ವಾಚಿಸಲು ಮತ್ತು ಅವರ ಕೃತಿಗಳನ್ನು ಮರು ಓದಿಗೆ ಒಳಪಡಿಸಲು ಈ ಗ್ರಂಥ ನೆರವಾದರೆ ಅದು ನನ್ನ ಪಾಲಿನ ಧನ್ಯತೆ."
ಪಡುವಣ ಕರಾವಳಿಯ ನಿಸರ್ಗ, ಬದುಕು, ಕಾವ್ಯ, ಚಿಂತನೆ, ಸೌಹಾರ್ದಗಳನ್ನು ತುಳುನಾಡಿನ ತೆಂಗಿನ ಮಡಲಿನ ತಟ್ಟಿಯ ಹಾಗೆ ಈ ಕೃತಿಯಲ್ಲಿ ಹೆಣೆದು ಅಪೂರ್ವ ಧ್ವನಿಗಳನ್ನು ಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ. ಇವರು ಹೆಣೆದ ಈ ಕೃತಿ ವಿಶಿಷ್ಟವಾಗಿದೆ. ಗಾಂಧೀಜಿಗೆ ಪ್ರೇರಣೆ ನೀಡಿದ ಸಮಾಜ ಸುಧಾರಕ ಕುದ್ಮುಲ್ ರಂಗರಾವ್, ನವೋದಯ ಕಾಲ ಘಟ್ಟದ ಪಂಜೆ ಮಂಗೇಶ ರಾವ್, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಶಿವರಾಮ ಕಾರಂತ, ಸೇಡಿಯಾಪು ಕೃಷ್ಣ ಭಟ್ಟ, ಕಡೆಂಗೋಡ್ಲು ಶಂಕರ ಭಟ್ಟ, ಎಸ್.ವಿ. ಪರಮೇಶ್ವರ ಭಟ್ಟ, ಕಯ್ಯಾರರು, ನವ್ಯ ಸಾಹಿತ್ಯದ ಗೋಪಾಲ ಕೃಷ್ಣ ಅಡಿಗ, ಪ್ರಗತಿಶೀಲ ಪಂಥದ ನಿರಂಜನ, ಕವಿಗಳು ಹಾಗೂ ಸಾಹಿತ್ಯ ಸಂಘಟಕರೂ ಆಗಿದ್ದ ಬಿ.ಎಂ. ಇದಿನಬ್ಬ, ಕು. ಶಿ. ಹರಿದಾಸ ಭಟ್ಟ, ಏರ್ಯ ಲಕ್ಷ್ಮಿ ನಾರಾಯಣ ಆಳ್ವ, ಅಮೃತ ಸೋಮೇಶ್ವರ, ಎಂ. ರಾಮಚಂದ್ರ, ಎಂ. ಮನೋರಮ ಭಟ್, ವಾಮನ ನಂದಾವರ, ಪಾಲ್ತಾಡಿ ರಾಮಕೃಷ್ಣ ಆಚಾರ್.. ಇವರ ಕುರಿತಾಗಿ ಲೇಖನ, ಇವರು ರಚಿಸಿದ ಕವನಗಳು, ಕೆಲವು ಲೇಖಕರ ಲೇಖನಗಳು ಹೀಗೆ ವೈವಿಧ್ಯತೆಯ ಹೆಣಿಗೆ ಇದೆ.
1837ರ ತುಳುನಾಡಿನ ರೈತ ಬಂಡಾಯದಿಂದ ತೊಡಗಿ 1870 ರ ನಂತರದ ಸಾಮಾಜಿಕ ಸುಧಾರಣಾ ಕಾರ್ಯಗಳು ಅವು ಸಾಹಿತ್ಯ ಸೃಷ್ಟಿಗೆ ಬೀರಿದ ಪ್ರಭಾವಗಳು, ನವೋದಯ ಸಾಹಿತ್ಯ ಕೇಂದ್ರವಾಗಿ ರೂಪುಗೊಂಡ ಬಗೆ, 20ನೇ ಶತಮಾನದ ಕನ್ನಡ ಮತ್ತು ತುಳು ಸಾಹಿತ್ಯ ಕಟ್ಟುವಿಕೆಯ ಕಾರ್ಯಗಳು, 21ನೇ ಶತಮಾನದ ಮೊದಲ 25 ವರ್ಷಗಳ ಕಾರ್ಯಗಳ ಚಿತ್ರಣ ನಮಗೆ ಈ ಕೃತಿಯ ಮೂಲಕ ಲಭ್ಯವಾಗುತ್ತದೆ.
ಬಹುಭಾಷಿ ಕನ್ನಡಿಗರ ಕೊಡುಗೆ ಮತ್ತು ಕನ್ನಡ ನವೋದಯ ಕಾವ್ಯದ ಕೇಂದ್ರವಾಗಿ ಮಂಗಳೂರು ರೂಪುಗೊಂಡಿರುವ ಕುರಿತು ಲೇಖನಗಳಿದ್ದು ಇಲ್ಲಿನ ಅನನ್ಯತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.
