ಅಂಬಿಕಾ ವಿದ್ಯಾಲಯದಲ್ಲಿ ಮಿಲಿಟರಿ ಪದಕ ಪ್ರದರ್ಶನ ಉದ್ಘಾಟನೆ

Upayuktha
0

 



ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಜನವರಿ ೨೬ರ ಗಣರಾಜ್ಯೋತ್ಸವದಂದು ಭಾರತೀಯ ಸೇನೆಗೆ ಸಂಬಂಧಿಸಿದ ವಿವಿಧ ಪದಕಗಳ ಪ್ರದರ್ಶನವನ್ನು ಬೆಳಿಗ್ಗೆ ೯ ಗಂಟೆಗೆ ಉದ್ಘಾಟಿಸಲಾಗುವುದು. ಭಾರತೀಯ ಸೇನೆಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಕೆ.ಜಿ. ಶೆಣೈ ಅವರು ಸಂಗ್ರಹಿಸಿರುವ ನೂರಕ್ಕೂ ಅಧಿಕ ಪದಕಗಳು ಈ ಪ್ರದರ್ಶನದಲ್ಲಿ ಇರಲಿವೆ.


ಭಾರತೀಯ ಸೇನೆಯಲ್ಲಿ ವಿವಿಧ ಸಂದರ್ಭಗಳಲ್ಲಿ ನೀಡಲಾಗುವ ಪದಕಗಳು ಪ್ರದರ್ಶನದ ಭಾಗವಾಗಿದ್ದು, ಪರಮವೀರ ಚಕ್ರ ಸೇರಿದಂತೆ ವಿವಿಧ ಶೌರ್ಯ ಪ್ರಶಸ್ತಿಗಳ ಪದಕಗಳು, ನಿರ್ದಿಷ್ಟ ಅವಧಿಯ ಸೇವೆಗೆ ನೀಡುವ ಪದಕಗಳು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಲ್ಲಿ ಭಾಗವಹಿಸಿದವರಿಗೆ ನೀಡುವ ಪದಕಗಳು ಹಾಗೂ ಭಾರತದ ಆಯ್ದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದವರಿಗೆ ನೀಡುವ ಪದಕಗಳನ್ನು ಇಲ್ಲಿ ವೀಕ್ಷಿಸಬಹುದು. ಶೌರ್ಯ ಪ್ರಶಸ್ತಿಗಳ ಪದಕಗಳು ಮೂಲದ ಪ್ರತಿಕೃತಿಗಳಾಗಿದ್ದು, ಉಳಿದ ಬಹುತೇಕ ಪದಕಗಳು ಮೂಲ ಪದಕಗಳಾಗಿವೆ ಎಂಬುದು ವಿಶೇಷ.


ಪ್ರದರ್ಶನದಲ್ಲಿ ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್ ಸೇನೆಯ ಭಾರತೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಿದ ಪದಕಗಳು, ಮೊದಲ ಹಾಗೂ ಎರಡನೇ ವಿಶ್ವಯುದ್ಧಗಳಲ್ಲಿ ಭಾಗವಹಿಸಿದ ಭಾರತೀಯ ಸೈನಿಕರಿಗೆ ದೊರೆತ ಪದಕಗಳು, ಬ್ರಿಟಿಷರ ವಿವಿಧ ಯುದ್ಧ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡವರಿಗೆ ನೀಡಲಾದ ಪದಕಗಳು, ಮಿನಿಯೇಚರ್ ಪದಕಗಳು ಹಾಗೂ ಕಾರ್ಗಿಲ್ ಯುದ್ಧದ ಪದಕಗಳೂ ಸೇರಿವೆ. ಪ್ರತಿಯೊಂದು ಪದಕದ ಬಳಿಯೂ ಅದರ ವಿವರಗಳನ್ನು ಒಳಗೊಂಡ ಮಾಹಿತಿ ಲಭ್ಯವಿರಲಿದೆ.


ಈ ಪದಕ ಪ್ರದರ್ಶನವು ಜನವರಿ ೨೬ರಿಂದ ಐದು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಹಾಗೂ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಬೆಳಿಗ್ಗೆ ೯ರಿಂದ ಸಂಜೆ ೪ರವರೆಗೆ ನಡೆಯುವ ಈ ಪ್ರದರ್ಶನವನ್ನು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹೆತ್ತವರು ವೀಕ್ಷಿಸಬಹುದಾಗಿದೆ.


ಡಾ. ಕೆ.ಜಿ. ಶೆಣೈ ಅವರು ಎಂ.ಬಿ.ಬಿ.ಎಸ್. ಅಧ್ಯಯನದ ನಂತರ ಭಾರತೀಯ ಸೇನೆಯ ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ೧೯೮೭ರಿಂದ ೧೯೯೨ರವರೆಗೆ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸೇನೆಯ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಯುವಕರನ್ನು ಸೇನಾ ಸೇವೆಗೆ ಪ್ರೇರೇಪಿಸುವ ಉದ್ದೇಶದಿಂದ ಇಂತಹ ಪ್ರದರ್ಶನಗಳನ್ನು ಆಯೋಜಿಸುತ್ತಿದ್ದಾರೆ. ಪ್ರಸ್ತುತ ಅವರು ಬಿ.ಸಿ. ರೋಡ್‌ನಲ್ಲಿ ವಾಸವಿದ್ದು, ೧೯೯೩ರಿಂದ ಪ್ರಥ್ವಿ ನರ್ಸಿಂಗ್ ಹೋಮ್ ಅನ್ನು ನಡೆಸುತ್ತಿರುವ ಖ್ಯಾತ ವೈದ್ಯರಾಗಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top