ನಾಲ್ಕು ವರ್ಷಗಳಲ್ಲಿ 68 ವಿದ್ಯಾಸಂಸ್ಥೆ, 5 ಕಾರಾಗೃಹಗಳಲ್ಲಿ ಮೌಲ್ಯ ಶಿಕ್ಷಣ

Upayuktha
0
ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಗಾಂಧೀ ಚಿಂತನೆಯ ಬೀಜ



ಬೆಂಗಳೂರು: ಗಾಂಧೀ ಚಿಂತನೆ ಮತ್ತು ಸರ್ವೋದಯ ಸಿದ್ಧಾಂತಗಳನ್ನು ಯುವಪೀಳಿಗೆಗೆ ತಲುಪಿಸುವ ಮಹತ್ವದ ಕಾರ್ಯದಲ್ಲಿ ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಆಗಸ್ಟ್ 2022 ರಿಂದ ಜನವರಿ 2026ರವರೆಗೆ ರಾಜ್ಯದ 68 ಶಾಲಾ–ಕಾಲೇಜುಗಳು ಹಾಗೂ ಐದು ಕಾರಾಗೃಹಗಳಲ್ಲಿ ಗಾಂಧೀ ಮೌಲ್ಯಾಧಾರಿತ ಚಿಂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಪರಿವರ್ತನೆಗೆ ದಿಟ್ಟ ಹೆಜ್ಜೆ ಇಟ್ಟಿದೆ.


ಆಚಾರ್ಯ ವಿನೋಬಾ ಭಾವೆ ಅವರ ಆಶೀರ್ವಾದದೊಂದಿಗೆ 1958ರಲ್ಲಿ ಸ್ಥಾಪನೆಯಾದ ಮಂಡಲವು ಹಲವು ವರ್ಷಗಳ ನಿಷ್ಕ್ರಿಯತೆಯ ಬಳಿಕ ಪುನಶ್ಚೇತನಗೊಂಡು, ಗಾಂಧೀವಾದಿ ಕಾರ್ಯಕರ್ತ ಶ್ರೀ ಸುರೇಂದ್ರ ಕೌಲಗಿ ಹಾಗೂ ನಂತರ ಶಿಕ್ಷಣ ತಜ್ಞ ಶ್ರೀ ಎಲ್. ನರಸಿಂಹಯ್ಯ ಅವರ ನೇತೃತ್ವದಲ್ಲಿ ಹೊಸ ದಿಕ್ಕು ಕಂಡಿತು. 2022ರಲ್ಲಿ ಡಾ. ಹೆಚ್. ಎಸ್. ಸುರೇಶ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ವಿದ್ಯಾರ್ಥಿ ಕೇಂದ್ರೀಕೃತ ಕಾರ್ಯಕ್ರಮಗಳು ಇನ್ನಷ್ಟು ವ್ಯಾಪಕಗೊಂಡವು.


ಗಾಂಧೀ ಮೌಲ್ಯಗಳ ಕ್ರಿಯಾನ್ವಯ, ಸಾಮಾಜಿಕ ಕರ್ತವ್ಯ, ಅಪಪ್ರಚಾರದ ತಡೆ, ಕುಟುಂಬ ಮೌಲ್ಯಗಳು, ಬದುಕು ಕಟ್ಟಿಕೊಳ್ಳುವ ಕಲಿಕೆ ಸೇರಿದಂತೆ ಹಲವು ವಿಷಯಗಳ ಮೇಲೆ ಭಾಷಣ, ಸಂವಾದ, ರಸಪ್ರಶ್ನೆ ಮತ್ತು ಸ್ಪರ್ಧೆಗಳು ನಡೆಯಿತು. ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಮಾದರಿಯನ್ನು ಅಳವಡಿಸಿಕೊಂಡು ಮಂಡಲವು “ಸ್ಮಾಲ್ ಇಸ್ ಬ್ಯೂಟಿಫುಲ್” ತತ್ವವನ್ನು ಕಾರ್ಯರೂಪಕ್ಕೆ ತಂದಿದೆ.


ಮಂಡಲವು ‘ಬದಲಾಗುತ್ತಿರುವ ಸಮಾಜಕ್ಕೆ ಸರ್ವೋದಯ ಸಿದ್ಧಾಂತ’, ‘ಬಾ–ಬಾಪು ಪರಿಚಯ ದರ್ಶಿನಿ’ ಹಾಗೂ ಪರಿವರ್ತಿತ ಖೈದಿ ಲಕ್ಷ್ಮಣ್ ತುಕಾರಾಂ ಗೋಲೆ ಅವರ ಜೀವನಾಧಾರಿತ ‘ಪಾತಕ ಲೋಕದಿಂದ ಗಾಂಧಿಯಾನದೆಡೆಗೆ’ ಎಂಬ ಕೃತಿಗಳನ್ನು ಪ್ರಕಟಿಸಿದೆ. ವಿಶೇಷವೆಂದರೆ ಗೋಲೆ ಅವರ ಜೀವನಕಥಾ ಪುಸ್ತಕ ಮೂರು ತಿಂಗಳೊಳಗೆ ಸಂಪೂರ್ಣ ಮಾರಾಟವಾಗಿ ಸಮಾಜದಲ್ಲಿ ಗಾಂಧೀ ಚಿಂತನೆಯ ಮೇಲಿನ ಆಸಕ್ತಿಯನ್ನು ತೋರಿಸಿದೆ.


ರಾಜ್ಯ ಮಟ್ಟದಲ್ಲಿ ಶಿವಮೊಗ್ಗ, ಬೆಟ್ಟಕೋಟೆ ಮತ್ತು ಈಸೂರುಗಳಲ್ಲಿ ನಡೆದ ಸರ್ವೋದಯ ಸಮಾವೇಶಗಳು ಗ್ರಾಮೀಣ ಭಾಗಕ್ಕೂ ಚಳವಳಿಯನ್ನು ತಲುಪಿಸಿವೆ. ಗ್ರಾಮ ವಾಸ್ತವ್ಯ, ಯುವ ಸಂವಾದ, ನಾಟಕ ಪ್ರದರ್ಶನಗಳ ಮೂಲಕ ಗಾಂಧೀ ಮೌಲ್ಯಗಳು ಜೀವಂತ ಅನುಭವವಾಗಿ ಮೂಡಿಬಂದವು.


ಇದೀಗ ರಾಜ್ಯದಲ್ಲಿ ಒಂಬತ್ತು ಜಿಲ್ಲಾ ಸರ್ವೋದಯ ಮಂಡಲಗಳು ಕಾರ್ಯನಿರ್ವಹಿಸುತ್ತಿದ್ದು ಪರಿಸರ ಸಂರಕ್ಷಣೆ, ಮಹಿಳಾ ಶಕ್ತೀಕರಣ, ವಿದ್ಯಾರ್ಥಿ ಅರಿವು ಮತ್ತು ಗ್ರಾಮೀಣ ಹಕ್ಕು ಹೋರಾಟಗಳಲ್ಲಿ ಸಕ್ರಿಯವಾಗಿವೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top