ಧರ್ಮತ್ತಡ್ಕ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲಾಂತರ್ಗತ ಗುಂಪೆ ವಲಯದ ಫೆಬ್ರವರಿ ತಿಂಗಳ ಮಾಸಿಕ ಸಭೆಯು ಬುಧವಾರ (ಫೆ.4) ಧರ್ಮತ್ತಡ್ಕದಲ್ಲಿರುವ ಗುಂಪೆ ವಲಯ ಕಚೇರಿಯಲ್ಲಿ ಭಕ್ತಿಭಾವದಿಂದ ಜರಗಿತು.
ಸಭೆಯು ಧ್ವಜಾರೋಹಣ, ಶಂಖನಾದ, ಗುರುವಂದನೆ ಹಾಗೂ ಗೋಸ್ತುತಿ ಮೂಲಕ ಆರಂಭವಾಯಿತು. ವಲಯದ ಅಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ ಕೊಂಡಲಕಾಡು ಅವರು ಧ್ವಜಾರೋಹಣ ನೆರವೇರಿಸಿದರು.
ವಲಯ ಕಾರ್ಯದರ್ಶಿ ಕೇಶವ ಪ್ರಸಾದ್ ಎಡಕ್ಕಾನ ಅವರು ಗತಸಭೆಯ ವಿವರವಾದ ವರದಿಯನ್ನು ಮಂಡಿಸಿದರು. ಲೇಖಾ ವಿಭಾಗದ ಪ್ರಧಾನರಾದ ಹಳ್ಳಕೋಡ್ಲು ಗೋವಿಂದ ಭಟ್ ಅವರು ಕಳೆದ ತಿಂಗಳ ಲೆಕ್ಕಪತ್ರವನ್ನು ಸಭೆಗೆ ಸಲ್ಲಿಸಿದರು. ಪದಾಧಿಕಾರಿಗಳು ವಿಭಾಗವಾರು ವರದಿಗಳನ್ನು ನೀಡಿದರೆ, ಘಟಕಾಧ್ಯಕ್ಷರು ಘಟಕದ ಚಟುವಟಿಕೆಗಳ ವಿವರವನ್ನು ತಿಳಿಸಿದರು. ಮಹಾಮಂಡಲ ಹಾಗೂ ಮಂಡಲದ ಕಾರ್ಯಸೂಚಿಯನ್ನೂ ಸಭೆಗೆ ತಿಳಿಸಲಾಯಿತು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಮುಂದಿನ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆಯಲು ಆಸಕ್ತ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ವಲಯಕ್ಕೆ ನೀಡುವಂತೆ ಮನವಿ ಮಾಡಲಾಯಿತು.
ಫೆ. 25ರಂದು ಹೊಸನಗರದ ಮಹಾನಂದಿ ಗೋಲೋಕದಲ್ಲಿ ನಡೆಯುವ ಕೃಷ್ಣಾರ್ಪಣಂ ಕಾರ್ಯಕ್ರಮ ಹಾಗೂ ಫೆ. 26ರಂದು ಹೊಸನಗರದ ಶ್ರೀ ರಾಮಚಂದ್ರಾಪುರ ಪ್ರಧಾನ ಮಠದಲ್ಲಿ ಶ್ರೀ ರಾಮ ಸಾನಿಧ್ಯದ ಶಿಲಾನ್ಯಾಸ ಕಾರ್ಯಕ್ರಮವು ಶ್ರೀಗುರುಗಳ ದಿವ್ಯ ಹಸ್ತದಿಂದ ಜರುಗಲಿರುವುದಾಗಿ ಸಭೆಯಲ್ಲಿ ತಿಳಿಸಲಾಯಿತು. ಈ ಸಂದರ್ಭ ಮುಷ್ಠಿಕಾಣಿಕೆ ಸಮರ್ಪಣೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಷ್ಯಬಾಂಧವರು ಭಾಗವಹಿಸುವಂತೆ ಕೋರಲಾಯಿತು.
ಮುಳ್ಳೇರಿಯಾ ಮಂಡಲದ ಗುಂಪೆ ವಲಯದಲ್ಲಿ ನೂತನವಾಗಿ ಸ್ಥಾಪಿತವಾದ “ಮರುವಳ ಘಟಕ”ದ ಗುರಿಕಾರರಾಗಿ ಚಿದಾನಂದ ಭಟ್ ಎಂ. ಮಾಣಿ ಅವರನ್ನು ನಿಯುಕ್ತಿಗೊಳಿಸಲಾಯಿತು.
