ಭಾಸ್ಕರ ಪರ್ವ: ಮಾಧ್ಯಮ ಗುರುವಿಗೆ ಅಭಿನಂದನೆ

Upayuktha
0

ಪ್ರೊ. ಭಾಸ್ಕರ ಹೆಗಡೆಯವರ ಸರಳ ವ್ಯಕ್ತಿತ್ವ, ಪ್ರಾಯೋಗಿಕ ಅನುಭವ ಮತ್ತು ಮೌಲ್ಯಶಿಕ್ಷಣ ವಿದ್ಯಾರ್ಥಿಗಳ ಮೇಲೆ ಗಾಢ ಪ್ರಭಾವ ಬೀರಿದೆ: ಶ್ರದ್ಧಾ ಅಮಿತ್



ಚಿತ್ರ: *ಶನಿವಾರ ವೃತ್ತಿಯಿಂದ ನಿವೃತ್ತರಾದ ಪ್ರೊ. ಭಾಸ್ಕರ ಹೆಗಡೆ ಅವರಿಗೆ ಎಸ್.ಡಿ.ಎಂ. ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಅಭಿನಂದನೆ ಸಲ್ಲಿಸಲಾಯಿತು.

*ಶ್ರದ್ಧಾ ಅಮಿತ್ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


ಉಜಿರೆ: ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಮೂವತ್ತಮೂರು ವರ್ಷ  ಉಪನ್ಯಾಸಕರಾಗಿ, ವಿಭಾಗಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಶನಿವಾರ ವೃತ್ತಿಯಿಂದ ನಿವೃತ್ತರಾದ ಪ್ರೊ. ಭಾಸ್ಕರ ಹೆಗಡೆಯವರ ಸರಳ ವ್ಯಕ್ತಿತ್ವ, ಪ್ರಾಯೋಗಿಕ ಅನುಭವ, ದಕ್ಷ ನಾಯಕತ್ವ ಮತ್ತು ಮೌಲ್ಯಶಿಕ್ಷಣ ವಿದ್ಯಾರ್ಥಿಗಳ ಉಜ್ವಲಭವಿಷ್ಯ ರೂಪಿಸುವಲ್ಲಿ ಗಾಢ ಪ್ರಭಾವ ಬೀರಿದೆ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಬೆಂಗಳೂರಿನ ಕ್ಷೇಮವನದ ಸಿ.ಇ.ಒ. ಶ್ರದ್ಧಾಅಮಿತ್ ಹೇಳಿದರು.


ಅವರು ಶನಿವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಇಂದ್ರಪ್ರಸ್ಥ ಸಭಾಂಗಂಣದಲ್ಲಿ ವೃತ್ತಿಯಿಂದ ನಿವೃತ್ತಿ ಹೊಂದಿದ ಪ್ರೊ. ಭಾಸ್ಕರ ಹೆಗಡೆ ಅವರ ಹಿರಿಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ “ಭಾಸ್ಕರ ಪರ್ವ” – ಅಭಿನಂದನ ಸಮಾರಂಭವನ್ನು ಉದ್ಘಾಟಿಸಿ ಸಾಕ್ಷಚಿತ್ರ ಬಿಡುಗಡೆಗೊಳಿಸಿ, ಗುರುವಂದನೆ ಸಲ್ಲಿಸಿ, ಮಾತನಾಡಿದರು.


ವಿದ್ಯಾರ್ಥಿಗಳ ಮೇಲೆ ಅವರಿಗೆ ಅಪಾರ ಪ್ರೀತಿ-ವಿಶ್ವಾಸ ಮತ್ತು ಗೌರವ ಇದ್ದು, ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಕ್ಷಿಪ್ರ ಮಾಹಿತಿ ದೊರಕುವಂತೆ ಮಾಡಿದ ಅವರ ಉತ್ತಮಸಂಸ್ಕಾರ, ಜ್ಞಾನದಾಸೋಹ ಎಲ್ಲರಿಗೂ ಅಮೂಲ್ಯ ದಾರಿದೀಪವಾಗಿ ಪ್ರೇರಕಶಕ್ತಿಯಾಗಿದೆ. ಖುಷಿ ಆದಾಗ ಹೇಳದಿದ್ದರೂ ಪರವಾಗಿಲ್ಲ, ಕಷ್ಟವಾದಾಗ, ಸಮಸ್ಯೆಯಾದಾಗ ತಮ್ಮನ್ನು ಸಂಪರ್ಕಿಸುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದರು.


