ಅನೇಕರಲ್ಲಿ ಹೀಗೊಂದು ಜಿಜ್ಞಾಸೆ ಇದ್ದರೆ ಅದು ತಪ್ಪೂ ಅಲ್ಲ. ಯಾಕಂದರೆ ಮಠ ಮಂದಿರ ಸಂಪ್ರದಾಯಗಳಲ್ಲಿ ಪ್ರತಿಯೊಂದನ್ನೂ ಹಿಂದೂ ಪಂಚಾಂಗ ಪದ್ಧತಿಗನುಸಾರವೇ ನಡೆಸುವಾಗ ಉಡುಪಿ ಪರ್ಯಾಯೋತ್ಸವ ಮಾತ್ರ ಯಾಕೆ ಕ್ರೈಸ್ತ ಕ್ಯಾಲೆಂಡರ್ ಗೆ ಅನುಸಾರವಾಗಿ ನಡೆಯುತ್ತದೆ ಅನ್ನುವ ಪ್ರಶ್ನೆ ಸಹಜವೇ.
ಆದರ ಹಿನ್ನೆಲೆ ಹೀಗಿದೆ. ಮಕರ ಸಂಕ್ರಾಂತಿಯಿಂದ ನಾಲ್ಕನೇ ದಿನ ಉಡುಪಿ ಕೃಷ್ಣಮಠದ ಪೂಜಾ ಅಧಿಕಾರ ಹಸ್ತಾಂತರ ಆಗಬೇಕು. ಅರ್ಥಾತ್ ಪರ್ಯಾಯೋತ್ಸವ ನಡೆಯಬೇಕು. ಪರ್ಯಾಯೋತ್ಸವಕ್ಕೆ ಈಗಿರುವ ವೈಭವದ ಸ್ಪರ್ಶ ಸಿಕ್ಕಿದ್ದು ಶ್ರೀ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯೋತ್ಸವದಿಂದ! ಅರ್ಥಾತ್ 1962 ರಲ್ಲಿ. ಉಡುಪಿಯ ಧೀಮಂತ ಸಾಂಸ್ಕೃತಿಕ ಅಧ್ವರ್ಯು ಕೀರ್ತಿಶೇಷ ಶ್ರೀ ವಿಜಯನಾಥ ಶೆಣೈಯವರ ದೂರದೃಷ್ಟಿಯ ಕಲ್ಪನೆಯಿಂದ ಇದು ನಡೆಯಿತು ಅನ್ನುವುದು ಇತಿಹಾಸ.
ಆಸರೆ ಅದಕ್ಕಿಂತ ಮೊದಲು ಶತಮಾನಗಳಿಂದಲೂ ಭಾವೀಸಮೀರ ಶ್ರೀ ವಾದಿರಾಜ ಗುಸಾರ್ವಭೌಮರು ಹಾಕಿಕೊಟ್ಟ ದ್ವೈವಾರ್ಷಿಕ ಪೂಜಾ ಪದ್ಧತಿಯ ಅನುಷ್ಠಾನದ ಅವಧಿಯಿಂದಲೂ ಇದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿರುವುದು ಉಲ್ಲೇಖನೀಯ. ಮಕರ ಸಂಕ್ರಾಂತಿ ಜಗದ್ಗುರು ಶ್ರೀ ಮಧ್ವಾಚಾರ್ಯರು ಉಡುಪಿ ಶ್ರೀ ಕೃಷ್ಣನನ್ನು ಪ್ರತಿಷ್ಠಾಪಿಸಿದ ಪರ್ವ ದಿನ. ಆದ್ದರಿಂದ ಉಡುಪಿಯ ಶ್ರೀ ಕೃಷ್ಣನ ವರ್ಷಾವಧಿ ರಥೋತ್ಸವ. ಆಡುಭಾಷೆಯಲ್ಲಿ ಮೂರು ತೇರಿನ ದಿನ. ಮರುದಿನ ಹಗಲು ತೇರು ಬಳಿಕ ಅವಭೃತೋತ್ಸವ. ಅದರ ಮರುದಿನ ಅಂದರೆ ಸಂಕ್ರಾಂತಿಯ ಎರಡನೇ ದಿನ ಈಗ ಪರ್ಯಾಯ ನಡೆಸುತ್ತಿರುವವರು ಎರಡು ವರ್ಷಗಳ ತಮ್ಮ ಪರ್ಯಾಯಕ್ಕೆ ತಮ್ಮ ಮಠದಿಂದ ತಂದ ಕೆಲವು ಸಾಮಾನು ಸರಂಜಾಮುಗಳನ್ನು ಮರಳಿ ತೆಗೆದುಕೊಂಡು ಹೋಗುವ ದಿನ. ಮತ್ತು ಮುಂದಿನ ಪರ್ಯಾಯದವರು ತಮ್ಮ ಮಠದಿಂದ ಕೆಲವು ಅಗತ್ಯ ಪರಿಕರಗಳನ್ನು ಕೃಷ್ಣಮಠಕ್ಕೆ ತಂದು ವ್ಯವಸ್ಥೆಗೊಳಿಸಲು ಮೀಸಲು. ನಂತರದ ದಿನ ಸಂಕ್ರಾಂತಿಯಿಂದ ಮೂರನೇ ದಿನ ಈಗ ನಡೆಯುತ್ತಿರುವ ಪರ್ಯಾಯದ ಮಂಗಲೋತ್ಸವ. ಅದರ ಮರುದಿನ (ಸಂಕ್ರಾಂತಿಯಿಂದ ನಾಲ್ಕನೇ ದಿನ) ಪೂಜಾಧಿಕಾರ ಹಸ್ತಾಂತರದ ದಿನ ಅರ್ಥಾತ್ ಪರ್ಯಾಯೋತ್ಸವ.
ಸಂಕ್ರಾಂತಿ ಬಹುತೇಕ ಜನವರಿ 14 ರಂದೇ ಆಗಿರುತ್ತದೆ. ಆದ್ದರಿಂದ ಪರ್ಯಾಯೋತ್ಸವವೂ ಜನವರಿ 18 ಆಗಿರ್ತದೆ. ಆ ದಿನ ಏಕಾದಶಿ, ಅಮಾವಾಸ್ಯೆ, ಭರಣಿ ಕೃತ್ತಿಕೆ ಮೊದಲಾದ ಶುಭಕಾರ್ಯಕ್ಕೆ ಸೂಕ್ತವಲ್ಲದ ದಿನವೇ ಆಗಿರಲಿ; ಅಥವಾ ಪರ್ಯಾಯ ಪೀಠವೇರಲಿರುವವರಿಗೆ ತಾರಾನುಕೂಲ ಇಲ್ಲದಿದ್ದರೂ ಪೂಜಾಧಿಕಾರ ಹಸ್ತಾಂತರ ನಡೆಯಲೇಬೇಕು. ತಿಥಿ ನಕ್ಷತ್ರಾದಿ ಮುಹೂರ್ತ ದೋಷ ನಿವಾರಣೆಗೆ ಸಣ್ಣ ಶಾಸ್ತ್ರೀಯ ಪರಿಹಾರವಾಗಿ ನವಗ್ರಹದಾನ (ನವಧಾನ್ಯ) ಇತ್ಯಾದಿಗಳು ಆ ಸಂದರ್ಭದಲ್ಲಿ ನಡೆಯುತ್ತವೆ. ಇದು ಶ್ರೀ ವಾದಿರಾಜರು ಹಾಕಿಕೊಟ್ಟ ಶ್ರೀ ಕೃಷ್ಣಮಠದ ಆಡಳಿತಾತ್ಮಕ ಶಾಸನ; ಇದು ಅಲ್ಲಿಂದ ಇಲ್ಲಿ ತನಕವೂ ಅಷ್ಟಮಠಗಳೂ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದ ನಿಯಮ. ಇದೇ ಉಡುಪಿ ಪರ್ಯಾಯದ ವಿಶೇಷ.
-ಜಿ ವಾಸುದೇವ ಭಟ್, ಪೆರಂಪಳ್ಳಿ


