ಕಲಾವಿದರನ್ನು ಬೆಳೆಸಿದರೆ ಮಾತ್ರ ರಂಗಭೂಮಿ ಉಳಿಯಲು ಸಾಧ್ಯ: ರಂಗ ನಿರ್ದೇಶಕ ಎಸ್.ಎನ್. ಸೇತುರಾಂ

Upayuktha
0


ಉಡುಪಿ: ಇತರ ಕಲಾವಿದರಿಗಿಂತ ರಂಗಭೂಮಿ ಕಲಾವಿದರನ್ನು ತುಂಬಾ ಕೀಳಾಗಿ ಕಾಣಲಾಗುತ್ತಿದೆ. ಇದರಿಂದ ರಂಗಭೂಮಿ ಉಳಿಯಲು ಸಾಧ್ಯವಿಲ್ಲ. ಇದರ ಪರಿಣಾಮ ಇಂದು ರಂಗಭೂಮಿ ವ್ಯಾಪಾರ ಆಗುತ್ತಿದೆ. ಆದುದರಿಂದ ಕಲಾವಿದರನ್ನು ಬೆಳೆಸುವುದರ ಜೊತೆ ರಂಗಭೂಮಿಯನ್ನು ಉಳಿಸಬೇಕು ಎಂದು ರಂಗ ನಿರ್ದೇಶಕ ಎಸ್.ಎನ್. ಸೇತುರಾಂ ಹೇಳಿದ್ದಾರೆ.


ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಕಾರದೊಂದಿಗೆ ಶನಿವಾರ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ನಡೆದ ಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಶ್ರೀರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.


ದೇವಸ್ಥಾನ ಸೇರಿದಂತೆ ಎಲ್ಲ ಮಂದಿರಗಳು ನಂಬಿಕೆಗಳ ತಾಣಗಳು. ಮನುಷ್ಯ ಬದುಕಲು ನಂಬಿಕೆ ಬಹಳ ಮುಖ್ಯ. ಈ ದೇಶ ಬದುಕಿರುವುದೇ ನಂಬಿಕೆಗಳ ಮೇಲೆ. ದೇವರು ಮಾತ್ರವಲ್ಲ ಎಲ್ಲವೂ ಭ್ರಮೆಯೇ ಆಗಿದೆ. ಪ್ರತಿಯೊಂದು ವ್ಯವಸ್ಥೆಗೂ ಅದರದೇ ಆದ ಭ್ರಮೆಯ ಅವಶ್ಯಕತೆ ಇದೆ. ಆ ಭ್ರಮೆನ್ನು ಸಾಮೂಹಿಕವಾಗಿ ಒಪ್ಪಿಕೊಂಡಾಗ ಮಾತ್ರ ಬದುಕು ನಡೆಯುತ್ತದೆ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು ಮಾತನಾಡಿ, ನಮ್ಮ ಸಂಸ್ಕೃತಿಯ ಬಗ್ಗೆ ಯುವ ಜನತೆ ಆಸಕ್ತಿ ತೋರಿಸದೆ ಇರಲು ಹಲವು ಕಾರಣಗಳಿವೆ. ಆದರೆ ಅವರಿಗೆ ಸಂಸ್ಕೃತಿಯನ್ನು ಮುಟ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದರಲ್ಲಿ ರಂಗಭೂಮಿ, ಜಾನಪದ, ನೃತ್ಯ ಮಹತ್ತರ ಪಾತ್ರ ವಹಿಸುತ್ತದೆ. ಆದುದರಿಂದ ಆ ಚಟುವಟಿಕೆಗಳನ್ನು ಹೆಚ್ಚು ಹೆಚ್ಚು ಮಾಡಬೇಕಾಗಿದೆ. ಯುವ ಜನತೆಯನ್ನು ವೃತ್ತಿ, ಶಿಕ್ಷಣದ ಜತೆಗೆ ಸಂಸ್ಕೃತಿಗೆ ಸಜ್ಜುಗೊಳಿಸುವ ಅಗತ್ಯ ಇದೆ. ಬಹು ಸಂಸ್ಕೃತಿಯ ಈ ದೇಶದಲ್ಲಿ ಎಲ್ಲವನ್ನೂ ಗೌರವಿಸಿ ಬೆಳೆಸಬೇಕು ಎಂದರು.


ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಹಿಸಿದ್ದರು. ಉದ್ಯಮಿ ವಿಜಯ ನಾಥ್ ಹೆಗಡೆ ಅಭಿನಂದನಾ ಮಾತುಗಳನ್ನಾಡಿದರು. ಐಎಂಎ ಉಡುಪಿ ಕರಾವಳಿ ಮಾಜಿ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ವಿಶ್ವಸ್ಥ ವಿಘ್ನೇಶ್ವರ ಅಡಿಗ, ವಾಸುದೇವ ಅಡಿಗ ಉಪಸ್ಥಿತರಿದ್ದರು.


ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿದರು. ಶಾರದಾ ಕೃಷ್ಣ ಪುರಸ್ಕಾರ ಸಮಿತಿಯ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಡಾ.ಭಾರ್ಗವಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top