ಪ್ರಾಂಶುಪಾಲರಾಗಿದ್ದ ಡಾ. ಬಿ. ಯಶೋವರ್ಮರ ಮಾರ್ಗದರ್ಶನದಲ್ಲಿ ಅವರು ಅನೇಕ ಹೊಸ ಪ್ರಯೋಗಗಳನ್ನು ಆರಂಭಿಸಿದರು. ಅವರ ಅಪಾರ ಶಿಷ್ಯವೃಂದವೇ ಅವರ ಅಮೂಲ್ಯ ಆಸ್ತಿ ಎಂದು ಶ್ರದ್ಧಾಅಮಿತ್ ಶುಭಾಶಂಸನೆ ಮಾಡಿದರು.


ಅಭಿನಂದನಾಗ್ರಂಥ ಬಿಡುಗಡೆ ಮಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಮಾತನಾಡಿ, ಪ್ರೊ. ಭಾಸ್ಕರ ಹೆಗಡೆಯವರು ನೀಡಿದ ಪ್ರಾಯೋಗಿಕ ತರಬೇತಿ, ಜ್ಞಾನ ಮತ್ತು ಕೌಶಲಅಭಿವೃದ್ಧಿ ಚಟುವಟಿಕೆಗಳಿಂದಾಗಿ ಅವರ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಎಸ್.ಡಿ.ಎಂ.ನ ಸಾಂಸ್ಕೃತಿಕ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಗೆ ವಿಶೇಷ ಗೌರವ, ಅಭಿಮಾನ ಉಂಟು ಮಾಡಿದೆ ಎಂದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ವಿಶ್ವನಾಥ ಮಾತನಾಡಿ, ಡಾ. ಬಿ. ಯಶೋವರ್ಮರ ನೇತೃತ್ವದಲ್ಲಿ ವಿದ್ಯಾರ್ಥಿಕೇಂದ್ರಿತ ಶಿಕ್ಷಣಕ್ರಮ ಅನುಷ್ಠಾನಗೊಳಿಸಿದಾಗ, ಪ್ರೊ. ಭಾಸ್ಕರ ಹೆಗಡೆಯವರು ಅದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರು.  ಎಲ್ಲಾ ವಿದ್ಯಾರ್ಥಿಗಳನ್ನೂ ತಮ್ಮ ಮಕ್ಕಳಂತೆ ಕಂಡು ಮಾರ್ಗದರ್ಶನ, ಪ್ರೇರಣೆ ನೀಡಿದ್ದಾರೆ ಎಂದು ಹೇಳಿ ಅಭಿನಂದಿಸಿದರು.

ಪ್ರೊ. ಭಾಸ್ಕರ ಹೆಗ್ಡೆಯವರನ್ನು ಗೌರವಿಸಿ ಅಭಿನಂದಿಸಲಾಯಿತು.

ಪ್ರೊ. ಭಾಸ್ಕರ ಹೆಗಡೆ “ಚಿಗುರು” ಸಂಚಿಕೆ ಮತ್ತು “ಕದಂಬ” ಕೃತಿಗಳನ್ನು ಬಿಡುಗಡೆಗೊಳಿಸಿದರು.

ಪ್ರೊ. ಭಾಸ್ಕರ ಹೆಗಡೆ ಅವರ ಮಗ ಶಶಾಂಕ ಉಪಸ್ಥಿತರಿದ್ದರು.


ಕುವೆಂಪು ವಿ.ವಿ. ಯ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸತೀಶ್‌ಕುಮಾರ್ ಅಂಡಿAಜೆ ಸ್ವಾಗತಿಸಿದರು.


ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಧನ್ಯವಾದವಿತ್ತರು. ಹಿರಿಯ ವಿದ್ಯಾರ್ಥಿ ಗುರುಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.


ಪ್ರತಿವರ್ಷ ಐದು ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳ ವತಿಯಿಂದ ವಿದ್ಯಾರ್ಥಿವೇತನ ನೀಡಲಾಗುವುದು ಎಂದು  ಹಿರಿಯ ವಿದ್ಯಾರ್ಥಿಗಳು ಪ್ರಕಟಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top