ಶ್ರೀಮಠದ ಮಹತ್ವದ ಯೋಜನೆಯಾದ ಮುಷ್ಠಿಭಿಕ್ಷೆ ಯೋಜನೆಯನ್ನು ಪ್ರತೀ ಮನೆಯಲ್ಲೂ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲರ ಸಹಕಾರ ಕೋರಲಾಯಿತು. ವಿಶ್ವಾವಸು ನಾಮ ಸಂವತ್ಸರದ ಗುರುಂದನೆ ದೀಪಕಾಣಿಕೆ ಸಮರ್ಪಣೆ, ಮಾಣಿ ಮಠ ವಾರ್ಷಿಕ ದೇಣಿಗೆ, ಚಂದ್ರಮೌಳೀಶ್ವರ ದೇವಸ್ಥಾನದ ಶಿವಧನ, ಮಾಣಿ ಮಠ ವಾರ್ಷಿಕೋತ್ಸವ ಹಾಗೂ ಶ್ರೀಸಂಸ್ಥಾನದವರ ವರ್ಧಂತಿ ಉತ್ಸವದ ತುಲಾಭಾರ ಮುಂತಾದ ಕಾರ್ಯಕ್ರಮಗಳಲ್ಲಿ ವಲಯದ ಸಕ್ರಿಯ ಭಾಗವಹಿಸುವಿಕೆ ನಡೆದಿದೆ ಎಂದು ತಿಳಿಸಲಾಯಿತು.
ಎಲ್ಲಾ ಘಟಕಗಳ ದೀಪಕಾಣಿಕೆ ಸಮರ್ಪಣೆಯನ್ನು ಪೂರ್ಣಗೊಳಿಸಲು ಶ್ರಮಿಸಿದ ಗುರಿಕಾರರಿಗೆ ಅಭಿನಂದನೆ ಸಲ್ಲಿಸಲಾಯಿತು. ಅದರಲ್ಲೂ ಒಂದೇ ದಿನ 27 ಮನೆಗಳ ದೀಪಕಾಣಿಕೆ ಸಮರ್ಪಣೆ ಪೂರ್ಣಗೊಳಿಸಿದ ಹಳ್ಳಕೋಡ್ಲು ಘಟಕದ ಗುರಿಕಾರ ಇ. ಹಚ್. ಗಣಪತಿ ಭಟ್ ಹಾಗೂ ಶಿಷ್ಯಬಾಂಧವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ರವಿಗುರು ನಮನ ಕಾರ್ಯಕ್ರಮದ ಅಂಗವಾಗಿ ಜನವರಿ 11ರಂದು ಧರ್ಮತ್ತಡ್ಕ ವಲಯ ಕಚೇರಿ ಹಾಗೂ ಜನವರಿ 14ರಂದು ಕಲ್ಲಡ್ಕ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಆದಿತ್ಯಹೃದಯ ಪಠಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಸಲ್ಲಿಸಲಾಯಿತು.
“ಸೋರಿಗೊಂದು ಸೂರು” ಯೋಜನೆಯಡಿ ಶ್ರಾವಣ ಕೆರೆ ಘಟಕದ ಕೃಷ್ಣ ಹೆಬ್ಬಾರರ ಮನೆ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಹೆಚ್ಚಿನ ಧನಸಂಗ್ರಹಣೆಯ ಅಗತ್ಯವಿದೆ. ಸಮಾಜದ ಆರ್ಥಿಕವಾಗಿ ದುರ್ಬಲ ಕುಟುಂಬಕ್ಕೆ ಸುರಕ್ಷಿತ ಸೂರು ಒದಗಿಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಲಾಯಿತು.
ಸಭೆಯ ಅಂತ್ಯದಲ್ಲಿ ಗುರುಪಾದುಕಾ ಸ್ತೋತ್ರ ಪಠಣ, ರಾಮತಾರಕ ಮಂತ್ರ ಜಪ, ಶಾಂತಿಮಂತ್ರ, ಧ್ವಜಾವತರಣ ಹಾಗೂ ಶಂಖನಾದದೊಂದಿಗೆ ಸಭೆ ಮುಕ್ತಾಯವಾಯಿತು. ಗುರಿಕಾರರು, ಪದಾಧಿಕಾರಿಗಳು ಹಾಗೂ ಶಿಷ್ಯಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

