ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ 'ಭಾಸ್ಕರ ಪರ್ವ': 500ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಗೌರವಾಭಿನಂದನೆ

Upayuktha
0


  • ಮೂರು ದಶಕಗಳ ವೃತ್ತಿ ಬದುಕಿಗೆ ಗೌರವದ ಬೀಳ್ಕೊಡುಗೆ 
  • ವೃತ್ತಿ ಬದುಕಿನ ಸಾಕ್ಷ್ಯ ಚಿತ್ರ ಮತ್ತು  ಅಭಿನಂದನ ಗ್ರಂಥ ಬಿಡುಗಡೆ 




ಉಜಿರೆ, ಜ. 31: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸುಮಾರು 33 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಿರುವ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರನ್ನು ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಬಳಗ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಕೂಡುವಿಕೆಯಲ್ಲಿ ಗೌರವಿಸುವ 'ಭಾಸ್ಕರ ಪರ್ವ' ಕಾರ್ಯಕ್ರಮವು ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಅಭೂತಪೂರ್ವವಾಗಿ ನಡೆಯಿತು.


ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿಸಿದರು. ಬಳಿಕ ಮಾತನಾಡಿ, ಶಿಕ್ಷಕರು ತನ್ನ ವೃತ್ತಿ ಬದುಕಿನಲ್ಲಿ ನಾಲ್ಕು ಗುಣಗಳಿಂದ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಶಿಕ್ಷಕರು ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು, ಎರಡನೇಯದು ಬೋಧನಾ ವಿಷಯವನ್ನು ವಿಶೇಷವಾಗಿ ಪ್ರೀತಿಸಬೇಕು, ನಂತರ ವೃತ್ತಿಯನ್ನು ಪ್ರೀತಿಸಬೇಕು ಬಳಿಕ ತಾನಿರುವ ಸಂಸ್ಥೆಯನ್ನು ಗೌರವದಿಂದ ಕಾಣಬೇಕು. ಇದಕ್ಕೆಲ್ಲ ಮಾದರಿಯಾಗಿ ಹಲವಾರು ಸವಾಲಿನ ಸಂದರ್ಭದಿಂದ ಈ ದಿನದ ವರೆಗೂ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನು ಮುಖ್ಯಸ್ಥರಾಗಿ ನಡೆಸಿಕೊಂಡು ಬಂದ ಭಾಸ್ಕರ್ ಹೆಗಡೆಯವರು ಕಾಣುತ್ತಾರೆ. ತನ್ನ ವೃತ್ತಿ ಬದುಕಿನಲ್ಲಿ ನಿರಂತರವಾಗಿ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಯನ್ನು ಹರಸುತ್ತಾ ಬಂದು, ರಾಜ್ಯದುದ್ದಕ್ಕೂ ತನ್ನ ಶಿಷ್ಯ ಪರಂಪರೆಯನ್ನು ಹಂಚುತ್ತಾ ಬಂದಿದ್ದಾರೆ. ರಾಜ್ಯದ ಹೆಸರಾಂತ ಪತ್ರೀಕಾ ಕಛೇರಿಗಳಲ್ಲಿ ಬಹುತೇಕ ಎಸ್.ಡಿ.ಎಂ ಸಂಸ್ಥೆಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳೇ ತುಂಬಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಶುಭ ಹಾರೈಸಿದರು. 


ಡಾ. ಭಾಸ್ಕರ್ ಹೆಗಡೆಯವರ ಬದುಕಿನ ಸಾಕ್ಷ್ಯಚಿತ್ರವನ್ನು  ವಿಭಾಗದ ಹಿರಿಯ ವಿದ್ಯಾರ್ಥಿನಿ ಹಾಗೂ ಬೆಂಗಳೂರಿನ ಕ್ಷೇಮವನದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಇವರು, ಗುರುಗಳು ಸದಾ ವಿದ್ಯಾರ್ಥಿಗಳ ಯಶಸ್ಸನ್ನ ಬಯಸುತ್ತಾರೆ. ಅದಕ್ಕಾಗಿ ವಿದ್ಯಾರ್ಥಿಗಳ ಪ್ರತೀ ಚಟುವಟಿಕೆಗಳಲ್ಲಿ ಪ್ರೋತ್ಸಾಹ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಿರುತ್ತಾರೆ. ಅಂತಹ ಮಹಾ ಸೇವೆಯನ್ನು ಎಸ್.ಡಿ.ಎಂ ಸಂಸ್ಥೆಯಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಸಮಯವನ್ನು ವಿನಿಯೋಗಿಸಿದ ಶ್ರೇಯಸ್ಸು ಭಾಸ್ಕರ್ ಹೆಗಡೆಯವರಿಗೆ ಸಲ್ಲುತ್ತದೆ. ಪತ್ರಿಕೋದ್ಯಮದಲ್ಲಿ ನೂರಾರು ಜನ ಬದುಕನ್ನು ಕಟ್ಟಿಕೊಳ್ಳಲು ಈ ಸಂಸ್ಥೆ ಹಾಗು ವಿಭಾಗ ಕಾರಣೀಭೂತವಾಗಿ ಅದರಲ್ಲಿ ಭಾಸ್ಕರ್ ಹೆಗಡೆಯವರ ಪಾತ್ರ ಬಹು ಮಹತ್ವದ್ದು. ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಂಡ ವಿದ್ಯಾರ್ಥಿಗಳು ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬೆಳಗುತ್ತಿದ್ದಾರೆ. ಎಂದು ತನ್ನ ವಿದ್ಯಾ ದಿನಗಳ ಪ್ರಾಯೋಗಿಕ ಚಟುವಟಿಕೆಗಳಾದ ಚಿಗುರು, ಕಾರ್ಯಯೋಜನೆ, ಶೈಕ್ಷಣಿಕ ಪ್ರವಾಸ ಇತ್ಯಾದಿ ಸಂದರ್ಭಗಳನ್ನು ನೆನಪಿಸಿಕೊಂಡರು. 


ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಡಾ. ಭಾಸ್ಕರ್ ಹೆಗಡೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಸತೀಶ್ಚಂದ್ರ ಎಸ್. ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿದರು. ಬಳಿಕ ಡಾ. ಭಾಸ್ಕರ್ ಹೆಗಡೆ ಚಿಗುರು ಮತ್ತು ಕದಂಬ ಮ್ಯಾಗಜಿನ್ ಗಳನ್ನು ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಮಾರು 30 ನಿಮಿಷಗಳ ಡಾ. ಭಾಸ್ಕರ್ ಹೆಗಡೆ ವೃತ್ತಿ ಜೀವನದ ಸಾಕ್ಷ್ಯ ಚಿತ್ರವನ್ನು ಪ್ರದರ್ಶೀಸಲಾಯಿತು.  ಅಂತಾರಾಷ್ಟ್ರೀಯ ಸ್ಪೀಡ್ ಚಿತ್ರ ಪೈಟಂರ್ ವಿಲಾಸ್ ನಾಯಕ್ ಬಿಡಿಸಿದ ಭಾವಚಿತ್ರದ ಫೋಟೋವನ್ನು ಕೊಡುಗೆಯಾಗಿ ನೀಡಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಒಬ್ಬ ಶಿಕ್ಷಕನಾದವನು ವಿದ್ಯಾರ್ಥಿಗಳ ಪದವಿಗೆ ಮಾತ್ರ ಶಿಕ್ಷಣವನ್ನು ನೀಡಬಾರದು. ಆತ ತರಗತಿಯ ಶಿಕ್ಷಣದ ಜೊತೆಗೆ ಬದುಕಿನ ಭವಿಷ್ಯದ ಶಿಕ್ಷಣವನ್ನೂ ನೀಡಬೇಕು. ಪಠ್ಯ  ಜ್ಞಾನದ ಜೊತೆಗೆ ನೌತಿಕ ಮೌಲ್ಯ, ಸಂಸ್ಕಾರದ ಗುಣವನ್ನು ಬೆಳೆಸಬೇಕು. ಇಂತಹ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಶಿಕ್ಷಣವನ್ನು 30 ಕ್ಕೂ ಅಧಿಕ ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಧಾರೆಯೆರದ ಹೆಮ್ಮೆ ಭಾಸ್ಕರ್ ಹೆಗಡೆಯವರದು. ಅವರ ಮಾರ್ಗದರ್ಶನದಲ್ಲಿ ಸಾಗಿಬಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಅತ್ಯಂತ ವಿಶೇಷವಾಗಿ ಗುರುತಿಸಿಕೊಂಡಿದೆ ಎಂದು. ನಿವೃತ್ತ ಬದುಕಿಗೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸೋನಿಯಾ ಯಶೋವರ್ಮ, ಎಸ್.ಡಿ.ಎಂ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ ಸೇರಿದಂತೆ ಎಸ್.ಡಿ.ಎಂ ನ ವಿವಿಧ ಕಾಲೇಜುಗಳ ಪ್ರಾಂಶುಪಾರು, ಮುಖ್ಯಸ್ಥರು, ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ  ಸತೀಶ್ ಕುಮಾರ್ ಅಂಡಿಂಜೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಗುರುಪ್ರಸಾದ್ ನಿರೂಪಿಸಿ, ಹಿರಿಯ ವಿದ್ಯಾರ್ಥಿನಿ ಸಹನಾ ವಂದಿಸಿದರು.



