ರಂಗೋಲಿ ಹೆಸರೇ ಎಷ್ಟೊಂದು ಆಪ್ತ. ರಂಗೋಲಿ ಮನಸ್ಸಿನ ರಂಗು ರಂಗಿನ ಭಾವನೆಗಳಿಗೆ ಅಭಿವ್ಯಕ್ತಿಸಲು ಒಂದು ಒಳ್ಳೆಯ ಆಯಾಮ. ಅದೊಂದು ಸಂಸ್ಕೃತಿ, ಅದೊಂದು ಮೊದಲಿನಿಂದಲೂ ಸಾಗಿ ಬಂದ ಸುಂದರ ಸಂಪ್ರದಾಯ. ಯಾರದೇ ಮನೆಗೆ ಹೋಗಲಿ ಮೊದಲು ಕಣ್ಣಿಗೆ ಬೀಳುವದು ಮನೆಯ ರಂಗೋಲಿ. ಮೊದಲ ಗ್ರಹಿಕೆಯೂ ಮನೆಯಂಗಳದ ಮನೆ ಬಾಗಿಲಿನ ರಂಗೋಲಿಯೇ ಆಗಿರುತ್ತದೆ. ಹಾಗೇ ದೇವರ ಮುಂದಿನ ರಂಗೋಲಿಯತ್ತ ದೃಷ್ಟಿ ಹಾಯಿಸುತ್ತೇವೆ. ಈಗಂತೂ ಸಾಮಾಜಿಕ ಜಾಲತಾಣಗಳ ಮೂಲಕ ವಿಧ ವಿಧದ, ವ್ಯೆವಿಧ್ಯಮಯವಾದ ರಂಗೋಲಿ ಕ್ಷೇತ್ರದ ಚಿತ್ರ ಚಿತ್ತಾರಗಳನ್ನು ತಿಳಿಯಬಹುದಾಗಿದೆ, ನೋಡಬಹುದಾಗಿದೆ.
ಬದುಕಿಗೊಂದು ಭರವಸೆಯ ಶಿರಸಿಯ "ಸಂಚಲನ" ಬಳಗ ಶಿರಸಿಯ ವಿದ್ಯಾಗಿರಿಯ "ತುಷಾರ" ನಿಲಯದಲ್ಲಿ ರಂಗೋಲಿ ಹಾಗೂ ಕಲಾ ಪ್ರದರ್ಶನ ಆಯೋಜಿಸಿತ್ತು. ಬಹು ಸಂಖ್ಯೆಯಲ್ಲಿ ಕಲಾವಿದೆಯರು, ಕಲಾಸಕ್ತ ಮಹಿಳೆಯರು ಬಂದು ಸಂಭ್ರಮಿಸಿದರು. ಕಾರ್ಯಕ್ರಮ ಮೂಡಿದ್ದು ಒಂದು ಬಹುದಿನದ ಕನಸು ಮತ್ತು ಬಹುದಿನಗಳ ಕುತೂಹಲದಿಂದ. ರಂಗೋಲಿ ಜಯಕ್ಕ ಎಂದೇ ಪರಿಚಿತರಾದ ಜಯಾ ಭಟ್ಟ ಅವರಿಗೆ ತಮ್ಮ ಮನೆಯಲ್ಲೊಂದು ರಂಗೋಲಿ ಪ್ರದರ್ಶನ ನಡೆಯ ಬೇಕೆಂಬ ಕನಸು, ಸಂಚಲನ ಬಳಗದವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಖ್ಯಾತರಾದ ರಂಗೋಲಿ ಕಲಾವಿದೆ ಕುಮಟಾದ ಶ್ರೀಮತಿ ಭಾಗ್ಯಲಕ್ಷ್ಮಿ ಭಟ್ ಅವರನ್ನು ಆಮಂತ್ರಿಸಬೇಕು, ಅವರ ಪ್ರತಿಭೆಯನ್ನು ಗೌರವಿಸಿಬೇಕು, ಜೊತೆಗೆ ಮುಖತಃ ಅವರ ಕೈ ಚಳಕವನ್ನು ನೋಡಬೇಕು ಎನ್ನುವ ಆಶಯವೇ ಈ ಕಾರ್ಯಕ್ರಮಕ್ಕೆ ನಾಂದಿಯಾಯಿತು.
ಸೃಜನಶೀಲ ಕಲಾವಿದೆ ಶ್ರೀಮತಿ ಭಾಗ್ಯಲಕ್ಷ್ಮಿಯವರಿಗೆ ರಂಗೋಲಿ ಕಲೆ ರಕ್ತಗತವಾಗಿಯೇ ಬಂದಿದ್ದು. ಕರೋನಾ ಸಮಯದಲ್ಲಿ ರೂಢಿಸಿಕೊಂಡ ಆಸಕ್ತಿ ಈಗ ಎತ್ತರೆತ್ತರಕ್ಕೆ ಬೆಳೆದು ಕ್ರಿಯಾಶೀಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಬಹುಮುಖ ಆಸಕ್ತಿ, ಯಾವುದನ್ನು ನೋಡಿದರೂ ರಂಗೋಲಿಯಲ್ಲಿ ಚಿತ್ರಿಸುವ ಹುಚ್ಚು. ಈ ಪ್ರದರ್ಶನದಲ್ಲಿ ಅವರು ಬಿಡಿಸಿರುವ ಹಸಿರು ಸಿರಿಯ ಮನೆ ಹಾಗೂ ಕುಡಿ ಬಾಳೆಯಲ್ಲಿ ಬಡಿಸಿದ ವಿಶೇಷದ ಊಟ ಮನ ಸೆಳೆಯುವಂತಿತ್ತು. ಊಟದ ಬಾಳೆ ಯ ಚಿತ್ರ ಇನ್ನೇನು ಸವಿಯಲು ಕುಳಿತೇ ಬಿಡುವಾ ಎನ್ನುವ ಬೆರಗು ಮೂಡಿಸಿತು.
ಹಾಗೇ ಶಿರಸಿಯ ಹಾಗೂ ಸ್ಥಳೀಯ ಕಲಾವಿದೆಯರು ತಾವು ಏನೂ ಕಮ್ಮಿಯಿಲ್ಲ ಎಂಬ ರೀತಿಯಲ್ಲಿ ಚಿತ್ತಾರಗೈದರು. ಹೊಸಗದ್ದೆಯ ಅನುಪಮಾ, ಸುಗಾವಿಯ ಸುನಂದಾ, ಅಂಬಿಕಾ, ಉಳ್ಳಾಲದ ತ್ರಿವೇಣಿ, ಬೆಂಗಳೆಯ ಚಿನ್ಮಯಿ, ನಿವೇದಿತಾ ಬೆಂಗಳೂರ ಇವರುಗಳ ಕೈಯಲ್ಲರಳಿದ ಚುಕ್ಕಿ ರಂಗೋಲಿಗಳು, ಅಂದಳ್ಳಿಯ ಸುವರ್ಣ, ಗಡಿಕೈ ರಶ್ಮಿ, ಬನವಾಸಿಯ ಪೂರ್ಣಿಮಾ, ಗಡಿಹಳ್ಳಿಯ ಅನುಪಮಾ, ಶಿರಸಿಯ ಶೋಭಾ, ಅಜ್ಜೀಬಳ್ಳದ ನೀತಾ, ಯಶಸ್ವಿನಿಮೂರ್ತಿ, ಹೆಗಡೆಕಟ್ಟಾದ ಅನ್ನಪೂರ್ಣ, ಅನಿತಾ ಅವರುಗಳ ವರ್ಣಮಯ ಚಿತ್ತಾರಗಳು ಕಣ್ಮನ ಸೆಳೆದವು. ಜಯಾ ತುಂಬೆಮನೆ, ರೂಪ ಹರ್ಷ, ಶಿಲ್ಪಾ ಹೀಪನಳ್ಳಿ ಇವರುಗಳ ಸ್ತ್ರೀ ಸಂವೇದನೆಯ ಕಲ್ಪನೆಯಲ್ಲಿ ಮೂಡಿ ಬಂದ ರಂಗೋಲಿಯ ಚಿತ್ರಗಳು ಪ್ರದರ್ಶನಕ್ಕೆ ಮತ್ತಷ್ಟು ಮೆರಗು ತಂದವು. ವಸುಂದರಾ ಹಾಗೂ ಸುವರ್ಣ ಅವರ ಸಾಂಪ್ರದಾಯಕ ಕಲೆಯ ಸ್ಟಾಲ್ ತುಂಬಾ ಆಕರ್ಷಕವಾಗಿತ್ತು.
