ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನಿಲ್ಲ: ಬಹುಮುಖ ಸೇವಾ ವ್ಯಕ್ತಿತ್ವಕ್ಕೆ ನಾಡಿನ ನುಡಿನಮನ

Upayuktha
0



ಬಸ್ರೂರು, ಉಡುಪಿ: ಬಸ್ರೂರು ಎಂದ ತಕ್ಷಣವೇ ನೆನಪಾಗುವ ಹೆಸರು ಅಪ್ಪಣ್ಣ ಹೆಗ್ಡೆ. ಶಿಕ್ಷಣ, ಧಾರ್ಮಿಕತೆ, ಸಾಮಾಜಿಕ ಕಾಳಜಿ, ಮಾನವೀಯ ಸಂಬಂಧಗಳು ಹಾಗೂ ರಾಜಕೀಯ ಮುತ್ಸದ್ದಿತನ—ಈ ಎಲ್ಲ ಕ್ಷೇತ್ರಗಳಲ್ಲಿ ಅಪೂರ್ವ ಛಾಪು ಮೂಡಿಸಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಈಗ ನೆನಪು ಮಾತ್ರ. ಅವರ ನಿಧನದಿಂದ ಕುಂದಾಪುರ–ಬಸ್ರೂರು ಮಾತ್ರವಲ್ಲ, ಇಡೀ ಕರಾವಳಿ ಭಾಗವೇ ಒಬ್ಬ ಶ್ರೇಷ್ಠ ಚಿಂತಕ, ಮಾರ್ಗದರ್ಶಕ ಮತ್ತು ಸೇವಾಭಾವಿ ವ್ಯಕ್ತಿತ್ವವನ್ನು ಕಳೆದುಕೊಂಡಿದೆ.


ಅಪ್ಪಣ್ಣ ಹೆಗ್ಡೆಯವರ ಜೀವನವು ಬಹುಕ್ಷೇತ್ರ ಸ್ಪರ್ಶಿಯಾಗಿದ್ದು, ಅವರು ಕೈಗೊಂಡ ಕಾರ್ಯಚಿಂತನೆಗಳು ಸಮಾಜದ ಅನೇಕ ಆಯಾಮಗಳಲ್ಲಿ ಪ್ರಭಾವ ಬೀರುವಂತಿದ್ದವು. ಶಿಕ್ಷಣ ಮತ್ತು ಸಮಾಜ ಸೇವೆಯನ್ನು ಅವರು ಜೀವನ ಧ್ಯೇಯವಾಗಿಸಿಕೊಂಡಿದ್ದರು. ಸಾರ್ವಜನಿಕ ಬದುಕಿನಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿದ್ದ ಅವರು, ತಮ್ಮ ನಿಷ್ಠೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯಿಂದಲೇ ಜನಮನ ಗೆದ್ದಿದ್ದರು.


ಬಾಲ್ಯ, ವಿದ್ಯಾಭ್ಯಾಸ ಮತ್ತು ಮಣಿಪಾಲದ ನಂಟು

ಅಪ್ಪಣ್ಣ ಹೆಗ್ಡೆಯವರ ತಾಯಿಯ ಮನೆ ಬಸ್ರೂರು. ತಂದೆಯ ಮನೆ ಮಣಿಪಾಲ ಸಮೀಪದ ಪರ್ಕಳ ಹಿರೇಬೆಟ್ಟು ಕಬಿಯಾಡಿ. ತಂದೆ ದಿವಂಗತ ರಾಮಣ್ಣ ಹೆಗ್ಡೆ. ಬಾಲ್ಯದ ಆರಂಭಿಕ ಶಿಕ್ಷಣವನ್ನು ತಾಯಿಯ ಮನೆಯಲ್ಲಿ ಪಡೆದ ಅವರು, ಎಂಟನೇ ತರಗತಿಗೆ ಬಂದಾಗ ತಂದೆಯ ಮನೆ ಕಡೆಗೆ ಬಂದು ಮಣಿಪಾಲ್ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು.