ನನ್ನ ವಿದ್ಯಾರ್ಥಿ ಜೀವನದ ಅತ್ಯಾಪ್ತ ಕೆಲವೇ ಕೆಲವು ಗುರುಗಳ ಪೈಕಿ ಭಾಸ್ಕರ್ ಹೆಗಡೆಯವರೂ ಒಬ್ಬರು. ಈಗಲೂ ಅವರ ಬಳಿ ಗುರು ಶಿಷ್ಯೆಯ ಭಾವನೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಅವರು ತನ್ನ ಬದುಕಿನುದ್ದಕ್ಕೂ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಬದುಕಿನ ಶಿಕ್ಷಣವನ್ನೂ ಮಾರ್ಗದರ್ಶಿಸುತ್ತಾ ಬಂದವರು. ಕಾಲೇಜಿನ ಪತ್ರಿಕೋದ್ಯಮ ವಿಭಾಗವನ್ನೇ ತನ್ನ ಬದುಕಿನ ಕಾರ್ಯಾಲಯವಾಗಿ ರೂಪಿಸಿಕೊಂಡು ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಶ್ರೇಯಸ್ಸಿಗೆ ಸೇವೆ ಸಲ್ಲಿಸಿದವರು. ಅವರ ನಿವೃತ್ತಿ ಜೀವನ ಸದಾ ಸುಖಿಕರವಾಗಲಿ ಎಂದು ಶುಭ ಹಾರೈಸುತ್ತೇನೆ.

- ಶ್ರದ್ಧಾ ಅಮಿತ್ 

ಕಾರ್ಯನಿರ್ವಾಹಕ ನಿರ್ದೇಶಕಿ, ಕ್ಷೇಮವನ ಬೆಂಗಳೂರು 



ವಿದ್ಯಾರ್ಥಿಗಳಿಲ್ಲದ ಮುಂದಿನ ದಿನಗಳನ್ನು ನೆನಪಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ವಿದ್ಯಾರ್ಥಿಗಳೇ ನನ್ನ ಆಸ್ತಿ. ಎಲ್ಲೇ ಪತ್ರೀಕಾ ಕಛೇರಿಗಳಿಗೆ ಹೋದರೆ ನನ್ನ ವಿದ್ಯಾರ್ಥಿಗಳು ಇದ್ದಾರೆ ಎನ್ನುವಷ್ಟು ಹೆಮ್ಮೆ ನನಗಿದೆ. ನನ್ನ ವೃತ್ತಿ ಬದುಕಿನುದ್ದಕೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ನೀಡಿದ್ದಾರೆ. ಇದರ ಭಾಗವಾಗಿ ವಿಭಾಗದ ಸಹೋದ್ಯೋಗಿಗಳು ಕೂಡ ನನ್ನೆಲ್ಲಾ ಕನಸಿಗೆ  ಸಹಕಾರವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ  ಎಸ್.ಡಿ.ಎಂ ಸಂಸ್ಥೆಯ ಹಾಗು ಕಾಲೇಜಿನ ಪತ್ರಿಕೋದ್ಯಮ ವಿಭಾಗ ವಿಭಾಗ ಮತ್ತಷ್ಟು ಯಶಸ್ಸನ್ನು ಕಾಣಲಿ ಎಂದು ಶುಭ ಹಾರೈಸುತ್ತೇನೆ. 

- ಡಾ. ಭಾಸ್ಕರ್ ಹೆಗಡೆ

ನಿವೃತ್ತರಾಗುತ್ತಿರುವ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರು.



ವೃತ್ತಿ ಬದುಕಿನ ಸಾಕ್ಷ್ಯ ಚಿತ್ರ & ಅಭಿನಂದಾನ ಗ್ರಂಥ ಬಿಡುಗಡೆ: 

ಕಾರ್ಯಕ್ರಮದಲ್ಲಿ 30 ಕ್ಕೂ ಅಧಿಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ವೃತ್ತಿ ಬದುಕಿನ ಕುರಿತಾದ ಸುಮಾರು 30 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಸಾಕ್ಷ್ಯ ಚಿತ್ರದಲ್ಲಿ ಧರ್ಮಸ್ಥಳ ಹೇಮಾವತಿ ವಿ. ಹೆಗ್ಗಡೆ, ಸೋನಿಯಾ ಯಶೋವರ್ಮ,  ಪತ್ರಿಕೋದ್ಯಮದ ದಿಗ್ಗಜರಾದ ಅಜಿತ್ ಹನುಮಕ್ಕನವರ್, ರವಿ ಹೆಗಡೆ, ಪ್ರತಾಪ್ ಸಿಂಹ ಹಾಗು ಚಿತ್ರ ನಟರಾದ ಕುರಿ ಪ್ರತಾಪ್ ಸೇರಿದಂತೆ ಪ್ರಮುಖರು ಅನಿಸಿಕೆಗಳನ್ನು ಹಂಚಿಕೊಂಡು ಶುಭ ಹಾರೈಸಿದರು. ಇದೇ‌ ಸಂದರ್ಭದಲ್ಲಿ ಅನೇಕ ಜನ ಲೇಖಕರು ಅಭಿನಂದನಾ ಪೂರಕವಾಗಿ ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಿ ಸ್ಮರಣಿಕೆ ಯಾಗಿ ನೀಡಲಾಯಿತು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top