ಶಿವಮೊಗ್ಗ: ನಗರದ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು.ಹೊನಲು.ಎಸ್ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿದ ಜಿಲ್ಲಾ ಮಟ್ಟ ಮತ್ತು ವಿಭಾಗ ಮಟ್ಟದ ಜಾನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಶಿವಮೊಗ್ಗ ರಂಗಾಯಣದ ಆಡಳಿತಾಧಿಕಾರಿಗಳಾದ ಡಾ. ಶೈಲಜಾ ಎ.ಸಿ ಮತ್ತು ಸುಧಾಕರ್ ರವರ ಪುತ್ರಿಯಾಗಿರುವ ಈಕೆ ಶಿಕ್ಷಣದ ಜೊತೆಗೆ ಸುಗಮ ಸಂಗೀತ, ಭರತನಾಟ್ಯ, ಶಾಸ್ತ್ರೀಯ ಸಂಗೀತ, ಯೋಗಾಸನ, ಕ್ರೀಡೆ, ಜಾನಪದ ನೃತ್ಯ, ಪ್ರವಾಸ, ಚಿತ್ರ ಕಲೆ ಹೀಗೆ ಹಲವು ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾಳೆ. 3 ವರ್ಷ ವಯಸ್ಸಿನಿಂದಲೇ ನವರಸ ಅಭಿನಯ, ಭಾವಗೀತೆ, ಶ್ಲೋಕ, ಮಂಕುತಿಮ್ಮನ ಕಗ್ಗ, ಜಾನಪದ ಗೀತೆಗಳನ್ನು ಹಾಡುವ ಮೂಲಕ ಗಮನಸೆಳೆದ್ದಿದ್ದಾಳೆ.
ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯಲ್ಲಿ ಆಸಕ್ತಿ ಬೆಳಸಿಕೊಂಡ ಪ್ರತಿಭೆ ಮೊದಲು ಶಿವಮೊಗ್ಗ ರಂಗಾಯಣದ ಕಲಾವಿದರೊಂದಿಗೆ ರಂಗ ಗೀತೆಗಳ ಗಾಯನ ಕಾರ್ಯಕ್ರಮ, ಮಕ್ಕಳ ಬೇಸಿಗೆ ಶಿಬಿರ, ರಿಯಾಲಿಟಿ ಶೋ ಮತ್ತು ಉಸಿರಾ ನಾಟಕಗಳಲ್ಲಿ ನಟಿಸಿ ಪ್ರಶಂಸೆಗೆ ಪಾತ್ರಳಾಗಿದ್ದಳು. ಇದರ ಜೊತೆಗೆ ವೀರಗಾಸೆ, ಪಟ ಕುಣಿತ, ಛದ್ಮವೇಷ, ಸಂಗೀತ ಹಲವು ಕಾರ್ಯಗಳಲ್ಲಿ ಛಾಪು ಮೂಡಿಸಿದ್ದಲ್ಲದೇ ಸಹಚೇತನ ನಾಟ್ಯಾಲಯದ ಕಿರಿಯ ವಿದ್ಯಾರ್ಥಿನಿಯಾಗಿ ನಾಟ್ಯಾರಾಧನ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ, ಪಂಡಿತ್ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ಗಾಯನ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಚಿಗುರು ಕಾರ್ಯಕ್ರಮದಲ್ಲಿ ಜಾನಪದ ಗೀತೆ ಗಾಯನದಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ್ದಾಳೆ.
ಆದಿಚುಂಚನಗಿರಿ ನಿರ್ಮಲಾನಂದಶ್ರೀಗಳು ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ರವರ ಮುಂದೆ ಹಾಡಿ ಗಮನ ಸೆಳೆದಿದ್ದಾಳೆ ಈ ಪೋರಿ. ಕಲೆ ಮಾತ್ರವಲ್ಲದೆ ಓದಿನಲ್ಲಿ ಕೂಡ ಮುಂದಿದ್ದು ಶಾಲೆಯಲ್ಲಿನ ಓಟದ ಸ್ಪರ್ಧೆ, ಪದ್ಯ ಕಂಠಪಾಠ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಯಂಗ್ ಎಕ್ಸ್ ಫ್ಲೋರಲ್ ಆಗಿ ಪ್ರಶಂಸೆಗಳಿಸಿದ್ದಾಳೆ. ಪ್ರಸ್ತುತ ಹಿಂದೂಸ್ತಾನಿ ಸಂಗೀತವನ್ನು ನಿಷಾದ್ ಹರ್ಲಾಪುರ್ ರಿಂದ ಮತ್ತು ಭರತನಾಟ್ಯವನ್ನು ಸಹನಾ ಚೇತನ್ ಹಾಗೂ ಶೈಲಜಾ ಕುಮಾರ್ ಚನ್ನರಾಯಪಟ್ಟಣ ಇವರಿಂದ ಕಲಿಯುತ್ತಿದ್ದಾಳೆ. ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ ಕು. ಹೊನಲು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


