ದೂರಗಾಮಿ ಚಿಂತನೆಯ ಅಭಿವೃದ್ಧಿ ಪರ ಬಜೆಟ್

Upayuktha
0


ಎಲ್ಲ ಆರ್ಥಿಕ ವರ್ಷವೂ ಒಂದೇ ತೆರನಾಗಿರುವುದಿಲ್ಲ. ಹಿಂದಿನ ವರ್ಷದ ಬಜೆಟ್ ರೀತಿಯಲ್ಲೇ ಈ ವರ್ಷದ ಬಜೆಟ್ ಇರಬೇಕು ಅಂತ ನಿರೀಕ್ಷಿಸುವುದು ಸರಿಯಲ್ಲ. ಇಲ್ಲ ಆರೋಪಿಸುವುದು ಕೂಡ ಸಮರ್ಥನೀಯವಲ್ಲ. ಈ ಆರ್ಥಿಕ ವರ್ಷದ ಬಜೆಟ್ ಅತ್ಯಂತ ಸ್ಪಷ್ಟವಾಗಿ ಅಭಿವೃದ್ಧಿ ಪರ ಎಂಬುದಂತೂ ಸತ್ಯ. ದೂರಗಾಮಿ ಚಿಂತನೆಯಿಂದ ದೇಶದ ಅಭಿವೃದ್ಧಿಯನ್ನು ಗುರಿಯಾಗಿಸಿ ಮಾಡಿದ ಬಜೆಟ್ ಇದಾಗಿದೆ ಎಂಬುದೂ ಸುಸ್ಪಷ್ಟವಾಗಿದೆ. ತಮಗೇನು ಲಾಭ ಎಂದು ಪ್ರತಿ ಬಜೆಟ್ಟಲ್ಲೂ ಪ್ರತಿ ರಾಜ್ಯವೂ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಫೆಡರಲ್ ವ್ಯವಸ್ಥೆಯಲ್ಲಿ ಸಹಜವೇ ಆಗಿದೆ.


ಆಡಳಿತ ಪಕ್ಷದ ಪರವಾಗಿಯೂ, ವಿಪಕ್ಷಗಳು ವಿರೋಧವಾಗಿಯೂ ಬಜೆಟ್ಟನ್ನು ವಿಮರ್ಶೆ ಮಾಡುವುದು, ಆರೋಪಿಸುವುದು, ಟೀಕಿಸುವುದು ದೂಷಿಸುವುದು ಕೂಡ ಸಹಜವೇ ಆಗಿದೆ. ಹಾಗಂತ, ಎಲ್ಲ ರಾಜ್ಯಗಳಿಗೂ ಎಲ್ಲ ಕ್ಷೇತ್ರಗಳಿಗೂ ಆದ್ಯತೆಯನ್ನು ನೀಡುವಂಥ ಬಜೆಟ್ಟನ್ನು ನೀಡುವುದಕ್ಕೆ  ಸಾಧ್ಯವೇ ಇಲ್ಲ. ಆರೋಪ, ದೂಷಣೆ, ಟೀಕೆಗಳನ್ನು ಹೊರತುಪಡಿಸಿ ದೇಶಾಭಿವೃದ್ಧಿಗೆ ಬಜೆಟ್ ಸ್ಪಂದಿಸಿದೆಯೇ ಎಂಬುದು ಬಹುಮುಖ್ಯವಾದುದು. ದೇಶದ ಅಭಿವೃದ್ಧಿಯಲ್ಲಿ ಎಲ್ಲರ ಅಭಿವೃದ್ಧಿಯಿದೆ. ಜಾಗತಿಕ ವಿದ್ಯಮಾನಗಳು, ಬೆಳವಣಿಗೆಗಳು, ವ್ಯವಹಾರಗಳು, ಸಂಬಂಧಗಳು ದೇಶದ ಬಜೆಟ್ ಮೇಲೆ ಪ್ರಭಾವವನ್ನು ಬೀರುತ್ತದೆ ಎಂಬುದು ಗಮನೀಯ ಅಂಶವಾಗಿದೆ. ಉತ್ಪಾದನಾ ವಲಯವನ್ನು ಅಭಿವೃದ್ಧಿ ಪಡಿಸಿದರೆ ದೇಶದ ರೆವಿನ್ಯೂ ಹೆಚ್ಚುತ್ತದೆ. ರೆವಿನ್ಯೂ ಹೆಚ್ಚಿದಾಗ ಎಲ್ಲ ಕ್ಷೇತ್ರಗಳಿಗೂ ಆದ್ಯತೆಯನ್ನು ಬಟೆಟ್ಟಲ್ಲಿ ನೀಡುವುದು ಸಾಧ್ಯ.