ಇಲ್ಲಿ ಕೆಲವು ಸಾಧಕರ ಕುರಿತಾದ ಆತ್ಮೀಯ ಬರಹಗಳಿವೆ. ಅದರೊಂದಿಗೆ ಕುದ್ಮುಲ್ ರಂಗ ರಾವ್ ಹೊರತು ಪಡಿಸಿ ಉಳಿದವರು ಕವಿಗಳಾಗಿರುವ ಕಾರಣ ದಿಂದ ಅವರ ಕನ್ನಡ ಹಾಗೂ ಕೆಲವರ ತುಳು ಕವನಗಳನ್ನು ಕೊಡಲಾಗಿದೆ. ಶಿವರಾಮ ಕಾರಂತ, ಇದಿನಬ್ಬ, ಗೋಪಾಲ ಕೃಷ್ಣ ಅಡಿಗ, ಎಂ. ರಾಮಚಂದ್ರ ಅವರು ಬರೆದ ಲೇಖನಗಳನ್ನು ನೀಡಲಾಗಿದೆ. ನಿರಂಜನರು ಬಾಲ್ಯದಲ್ಲಿ ಬರೆದ ತುಳು ಕವಿತೆ ಹಾಗೂ ಕತೆಯನ್ನು ಇಲ್ಲಿ ನೀಡಿರುವುದು ಇನ್ನೊಂದು ವಿಶೇಷತೆ. ಸೇಡಿಯಾಪು, ನಿರಂಜನ, ವಾಮನ ನಂದಾವರ, ಪಾಲ್ತಾಡಿಯವರ ಕೃತಿಗಳ ಕುರಿತಾಗಿ ಲೇಖನ ಅಥವಾ ಮುನ್ನುಡಿಗಳು ಇದೆ. ಏರ್ಯ ಸಾಹಿತ್ಯ ಮರುಚಿಂತನೆಯ ಕೃತಿ ಕುರಿತಾಗಿ ಬರೆದ ಮುನ್ನುಡಿ ಇಲ್ಲಿದೆ.
ಇಲ್ಲಿಯ ಬಹುತೇಕ ಸಾಹಿತಿಗಳ ಜೊತೆಗೆ ವಿವೇಕ ರೈ ಅವರಿಗೆ ಆತ್ಮೀಯ ಒಡನಾಟ ಇದ್ದ ಕಾರಣ ಅಕ್ಕರೆಯ ನೆಯ್ಗೆಯ ಬರಹಗಳನ್ನು ಕಾಣ ಬಹುದಾಗಿದೆ. ತುಳುನಾಡಿನ ಕಳೆದೆರಡು ಶತಮಾನಗಳ ಅಪೂರ್ವ ಕಾಯಕದ ಇತಿಹಾಸದ ನಿರೂಪಣೆ ಯಾಗಿ ನಮಗೆ ಈ ಕೃತಿ ಮುಖ್ಯವಾಗುತ್ತದೆ.
ಪಂಪನ ಪಂಪ ಭಾರತದಲ್ಲಿ ಬರುವ 'ತೆಂಕ ನಾಡಿನ ವರ್ಣನೆ, ರತ್ನಾಕರನ ಭರತೇಶ ವೈಭವದಲ್ಲಿ ಬರುವ ಕಡಲಿನ ವರ್ಣನೆ, ಮುದ್ದಣನ 'ಶ್ರೀ ರಾಮಾಶ್ವಮೇಧಮ್ 'ಬರುವ ಮಳೆಗಾಲದ ವರ್ಣನೆಯ ಒಂದೊಂದು ಪದ್ಯಗಳನ್ನು ನೀಡಲಾಗಿದೆ. ಪಂಪನ ಪ್ರೀತಿಯ ತೆಂಕನಾಡು- ಮಳೆ, ಕಡಲು, ಗದ್ದೆ, ಬೆಟ್ಟ, ನದಿಗಳಿಂದ ಕೂಡಿದ ಪ್ರಕೃತಿ ಸೌಂದರ್ಯದ ನಾಡಾಗಿದೆ. ಇವೆಲ್ಲವುಗಳ ಗುಣ ಹಿರಿಯ ಸಾಧಕರಲ್ಲಿ ಇರುವ ಕಾರಣದಿಂದ ವಿಶಿಷ್ಟ ಸಾಧನೆ ಮಾಡಲು ಸಾಧ್ಯವಾಗಿದೆ.
ಈ ಎಲ್ಲ ಹಿರಿಯರ ಬದುಕಿನ ಆದರ್ಶ, ಸಾಧನೆಗಳನ್ನು ಹೊಸ ತಲೆಮಾರು ಅರಿತು ಮುನ್ನಡೆಯಲು ಈ ಕೃತಿ ಪ್ರೇರಣೆ ನೀಡುತ್ತದೆ.
- ಕೃಷ್ಣಮೂರ್ತಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