ಆ ದಿನಗಳಲ್ಲಿ ಪ್ರತಿದಿನ ಪರ್ಕಳದಿಂದ ಮಣಿಪಾಲಕ್ಕೆ ನಡೆದುಕೊಂಡೇ ಶಾಲೆಗೆ ಹೋಗುತ್ತಿದ್ದ ಅಪ್ಪಣ್ಣ ಹೆಗ್ಡೆಯವರ ಅನುಭವಗಳು ಇಂದು ಕೇಳಿದರೆ ಅಚ್ಚರಿ ಹುಟ್ಟಿಸುವಂತಿವೆ. ಕಾಡು ಪ್ರದೇಶದ ಮಧ್ಯೆ ಸಾಗುವ ದಾರಿಗಳು, ಪ್ರಾಣಿ–ಪಕ್ಷಿಗಳ ಕಿರುಚಾಟ, ಮಧ್ಯದಲ್ಲಿ ಸ್ಮಶಾನ ಭೂಮಿ—ಇವೆಲ್ಲವೂ ಬಾಲಕನ ಮನಸ್ಸಿನಲ್ಲಿ ಭಯ ಮತ್ತು ಧೈರ್ಯ ಎರಡನ್ನೂ ಬೆಳೆಸಿದ ಅನುಭವಗಳಾಗಿದ್ದವು ಎಂದು ಅವರು ಹಲವಾರು ಬಾರಿ ನೆನಪಿಸಿಕೊಂಡಿದ್ದರು.


ಇಂಟರ್‌ಮೀಡಿಯಟ್ ವಿದ್ಯಾಭ್ಯಾಸಕ್ಕಾಗಿ ಎಂಜಿಎಂ ಕಾಲೇಜಿಗೆ ಸೇರಿದ ಅವರು, ವಿಜ್ಞಾನ ವಿಭಾಗದತ್ತ ಆಸಕ್ತಿ ತೋರಿದರು. ಆದರೆ ಸ್ವಲ್ಪ ಕಾಲದಲ್ಲೇ ಅದು ತಮ್ಮ ಕ್ಷೇತ್ರವಲ್ಲ ಎಂಬ ಅರಿವು ಮೂಡಿತು. ವಿದ್ಯಾಭ್ಯಾಸದ ಹಾದಿಯಲ್ಲಿ ಎದುರಾದ ಸವಾಲುಗಳು ಮತ್ತು ತೀರ್ಮಾನಗಳು ಅವರ ವ್ಯಕ್ತಿತ್ವವನ್ನು ಇನ್ನಷ್ಟು ಪ್ರೌಢಗೊಳಿಸಿದವು. 1956ರಲ್ಲಿ ಮದ್ರಾಸ್‌ಗೆ ತೆರಳಿ ಮಿನರ್ವಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಪರೀಕ್ಷೆ ಬರೆದು ಇಂಗ್ಲಿಷ್‌ನಲ್ಲಿ ಉತ್ತೀರ್ಣರಾದರು.


ಮಾಧವ ಪೈಗಳ ಜೀವನ ಪಾಠ

ವಿದ್ಯಾರ್ಥಿ ದಿನಗಳಲ್ಲಿ ಬ್ರಹ್ಮಶ್ರೀ ದಿ. ಮಾಧವ ಪೈಗಳಿಂದ ಪಡೆದ ಒಂದು ಜೀವನ ಪಾಠವನ್ನು ಅಪ್ಪಣ್ಣ ಹೆಗ್ಡೆಯವರು ತಮ್ಮ ಬದುಕಿನುದ್ದಕ್ಕೂ ಮರೆಯಲಿಲ್ಲ. “ಯಾವುದೇ ವಸ್ತುವನ್ನು ಪುಕ್ಕಟೆ ನೀಡಿದರೆ ಅದರ ಮೌಲ್ಯ ಅರಿಯುವುದಿಲ್ಲ; ಸ್ವಲ್ಪ ಹಣ ಕೊಟ್ಟು ಪಡೆದವನಿಗೆ ಜವಾಬ್ದಾರಿ ಬರುತ್ತದೆ” ಎಂಬ ಪೈಗಳ ಮಾತುಗಳು ಅವರ ಜೀವನದ ಮಾರ್ಗದರ್ಶಕ ತತ್ವಗಳಾಗಿ ಉಳಿದವು.


