ಮಂಗಳೂರು: "ಇಂದು ಎಷ್ಟೋ ಕಲಾವಿದರು ಅಸಾಮಾನ್ಯ ಪ್ರತಿಭೆಯಿದ್ದರೂ ಮಾಸಿ ಹೋಗುತ್ತಿದ್ದಾರೆ. ಅವರ ಸಾಧನೆ, ವಿಭಿನ್ನ ದೃಷ್ಟಿಯ ವೇಷಗಾರಿಕೆ, ಕಲಾ ವಲಯಕ್ಕೆ ಅವರದ್ದೇ ಆದ ಕೊಡುಗೆಗಳು ಗುರುತಿಸಲ್ಪಡಬೇಕು. ಆಧುನಿಕ ತಂತ್ರಜ್ಞಾನದಲ್ಲಿ ಅದಕ್ಕೆ ಅನೇಕ ಆಯಾಮಗಳಿವೆ. ರವಿಯವರು ಅಳಿದ ಶ್ರೇಷ್ಠ ಕಲಾವಿದ ಸವ್ಯಸಾಚಿ ಪಿ.ವಿ. ಪರಮೇಶರ ಜೀವನಗಾಥೆಯನ್ನು ಪುಸ್ತಕದ ದಾಖಲೆಯಲ್ಲಿ ಮೂಡಿಸಿದ್ದಾರೆ. ವಾಸುದೇವ ಐತಾಳರ ಆರ್ಥಿಕ ಬೆಂಬಲದಿಂದ ಪ್ರಕಟಗೊಂಡ ಈ ಪುಸ್ತಕದಂತೆಯೇ ಎಲೆಮರೆಯ ಕಲಾವಿದರ ಕೃತಿಗಳೂ ಬರಲಿ" ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಪುನರೂರು ಹೇಳಿದರು.
ಅವರು ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ "ಯಕ್ಷ ಪರಮೇಶ" ಎಂಬ ಪುಸ್ತಕ ಬಿಡುಗಡೆಗೊಳಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಡಾ.ಎಂ.ಪ್ರಭಾಕರ ಜೋಷಿಯವರು" ಕಲಾ ವಲಯದಲ್ಲಿ ಪರಮೇಶರಿಗಿದ್ದ ಕೌಶಲತೆಯು ಅದ್ಭುತವಾದುದು. ಯಕ್ಷ ರಂಗದ ಪರಿಪೂರ್ಣ ಪರಿಚಯ, ಪ್ರಸಾದನಾ ವೇಗ, ಪೇಟಗಳ ರಚನೆ, ಬೇರೆ ಬೇರೆ ರಂಗಗಳ ದುಡಿಮೆ- ಎಲ್ಲವೂ ಮಿಳಿತವಾಗಿದ್ದ ಸರ್ವಾಂಗ ಸುಂದರ ಕಲಾವಿದ. ಪುಸ್ತಕದಿಂದಾಗಿ ದಾಖಲೆ ಆಯಿತು" ಎಂದು ಹೇಳಿದರು.
ಶ್ರೀಮತಿ ಶೈಲಶ್ರೀ ನಂದಗೋಪಾಲ್ ಪ್ರಾರ್ಥಿಸಿದರು. ಶಶಿಧರ ಐತಾಳರು ಸ್ವಾಗತ- ಪರಿಚಯ ಮಾಡಿದರು. ಕಲಾ ಪೋಷಕ ಪಣಂಬೂರು ವಾಸುದೇವ ಐತಾಳರು ಪ್ರಸ್ತಾಪಿಸುತ್ತಾ, ಯಕ್ಷ ಪರಮೇಶ ಕೃತಿಯ ಅಗತ್ಯದ ಬಗ್ಗೆ ಹೇಳಿದರು. ಹಿರಿಯ ಯಕ್ಷಗಾನ ಕಲಾವಿದ ಸೇರಾಜೆ ಜಿ.ಕೆ. ಭಟ್ ರವರು ಪಿವಿ ಪರಮೇಶರ ಸಂಸ್ಮರಣೆ ಮಾಡಿದರು. ರವಿಯವರು ಕೃತಿಪರಿಚಯ ಮಾಡಿದರು.
ನಂದನೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಧರ ಪಿ.ಎಸ್, ನಿಕಟಪೂರ್ವ ಅಧ್ಯಕ್ಷ ಪಿ. ಅನಂತ ಐತಾಳ್, ಶ್ರೀಮತಿ ರಾಜಶ್ರೀ ಪರಮೇಶ್, ಎಚ್.ವಿ.ವೆಂಕಟ್ರಾವ್, ರಮಾ ವೆಂಕಟ್ರಾವ್ ಉಪಸ್ಥಿತರಿದ್ದರು. ಕೃತಿಕಾರ ವರ್ಕಾಡಿ ರವಿ ಅಲೆವೂರಾಯರನ್ನು ಗೌರವಿಸಲಾಯಿತು. ಕಲಾವಿದ, ಸಂಘಟಕ ಮಧುಕರ ಭಾಗವತರು ನಿರ್ವಹಿಸಿದರೆ, ಹರೀಶ್ ಹೆಬ್ಬಾರರು ಧನ್ಯವಾದವಿತ್ತರು. ಬಳಿಕ ಶ್ರೀ ನಂದನೇಶ್ವರ ಮಿತ್ರ ಮಂಡಳಿಯವರಿಂದ ಬಯಲಾಟ ಜರಗಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