ಕಾರ್ಯಕ್ರಮ ಸ್ಪರ್ಧೆಯಾಗಿರಲಿಲ್ಲ, ಯಾವುದೇ ಚೌಕಟ್ಟಿರಲಿಲ್ಲ. ಖುಷಿ ಖುಷಿಯಾಗಿ ಕಲಾವಿದೆಯರು ಭಾಗವಹಿಸಿ ಹೊಸತನದ ಅನುಭವ ಕಂಡರು. ಒಬ್ಬರಿಗೊಬ್ಬರು ಗೆಳತಿಯರಾದರು. ವಿಚಾರ ವಿನಿಮಯ ಮಾಡಿಕೊಂಡರು.ಎರಡು ದಿನದ ಪ್ರದರ್ಶನದ ಅವಧಿ ಜನಾಭಿಪ್ರಾಯದ ಮೇರೆಗೆ ಐದು ದಿನಕ್ಕೆ ವಿಸ್ತರಿಸಿತು. ಶಿರಸಿಯ ಕಿವುಡ ಮೂಕರ ಶಾಲೆಯ ಮಕ್ಕಳು ಕೂಡ ನೋಡಿ ಸಂಭ್ರಮಿಸಿದರು. ಸಂಚಲನ ಬಳಗ ಅವರಿಗೆ ಅವಲಕ್ಕಿ ಚಹಾ ನೀಡಿ ಔದಾರ್ಯ ಮೆರೆದರು. ಮಾವಿನ ತೋರಣ, ಮೆಟ್ಟಿಲಿನಿಂದಲೇ ಶುರುವಾದ ರಂಗೋಲಿ, ಪ್ರದರ್ಶನದ ಎರಡು ದಿನದ ಮುಂಚೆನೇ ಮಹಿಳೆಯರ ಗೌಜಿನ ಸಡಗರದಿಂದ ತುಷಾರ ನಿಲಯ ಮದುವೆಯ ಮನೆಯಂತೆ ಶೋಭಿಸಿತು. ಜಿ. ಕೆ ಭಟ್ಟ ಜಯಾ ದಂಪತಿಗಳು ಕಲಾರಾಧನೆಯ ಧನ್ಯತೆಯನ್ನು ಅನುಭವಿಸಿದರು. ಸಂಚಲನದ ಸುಧಾ ಭಟ್ ತಮ್ಮ ಬಳಗದ ಸಹಕಾರದೊಂದಿಗೆ ಪ್ರತಿಭಾವಂತ ಕಲಾವಿದೆ ಶ್ರೀಮತಿ ಭಾಗ್ಯಲಕ್ಷ್ಮಿ ಭಟ್ ಅವರನ್ನು ಗೌರವಿಸಿ ಕೃತಾರ್ಥ ಭಾವ ಹೊಂದಿದರು. ಹೀಗೇ ಇವರಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಹಾರೈಸುವೆ.
- ತಾರಾ ಹೆಗಡೆ ಸಿರಸಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