ಸಾರ್ವಜನಿಕ ಜೀವನ ಮತ್ತು ರಾಜಕೀಯ ಸಂಪರ್ಕ

1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ, ಐದನೇ ಫಾರ್ಮ್‌ನಲ್ಲಿ ಓದುತ್ತಿದ್ದ ಅಪ್ಪಣ್ಣ ಹೆಗ್ಡೆಯವರು ಉಡುಪಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಎ. ಪೈ ಅವರ ಚುನಾವಣಾ ಪ್ರಚಾರದಲ್ಲಿ ಶಾಲೆಗೆ ರಜೆ ಹಾಕಿ ಅಳಿಲು ಸೇವೆ ಸಲ್ಲಿಸಿದ್ದರು. ಅಂದಿನಿಂದ ಮಣಿಪಾಲದ ಪೈ ಕುಟುಂಬದೊಂದಿಗೆ ಅವರ ಆತ್ಮೀಯ ಸಂಬಂಧ ಜೀವಮಾನಪೂರ್ತಿ ಮುಂದುವರಿದಿತು.


ಅಪಾರ ಸ್ಮರಣಶಕ್ತಿ, ಅಪೂರ್ವ ವ್ಯಕ್ತಿತ್ವ

ಅಪ್ಪಣ್ಣ ಹೆಗ್ಡೆಯವರ ಮತ್ತೊಂದು ವಿಶಿಷ್ಟ ಗುಣವೆಂದರೆ ಅವರ ಅಪಾರ ಸ್ಮರಣಶಕ್ತಿ. ಯಾವುದೇ ಸಭೆ–ಸಮಾರಂಭಗಳಲ್ಲಿ ವೇದಿಕೆಯಲ್ಲಿ ಇರುವ ಅತಿಥಿಗಳ ಹೆಸರುಗಳನ್ನು ಬರೆದುಕೊಳ್ಳದೆ ನೆನಪಿಸಿಕೊಂಡು ಪರಿಚಯಿಸುವ ಸಾಮರ್ಥ್ಯ ಅವರಿಗೆ ಇತ್ತು. ಕುಂದಾಪುರ–ಬಸ್ರೂರು ಪ್ರದೇಶದ ಇತಿಹಾಸ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಸುಲಭವಾಗಿ ವಿವರಿಸಬಲ್ಲ ಜ್ಞಾನ ಸಂಪನ್ನರಾಗಿದ್ದರು. ಈ ಕಾರಣದಿಂದಲೇ ಅವರನ್ನು ಆ ಪ್ರದೇಶದ “ಜ್ಞಾನ ದೀಪ” ಎಂದೂ ಕರೆಯಲಾಗುತ್ತಿತ್ತು.


ನುಡಿನಮನ

ಪ್ರಾತಃಸ್ಮರಣೀಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಭೌತಿಕ ದೇಹ ನಮ್ಮ ನಡುವೆ ಇಲ್ಲದಿದ್ದರೂ, ಅವರ ಚಿಂತನೆಗಳು, ಸೇವಾಭಾವ, ಮಾನವೀಯ ಸಂಬಂಧಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಅನುಪಮ ಸಾಧನೆಗಳು ಸದಾ ಜೀವಂತವಾಗಿರಲಿವೆ. ಅವರು ಕಟ್ಟಿಕೊಟ್ಟ ಮೌಲ್ಯಗಳು ಮುಂದಿನ ತಲೆಮಾರಿಗೆ ದಾರಿ ತೋರಿಸುವ ದೀಪವಾಗಿಯೇ ಉಳಿಯಲಿವೆ.


- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top