ಭಾರತದಂಥ ದೇಶದಲ್ಲಿ ಮಿತಿಮೀರಿದ ಜನಸಂಖ್ಯೆಯ ಒತ್ತಡದಲ್ಲಿ ಸರ್ಕಾರವನ್ನು ನಡೆಸುವುದು, ತನ್ಮೂಲಕ ದೇಶವನ್ನು ಸುಸ್ಥಿರವಾದ ಸ್ಥಿತಿಗೆ ತಂದು ನಿಲ್ಲಿಸುವುದು ತೀರಾ ಸುಲಭದ ಮಾತಲ್ಲ. ೨೮ ರಾಜ್ಯಗಳು, ೮ ಕೇಂದ್ರಾಡಳಿತ ಪ್ರದೇಶಗಳಿರುವ ಭಾರತದಲ್ಲಿ ವೈವಿಧ್ಯತೆ ಎನ್ನುವುದು ಇದ್ದೇ ಇದೆ. ರಾಷ್ಟೀಯತೆಯ ಚಿಂತನೆಯಲ್ಲೂ ವೈರುದ್ಧ್ಯಗಳಿವೆ. ಭಾರತ ಸರ್ಕಾರವನ್ನು ಅತ್ಯಂತ ಹೀನವಾಗಿ ಧಿಕ್ಕರಿಸುವ ಮನಃಸ್ಥಿತಿಯೂ ಇದೆ. ಅರಾಷ್ಟ್ರೀಯ ಮನಸ್ಸುಗಳಿವೆ. ಕಮ್ಯುನಿಸ್ಟ್, ಮಾವೋ, ಸರ್ವಾಧಿಕಾರಿ ಧೋರಣೆಗಳಿವೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಈ ದೇಶ ಅಳವಡಿಸಿಕೊಂಡಿದೆ. ತಾನು ನಂಬಿದ ಸಿದ್ಧಾಂತದಿಂದ ರಾಷ್ಟ್ರೀಯ ಐಕ್ಯತೆಗೆ ಭಂಗವಾಗುತ್ತದೆ ಅಥವಾ ಧಕ್ಕೆಯಾಗುತ್ತದೆ ಅಥವಾ ಅಡ್ಡಿಯಾಗುತ್ತದೆ ಅಥವಾ ಆತಂಕವನ್ನು ಹುಟ್ಟಿಸುತ್ತದೆ ಎಂಬ ಸಾಮಾನ್ಯ ಅರಿವು ಇಲ್ಲದ ರಾಜಕೀಯ ಮುಖಂಡರಿದ್ದಾರೆ. ಅರಾಷ್ಟ್ರೀಯವಾದಿಗಳಿದ್ದಾರೆ. 


ಇಂಥವೆಲ್ಲ ಬಜೆಟ್‌ ಮೇಲೆ ಪ್ರತಿಕೂಲ ಪರಿಣಾಮವನ್ನು ನೀಡುವುದಿಲ್ಲ ಎಂದು ಅಂದಾಜಿಸುವುದು ಸಾಧ್ಯವಿಲ್ಲ. ಒಂದು ದೇಶದ ಸಾಧನೆಯ ಅಥವಾ ಅಭಿವೃದ್ಧಿಯ ಸಾಫಲ್ಯ ಅಥವಾ ವೈಫಲ್ಯವು ಆರ್ಥಿಕತೆಯ ಆಧಾರದ ಮೇಲೆ ನಿರ್ಧರಿತವಾಗುತ್ತದೆ. Politics ಅಂದರೆ political economy. Politics ಇಲ್ಲದೆಯೂ economy ಇದ್ದೇ ಇರುತ್ತದೆ. ಆದರೆ, economy ಇಲ್ಲದೆ politics ಇರಲಾರದು. ಯಾವಾಗ politics ಎಂಬುದು economy ಯನ್ನು ಬಿಟ್ಟು ಬೇರೆ ವಿಷಯಗಳನ್ನು ಹೈಲೈಟ್ ಮಾಡುತ್ತದೋ ಅಲ್ಲಿ economy ಬೀಳುತ್ತದೆ. ವಿದೇಶಿ ಬಂಡವಾಳದ ಕೊರತೆಯೂ ಇದಕ್ಕೆ ಕಾರಣ. ಬಿದ್ದ ಆರ್ಥಿಕತೆಯನ್ನು ಮೇಲೆತ್ತುವುದು ಸರ್ಕಾರದ ಹೊಣೆ.


ನೋಟು ಅಮಾನ್ಯೀಕರಣವೂ ಇಂಥ ಉಪಕ್ರಮಗಳಲ್ಲಿ ಒಂದಾಗಿತ್ತು. ಇದರಿಂದ ಹಣ ಬದಲಾಗುವುದೇ ಹೊರತು ಸರ್ಕಾರವಾಗಲೀ ಜನರಾಗಲೀ ಕಳೆದುಕೊಳ್ಳುವುದೇನಿಲ್ಲ. ಅಷ್ಟಕ್ಕೂ, ಸಾರ್ವಜನಿಕ ಜೀವನ‌ ಪಾರದರ್ಶಕವಾಗಿ ನಡೆಯಬೇಕು ಎಂಬುದೇ ಸರ್ಕಾರದ ಮುಖ್ಯ ಗುರಿ. ಈ ಹಿನ್ನೆಲೆಯಲ್ಲಿ ನೋಡಿದರೆ ಈ ಬಜೆಟ್ ತುಷ್ಟೀಕರಣದ ಯಾವ ಉಪಕ್ರಮಗಳನ್ನು ಹೊಂದಿಲ್ಲ. ಯಾರನ್ನು ಓಲೈಸಲೂ ಇಲ್ಲ. ಇದು‌ ಆಡಳಿತ ಪಕ್ಷದ ಬಜೆಟ್ ಆದರೂ ದೇಶದ ಬಜೆಟ್. ಸಮಸ್ತ ಭಾರತೀಯರ ಹಿತವೂ ಇದರಲ್ಲಿದೆ. ಸಮಗ್ರತೆಯ ಚಿಂತನೆಯೂ ಇದೆ.


- ಟಿ. ದೇವಿದಾಸ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top